ಹೂಡಿಕೆಗೆ ಹಣಕಾಸಿನ ಶಿಸ್ತು ಅತ್ಯಗತ್ಯ – ಬೆಟ್ಟಂಪಾಡಿ ಕಾಲೇಜಿನಲ್ಲಿ ಡಿಮ್ಯಾಟ್ ಖಾತೆ ತೆರೆಯುವ ಕಾರ್ಯಗಾರದಲ್ಲಿ ಡಾ.ಕಾಂತೇಶ್ ವಿ ಎಸ್ ಅಭಿಮತ

0

ಹೂಡಿಕೆಗೆ ಹಣಕಾಸು ನಿರ್ವಹಣೆಯಲ್ಲಿ ಶಿಸ್ತು ಹೊಂದಿರುವುದು ಅತ್ಯಂತ ಮುಖ್ಯ ಎಂದು ಬೆಟ್ಟಂಪಾಡಿ ಸರ್ಕಾರಿ ಕಾಲೇಜಿನ ಬಿಸಿನೆಸ್ ಅಂಡ್ ಅಡ್ಮಿನಿಸ್ಟ್ರೇಷನ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ ಕಾಂತೇಶ್ ವಿ ಎಸ್ ಅಭಿಪ್ರಾಯಪಟ್ಟರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಹಾಗೂ ವಾಣಿಜ್ಯ ಸಂಘದ ಆಶ್ರಯದಲ್ಲಿ ‘ಆರ್ಥಿಕ ದಿಗಂತಕ್ಕೆ ದಾರಿ’ ಶಿರೋನಾಮೆಯಡಿಯಲ್ಲಿ ಡಿಮ್ಯಾಟ್ ಖಾತೆ ತೆರೆಯುವ ಕಾಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಇವರು ಆರ್ಥಿಕವಾಗಿ ಸುರಕ್ಷಿತವಾಗಿರಲು ಹೂಡಿಕೆ ಪ್ರತಿಯೊಬ್ಬರಿಗೂ ಬಹಳ ಮುಖ್ಯವಾಗುತ್ತದೆ ಹಾಗೂ ತುರ್ತು ಸಂದರ್ಭದಲ್ಲಿ ವಿನಿಯೋಗಿಸುವ ಉದ್ದೇಶದಿಂದ ಗಳಿಸಿದ ಹಣವನ್ನು ಸಮರ್ಪಕವಾಗಿ ಹೂಡಿಕೆ ಮಾಡಬೇಕು. ಉಳಿತಾಯದಿಂದ ಶಾಂತಿಯುತ ಜೀವನ ಮತ್ತು ವಿಶ್ರಾಂತ ಜೀವನದಲ್ಲಿ ಗಳಿಸಿದ ಹಣವನ್ನು ನಿರ್ದಿಷ್ಟವಾದಕ್ಕೆ ಬಳಸಿದಾಗ ಉತ್ತಮ ಜೀವನ ನಡೆಸಲು ಸಹಾಯಕವಾಗುತ್ತದೆ. ಆದುದರಿಂದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಅತಿಹೆಚ್ಚು ಲಾಭ ಗಳಿಸಬಹುದು ಹಾಗೂ ಹೂಡಿಕೆಯಿಂದ ತೆರಿಗೆ ವಿನಾಯಿತಿಗೆ ಅವಕಾಶವಿದೆ ಎಂದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀ ರಾಮಚಂದ್ರ ಡಿ ಇವರು ಮಾತನಾಡಿ, ಪ್ರಸ್ತುತತೆಯಲ್ಲಿ ವಾಣಿಜ್ಯವು ದೈನಂದಿನ ಜೀವನದ ಭಾಗವಾಗಿದೆ. ಅಭಿವೃದ್ಧಿ ಹೊಂದುತ್ತಿರುವ ಕಾರ್ಪೊರೇಟ್ ಜಗತ್ತಿನಲ್ಲಿ ಅನೇಕ ಕಂಪನಿಗಳು ಬಂಡವಾಳವನ್ನು ಸಾರ್ವಜನಿಕರಿಂದಲೇ ನಿರೀಕ್ಷಿಸುತ್ತದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ವೈಯಕ್ತಿಕ ಹೂಡಿಕೆದಾರರಿಗೆ ಅವಕಾಶವಿದೆ. ವಿದ್ಯಾರ್ಥಿ ಜೀವನದಲ್ಲಿ ಹೂಡಿಕೆಯ ಮಹತ್ವವನ್ನು ತಿಳಿದು ಸರಿಯಾದ ವೇದಿಕೆಯಲ್ಲಿ ಹೂಡಿಕೆ ಮಾಡುವ ಕಲೆಯನ್ನು ಕರಗತ ಮಾಡಿಕೊಳ್ಳಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ಮಾತುಗಳನ್ನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ವರದರಾಜ ಚಂದ್ರಗಿರಿ ಇವರು ಮಾತನಾಡಿ ದೀರ್ಘಾವಧಿ ಹೂಡಿಕೆ ಮಾಡಲು ಹಣಕಾಸಿನ ಶಿಸ್ತಿನೊಂದಿಗೆ ಭಾವನಾತ್ಮಕ ನಿಯಂತ್ರಣವು ಅಗತ್ಯವಾಗಿದೆ. ವಿದ್ಯಾರ್ಥಿ ಜೀವನದಲ್ಲೇ ಹೂಡಿಕೆಯ ಅರಿವು ಮೂಡಿಸಲು ಇಂತಹ ಕಾರ್ಯಕ್ರಮಗಳು ಮಹತ್ತರ ಪಾತ್ರವನ್ನು ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಅನೇಕ ವಿದ್ಯಾರ್ಥಿಗಳು ಡಿಮ್ಯಾಟ್ ಖಾತೆಯನ್ನು ತೆರೆಯುವ ಮೂಲಕ ಷೇರು ಮಾರುಕಟ್ಟೆ ಬಗೆಗಿನ ಕಲಿಕೆಗೆ ಚಾಲನೆಯನ್ನು ನೀಡಿದರು. ಕಾಲೇಜು ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಾಣಿಜ್ಯ ಸಂಘದ ಪದಾಧಿಕಾರಿಗಳು ಮತ್ತು ಉಪನ್ಯಾಸಕರು ಹಾಗೂ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ವಾಣಿಜ್ಯ ಸಂಘದ ಕಾರ್ಯದರ್ಶಿ ಜೀವನ್ ರಾಜ್ ಬಿ ವಂದನಾರ್ಪಣೆಗೈದರು. ಕೋಶಾಧಿಕಾರಿಯಾದ ಆದರ್ಶ್ ಬಿ ನಿರೂಪಿಸಿದರು.

LEAVE A REPLY

Please enter your comment!
Please enter your name here