ವ್ಯಸನಮುಕ್ತ ಸಮಾಜಕ್ಕಾಗಿ ಮಾಯ್ ದೆ ದೇವುಸ್, ಬೆಥನಿ ಸಮೂಹ ಶಿಕ್ಷಣ ಸಂಸ್ಥೆಗಳಿಂದ ಮಾದಕ ದ್ರವ್ಯ ಸೇವನೆಯ ವಿರುದ್ಧ ಜನ ಜಾಗೃತಿ ನಡಿಗೆ

0

ವ್ಯಸನಮುಕ್ತ ಭಾರತಕ್ಕಾಗಿ ಪಣತೊಡಲು ವಿದ್ಯಾರ್ಥಿಗಳಿಗೆ ಡಿವೈಎಸ್ಪಿ ಡಾ|ಗಾನಾ ಪಿ.ಕುಮಾರ್ ಕರೆ

ಪುತ್ತೂರಿನಲ್ಲಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಜಾಥಾ
6 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಅಧ್ಯಾಪಕರು, ಸಿಬ್ಬಂದಿಗಳು ಭಾಗಿ
ವಿದ್ಯಾರ್ಥಿಗಳಿಂದ ‘ಮಾದಕ-ಮಾರಕ’ ಬೀದಿ ನಾಟಕ

ಪುತ್ತೂರು:ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪುತ್ತೂರಿನ ಕ್ಯಾಥೊಲಿಕ್ ಶಿಕ್ಷಣ ಸಂಸ್ಥೆಗಳ ವತಿಯಿಂದ ‘ಡ್ರಗ್ಸ್ ವಿರುದ್ಧ ಜಾಗೃತಿ ನಡಿಗೆ’ ಕಾರ್ಯಕ್ರಮ ಅ.30ರಂದು ನಡೆಯಿತು.


ಸಂತ ಫಿಲೋಮಿನಾ ಕಾಲೇಜು ಪ್ರಾಂಗಣದಲ್ಲಿ ಮಾಯ್ ದೆ ದೇವುಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಜಾಗೃತಿ ನಡಿಗೆಗೆ ಚಾಲನೆ ನೀಡಿ, ಮಾದಕ ದ್ರವ್ಯ ಸೇವನೆಯ ವಿರುದ್ಧ ಹೋರಾಡಲು ಪ್ರತಿಜ್ಞಾವಿಧಿ ಬೋಧಿಸಿದರು.ಜಾಗೃತಿ ನಡಿಗೆಯು ಫಿಲೋಮಿನಾ ಕಾಲೇಜು ಆವರಣದಿಂದ ಪ್ರಾರಂಭಗೊಡು ದರ್ಬೆ-ಕಲ್ಲಾರೆ ಮುಖ್ಯರಸ್ತೆಯಲ್ಲಿ ಸಾಗಿ ಮಹಮ್ಮಾಯಿ ದೇವಸ್ಥಾನ ರಸ್ತೆಯ ಮೂಲಕ ಸಂಚರಿಸಿ ಪುತ್ತೂರು ಪೊಲೀಸ್ ಠಾಣೆ ರಸ್ತೆಯ ಮೂಲಕ ಪುನಃ ಮುಖ್ಯರಸ್ತೆಯನ್ನು ಸೇರಿ ಮಾಯ್ ದೆ ದೇವುಸ್ ಚರ್ಚ್ ವಠಾರದಲ್ಲಿ ಸಂಪನ್ನಗೊಂಡಿತು.ಪುತ್ತೂರಿನ ಕ್ಯಾಥೊಲಿಕ್ ಶಿಕ್ಷಣ ಸಂಸ್ಥೆಗಳಾದ ಫಿಲೋಮಿನಾ ಕಾಲೇಜು, ಫಿಲೋಮಿನಾ ಪದವಿ ಪೂರ್ವ ಕಾಲೇಜು, ಫಿಲೋಮಿನಾ ಪ್ರೌಢಶಾಲೆ, ಫಿಲೋಮಿನಾ ಆಂಗ್ಲ ಮಾಧ್ಯಮ ಶಾಲೆ, ಲಿಟ್ಲ್ ಪ್ಲವರ್ ಹಿರಿಯ ಪ್ರಾಥಮಿಕ ಶಾಲೆ, ಬೆಥನಿ ಪ್ರೌಢಶಾಲೆ, ಬೆಥನಿ ಆಂಗ್ಲ ಮಾಧ್ಯಮ ಶಾಲೆ, ಸಂತ ವಿಕ್ಟರನ ಬಾಲಿಕಾ ಪ್ರೌಢಶಾಲೆ, ಸಂತ ವಿಕ್ಟರನ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಮತ್ತು ಮಾಯ್ ದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆಗಳ ಸುಮಾರು 6000ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಿಬ್ಬಂದಿ ವರ್ಗದವರು ಡ್ರಗ್ಸ್ ವಿರುದ್ಧ ಜಾಗೃತಿ ನಡಿಗೆಯಲ್ಲಿ ಪಾಲ್ಗೊಂಡಿದ್ದರು.


ಮಂಗಳೂರು ಕ್ಯಾಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು, ಕ್ಯಾಥೊಲಿಕ್ ವಿದ್ಯಾ ಮಂಡಳಿಯ ಅಧ್ಯಕ್ಷರೂ ಆಗಿರುವ ಅತಿ.ವಂ.ಡಾ|ಪೀಟರ್ ಪಾವ್ಲ್ ಸಲ್ದಾನಾರವರು ತಮ್ಮ ಅಧಿನಕ್ಕೊಳಪಟ್ಟ ಧಾರ್ಮಿಕ ಕ್ಷೇತ್ರಗಳು ಹಾಗೂ ವಿದ್ಯಾಸಂಸ್ಥೆಗಳ ಮೂಲಕ, ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಸುತ್ತಮುತ್ತಲಿನ ಜನರಿಗೆ ಅರಿವು ಮೂಡಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನೀಡಿದ್ದ ನಿರ್ದೇಶನದ ಮೇರೆಗೆ ಪುತ್ತೂರಿನ ಕ್ಯಾಥೊಲಿಕ್ ಶಿಕ್ಷಣ ಸಂಸ್ಥೆಗಳ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲ್ಪಟ್ಟಿದೆ.
ಮಾಯ್ ದೆ ದೇವುಸ್ ಚರ್ಚ್ ವಠಾರದಲ್ಲಿನ ಸಭಾ ಕಾರ್ಯಕ್ರಮದಲ್ಲಿ ಪುತ್ತೂರು ಉಪವಿಭಾಗದ ಡಿವೈಎಸ್ಪಿ ಡಾ|ಗಾನಾ ಪಿ ಕುಮಾರ್‌ರವರು ಮಾತನಾಡಿ,ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಯುವಜನತೆಗೆ ಅದರಲ್ಲೂ ವಿದ್ಯಾರ್ಥಿಗಳಿಗೆ ಹೆಚ್ಚಿನ ಅರಿವು ಅಗತ್ಯ. ಮಾದಕ ವ್ಯಸನವು ನಮ್ಮ ಸಮಾಜವನ್ನು ಕಾಡುವ ಅತೀ ದೊಡ್ಡ ಸಮಸ್ಯೆ. ನಾವು ದಿನನಿತ್ಯ ಸೇವಿಸುವ ಚಹಾ, ಕಾಫಿ ಮುಂತಾದ ಪಾನೀಯಗಳಲ್ಲಿ, ವೈದ್ಯರು ನಮಗೆ ನೀಡುವ ನೋವು ನಿವಾರಕ ಔಷಧಿಗಳಲ್ಲಿಯೂ ಸ್ವಲ್ಪ ಪ್ರಮಾಣದಲ್ಲಿ ಮಾದಕ ವಸ್ತುಗಳು ಸೇರಿವೆ.ಅವುಗಳನ್ನು ಮಿತಿಮೀರಿ ಸೇವಿಸುವುದು, ವೈದ್ಯರು ಹೇಳಿದ ಅವಽಗಿಂತಲೂ ಜಾಸ್ತಿ ಸೇವಿಸುವುದು ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತದೆ.ಮಾದಕ ದ್ರವ್ಯಗಳ ಸೇವನೆ, ಮಾರಾಟ ಎಲ್ಲವೂ ಶಿಕ್ಷಾರ್ಹ ಅಪರಾಧಗಳಾಗಿವೆ. ವಿದ್ಯಾರ್ಥಿಗಳು ವ್ಯಸನಮುಕ್ತ ಭಾರತಕ್ಕಾಗಿ ಪಣತೊಡಬೇಕು ಎಂದರು.


ಮಾಯ್ ದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ಟ, ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋ, ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂ|ಡಾ| ಆಂಟೊನಿ ಪ್ರಕಾಶ್ ಮೊಂತೆರೋ, ಫಿಲೋಮಿನಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಂ|ಅಶೋಕ್ ರಯಾನ್ ಕ್ರಾಸ್ತಾ, ಫಿಲೋಮಿನಾ ಪ್ರೌಢಶಾಲೆಯ ಮುಖ್ಯಗುರು ವಂ|ಮಾಕ್ಸಿಮ್ ಡಿಸೋಜ, ಸಂತ ವಿಕ್ಟರನ ಬಾಲಿಕಾ ಪ್ರೌಢಶಾಲೆಯ ಮುಖ್ಯಗುರು ರೋಸಲಿನ್ ಲೋಬೋ, ಸಂತ ವಿಕ್ಟರನ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಗುರು ಹ್ಯಾರಿ ಡಿಸೋಜ, ಮಾಯ್ ದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಜಾನೆಟ್ ಡಿಸೋಜ, ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಗುರು ಸಿಸ್ಟರ್ ಲೋರಾ ಪಾಯಸ್, ಲಿಟ್ಲ್ ಪ್ಲವರ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಸಿಸ್ಟರ್ ವಿನೀಶಾ, ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಸೆಲಿನ್ ಪೆತ್ರಾ, ಬೆಥನಿ ಪ್ರೌಢಶಾಲೆಯ ಮುಖ್ಯಗುರು ಸಿಸ್ಟರ್ ಶಾಂತಿ ಆಗ್ನೆಸ್, ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ ರಕ್ಷಕ ಸಂಘಗಳ ಆಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಪುತ್ತೂರು ಪೊಲೀಸ್ ಠಾಣೆಯ ಅಽಕಾರಿಗಳು ಹಾಗೂ ಸಿಬ್ಬಂದಿ ವರ್ಗ ರಸ್ತೆಯುದ್ದಕ್ಕೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು.

ನಡಿಗೆಯುದ್ದಕ್ಕೂ ವಿದ್ಯಾರ್ಥಿಗಳು ಮಾದಕ ದ್ರವ್ಯಗಳ ಸೇವನೆಯ ದುಷ್ಪರಿಣಾಮಗಳ ಕುರಿತು ಘೋಷವಾಕ್ಯಗಳು, ಘೋಷಣಾ ಫಲಕಗಳ ಮೂಲಕ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಸಿದರು.ಕಾಲೇಜಿನ ಪ್ರದರ್ಶನ ಕಲಾ ಘಟಕದ ಸಂಯೋಜಕ ಪ್ರಶಾಂತ್ ರೈ ಇವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮಾದಕ ದ್ರವ್ಯಸೇವನೆಯ ದುಷ್ಪರಿಣಾಮಗಳ ಕುರಿತಾದ ಹಾಡನ್ನು ಹಾಡಿದರು.ಈ ಸಂದರ್ಭದಲ್ಲಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ರಾಮಾಂಜಿ ರಚಿಸಿ ನಿರ್ದೇಶಿಸಿದ ‘ಮಾದಕ-ಮಾರಕ’ಎಂಬ ಬೀದಿ ನಾಟಕವನ್ನು ಸಂತ ಫಿಲೋಮಿನಾ ಕಾಲೇಜಿನ ಪ್ರದರ್ಶನ ಕಲಾ ಘಟಕದ ವಿದ್ಯಾರ್ಥಿಗಳು ಪ್ರದರ್ಶಿಸಿದರು.

LEAVE A REPLY

Please enter your comment!
Please enter your name here