ಕಾಣಿಯೂರು:ಪ್ರತಿಭಾ ಕಾರಂಜಿ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ವೇದಿಕೆ ಲಭಿಸಿದೆ. ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಲು ಪ್ರತಿಭಾ ಕಾರಂಜಿ ಅವಶ್ಯಕ ಎಂದು ಬೊಬ್ಬೆಕೇರಿ ಸ ಹಿ ಪ್ರಾ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ಪೈಕ ಹೇಳಿದರು. ಅವರು ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು, ಸಮೂಹ ಸಂಪನ್ಮೂಲ ಕೇಂದ್ರ ಕಾಣಿಯೂರು, ಸ.ಹಿ.ಪ್ರಾ.ಶಾಲೆ ಬೊಬ್ಬೆಕೇರಿ ಇವುಗಳ ಆಶ್ರಯದಲ್ಲಿ ಬೊಬ್ಬೆಕೇರಿ ಸ.ಹಿ.ಪ್ರಾ.ಶಾಲೆಯಲ್ಲಿ ನಡೆದ ಕಾಣಿಯೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ತೀರ್ಥಕುಮಾರ್ ಪೈಕ ಮಾತನಾಡಿ, ಮಕ್ಕಳ ಬಹುಮುಖ ಪ್ರತಿಭೆಗೆ ಪ್ರತಿಭಾ ಕಾರಂಜಿ, ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ. ನಮ್ಮ ಸಂಸ್ಕೃತಿ, ಕಲೆಯನ್ನು ಬೆಳೆಸಿಕೊಳ್ಳಲು ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಸಹಕಾರಿಯಾಗಿದೆ ಎಂದರು.
ಪುತ್ತೂರು ತಾಲೂಕು ಶಿಕ್ಷಣ ಸಂಯೋಜಕ ಅಮೃತಾ ಕಲಾ, ಬಿ.ಅರ್.ಪಿ ಓಬಲೇಶ್, ಸಿ.ಅರ್.ಪಿ ಗಳಾದ ಯಶೋಧ ಎ, ಕುಶಾಲಪ್ಪ, ಶಶಿಕಲಾ ಉಪಸ್ಥಿತರಿದ್ದರು. ಶಾಲಾ ಮುಖ್ಯಶಿಕ್ಷಕಿ ಶಶಿಕಲಾ ಸ್ವಾಗತಿಸಿ, ಶಿಕ್ಷಕ ಜನಾರ್ದನ ಹೇಮಳ ವಂದಿಸಿದರು. ಶಿಕ್ಷಕಿ ಶೋಭಿತಾ ಕಾರ್ಯಕ್ರಮ ನಿರೂಪಿಸಿದರು.
ಸಮಗ್ರ ಪ್ರಶಸ್ತಿ ವಿವರ: ಕಿರಿಯ ಹಾಗೂ ಹಿರಿಯರ ವಿಭಾಗದಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡರೆ, ಹಿರಿಯರ ವಿಭಾಗದಲ್ಲಿ ಚಾರ್ವಾಕ ಸ.ಉ.ಹಿ.ಪ್ರಾ. ಶಾಲೆಗೆ ದ್ವಿತೀಯ ಸಮಗ್ರ ಪ್ರಶಸ್ತಿ ಹಾಗೂ ಕಿರಿಯರ ವಿಭಾಗದಲ್ಲಿ ಕಾಣಿಯೂರು ಸ.ಹಿ.ಪ್ರಾ.ಶಾಲೆಗೆ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು.