ಪುತ್ತೂರು: ವಾಯುಮಾಲಿನ್ಯ ವಿರುದ್ಧ ಜನ ಜಾಗೃತಿ ಮಾಸಾಚರಣೆ ಕಾರ್ಯಕ್ರಮವು ನವೆಂಬರ್ ತಿಂಗಳಿನಾದ್ಯಂತ ಹಮ್ಮಿಕೊಳ್ಳಲಾಗುತ್ತಿದ್ದು, ಈ ನಿಟ್ಟಿನಲ್ಲಿ ಪುತ್ತೂರು, ಸುಳ್ಯ ಹಾಗೂ ಕಡಬ ತಾಲೂಕಿನ ವಿವಿಧೆಡೆ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.
ಈ ಕಾರ್ಯಕ್ರಮವನ್ನು ನ.2 ರಂದು ಬನ್ನೂರು ಆರ್.ಟಿ.ಒ ಕಛೇರಿಯಲ್ಲಿ ಚಾಲನೆ ನೀಡಲಾಗಿದ್ದು, ಹಿರಿಯ ಮೋಟಾರು ವಾಹನ ನಿರೀಕ್ಷಕರಾಗಿರುವ ಆಶ್ಫಾನ್ ಬಿ.ಎಸ್.ರವರು ಚಾಲನೆ ನೀಡುವ ಮೂಲಕ ಶುಭ ಹಾರೈಸಿ ಮಾತನಾಡಿ, ವಾಹನಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ. ವಾಯುಮಾಲಿನ್ಯ ಇಲ್ಲದ ಪರಿಸರ ಹಾಗೂ ವಾತಾವರಣವನ್ನು ನಿರ್ವಹಿಸುವುದರಿಂದ ಮುಂದಿನ ಪೀಳಿಗೆಯವರು ಆರೋಗ್ಯದಿಂದಿರಲು ಸಾಧ್ಯ ಎಂದರು.
ಪ್ರಥಮ ದರ್ಜೆ ಸಹಾಯಕ ಪುರುಷೋತ್ತಮ್ ಬಿ.ಮಾತನಾಡಿ, ವಾಯುಮಾಲಿನ್ಯದಿಂದ ದೇಶದಲ್ಲಿ ನಡೆದ ಭೋಪಾಲ್ ಅನಿಲ ದುರಂತವನ್ನು ಹಾಗೂ ಎಂಡೋಸಲ್ಫಾನ್ ದುಷ್ಪರಿಣಾಮಗಳ ಬಗ್ಗೆ ವಿವರಿಸಿದರು. ವಾಯುಮಾಲಿನ್ಯದಿಂದ ಜನರಿಗೆ ಶ್ವಾಸಕೋಶ, ಹೃದಯ ಸಂಬಂಧಿ ಕಾಯಿಲೆ ಹಾಗೂ ಚರ್ಮದ ಕಾಯಿಲೆಗಳು ಜಾಸ್ತಿಯಾಗುತ್ತಿರುವ ಬಗ್ಗೆ ತಿಳಿಸಿದರು.
ಅಧೀಕ್ಷಕ ದೀಪಕ್ ಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧೀಕ್ಷ ಆಸ್ಕರ್ ಸಂತೋಷ್ ವಂದಿಸಿದರು. ಪ್ರಥಮ ದರ್ಜೆ ಸಹಾಯಕ ವಿವೇಕಾನಂದ ಸಪಲಿಗ, ದ್ವಿತೀಯ ದರ್ಜೆ ಸಹಾಯಕ ಗಿರೀಶ್ ಕುಮಾರ್, ದ್ವಿತೀಯ ದರ್ಜೆ ಸಹಾಯಕ ಗಣೇಶ್ ಕೆ.ಎಂರವರು ಉಪಸ್ಥಿತರಿದ್ದರು.