ನಡುರಸ್ತೆಯಲ್ಲಿ ಬಾಕಿಯಾದ ನಟ ಸುಂದರ ರೈ ಮಂದಾರರ ಕಾರು…!- ಅಲ್ಲಿಗೆ ಬಂದ ವಯೋ ವೃದ್ಧ ಯಾರು..? ಸ್ಟ್ರಾಟ್ ಆಗದ ಕಾರು ಚಾಲೂ ಆಗಿದ್ದು ಹೇಗೆ…?-ಹಾಡುಹಗಲೇ ನಡೆಯಿತೊಂದು ಪವಾಡ…!

0

ಇದು ಬೇರೆಲ್ಲೋ ನಡೆದ ಘಟನೆಯಲ್ಲ, ನಮ್ಮ ಪುತ್ತೂರಿನಲ್ಲೇ ನಡೆದ ಪವಾಡ ರೀತಿಯ ವಿಸ್ಮಯ. ಇಷ್ಟಕ್ಕೂ ರಂಗಭೂಮಿ ಕಲಾವಿದ ಸುಂದರ ರೈ ಮಂದಾರರನ್ನು ಅಚ್ಚರಿ ಮೂಡಿಸಿದ ಆ ಘಟನೆ ಯಾವುದು..? ಅವರು ಚಲಾಯಿಸಿಕೊಂಡು ಬಂದ ಕಾರು ರಸ್ತೆ ಮಧ್ಯೆಯೇ ಸ್ಟ್ರಾಟ್ ಬಂದ್ ಆಗಿದ್ದು ಹೇಗೆ…? ಹೇಗೆ ಮಾಡಿದರೂ ಸ್ಟ್ರಾಟ್ ಆಗದ ಕಾರು ಮುಂದೆ ಚಾಲೂ ಆಗಿದ್ದು ಹೇಗೆ…? ಅಷ್ಟಕ್ಕೂ ಅಲ್ಲಿಗೆ ಬಂದ ಆ ವಯೋವೃದ್ಧ ವ್ಯಕ್ತಿ ಯಾರು..? ಅವರು ಸ್ಟೇರಿಂಗ್ ಮೇಲೆ ಕೈ ಇಟ್ಟಂತೆ ಕಾರು ಸ್ಟ್ರಾಟ್ ಆಗಿದ್ದು ಹೇಗೆ..? ಇಲ್ಲಿದೆ ಒಂದು ವಿಸ್ಮಯಕಾರಿ ವರದಿ.


ರಂಗ್‌ದ ರಾಜೆ ಎಂದೇ ಪ್ರಸಿದ್ಧಿ ಪಡೆದುಕೊಂಡಿರುವ ತುಳು ರಂಗಭೂಮಿ ಕಲಾವಿದ, ಸಿನಿಮಾ ನಟ, ನಿರ್ದೇಶಕ ಸುಂದರ ರೈ ಮಂದಾರರವರು ತನ್ನ ಹೆಂಡ್ತಿಯೊಂದಿಗೆ ನ.11ರಂದು ಬೆಳಿಗ್ಗೆ ತನ್ನ ಕಿರಿಯ ಪುತ್ರನ ಶಾಲಾ ಮೀಟಿಂಗ್‌ಗೆ ಸಾಂದೀಪನಿ ಶಾಲೆಗೆ ತೆರಳಿದ್ದರು. ಅಲ್ಲಿ ಮೀಟಿಂಗ್ ಮುಗಿಸಿಕೊಂಡ ಅವರು ಬಳಿಕ ತನ್ನ ಹಿರಿಯ ಪುತ್ರನ ಶಾಲಾ ಮೀಟಿಂಗ್‌ಗೆ ಸಂತ ಫಿಲೋಮಿನಾ ಕಾಲೇಜಿಗೆ ತೆರಳಿ ಅಲ್ಲಿ ಮೀಟಿಂಗ್ ಮುಗಿಸಿ ಬಳಿಕ ಹೆಂಡ್ತಿಯೊಂದಿಗೆ ದೀಪಾವಳಿ ಖರೀದಿಗಾಗಿ ಪುತ್ತೂರು ರಾಧಾಸ್ ಡ್ರೆಸ್ ಶಾಪ್ ಗೆ ತೆರಳಿದ್ದರು. ಕೋರ್ಟ್ ರಸ್ತೆಯ ಮೂಲಕ ಮಂದಾರರು ರಾಧಾಸ್‌ಗೆ ತನ್ನ ಕಾರಲ್ಲಿ ಬಂದಾಗ ಮಧ್ಯಾಹ್ನ 12.45ರ ಸಮಯ, ಅಲ್ಲಿ ಪಾರ್ಕಿಂಗ್‌ಗೆ ಜಾಗವಿರಲಿಲ್ಲ, ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಲು ನೋಡಿದಾಗ ಅಲ್ಲೇ ಇದ್ದ ವಾಚ್‌ಮೆನ್‌ರವರು ನೀವು ಇಲ್ಲಿ ಕಾರು ಪಾರ್ಕ್ ಮಾಡಬೇಡಿ ಪೊಲೀಸ್ ಫೈನ್ ಹಾಕ್ತಾರೆ, ಅಲ್ಲಿ ಪಾರ್ಕಿಂಗ್ ಏರಿಯಾದಲ್ಲಿ ಪಾರ್ಕ್ ಮಾಡಿ ಎಂದರು. ಅದರಂತೆ ಮಂದಾರರವರು ರಾಧಾಸ್‌ನ ಅಂಡರ್‌ಗ್ರೌಂಡ್‌ನಲ್ಲಿರುವ ಪಾರ್ಕಿಂಗ್‌ಗೆ ತನ್ನ ಕಾರನ್ನು ಪಾರ್ಕ್ ಮಾಡಲು ಮುಖ್ಯ ರಸ್ತೆಯಿಂದ ತಿರುಗಿಸಿ ಮುಂದೆ ಚಲಿಸುತ್ತಿದ್ದಂತೆ ಕಾರು ಏಕಾಏಕಿ ಸ್ಟಾರ್ಟ್ ಬಂದ್ ಆಯಿತು.


ಕೆಲವೊಮ್ಮೆ ಕಾರು ಬಂದ್ ಬೀಳುವುದು ಸಹಜ ಹಾಗಂತ ಅಂದುಕೊಂಡಿದ್ದ ಮಂದಾರರು ಸ್ಟಾರ್ಟ್ ಮಾಡಲು ನೋಡಿದರೂ ಊಹೂಂ ಸ್ಟಾರ್ಟ್ ಆಗಲೇ ಇಲ್ಲ…ಒಂದಲ್ಲ ಎರಡಲ್ಲ 15 ಬಾರಿ ಸೆಲ್ಪ್ ಹಾಕಿದರೂ ಕಾರು ಸ್ಟ್ರಾಟ್ ತೆಗೆದುಕೊಳ್ಳಲೇ ಇಲ್ಲ. ಮಂದಾರರಿಗೆ ಬೆವರಲು ಶುರುವಿಟ್ಟುಕೊಂಡಿತು. ರಸ್ತೆ ಮಧ್ಯೆ ಕಾರು ಬಾಕಿಯಾಗಿದ್ದರಿಂದ ಎದುರಿನಿಂದ ಹಿಂದಿನಿಂದ ವಾಹನದ ಹಾರ್ನ್ ಕೇಳಲು ಶುರುವಾಯಿತು. ಕಾರಿನಿಂದ ಕೆಳಗಿಳಿದ ಸುಂದರ ರೈಯವರು ಕಾರಿನ ಬೊನೆಟ್ ಓಪನ್ ಮಾಡಿ ಒಂದ್ಸಲ ಚೆಕ್ ಮಾಡಿದರು. ಆಯಿಲ್ ಇದೆಯಾ ಎಂದು ನೋಡಿದರೆ ಅದು ಇದೆ, ನೀರು ಖಾಯಿಯಾಗಿಲ್ಲ ಅವರಿಗೆ ತಿಳಿದಂತೆ ಎಲ್ಲವೂ ಸರಿಯಾಗಿಯೇ ಇತ್ತು. ಏಕೆಂದರೆ ಮಂದಾರರೇ ಹೇಳುವಂತೆ ಕಳೆದ 15 ವರ್ಷಗಳಿಂದ ಕಾರು ಓಡಿಸುತ್ತಿದ್ದಾರೆ. ಆದ್ದರಿಂದ ಕಾರಿನ ಕೆಲವು ವಿಷಯಗಳು ನನಗೆ ತಿಳಿದಿದೆ ಎನ್ನುತ್ತಾರೆ. ಹೇಗೆ ಚೆಕ್ ಮಾಡಿದರು ಕಾರು ಚಾಲೂ ಆಗಲೇ ಇಲ್ಲ. ಇನ್ನೇನು ಮಾಡುವುದು ಎಂದು ಯೋಚಿಸಿ ಕಾರು ದುರಸ್ತಿಯ ಕಾರ್‌ಟೆಕ್‌ಗೆ ಕಾಲ್ ಮಾಡುವ ಎಂದು ಮೊಬೈಲ್ ತೆಗೆದು ನಂಬರ್ ನೋಡುತ್ತಿದ್ದಾಗಲೇ ಅಲ್ಲಿಗೊಬ್ಬರು ವಯೋ ವೃದ್ಧರು ನಡೆದುಕೊಂಡು ಬಂದಿದ್ದರು.
ಮಂದಾರರೇ ಹೇಳುವಂತೆ ಗಡ್ಡಬಿಟ್ಟಿದ್ದ ಆ ವಯೋ ವೃದ್ಧರು ನನ್ನ ಹತ್ತಿರ ಬಂದು ಏನಾಯಿತು ಎಂದು ಕೇಳಿದ್ದರು. ನಾನು ಕಾರು ಸ್ಟ್ರಾಟ್ ಆಗುತ್ತಿಲ್ಲ ಅದಕ್ಕೆ ಕಾರು ಮೆಕ್ಯಾನಿಕ್‌ಗೆ ಕಾಲ್ ಮಾಡುತ್ತಿದ್ದೇನೆ ಎಂದೆ, ಅದಕ್ಕೆ ಅವರು ಕಾಲ್ ಮಾಡಬೇಡಿ ಕಾರು ಸ್ಟ್ರಾಟ್ ಆಗುತ್ತದೆ ನೋಡಿ ಎಂದರು. ನಾನು ಇಲ್ಲ ಸ್ಟಾರ್ಟ್ ಆಗುತ್ತಿಲ್ಲ ಸುಮಾರು ಹೊತ್ತಿನಿಂದ ತುಂಬಾ ಪ್ರಯತ್ನಪಟ್ಟೆ ಎಂದೆ, ಅದಕ್ಕೆ ಇಲ್ಲ ಸ್ಟಾರ್ಟ್ ಆಗುತ್ತದೆ ಎಂದು ಸ್ಟೇರಿಂಗ್ ಮೇಲೆ ಕೈ ಇಟ್ಟು ನಮಸ್ಕಾರ ಮಾಡಿ ಈಗ ಸ್ಟಾರ್ಟ್ ಮಾಡಿ ಎಂದರು. ನಾನು ಸ್ಟಾರ್ಟ್ ಮಾಡಿದೆ ತಕ್ಷಣವೇ ಕಾರು ಸ್ಟಾರ್ಟ್ ಆಯಿತು. ನನಗೆ ಏನು ಹೇಳಬೇಕು ಎಂದು ಮಾತೇ ಬರಲಿಲ್ಲ, ಪಕ್ಕದಲ್ಲೇ ಇದ್ದ ನನ್ನ ಹೆಂಡತಿ ಅದ್ಯೇಗೆ ನೀವು ಹೇಳಿದ ತಕ್ಷಣ ಕಾರು ಸ್ಟಾರ್ಟ್ ಆಯಿತು ಎಂದು ಕೇಳಿದ್ದಳು. ಅದಕ್ಕೆ ಆ ವಯೋ ವೃದ್ಧರು ಅದೆಲ್ಲಾ ದೇವರ ಮಹಿಮೆ, ನೀವು ಅಲ್ಲಿ ಹೋಗಿ ಕಾರ್ ಪಾರ್ಕ್ ಮಾಡಿ ಎಂದರು.


ನಾನು ಪಾರ್ಕಿಂಗ್ ಜಾಗದಲ್ಲಿ ಕಾರು ಪಾರ್ಕ್ ಮಾಡಿ, ಡ್ರೆಸ್ ಪರ್ಚೆಸ್ ಮಾಡಿ ಅಲ್ಲಿಂದ ಹಿಂತಿರುಗಿ ಬಂದು ಕಾರು ಪಾರ್ಕಿಂಗ್ ಜಾಗಕ್ಕೆ ಬಂದಾಗ ಆ ವಯೋವೃದ್ಧ ವ್ಯಕ್ತಿ ಅಲ್ಲೆಲ್ಲೂ ಕಾಣಲೇ ಇಲ್ಲ. ಹುಡುಕಾಡಿದರೂ ಅವರು ಸಿಗಲೇ ಇಲ್ಲ ಎನ್ನುತ್ತಾರೆ ಸುಂದರ ರೈ ಮಂದಾರ. ಇಷ್ಟಕ್ಕೂ ಮಂದಾರರಿಗೆ ಕಾಣಸಿಕ್ಕ ಆ ವಯೋವೃದ್ಧ ವ್ಯಕ್ತಿ ಯಾರು..? ವಾಚ್‌ಮೆನ್ ರೀತಿಯಲ್ಲೇ ಕಂಡ ಅವರು ಕಾರಿನ ಬಳಿ ಬಂದು ಮಾಡಿದ ಪವಾಡ ನಿಜಕ್ಕೂ ಅಚ್ಚರಿ ಮೂಡಿಸಿದೆ. ಮಂದಾರರೇ ಹೇಳುವಂತೆ ದೇವರಿದ್ದಾನೆ ಎನ್ನುವುದನ್ನು ನಾನು ಬಲವಾಗಿ ನಂಬಿದವನು, ಬಹುಷಹ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರೇ ಆ ವ್ಯಕ್ತಿಯ ರೂಪದಲ್ಲಿ ಬಂದ ನನಗೆ ಸಹಾಯ ಮಾಡಿರಬಹುದು ಎನ್ನುತ್ತಾರೆ. ಏನೇ ಆಗಲಿ ದೇವರು ನೇರವಾಗಿ ಕಾಣದಿದ್ದರೂ ಅಪತ್ಕಾಲದಲ್ಲಿ ವ್ಯಕ್ತಿಯ ರೂಪದಲ್ಲಿ ಬಂದು ಸಹಾಯ ಮಾಡಿ ಹೋಗುತ್ತಿರುತ್ತಾರೆ. ಸುಂದರ ರೈ ಮಂದಾರರಿಗೆ ಕಂಡ ವಿಸ್ಮಯ ಅವರ ನಂಬಿಕೆಗೆ ಸಂದ ಜಯವಾಗಿದೆ. ನಂಬಿಕೆಯನ್ನು ವಿಶ್ಲೇಷಣೆ ಮಾಡುವುದು ಇಲ್ಲಿ ಅನಗತ್ಯ ಅಂತ ಅನಿಸುತ್ತದೆ.

LEAVE A REPLY

Please enter your comment!
Please enter your name here