ಗುರುಪ್ರಸಾದ್ ರೈ ಮನೆ ದರೋಡೆ ಪ್ರಕರಣ:ಕಣ್ಣೂರು ಜೈಲಲ್ಲಿರುವ ರವಿಗೆ ನ್ಯಾಯಾಂಗ ಬಂಧನ

0

ಪುತ್ತೂರು: ಬಡಗನ್ನೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಗುರುಪ್ರಸಾದ್ ರೈ ಕುದ್ಕಾಡಿ ಅವರ ಮನೆಯಲ್ಲಿ 2 ತಿಂಗಳ ಹಿಂದೆ ನಡೆದಿದ್ದ ದರೋಡೆ ಪ್ರಕರಣದ ಆರೋಪಿಯಾಗಿರುವ, ಕೊಲೆ ಪ್ರಕರಣವೊಂದರಲ್ಲಿ ಜೈಲುಶಿಕ್ಷೆ ಅನುಭವಿಸುತ್ತಿರುವ ರವಿ ಎಂಬಾತನನ್ನು ಕಣ್ಣೂರು ನ್ಯಾಯಾಲಯದಿಂದ ಬಾಡಿ ವಾರಂಟ್ ಮೂಲಕ ವಶಕ್ಕೆ ಪಡೆದುಕೊಂಡ ಪುತ್ತೂರು ಪೊಲೀಸರು ಆತನಿಂದ ಚಿನ್ನದ ಎರಡು ಬಲೆಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.


ಗುರುಪ್ರಸಾದ್ ರೈ ಮನೆಯಲ್ಲಿ ನಡೆದಿದ್ದ ದರೋಡೆ ಕೃತ್ಯಕ್ಕೆ ಸಂಚು ರೂಪಿಸಿದ್ದ ಪ್ರಮುಖ ಆರೋಪಿ, ಕೇರಳದ ಇಚಿಲಂಕೋಡು ಕುಂಪಳ ಪಚ್ಚಂಬಳ ನಿವಾಸಿ ಸುಬ್ಬ ಎಂಬವರ ಪುತ್ರ ರವಿ ಎಂಬಾತನನ್ನು ತಮ್ಮ ಕಸ್ಟಡಿಗೆ ನೀಡಲು ಕಾರಾಗೃಹ ಅಧಿಕಾರಿಗಳಿಗೆ ಆದೇಶಿಸುವಂತೆ ಕೋರಿ ಪೊಲೀಸರು ಪುತ್ತೂರು ನ್ಯಾಯಾಲಯದಲ್ಲಿ ಬಾಡಿ ವಾರಂಟ್ ಅರ್ಜಿ ಸಲ್ಲಿಸಿದ್ದರು. ಕಾಸರಗೋಡು ಜಬ್ಬಾರ್ ಕೊಲೆ ಪ್ರಕರಣದಲ್ಲಿ ಅಪರಾಧಿಯಾಗಿ ಜೀವಾವಧಿ ಶಿಕ್ಷೆಗೊಳಗಾಗಿ ಕಣ್ಣೂರು ಸೆಂಟ್ರಲ್ ಜೈಲಲ್ಲಿರುವ ರವಿ ಎಂಬವರು ಗುರುಪ್ರಸಾದ್ ಮನೆಯ ದರೋಡೆ ಪ್ರಕರಣಕ್ಕೆ ಸಂಚು ರೂಪಿಸಿದ್ದ ವಿಚಾರವನ್ನು ಬಂಧಿತ ಇತರ ಆರೋಪಿಗಳಿಂದ ತಿಳಿದುಕೊಂಡಿದ್ದ ಪೊಲೀಸರು ಆರೋಪಿ ರವಿಗಾಗಿ ಬಾಡಿ ವಾರಂಟ್ ಅರ್ಜಿ ಸಲ್ಲಿಸಿದ್ದರು. ನ.8ರಂದು ಆತನನ್ನು ಕಣ್ಣೂರು ಜೈಲಿನಿಂದ ನೇರವಾಗಿ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿಗೆ 7 ದಿನಗಳ ಕಸ್ಟಡಿ ನೀಡಿತ್ತು. ಆದರೆ ಈ ನಡುವೆ ಪೊಲೀಸರು ಆರೋಪಿಯ ವಿಚಾರಣೆ ಮುಗಿದ ಹಿನ್ನೆಲೆಯಲ್ಲಿ ನ.10ರಂದು ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಧೀಶರು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.


ಆರೋಪಿಯಿಂದ ಚಿನ್ನದ ಬಲೆಗಳು ವಶಕ್ಕೆ:
ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಹರ್ನಿಶಿ ಕಾರ್ಯಾಚರಣೆ ನಡೆಸಿದ್ದ ಪೊಲೀಸರು 6 ಮಂದಿ ಕುಖ್ಯಾತ ಅಂತರ್‌ರಾಜ್ಯ ದರೋಡೆಕೋರರನ್ನು ಬಂಽಸಿದ್ದರು. ಸೆ.7ರ ಮುಂಜಾನೆ ಗುರುಪ್ರಸಾದ್ ರೈಯವರ ಮನೆಗೆ ಹಿಂಬದಿ ಬಾಗಿಲು ಮುರಿದು ಒಳನುಗ್ಗಿದ್ದ ದರೋಡೆಕೋರರ ತಂಡ ಗುರುಪ್ರಸಾದ್ ರೈ ಮತ್ತವರ ತಾಯಿ ಕಸ್ತೂರಿ ರೈಯವರನ್ನು ಹಗ್ಗ ಮತ್ತು ಬಟ್ಟೆಯಿಂದ ಕಟ್ಟಿ ಹಾಕಿ, ಮಾರಕಾಸ್ತ್ರಗಳಿಂದ ಬೆದರಿಸಿ 30 ಸಾವಿರ ರೂ.ನಗದು ಮತ್ತು 2.4 ಲಕ್ಷ ರೂ.ಮೌಲ್ಯದ (8 ಪವನ್)ಚಿನ್ನಾಭರಣ ದೋಚಿತ್ತು. ಘಟನೆಗೆ ಸಂಬಂಧಿಸಿ ದ.ಕ.ಜಿಲ್ಲಾ ಎಸ್ಪಿ ರಿಷ್ಯಂತ್ ಸಿ.ಬಿ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಡಾ| ಗಾನಾ ಪಿ.ಕುಮಾರ್ ಅವರ ನೇತೃತ್ವದಲ್ಲಿ ಗ್ರಾಮಾಂತರ ವೃತ್ತನಿರೀಕ್ಷಕ ಬಿ.ಎಸ್.ರವಿ ಅವರ ಮೂಲಕ ಪೊಲೀಸರ ನಾಲ್ಕು ತಂಡಗಳನ್ನು ರಚಿಸಿ 22 ದಿನಗಳ ಅಹರ್ನಿಶಿ ಕಾರ್ಯಾಚರಣೆಯಲ್ಲಿ ಕುಖ್ಯಾತ ಅಂತರ್‌ರಾಜ್ಯ ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿ ಸಾರ್ವಜನಿಕ ಶ್ಲಾಘನೆಗೆ ಪಾತ್ರರಾಗಿದ್ದರು. ಈ ನಡುವೆ ಓರ್ವ ಆರೋಪಿ ರವಿ ಎಂಬಾತ ಕೊಲೆ ಪ್ರಕರಣವೊಂದರಲ್ಲಿ ಶಿಕ್ಷೆಯಾಗಿ ಜೈಲಲ್ಲಿರುವ ಅಪರಾಧಿಯಾಗಿದ್ದು, ಆತನನ್ನು ಬಾಡಿ ವಾರಂಟ್ ಮೂಲಕ ಪಡೆದ ಪೊಲೀಸರು ಆತನನ್ನು ವಿಚಾರಣೆ ನಡೆಸಿ ದರೋಡೆ ಕೃತ್ಯ ನಡೆದ ಸ್ಥಳಕ್ಕೆ ಕರೆದೊಯ್ದು ಅಲ್ಲಿ ಮಹಜರು ನಡೆಸಿದರು. ಬಳಿಕ ಕೃತ್ಯ ಎಸಗಲು ಮಾತುಕತೆ ನಡೆಸಿದ ಸೀತಂಗೊಳಿಯ ಸ್ಥಳವನ್ನು ಮಹಜರು ಮಾಡಲಾಯಿತು. ಈ ನಡುವೆ ದರೋಡೆ ಮಾಡಿದ್ದ ಆತನಲ್ಲಿದ್ದ ಎರಡು ಚಿನ್ನದ ಬಲೆಯನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಿಚಾರಣೆ ಪೂರ್ಣಗೊಂಡ ಬಳಿಕ ನ.10ರಂದು ಆತನನ್ನು ನ್ಯಾಯಾಧೀಶರ ಮುಂದೆ ಹಾಜರಪಡಿಸಲಾಯಿತು.

LEAVE A REPLY

Please enter your comment!
Please enter your name here