ಅಂದಾಭಿಮಾನ ಬೆಳಸಿಕೊಂಡರೆ ಅದು ಅಪಾಯ – ರಘು ಇಡ್ಕಿದು
ಕುಂಬ್ರ ಅನ್ನುವ ಹೆಸರು ಮುಂದೆ ಹೋಗುತ್ತಿದೆ – ದುರ್ಗಾಪ್ರಸಾದ್ ರೈ
ಸಾಹಿತ್ಯ ಪರಿಷತ್ ಪರಿವಾರದ ಸದಸ್ಯರನ್ನಾಗಿ ಮಾಡುವ ಆಶಯ – ಉಮೇಶ್ ನಾಯಕ್
ಪುತ್ತೂರು: ತುಳು ಮತ್ತು ಕನ್ನಡ ಸ್ವಂತಂತ್ರವಾದ ಭಾಷೆ. ನಮಗೆ ಭಾಷೆಯ ಬಗ್ಗೆ ಅಭಿಮಾನ ಬೇಕು. ಆದರೆ ಅದು ಅಂದಾಭಿಮಾನ ಆದರೆ ಅಪಾಯ ಎಂದು ಸಾಹಿತಿ ಕೆನರಾ ಕಾಲೇಜಿನ ಉಪನ್ಯಾಸಕ ರಘು ಇಡ್ಕಿದು ಹೇಳಿದರು.
ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ ರೋಟರಿಕ್ಲಬ್ ಪುತ್ತೂರು ಯುವ ಸಹಕಾರದಲ್ಲಿ ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಂಯೋಜನೆಯಲ್ಲಿ ಸುವರ್ಣ ಸಂಭ್ರಮ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಕರ್ನಾಟಕಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟ ಮಹನೀಯರನ್ನು ನೆನಪಿಸುವ ಸಲುವಾಗಿ ನ.5ರಂದು ಪುತ್ತೂರು ರೋಟರಿ ಮನೀಷ ಸಭಾಂಗಣದಲ್ಲಿ ನಡೆದ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ರಾಜ್ಯೋತ್ಸವ ಕವಿಗೋಷ್ಠಿ ಮತ್ತು ನಾರಾಯಣ ಕುಂಬ್ರರವರ ‘ ಸೋಮವಾರ ಸಂತೆಗ್’ ತುಳು ದೃಶ್ಯಗೀತೆ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾವೆಲ್ಲರು ತುಳುನಾಡಿನವಾಗಿದ್ದರಿಂದ ತುಳು ಭಾಷೆಯಲ್ಲಿ ವ್ಯವಹರಿಸುವುದು ಕಾಣುತ್ತೇವೆ. ಆದರೆ ಕನ್ನಡವನ್ನು ಬಿಟ್ಟು ಇರುವುದಕ್ಕೆ ಸಾಧ್ಯವಿಲ್ಲ. ಕನ್ನಡವನ್ನು ಬಿಟ್ಟು ತುಳುವನ್ನು ಪ್ರತ್ಯೇಕಗೊಳಿಸಿ ತುಳುವಿನಲ್ಲೇ ಇರುತ್ತೇನೆ ಎಂದರೆ ಸಾಧ್ಯವಿಲ್ಲ. ಯಾಕೆಂದರೆ ತುಳು ಕನ್ನಡದಲ್ಲಿ ಅಂತರ್ಗತವಾಗಿದೆ. ಹಾಗಾಗಿ ನಾವು ಎಲ್ಲ ಭಾಷೆಯನ್ನು ತಬ್ಬಿಕೊಳ್ಳುವ ವಿಚಾರ ಆದಾಗ ಜ್ಞಾನ ಹೆಚ್ಚುತ್ತದೆ. ಹೆಚ್ಚು ವಿಕಾಸಶೀಲರಾಗಿ ಬೆಳೆಯುತ್ತೇವೆ. ಭಾಷೆಗಾಗಿ ನಾವು ಆವೇಷದ ಕೂಗಾಟ ಮಾಡುವುದಲ್ಲ. ನಾವು ನಮ್ಮಿಂದ ಎನಾಗುತ್ತದೆ ಅಷ್ಟು ಸಹಕಾರ ಮಾಡಬೇಕು ಎಂದರು.
ಕುಂಬ್ರ ಅನ್ನುವ ಹೆಸರು ಮುಂದೆ ಹೋಗುತ್ತಿದೆ:
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಅವರು ‘ ನಾರಾಯಣ ಕುಂಬ್ರ ಅವರು ರಚಿಸಿದ ‘ ಸೋಮವಾರ ಸಂತೆಗ್’ ತುಳು ದೃಶ್ಯಗೀತೆಯನ್ನು ಬಿಡುಗಡೆಗೊಳಿಸಿ ಮಾತನಾಡಿ ತುಂಬ ವರ್ಷಗಳ ಹಿಂದೆ ಕುಂಬ್ರ ಮಹಾಬಲ ಶೆಟ್ಟಿಯವರು ತುಳು ಸಿನೆಮಾ ಮಾಡಿದ್ದರು. ಆ ಬಳಿಕ ಕುಂಬ್ರ ರಘುನಾಥ ರೈ ತುಳು ಸಿನೆಮಾ ಮಾಡಿದ್ದರು. ಅದಕ್ಕೆ ರಾಷ್ಟ್ರಪ್ರಶಸ್ತಿ ದೊರಕಿದೆ. ಆ ನಂತರ ಅನೇಕ ಪ್ರತಿಭೆಗಳು ಕುಂಬ್ರದಿಂದ ಬಂದಿದೆ. ಈ ಭಾರಿ ಎರಡು ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಕುಂಬ್ರಕ್ಕೆ ಬಂದಿದೆ. ಕುಂಬ್ರ ಅನ್ನುವ ಹೆಸರು ಮುಂದೆ ಹೋಗುತ್ತಿದೆ. ಅದೇ ರೀತಿ ನಾರಾಯಣ ಅವರ ಸೋಮವಾರ ಸಂತೆಗೆ ಕವನ ಸಂಕಲನ ಬಿಡುಗಡೆಯಾಗಿದೆ. ನಮ್ಮಲ್ಲಿ ಸಂತೆಗೆ ಹಾಸನದ ತರಕಾರಿ ಬರುತ್ತಿದೆ. ನಮಗೆ ಊರಿನ ತರಕಾರಿ ಬೇಕು. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಿಂದ ಬಂದ ನಾರಾಯಣ ಅವರು ಕನ್ನಡ ಸಾಹಿತ್ಯದ ಸೇವೆಗೆ ಕನ್ನಡ ಸಾಹಿತ್ಯ ಪರಿಷತ್‌ನೊಂದಿಗೆ ಕೈ ಜೋಡಿಸುವುದು ಅದು ಊರಿನ ತರಕಾರಿ ಇದ್ದಂತೆ ಎಂದರು.
ಸಾಹಿತ್ಯ ಪರಿಷತ್ ಪರಿವಾರದ ಸದಸ್ಯರನ್ನಾಗಿ ಮಾಡುವ ಆಶಯ :
ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರು ಮಾತನಾಡಿ ಈ ಭಾರಿ ಕನ್ನಡ ರಾಜ್ಯೋತ್ಸವ ಗತ ವೈಭವವನ್ನು ಮರಳಿಸಿದೆ. ಅದೇ ರೀತಿ ಸಾಹಿತ್ಯ ಪರಿಷತ್‌ನಿಂದ ನಡೆಯುವ ಪ್ರತಿ ವರ್ಷದ ಕವಿಗೋಷ್ಠಿಯನ್ನು ಈ ಭಾರಿ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಮಹಾನೀಯರನ್ನು ಸ್ಮರಿಸುವ ಮೂಲಕ ಕವಿಗೋಷ್ಠಿ ಮಾಡಲಾಗುತ್ತಿದೆ. ಈ ಕಾರ್ಯಕ್ರಮಗಳಲ್ಲಿ ಸಾಹಿತಿಗಳು ಮಾತ್ರವಲ್ಲ ಸಾಹಿತ್ಯ ಆಸಕ್ತರು, ಕನ್ನಡ ಅಭಿಮಾನಿಗಳು ಭಾಗಿಯಾಗಬೇಕೆಂಬುವುದು ನಮ್ಮ ಆಶಯವಾಗಿದೆ. ಅವರನ್ನು ಸಾಹಿತ್ಯ ಪರಿಷತ್ ಪರಿವಾರದ ಸದಸ್ಯರನ್ನಾಗಿ ಮಾಡುವುದೂ ನಮ್ಮ ಆಶಯವಾಗಿದೆ ಎಂದರು. ಚಿಗುರೆಲೆ ಸಾಹಿತ್ಯ ಬಳಗದ ನಿರ್ವಾಹಕಿ ಸಾಹಿತಿ ಅಪೂರ್ವ ಕಾರಂತ್ ಮಾತನಾಡಿದರು.
ಸೋಮವಾರ ಸಂತೆಗೆ ತುಳು ಸಾಹಿತ್ಯ ದೃಶ್ಯಗೀತೆ ಬಿಡುಗಡೆ- ಸನ್ಮಾನ:
ನಾರಾಯಣ ಕುಂಬ್ರ ರಚಿಸಿದ ಸೋಮವಾರ ಸಂತೆಗೆ ತುಳು ಸಾಹಿತ್ಯ ದೃಶ್ಯಗೀತೆಯನ್ನು ಕುಂಬ್ರ ದುರ್ಗಾಪ್ರಸಾದ್ ರೈ ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ನಾರಾಯಣ ಕುಂಬ್ರ ಅವರನ್ನು ಸನ್ಮಾನಿಸಲಾಯಿತು. ತುಳು ದೃಶ್ಯ ಗೀತೆ ನಿರ್ಮಾಪಕ ವಿದ್ಯಾ ಎಸ್ ರೈ ಸನ್ಮಾನ, ಗಾಯಕ ಚಂದ್ರಶೇಖರ್ ಮಂಗಳೂರು, ಮೇಘನಾ ಕಾರ್ಕಳ ಅವರನ್ನು ಗೌರವಿಸಲಾಯಿತು.
ಲೇಖನ ಸಿರಿ ಬಿರುದು ಪ್ರದಾನ:
7 ತಿಂಗಳಲ್ಲಿ 25 ಲೇಖನ ರಚಿಸುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬಿಬಿಎ ವಿದ್ಯಾರ್ಥಿನಿ ಕು. ಕೀರ್ತನ ಒಕ್ಕಲಿಗ ಅವರಿಗೆ ಚಿಗುರಲೆ ಸಾಹಿತ್ಯದಿಂದ ‘ಲೇಖನ ಸಿರಿ’ ಬಿರುದು ಪ್ರದಾನ ಮಾಡಿ ಗೌರವಿಸಲಾಯಿತು. ಕಾರ್ಯಕ್ರಮದ ಸಂಚಾಲಕ ನಾರಾಯಣ ಕುಂಬ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕವಿಗೋಷ್ಠಿಯ ಅಧ್ಯಕ್ಷೆ ಆಶಾ ಮಯ್ಯ, ಧೀಶಕ್ತಿ ಯಕ್ಷಗಾನ ಕಲಾ ಸಂಘದ ಕಲಾವಿದೆ ಪದ್ಮಾ ಕೆ.ಆಚಾರ್ಯ, ರೋಟರಿ ಸಂಸ್ಥೆಯ ಕಮ್ಯೂನಿಟಿ ಸರ್ವಿಸ್ ಸಚಿನ್ ನಾಯಕ್ , ಯೂತ್ ಸರ್ವಿಸ್ ಆಭೀಷ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಶಿಧರ್ ಎಮಾಜೆ ಸ್ವಾಗತಿಸಿದರು. ಕೇಶವ್ ನೆಲ್ಯಾಡಿ ವಂದಿಸಿದರು. ಸುಚಿತ್ರಾ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದ ಬಳಿಕ ಕವಿಗೋಷ್ಠಿ ನಡೆಯಿತು.