ರಾಮಕುಂಜ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ತುಡರ್ ಪರ್ಬ”

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನ.18ರಂದು ’ತುಡರ್ ಪರ್ಬ’ ಆಚರಿಸಲಾಯಿತು.

ಸಂಸ್ಥೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿ ಸಾಯಿರಾಂರವರು ಅತ್ಯಾರ್‌ಗಳ ಪೂಜೆಯ ಪ್ರಾತ್ಯಕ್ಷಿಕೆಯೊಂದಿಗೆ, ದೀಪಾವಳಿ ಹಬ್ಬದ ಆಚರಣೆಗಳ ಹಿಂದಿನ ಸತ್ವವನ್ನು ಮನಮುಟ್ಟುವಂತೆ ಮಕ್ಕಳಿಗೆ ತಿಳಿಯಪಡಿಸಿದರು. ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರು ವಹಿಸಿ ಮಾತನಾಡಿ, ತುಳು ಸಂಸ್ಕೃತಿಯ ಆಚಾರ ವಿಚಾರಗಳನ್ನು ಯುವ ಜನತೆಗೆ ಮುಟ್ಟಿಸುವ ಕಾರ್ಯವನ್ನು ಸಂಸ್ಥೆಯು ನಡೆಸುತ್ತಾ ಬಂದಿದೆ. ತುಳುನಾಡಿನಲ್ಲಿ ಹಿರಿಯರು ಆಚರಿಸಿಕೊಂಡು ಬಂದಿರುವ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಕ್ಕಳಿಗೆ ಪಸರಿಸುವ ಉದ್ದೇಶದಿಂದ ಸಾಂಪ್ರದಾಯಿಕ ಆಚರಣೆಗಳನ್ನು ಸಂಸ್ಥೆಯಲ್ಲಿ ಕಳೆದ 16 ವರ್ಷಗಳಿಂದ ನಡೆಸುತ್ತಾ ಬಂದಿದೆ ಎಂದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕುಡ್ಲ ಇದರ ಮಾಜಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ,ಯವರು ಬಲೀಂದ್ರ ಪೂಜೆ ಹಾಗೂ ಗೋಪೂಜೆಯ ಮಹತ್ವವನ್ನು ತಿಳಿಸಿ, ತುಳು ಭಾಷೆ ಹಾಗೂ ಸಂಸ್ಕೃತಿಯನ್ನು ಜಗತ್ತಿನಲ್ಲಿ ಪಸರಿಸಲು ತುಳು ಸಂಸ್ಕೃತಿಯ ಕೇಂದ್ರವಾದ ರಾಮಕುಂಜವು ಮಹತ್ತರವಾದ ಪಾತ್ರ ವಹಿಸುತ್ತಿದೆ ಎಂದು ಪ್ರಶಂಶನೀಯ ಮಾತುಗಳನ್ನಾಡಿದರು.
ಮುಖ್ಯ ಅತಿಥಿಯಾಗಿದ್ದ ಜೈ ತುಳುನಾಡು ಕೇಂದ್ರ ಸಮಿತಿ ಅಧ್ಯಕ್ಷ ವಿಷು ಶ್ರೀಕೇರರವರು ತುಳು ಭಾಷೆಯ ಉಳಿವಿಗಾಗಿ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡಬೇಕೆಂದು ಹೇಳಿದರು. ವಿದ್ಯಾರ್ಥಿಗಳಿಂದ ತುಳು ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ‍್ಯಕ್ರಮ ನಡೆಯಿತು. ಸಭೆಯಲ್ಲಿ ಜೈ ತುಳುನಾಡು ಸಂಘದ ಸದಸ್ಯರುಗಳು, ಸಂಸ್ಥೆಯ ಆಡಳಿತಾಧಿಕಾರಿ ಆನಂದ್ ಎಸ್.ಟಿ., ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಗುರು ಲೋಹಿತಾ ಎ, ವಿದ್ಯಾರ್ಥಿನಿಲಯದ ವ್ಯವಸ್ಥಾಪಕ ರಮೇಶ್ ರೈ ಆರ್.ಬಿ ಉಪಸ್ಥಿತರಿದ್ದರು. ಸಹಶಿಕ್ಷಕಿ ಸರಿತಾ ರಾಮಕುಂಜ ಸ್ವಾಗತಿಸಿ, ಪ್ರೌಢಶಾಲಾ ವಿಭಾಗದ ಮುಖ್ಯಗುರು ಗಾಯತ್ರಿ ಯು.ಎನ್.ವಂದಿಸಿದರು. ಸಹಶಿಕ್ಷಕಿಯರಾದ ಸಂಚಿತಾ ಹಾಗೂ ಅಕ್ಷತಾ ಟಿ ನಿರ್ವಹಿಸಿದರು. ದೀಪಾವಳಿ ಹಬ್ಬದ ವಿಶೇಷ ತಿನಿಸು ಅವಲಕ್ಕಿ, ಬಾಳೆಹಣ್ಣಿನ ರಸಾಯನವನ್ನು ಎಲ್ಲರಿಗೂ ಉಣಬಡಿಸಲಾಯಿತು.

LEAVE A REPLY

Please enter your comment!
Please enter your name here