ದರ್ಬೆಯಿಂದ ಕಿಲ್ಲೆ ಮೈದಾನದವರೆಗೆ ಕನ್ನಡ ಭುವನೇಶ್ವರಿ ದೇವಿಯ ವೈಭವದ ಮೆರವಣಿಗೆ
32 ಸಂಘ ಸಂಸ್ಥೆಗಳ ಸಹಯೋಗ, 350 ವಿದ್ಯಾರ್ಥಿಗಳು, ಕನ್ನಡಾಭಿಮಾನಿಗಳು ಭಾಗಿ
ಪುತ್ತೂರು: ಪುತ್ತೂರು ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಕನ್ನಡ ಭುವನೇಶ್ವರಿಯ ಭವ್ಯ ಮೆರವಣಿಗೆ ನಡೆಸುವ ಕುರಿತು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಮಿನಿವಿಧಾನ ಸೌಧದಲ್ಲಿರುವ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್ ಮಾತನಾಡಿ, ಪುತ್ತೂರು ತಾಲೂಕು ಮಟ್ಟದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದ್ದು ಈ ಸಂದರ್ಭದಲ್ಲಿ ಬೆಳಿಗ್ಗೆ 8 ರಿಂದ ದರ್ಬೆಯಿಂದ ಕನ್ನಡ ಭುವನೇಶ್ವರಿ ದೇವಿಯ ಮೆರವಣಿಗೆಯನ್ನು ವಿಜ್ರಂಭಣೆಯಿಂದ ನಡೆಸಲಾಗುವುದು. ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಪುತ್ತೂರಿನ 32 ಸಂಘ ಸಂಸ್ಥೆಗಳ ಸಹಯೋಗದಲ್ಲಿ ದರ್ಬೆಯಿಂದ ಮುಖ್ಯರಸ್ತೆಯ ಮೂಲಕ ಕಿಲ್ಲೆ ಮೈದಾನದವರಗೆ ಮೆರವಣಿಗೆ ನಡೆಯಲಿದೆ. ಶಾಸಕ ಅಶೋಕ್ ಕುಮಾರ್ ರೈರವರು ಮೆರವಣಿಗೆ ಉದ್ಘಾಟಿಸಲಿದ್ದಾರೆ. ತೆರೆದ ಜೀಪಿನಲ್ಲಿ ಕನ್ನಡ ಭುವನೇಶ್ವರಿ ದೇವಿಯ ಮೆರವಣಿಗೆ ಕೊಂಬು, ವಾದ್ಯ ಘೋಷಗಳೊಂದಿಗೆ ಸಾಗಲಿದೆ. ಪುತ್ತೂರು ನಗರ ವ್ಯಾಪ್ತಿಯ ತೆಂಕಿಲ ವಿವೇಕಾನಂದ ಆ.ಮಾ., ಕ.ಮಾ. ಶಾಲೆ, ಪಾಂಗಳಾಯಿ ಬೆಥನಿ, ಕೊಂಬೆಟ್ಟು ರಾಮಕೃಷ್ಣ ಪ್ರೌಢಶಾಲೆ, ಸರಕಾರಿ ಪ್ರೌಢಶಾಲೆ ಕೊಂಬೆಟ್ಟು ಪ್ರೌಢಶಾಲೆ, ಪುತ್ತೂರು ನಗರ ಶಿವರಾಮ ಕಾರಂತ ಸರಕಾರಿ ಪ್ರೌಢಶಾಲೆ ಹಾಗೂ ದರ್ಬೆ ಸಂತ ಫಿಲೋಮಿನಾ ಪ್ರೌಢಶಾಲೆಯ ಒಟ್ಟು 350 ವಿದ್ಯಾರ್ಥಿಗಳು ಮೆರವಣಿಗೆಗೆ ಸಾಥ್ ನೀಡಲಿದ್ದಾರೆ. ಮೆರವಣಿಗೆಯಲ್ಲಿ ಕನ್ನಡ ಬಾವುಟ ಪ್ರದರ್ಶನಕ್ಕೆ ಮಾತ್ರ ಅವಕಾಶವಿದೆ. ಎಂದರು. ಮೆರವಣಿಗೆ ನಡೆದ ಬಳಿಕ ಸರಕಾರದ ಶಿಷ್ಟಾಚಾರದಂತೆ ಕಿಲ್ಲೆ ಮೈದಾನದಲ್ಲಿ ಬೆಳಿಗ್ಗೆ 9 ರಿಂದ ಧ್ವಜಾರೋಹಣ ನಡೆದು ಬಳಿಕ ಸಭಾಕಾರ್ಯಕ್ರಮ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮೆರವಣಿಗೆಯಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿಗಳ ಟ್ಯಾಬ್ಲೋ ಪ್ರದರ್ಶನಕ್ಕೆ ಅವಕಾಶವಿದೆ. ಎಲ್ಲಾ ಕನ್ನಡಾಭಿಮಾನಿಗಳು ಮೆರವಣಿಗೆಯಲ್ಲಿ ಭಾಗಿಯಾಗಬೇಕು ಎಂದು ಉಮೇಶ್ ನಾಯಕ್ ವಿನಂತಿಸಿದರು.
ಪುತ್ತೂರು ತಹಶೀಲ್ದಾರ್ ಶಿವಶಂಕರ್ ಕೆ. ಅಧ್ಯಕ್ಷತೆ ವಹಿಸಿ ಮಾತನಾಡಿ ಮೆರವಣಿಗೆಯಲ್ಲಿ ಭಾಗವಹಿಸಿದ ಸಂಘಸಂಸ್ಥೆಗಗಳಿಗೆ ಅಭಿನಂದನಾ ಪತ್ರ ನೀಡಲಾಗುವುದು ಎಂದು ಹೇಳಿದರು. ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ ಸ್ವಾಗತಿಸಿ ಮಾತನಾಡಿ ಹಿಂದೆ ನಡೆಯುತ್ತಿದ್ದ ಮೆರವಣಿಗೆಯಂತೆ ಈ ಬಾರಿಯೂ ವೈಭವದಿಂದ ನಡೆಯಬೇಕು. ಹಿಂದಿನ ಗತವೈಭವ ಮರುಕಳಿಸಬೇಕು ಎಂದರು. ಮೆರವಣಿಗೆಯಲ್ಲಿ ಸಾಹಿತಿಗಳ ಟ್ಯಾಬ್ಲೋ ಪ್ರದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಹೇಳಿ ಎಲ್ಲರ ಸಹಕಾರ ಕೋರಿದರು. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಲಹೆ ಸೂಚನೆ ನೀಡಿದರು. ರೆಡ್ಕ್ರಾಸ್ ಸಂಸ್ಥೆಯಿಂದ ಉಚಿತ ಆಂಬುಲೆನ್ಸ್ ಸೇವೆ ಒದಗಿಸಲಾಗುವುದು ಎಂದು ರೆಡ್ಕ್ರಾಸ್ ಸಂಸ್ಥೆಯ ಪ್ರತಿನಿಽ ಪ್ಯಾಟ್ರಿಕ್ ತಿಳಿಸಿದರು. ಶಿಕ್ಷಣ ಸಂಯೋಜಕ ಹರಿಪ್ರಸಾದ್ ವಂದಿಸಿದರು.