ಉಪ್ಪಿನಂಗಡಿ: ಶುಕ್ರವಾರ ಸಾಯಂಕಾಲ ದಿಂದ ನೆಲ್ಯಾಡಿ ಮತ್ತದರ ಸುತ್ತಮುತ್ತಲು ಸುರಿದ ಭಾರೀ ಸಿಡಿಲಬ್ಬರದ ಮಳೆಯಿಂದಾಗಿ ಹಲವೆಡೆ ಕೃತಕ ನೆರೆಯುಂಟಾಗಿ ಮಣ್ಣಗುಂಡಿ ಎಂಬಲ್ಲಿ ರಸ್ತೆಯಲ್ಲಿ ನೆರೆ ನೀರು ಹರಿದು ಮನೆಯೊಂದಕ್ಕೆ ನೆರೆ ನೀರು ನುಗ್ಗಿ ಹಾನಿಯುಂಟಾದ ಬಗ್ಗೆ ವರದಿಯಾಗಿದೆ.
ಉದನೆ, ನೆಲ್ಯಾಡಿ , ಗೋಳಿತೊಟ್ಟು ಪರಿಸರದಲ್ಲಿ ಭಾರೀ ಮಳೆಯಾಗಿದ್ದ್ದು, ಸಿಡಿಲಾಘಾತದ ಜೊತೆ ಜೊತೆಗೆ ಅಪ್ಪಳಿಸಿದ ಭಾರೀ ಮಳೆಯಿಂದಾಗಿ ತೋಡಿನಲ್ಲಿ ಹರಿಯಬೇಕಾದ ನೀರು ಸರಾಗವಾಗಿ ಹರಿಯಲಾಗದೆ ರಸ್ತೆಯಲ್ಲಿ ಹರಿಯುವಂತಾಗಿದ್ದು, ಮಣ್ಣಗುಂಡಿ ಎಂಬಲ್ಲಿನ ರಾಜೀವಿ ಎಂಬವರ ಮನೆಗೆ ನೆರೆ ನೀರು ನುಗ್ಗಿ ವ್ಯಾಪಕ ಹಾನಿ ಸಂಭವಿಸಿದೆ.
ಮಳೆ ನೀರಿಗೆ ಕೊಚ್ಚಿಕೊಂಡು ಬಂದ ಕಾಡಿನಲ್ಲಿ ಬಿದ್ದಿದ್ದ ಮರಗಳ ರಾಶಿ ಸಣ್ಣಂಪಾಡಿ ಕಿರು ಸೇತುವೆಯಲ್ಲಿ ಸಿಲುಕಿಕೊಂಡು ನೀರಿನ ಸರಾಗ ಹರಿಯುವಿಕೆಗೆ ತೊಡಕುಂಟು ಮಾಡಿತ್ತು. ಇದರಿಂದಾಗಿ ಪರಿಸರದಲ್ಲಿ ಕೃತಕ ನೆರೆ ವ್ಯಾಪಿಸಲು ಕಾರಣವಾಗಿದೆ.
ಭಾರೀ ಮಳೆಯ ಬೆನ್ನಿಗೆ ವಿದ್ಯುತ್ ಕಣ್ಮರೆಯಾಗಿದ್ದು, ಸಂಪರ್ಕ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಹಲವೆಡೆ ಹಾನಿಯುಂಟಾಗಿರುವ ಸಾಧ್ಯತೆ ಇದ್ದು, ಹಾನಿಯ ನಿಖರ ಮಾಹಿತಿ ಲಭ್ಯವಾಗಿಲ್ಲ. ಘಟನಾ ಸ್ಥಳದಲ್ಲಿ ಸ್ಥಳೀಯ ಸಾಮಾಜಿಕ ಕಾರ್ಯಕರ್ತರಾದ ಲೋಕೇಶ್ ಬಾಣಜಾಲು ಮತ್ತವರ ಸಹವರ್ತಿಗಳು ಸಂತ್ರಸ್ತರ ರಕ್ಷಣೆ ಹಾಗೂ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ