ನೈಸರ್ಗಿಕ ಉಪಯುಕ್ತ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಿ – ನವೀನ್ ಕುಮಾರ್ ಭಂಡಾರಿ
ಪುತ್ತೂರು: ಜಿಲ್ಲೆಯ ಸಂಜೀವಿನಿ ಸ್ವಸಹಾಯ ಗುಂಪಿನ ಮಹಿಳೆಯರು ಮತ್ತು ಕುಂಬಾರರ ಗುಡಿ ಕೈಗಾರಿಕ ಸಹಕಾರಿ ಸಂಘದ ಮಹಿಳಾ ತಯಾರಕರು ಉತ್ಪಾದಿಸಿರುವ ವಿವಿಧ ಉತ್ಪನ್ನಗಳನ್ನು ಒಟ್ಟುಗೂಡಿಸಿ ತಯಾರಿಸಲಾದ ಮಣ್ಣಿನ ಹಣತೆ ’ದೀಪ ಸಂಜೀವಿನಿ’ ಮಾರುಕಟ್ಟೆಯನ್ನು ನ.9ರಂದು ತಾ.ಪಂ ಕಚೇರಿ ಮುಂಭಾಗ ಚಾಲನೆ ನೀಡಲಾಯಿತು.
ಗ್ರಾಮೀಣಾಭಿವೃದ್ಧಿ ಮಂತ್ರಾಲಯ, ಭಾರತ ಸರ್ಕಾರ ದಿನ್ ದಯಾಳ್ ಅಂತ್ಯೊದಯ ಯೋಜನೆ ’ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಂಜೀವಿನಿ’ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಜಿಲ್ಲಾ ಪಂಚಾಯತ್ ದಕ್ಷಿಣ ಕನ್ನಡ, ತಾಲೂಕು ಪಂಚಾಯತ್ ಪುತ್ತೂರು ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಸ್ವ-ಸಹಾಯ ಗುಂಪು ಇವರ ಸಹಯೋಗದೊಂದಿಗೆ ನ.11ರ ವರೆಗೆ ದೀಪ ಸಂಜೀವಿನಿ ಕಾರ್ಯಕ್ರಮ ನಡೆಯಲಿದ್ದು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್ ಅವರು ಕಾರ್ಯಕ್ರಮ ಉದ್ಘಾಟಿಸಿ ಗ್ರಾಮೀಣ ಉತ್ಪನ್ನಗಳನ್ನು ಅನಾವರಣಗೊಳಿಸಿದರು. ಸ್ವಸಹಾಯ ಗುಂಪಿನ ಮಹಿಳೆಯರು ತಮ್ಮ ಕೈಚಳಕದಿಂದ ವಿವಿಧ ವಿನ್ಯಾಸದ ಮಣ್ಣಿನ ಹಣತೆಗಳನ್ನು ತಯಾರಿಸಿದ್ದು, ದೀಪ ಸಂಜೀವಿನಿ ಎಂಬ ಹೆಸರಿನಲ್ಲಿ ಇದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಇದಕ್ಕೆ ಎಲ್ಲರ ಪ್ರೋತ್ಸಾಹ ಇರಲಿ ಎಂದರು. ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್, ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ ಭಾಸ್ಕರ್ ಪೆರುವಾಯಿ ಮಾತನಾಡಿದರು. ಪಂಚಾಯತ್ ರಾಜ್ ಪ್ರಭಾರ ಸಹಾಯ ನಿರ್ದೇಶಕ ಪಂಚಾಯತ್ ರಾಜ್ ಪ್ರವೀಣ್, ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜನಾರ್ದನ ಸಾರ್ಯ, ತಾ.ಪಂ ಮೆನೇಜರ್ ಜಯಪ್ರಕಾಶ್, ನರೇಗದ ಭರತ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್.ಆರ್.ಎಲ್.ಎಮ್ ತಾಲೂಕು ವಲಯ ಮೇಲ್ವಿಚಾರಕಿ ನಮಿತಾ ವಂದಿಸಿದರು.