ಅಡ್ಡ ಸರಳು ಜೋಡಿಸದೆ ತಡೆಗೋಡೆ ನಿರ್ಮಾಣ – ಕಾಮಗಾರಿ ಲೋಪದ ಬಗ್ಗೆ ಸಂಶಯ

0

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ಕಾಮಗಾರಿ ಉಪ್ಪಿನಂಗಡಿ ಭಾಗದಲ್ಲಿ ನಡೆಯುತ್ತಿದ್ದಂತೆಯೇ ಹಲವೆಡೆ ಕಾಮಗಾರಿಯ ಗುಣಮಟ್ಟದ ಬಗ್ಗೆ ಸಂಶಯಗಳು ಮೂಡುತ್ತಿದ್ದು, ಜಾಗೃತ ನಾಗರಿಕರು ಕಾಮಗಾರಿಯಲ್ಲಿನ ಲೋಪ ಎಂದು ಶಂಕಿಸಲಾದ ಅಂಶಗಳ ಬಗ್ಗೆ ಇಲಾಖಾಧಿಕಾರಿಗಳ ಗಮನ ಸೆಳೆದಿದ್ದಾರೆ.
ಉಪ್ಪಿನಂಗಡಿ ಶಾಲಾ ರಸ್ತೆಯ ಬಳಿ ಬೃಹತ್ ಕಾಂಕ್ರೀಟ್ ತಡೆಗೋಡೆಯನ್ನು ನಿರ್ಮಿಸಲಾಗುತ್ತಿದ್ದು, ವಿದ್ಯಾರ್ಥಿಗಳು ನಡೆದಾಡುವ ರಸ್ತೆಯ ಸನಿಹದಲ್ಲಿ ನಿರ್ಮಿಸಲಾಗುತ್ತಿರುವ ತಡೆಗೋಡೆಯ ಎತ್ತರ ಹದಿನೈದು ಅಡಿಗೂ ಮಿಗಿಲಾಗಿದೆ. ಇಲ್ಲಿ ಇದರ ನಿರ್ಮಾಣ ಕಾರ್ಯ ಗುಣಮಟ್ಟದಿಂದ ನಡೆಯುವ ನಿರೀಕ್ಷೆಯನ್ನು ಹೊಂದಲಾಗಿತ್ತು. ಯಾಕೆಂದರೆ ಇದೇ ಹೆದ್ದಾರಿಯ ಇನ್ನೊಂದು ಪಾರ್ಶ್ವದಲ್ಲಿ ನಿರ್ಮಿಸಲಾದ ತಡೆಗೋಡೆಯು ಕಳೆದ ಜು.23ರಂದು ಬುಡದಿಂದಲೇ ಮಗುಚಿ ಬಿದ್ದಿತ್ತು. ಅದು ಜನ ಸಂಚಾರ ಇಲ್ಲದ ಸ್ಥಳವಾಗಿರುವುದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲವಾದರೂ ಹೆದ್ದಾರಿಯ ಇನ್ನೊಂದು ಪಾರ್ಶ್ವ ಶಾಲಾ ಮಕ್ಕಳ ಸಂಚಾರದ ರಸ್ತೆಯಾಗಿದ್ದು, ಮಕ್ಕಳ ಸುರಕ್ಷತೆಗಾಗಿ ಕಾಮಗಾರಿಯ ಗುಣಮಟ್ಟದ ಬಗ್ಗೆ ನಾಗರಿಕರು ಸಹಜ ನಿಗಾವಿರಿಸಿದ್ದರು. ಆದಾಗ್ಯೂ ಕಾಂಕ್ರೀಟ್ ತಡೆಗೋಡೆ ನಿರ್ಮಾಣಕ್ಕೆ ನೆಲದಿಂದ ಹಾಕಲಾದ ಕಬ್ಬಿಣದ ಸರಳುಗಳಿಗೆ ಅಡ್ಡಲಾಗಿ ಕಬ್ಬಿಣದ ಸರಳುಗಳನ್ನು ಅಳವಡಿಸದೆ ಸೆಂಟ್ರಿಂಗ್ ಪಟ್ಟಿ ಅಳವಡಿಸಲಾಗಿತ್ತು. ಈ ಬಗ್ಗೆ ಸ್ಥಳೀಯ ಉದ್ಯಮಿಯೋರ್ವರು ಕಾಮಗಾರಿ ನಿರತ ಕಾರ್ಮಿಕರನ್ನು ಪ್ರಶ್ನಿಸಿದಾಗ ಸರಳುಗಳು ಮುಗಿದಿತ್ತು. ಅದಕ್ಕಾಗಿ ಸೆಂಟ್ರಿಂಗ್ ಪಟ್ಟಿ ಅಳವಡಿಸಲಾಗಿದೆ ಎಂಬ ಉತ್ತರ ಲಭಿಸಿತ್ತು. ಇದರಿಂದ ಕಳವಳಕ್ಕೀಡಾದ ಅವರು ಪ್ರಕರಣವನ್ನು ಮಾಧ್ಯಮ ಪ್ರತಿನಿಧಿಗಳ ಮೂಲಕ ಇಲಾಖಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಪ್ರಕರಣದ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಪರಿಶೀಲಿಸುವ ಭರವಸೆ ನೀಡಿದ್ದಾರೆ. ಹೆದ್ದಾರಿ ಇಕ್ಕೆಲಗಳಲ್ಲಿ ಬೃಹತ್ ಗಾತ್ರದ ತಡೆಗೋಡೆಯನ್ನು ನಿರ್ಮಿಸುವಾಗ ಕಾಮಗಾರಿ ನಿರತ ಕಾರ್ಮಿಕರ ಅಸಹನೆಯಾಗಲಿ, ಲಭ್ಯ ಸಂಪನ್ಮೂಲಗಳ ಕೊರತೆಯಾಗಲಿ ಕಾಮಗಾರಿಯ ಗುಣಮಟ್ಟ ಕುಸಿಯಲು ಕಾರಣವಾಗಬಾರದು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪ್ರತಿ ಕಾಮಗಾರಿಯ ವೇಳೆ ಖುದ್ದು ಉಪಸ್ಥಿತರಿದ್ದು ನಿಗಾವಿರಿಸುವ ಅಗತ್ಯತೆ ಇರುವುದರಿಂದ ಹೆದ್ದಾರಿ ಇಲಾಖಾಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಾಗಿದೆ ಎಂದು ನಾಗರಿಕರ ಒತ್ತಾಯವಾಗಿದೆ.

LEAVE A REPLY

Please enter your comment!
Please enter your name here