ಸಮಾಜದ ಚಿಗುರೊಡೆಯುವ ಯುವಕನ ಬರ್ಬರ ಹತ್ಯೆ ಖಂಡಿಸಿ ಒಕ್ಕಲಿಗ ಗೌಡ ಸೇವಾ ಸಂಘದ ತುರ್ತು ಸಭೆ

0

ಪಾರದರ್ಶಕ ತನಿಖೆ, ಆರೋಪಿಗಳಿಗೆ ಕಠಿಣ ಶಿಕ್ಷೆಗೆ, ಅಕ್ಷಯ್ ಕುಟುಂಬಕ್ಕೆ ಸೂಕ್ತ ಪರಿಹಾರಕ್ಕೆ ಆಗ್ರಹ

ಪುತ್ತೂರು: ನಮ್ಮ ಸಮಾಜದ ಚಿಗುರೊಡೆಯುವ ಯುವಕ ಅಕ್ಷಯ್ ಕಲ್ಲೇಗ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿರುವುದು ಖಂಡನೀಯ. ಘಟನೆಯ ಕುರಿತು ಪಾರದರ್ಶಕ ತನಿಖೆ ನಡೆಸಿ, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಮತ್ತು ಅಕ್ಷಯ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಪೊಲೀಸ್ ಇಲಾಖೆಯ ಮೂಲಕ ಸರಕಾರವನ್ನು ಒತ್ತಾಯಿಸುವಂತೆ ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ತುರ್ತು ಸಭೆಯಲ್ಲಿ ನಿರ್ಣಯ ಮಾಡಲಾಗಿದೆ.
ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆ ಅವರ ಅಧ್ಯಕ್ಷತೆಯಲ್ಲಿ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿರುವ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಕಲ್ಲೇಗ ಟೈಗರ‍್ಸ್ ತಂಡದ ಮುಖ್ಯಸ್ಥ ಕಬಕ ಗ್ರಾಮದ ಕಲ್ಲೇಗ ಶೇವಿರೆ ನಿವಾಸಿ ಕಲ್ಲೇಗ ದೈವಸ್ಥಾನದ ಚಾಕ್ರಿಯವರಾದ ಚಂದ್ರಶೇಖರ್ ಗೌಡ ಮತ್ತು ಕುಸುಮಾ ದಂಪತಿ ಪುತ್ರ ಅಕ್ಷಯ್ ಕಲ್ಲೇಗ(24ವ) ಕೊಲೆಗೀಡಾದವರು. ನ.6ರ ತಡ ರಾತ್ರಿ ಅಕ್ಷಯ್ ಕಲ್ಲೇಗ ಅವರನ್ನು ನೆಹರುನಗರ ಜಂಕ್ಷನ್‌ನಲ್ಲಿ ಮಾರಕಾಸ್ತ್ರಗಳಿಂದ ಕಡಿದು ಹತ್ಯೆ ಮಾಡಲಾಗಿತ್ತು. ಘಟನೆಗೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ ಈ ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ ಇದರ ಹಿಂದಿರುವ ಷಡ್ಯಂತ್ರಗಳನ್ನು ಬಯಲಿಗೆಳೆಯಬೇಕು. ಅಕ್ಷಯ್ ಕಲ್ಲೇಗ ಅವರು ಹುಲಿ ವೇಷವನ್ನು ಹತ್ತೂರಿಗೆ ಪರಿಚಯಿಸುವ ಮೂಲಕ ಒಕ್ಕಲಿಗ ಗೌಡ ಸಮಾಜದ ಒಬ್ಬ ಚಿಗುರೊಡೆಯುವ ಯುವಕನಾಗಿದ್ದ. ಅವರ ಹತ್ಯೆಯನ್ನು ಗೌಡ ಸಂಘ ಖಂಡಿಸುತ್ತದೆ ಮತ್ತು ಹತ್ಯೆಯ ಕುರಿತು ಸಮಗ್ರ ಪಾರದರ್ಶಕ ತನಿಖೆ ನಡೆಸಿ, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಮತ್ತು ಅಕ್ಷಯ್ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಒದಗಿಸುವಂತೆ ಸಂಘದ ಮೂಲಕ ಪೊಲೀಸ್ ಇಲಾಖೆ, ಸರಕಾರವನ್ನು ಒತ್ತಾಯಿಸುವ ಕುರಿತು ನಿರ್ಣಯಿಸಲಾಗಿದೆ. ಸಭೆಯಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಅಧ್ಯಕ್ಷ ಚಿದಾನಂದ ಬೈಲಾಡಿ ಬೈಲಾಡಿ, ಸಂಘದ ಪ್ರಧಾನ ಕಾರ್ಯದರ್ಶಿ ಸುಂದರ ಗೌಡ ನಡುಬೈಲು, ಪದಾಧಿಕಾರಿಗಳಾದ ಲಿಂಗಪ್ಪ ಗೌಡ ತೆಂಕಿಲ, ಶ್ರೀಧರ್ ಕಣಜಾಲು, ರವಿ ಮುಂಗ್ಲಿಮನೆ, ಪುರುಷೋತ್ತಮ ಮುಂಗ್ಲಿಮನೆ, ರಾಧಾಕೃಷ್ಣ ನಂದಿಲ, ಅಮರನಾಥ್ ಬಪ್ಪಳಿಗೆ ಸಹಿತ ಹಲವಾರು ಮಂದಿ ಸಭೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here