ರಕ್ತದಾನ ಮಾಡುವುದರಿಂದ ದೇಹಕ್ಕೆ ಹಾನಿಯಿಲ್ಲ : ಡಾ.ರಾಮಚಂದ್ರ ಭಟ್
ಪುತ್ತೂರು: ರಕ್ತದಾನ ಮಾಡುವ ಸಾಮರ್ಥ್ಯವಿದ್ದರೂ ಅನೇಕ ಮಂದಿ ರಕ್ತ ನೀಡಲು ಭಯಪಡುತ್ತಾರೆ. ರಕ್ತದಾನದಿಂದ ನಾವು ರಕ್ತ ಕಳೆದುಕೊಳ್ಳುತ್ತೇವೆ ಎಂಬ ಅಂಜಿಕೆಯನ್ನು ತೊರೆಯಬೇಕು. ಯಾಕೆಂದರೆ ಪ್ರತಿ ನಿಮಿಷಕ್ಕೊಮ್ಮೆ ಮಾನವನ ದೇಹದಲ್ಲಿ ರಕ್ತ ಉತ್ಪತ್ತಿಯಾಗುತ್ತಲೇ ಇರುತ್ತದೆ. ರಕ್ತದಾನ ಮಾಡಿದ ತಕ್ಷಣ ಹಳೆ ರಕ್ತ ಖಾಲಿಯಾಗಿ ಹೊಸ ರಕ್ತ ದೇಹದೊಳಗೆ ಸಂಚರಿಸುತ್ತದೆ ಎಂದು ಪುತ್ತೂರಿನ ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ವೈದ್ಯಾಧಿಕಾರಿ ಡಾ. ರಾಮಚಂದ್ರ ಭಟ್ ಹೇಳಿದರು.
ಅವರು ನಗರದ ನಟ್ಟೋಜ ಪೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಪುತ್ತೂರಿನ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್, ಪುತ್ತೂರು ಬಿ. ಎಂ. ಎಸ್ ಆಟೋ ಚಾಲಕ – ಮಾಲಕರ ಸಂಘ ಹಾಗೂ ಕಾಲೇಜಿನ ಎನ್.ಎಸ್.ಎಸ್ ಘಟಕದ ಸಂಯುಕ್ತಾಶ್ರಯದಲ್ಲಿ ಶನಿವಾರದಂದು ಆಯೋಜಿಸಲಾದ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಹದಲ್ಲಿ ಹರಿಯುವ ರಕ್ತ ಚಲನೆಯನ್ನು ಸೂಚಿಸುತ್ತದೆ. ಹೃದಯದಲ್ಲಿ ರಕ್ತ ಉತ್ಪತ್ತಿಯಾಗುವಂತಹದ್ದು ಎನ್ನುವ ತಪ್ಪು ಕಲ್ಪನೆ ಜನರಲ್ಲಿದೆ. ನಿಜಕ್ಕೂ ರಕ್ತ ಮೂಳೆಗಳ ಸಂಧುಗಳಲ್ಲಿ ತಯಾರಾಗುವಂತಹದ್ದು. ಹೃದಯ ರಕ್ತವನ್ನು ಪಂಪ್ ಮಾಡಲು ಸಹಕರಿಸುತ್ತದೆ. ಇಂತಹ ಸಾಮಾನ್ಯ ಸಂಗತಿಯನ್ನು ವಿದ್ಯಾರ್ಥಿಗಳು ಅರಿತಿರಬೇಕು ಎಂದು ಹೇಳಿದರು.
ಪುತ್ತೂರು ಬಿ. ಎಂ. ಎಸ್ ಆಟೋ ಚಾಲಕ- ಮಾಲಕರ ಸಂಘದ ಅಧ್ಯಕ್ಷ ರಾಜೇಶ್ ಕೆ ಮರೀಲ್ ಮಾತನಾಡಿ, ರಕ್ತದಾನವು ದಾನಗಳಲ್ಲಿ ಅತೀ ಉನ್ನತವಾದುದು. ಸಾಮಾಜಿಕ ಜಾಲತಾಣಗಳಲ್ಲಿ ಯಾರಿಗಾದರೂ ನಿರ್ದಿಷ್ಟ ಗುಂಪಿನ ರಕ್ತವಿದೆ ಎನ್ನುವ ಸಂದೇಶ ಕಂಡುಬಂದಾಗ, ಆ ಗುಂಪಿನವರು ರಕ್ತದಾನ ಮಾಡಲು ಮುಂದೆ ಬರಬೇಕು. ಮಾನವೀಯ ದೃಷ್ಟಿಕೋನವನ್ನು ಬೆಳೆಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ರಕ್ತದಾನದ? ಹೆಮ್ಮೆಯ ಸಂಗತಿ ಮತ್ತೊಂದಿಲ್ಲ. ರಕ್ತದಾನವನ್ನು ಸಾಮಾನ್ಯ ಕ್ರಿಯೆಯಂತೆ ಪರಿಗಣಿಸಿ, ಭಯಮುಕ್ತರಾಗಬೇಕು. ವಿದ್ಯಾರ್ಥಿ ಜೀವನದಲ್ಲಿಯೇ ವಿದ್ಯಾರ್ಥಿಗಳು ರಕ್ತದಾನವೆಂಬ ಅದ್ವಿತೀಯ ದಾನದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಪುತ್ತೂರು ಬಿ. ಎಂ. ಎಸ್ ಆಟೋ ಚಾಲಕ- ಮಾಲಕರ ಸಂಘದ ಗೌರವ ನಿರ್ದೇಶಕ ಬಿ.ಕೆ. ದೇವಪ್ಪ ಗೌಡ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿನಿ ಚೈತನ್ಯಾ ಪ್ರಾರ್ಥಿಸಿ, ಕಾಲೇಜಿನ ಪ್ರಾಚಾರ್ಯ ರಾಕೇಶ್ ಕುಮಾರ್ ಕಮ್ಮಜೆ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ತೃಪ್ತಿ ವಂದಿಸಿ, ದೀಪಾ ಕಾರ್ಯಕ್ರಮ ನಿರ್ವಹಿಸಿದರು.