ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಕೊಣಾಲು ಗ್ರಾಮದ ಕೋಲ್ಪೆಯಲ್ಲಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ನ.16ರಂದು ಮಧ್ಯಾಹ್ನ ನಡೆದಿದೆ.
ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಮಾದರಮೂಲೆ ನಿವಾಸಿ ಹರಿಶ್ಚಂದ್ರ ಅವರ ಪುತ್ರ ದೀಕ್ಷಿತ್ (23ವ.) ಮೃತಪಟ್ಟವರಾಗಿದ್ದಾರೆ. ಇವರು ಉಪ್ಪಿನಂಗಡಿಯಿಂದ ನೆಲ್ಯಾಡಿ ಕಡೆಗೆ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಕೋಲ್ಪೆಯಲ್ಲಿ ಹೆದ್ದಾರಿ ಬದಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿಯಾಗಿದೆ. ಲಾರಿ ನೆಲ್ಯಾಡಿಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದು ಚಾಲಕ ಕೋಲ್ಪೆ ಮಸೀದಿ ಮುಂಭಾಗ ರಾಷ್ಟ್ರೀಯ ಹೆದ್ದಾರಿ ಬದಿ ಲಾರಿ ನಿಲ್ಲಿಸಿ ಹೊಟೇಲ್‌ಗೆ ಊಟಕ್ಕೆ ಹೋಗಿದ್ದರು. ಲಾರಿಗೆ ಬೈಕ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ದೀಕ್ಷಿತ್‌ರವರಿಗೆ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎಜೆ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.