ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾ.ಪಂ.ಅಧ್ಯಕ್ಷೆ ಸುಜಾತ ಆರ್.ರೈ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಬಸವ ವಸತಿ ಯೋಜನೆಯಲ್ಲಿ ವಂಚನೆ ಎಸಗಿದ್ದಲ್ಲದೆ, ಚುನಾವಣೆಯ ನಾಮಪತ್ರ ಸಲ್ಲಿಸುವ ಸಂದರ್ಭ ಸಲ್ಲಿಸಿದ ಅಫಿದಾವಿತ್‌ನಲ್ಲಿ ತಪ್ಪು ಮಾಹಿತಿಯನ್ನು ನೀಡಿದ್ದಾರೆ. ಅಲ್ಲದೆ, ಇನ್ನೂ ಕೆಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಆದ್ದರಿಂದ ಇವರ ಸದಸ್ಯತ್ವವನ್ನು ರದ್ದುಗೊಳಿಸಬೇಕೆಂದು ಸಾಮಾಜಿಕ ಹೋರಾಟಗಾರ ಎ.ಜತೀಂದ್ರ ಶೆಟ್ಟಿ ಅಲಿಮಾರ್ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಿದ್ದಾರೆ.
2013-14ನೇ ಸಾಲಿನಲ್ಲಿ ಬಸವ ವಸತಿ ಯೋಜನೆಯಡಿ ಸರಕಾರದ ಅನುದಾನವನ್ನು ಪಡೆದುಕೊಂಡಿರುವ ಸುಜಾತ ರೈ ಅಡಮಾನ ತೋರಿಸಿದ ಜಾಗದಲ್ಲಿ ಮನೆಯನ್ನು ನಿರ್ಮಿಸದೆ ಬೇರೆ ಜಾಗದಲ್ಲಿ ಮನೆ ನಿರ್ಮಾಣ ಮಾಡಿದ್ದಾರೆ. ಅವರು ಸರಕಾರದ ಅನುದಾನವನ್ನು ದುರುಪಯೋಗಪಡಿಸಿಕೊಂಡಿರುವುದು ಸಾಬೀತಾಗಿದ್ದು, ಇವರಿಗೆ 6.04.2023ರಂದು 34 ನೆಕ್ಕಿಲಾಡಿ ಗ್ರಾ.ಪಂ. ಪಿಡಿಒ ನೊಟೀಸ್ ಜಾರಿಗೊಳಿಸಿದ್ದಾರೆ. ಬಸವ ವಸತಿ ಯೋಜನೆಯಡಿ ಸರಕಾರದ ಅನುದಾನವನ್ನು ಪಡೆದುಕೊಂಡು ಸರ್ವೇ ನಂ. 89/17(ಪಿ2)ನಲ್ಲಿ ವಾಸದ ವಸತಿ ಮನೆಯನ್ನು ನಿರ್ಮಿಸದೇ ಸುಳ್ಳು ಮಾಹಿತಿಯನ್ನು ನೀಡಿ ಇತರ ಸರ್ವೆ ನಂಬ್ರದ ಜಾಗದಲ್ಲಿ ವಸತಿಯನ್ನು ನಿರ್ಮಿಸಿರುವ ಕಾರಣ 2,20,428.91 ರೂ.ವನ್ನು ಬೆಂಗಳೂರಿನ ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೋರೇಷನ್ ಲಿಮಿಟೆಡ್‌ನ ನಿರ್ದೇಶಕರ ಹೆಸರಿನಲ್ಲಿ ಗ್ರಾ.ಪಂ.ಗೆ ನೀಡಲು ತಿಳಿಸಿದ್ದಲ್ಲದೇ, ತಪ್ಪಿದ್ದಲ್ಲಿ ಮುಂದಿನ ಆಗು ಹೋಗುಗಳಿಗೆ ನೀವೇ ಜವಾಬ್ದಾರರಾಗಿರುತ್ತೀರಿ ಎಂದು ನೋಟೀಸ್ ನಲ್ಲಿ ತಿಳಿಸಲಾಗಿತ್ತು.
ಸುಜಾತ ರೈ 2013-14ನೇ ಅವಧಿಯಲ್ಲಿ ಗ್ರಾ.ಪಂ. ಸದಸ್ಯರಾಗಿದ್ದು, ಸರಕಾರದ ಅನುದಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಸುಜಾತ ಆರ್. ರೈ ವಸತಿ ಯೋಜನೆಯಡಿ ಮನೆ ಪಡೆದುಕೊಂಡರೂ ಅದು ಅವರ ಪತಿಯ ಹೆಸರಿನಲ್ಲಿದೆ. ಅಲ್ಲದೆ, ಗ್ರಾ.ಪಂ. ಚುನಾವಣೆಯ ಸ್ಪರ್ಧೆ ಸಂದರ್ಭ ಸಲ್ಲಿಸಿರುವ ಅಫಿದಾವಿತ್‌ನಲ್ಲಿ ಬ್ಯಾಂಕ್‌ನಲ್ಲಿ ಪಡೆದ ಸಾಲಗಳು ಇಲ್ಲ ಎಂದು ತಪ್ಪು ಮಾಹಿತಿ ನೀಡಿದ್ದಾರೆ. ಆದರೆ ಉಪ್ಪಿನಂಗಡಿ ಸಹಕಾರಿ ಸಂಘದಲ್ಲಿ ಸಾಲ ಇರುವ ಬಗ್ಗೆ ಆರ್‌ಟಿಸಿಯಲ್ಲಿ ನಮೂದಾಗಿದೆ. ಇನ್ನಿತರ ಸಂಸ್ಥೆಗಳಲ್ಲಿ ಕೂಡಾ ಸಾಲ ಇದೆ ಎನ್ನಲಾಗಿದೆ. 2012ರಲ್ಲಿ ಲೋಕಾಯುಕ್ತ ನ್ಯಾಯಾಲಯ, 3ನೇ ಅಡಿಷನಲ್ ಸೆಷನ್ಸ್ ಕೋರ್ಟ್ ಮಂಗಳೂರು ಇಲ್ಲಿ ಕೇಸ್ ನಂಬ್ರ ಸಿ.ಆರ್.9/2012 ಅರೈಸಿಂಗ್ ಔಟ್ ಆಫ್ ಪಿಸಿಆರ್ ನಂಬ್ರ 5/2012ರಲ್ಲಿ ಆರೋಪಿಯಾಗಿದ್ದರು. ನಂತರ ಇಬ್ಬರು ಆರೋಪಿಗಳು ಉಚ್ಛ ನ್ಯಾಯಾಲಯಕ್ಕೆ ಮೇಲ್ಮನವಿ ರಿಟ್ ಅರ್ಜಿ ಹಾಕಿ ಕೇಸನ್ನು ಅನೂರ್ಜಿತಗೊಳಿಸಲಾಯಿತು ಎಂದು ಜತೀಂದ್ರ ಶೆಟ್ಟಿಯವರು ದೂರಿನಲ್ಲಿ ತಿಳಿಸಿದ್ದಾರೆ.
ಸುಜಾತ ರೈ ಉಪ್ಪಿನಂಗಡಿ ಸಹಕಾರಿ ಸಂಘದ ನಿರ್ದೇಶಕರಾಗಿದ್ದು, ಪ್ರಸ್ತುತ 34 ನೆಕ್ಕಿಲಾಡಿ ಗ್ರಾ.ಪಂ.ನ ಅಧ್ಯಕ್ಷರಾಗಿದ್ದಾರೆ. ತನ್ನ ಅಧ್ಯಕ್ಷ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ಗ್ರಾಮದಲ್ಲಿ ವಾಸ್ತವ್ಯವಿರುವ ಮಹಿಳೆಯೊಬ್ಬರಿಗೆ ಕೃಷಿ ಜಮೀನಿಗೆ ಕುರಿತಂತೆ ತೊಂದರೆ ನೀಡುತ್ತಿದ್ದು, ಪ್ರಧಾನ ಸಿವಿಲ್ ಜಡ್ಜ್ ನ್ಯಾಯಾಲಯದಲ್ಲಿ ಮೂಲ ದಾವೆ 230/2023ರಂತೆ ಸಿವಿಲ್ ವ್ಯಾಜ್ಯ ದಾಖಲಾಗಿ ತನಿಖೆಗೆ ಬಾಕಿ ಇರುತ್ತದೆ. ಅಲ್ಲದೇ ಪರಿಶಿಷ್ಟ ಜಾತಿಯ ವ್ಯಕ್ತಿಯೊಬ್ಬರಿಗೆ ಜಾತಿ ನಿಂದನೆ ಮಾಡಿದ ಹಾಗೂ ಅವರ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಸುಜಾತ ರೈ ವಿರುದ್ದ ದಲಿತ ಸಂರಕ್ಷಣಾ ಕಾಯ್ದೆಯನ್ವಯ ಪ್ರಕರಣ ದಾಖಲಾಗಿದೆ. ಓರ್ವ ಜನಪ್ರತಿನಿಧಿಯಾಗಿದ್ದುಕೊಂಡು ಭ್ರಷ್ಟಾಚಾರ, ಅಧಿಕಾರ ದುರುಪಯೋಗ ನಡೆಸಿರುವುದು ಸ್ಪಷ್ಟವಾಗಿದ್ದು, ಕೂಡಲೇ ಗ್ರಾ.ಪಂ. ಸದಸ್ಯತ್ವದಿಂದ ಮತ್ತು ಉಪ್ಪಿನಂಗಡಿ ಸಹಕಾರಿ ಸಂಘದ ನಿರ್ದೇಶಕ ಸ್ಥಾನದಿಂದ ಅನೂರ್ಜಿತಗೊಳಿಸಿ ಈ ದೇಶದ ಸಂವಿಧಾನವನ್ನು ಎತ್ತಿ ಹಿಡಿಯಬೇಕೆಂದು ಸಾಮಾಜಿಕ ಹೋರಾಟಗಾರ ಜತೀಂದ್ರ ಶೆಟ್ಟಿ ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ದಾಖಲೆಗಳ ಸಮೇತ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.