ನ.23: ನೆಲ್ಯಾಡಿ ಪೇಟೆಯಲ್ಲಿ ಫ್ಲೈಓವರ್ ನಿರ್ಮಾಣಕ್ಕೆ ಆಗ್ರಹಿಸಿ ವ್ಯವಹಾರ ಸ್ಥಗಿತಗೊಳಿಸಿ ಪ್ರತಿಭಟನೆ

0

  • ನೆಲ್ಯಾಡಿ-ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿ ಪತ್ರಿಕಾಗೋಷ್ಠಿ

ನೆಲ್ಯಾಡಿ: ನೆಲ್ಯಾಡಿ ಪೇಟೆಯಲ್ಲಿ ಫ್ಲೈಓವರ್ ನಿರ್ಮಾಣಕ್ಕೆ ಆಗ್ರಹಿಸಿ ನ.23ರಂದು ನೆಲ್ಯಾಡಿಯಲ್ಲಿ ವ್ಯವಹಾರ ಸ್ಥಗಿತಗೊಳಿಸಿ ಪ್ರತಿಭಟನೆ, ಮೆರವಣಿಗೆ ನಡೆಸಿ ಹಕ್ಕೋತ್ತಾಯ ಮಾಡಲಾಗುವುದು ಎಂದು ನೆಲ್ಯಾಡಿ-ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಎ.ಕೆ.ವರ್ಗೀಸ್‌ರವರು ಹೇಳಿದ್ದಾರೆ.


ಅವರು ನ.18ರಂದು ನೆಲ್ಯಾಡಿ ಡಿಯೋನ್ ಸ್ಕ್ವೇರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ನೆಲ್ಯಾಡಿ ಪೇಟೆಯಲ್ಲಿ ಈಗ ನಿರ್ಮಾಣ ಹಂತದಲ್ಲಿ ಎತ್ತರಿಸಲ್ಪಟ್ಟ ರಸ್ತೆಯು ಪೇಟೆಯ ಮಧ್ಯೆ ಹಾದುಹೋಗುತ್ತಿದೆ. ಇದರಿಂದ ನೆಲ್ಯಾಡಿ ಪೇಟೆಯು ಇಬ್ಭಾಗವಾಗಲಿದ್ದು ಒಂದು ಬದಿಯವರಿಗೆ ಇನ್ನೊಂದು ಬದಿ ಕಾಣದಂತೆ ಮತ್ತು ದಾಟಲಿಕ್ಕಾಗದ ಸ್ಥಿತಿ ನಿರ್ಮಾಣ ಆಗಲಿದೆ. ಈಗ ಇರುವ ಕಿರಿದಾದ ಸರ್ವಿಸ್ ರಸ್ತೆಯಲ್ಲಿ ವಾಹನ ಸಂಚಾರ, ವಾಹನ ನಿಲುಗಡೆ, ವಿದ್ಯಾರ್ಥಿಗಳ, ಗ್ರಾಮಸ್ಥರ ಓಡಾಟಕ್ಕೂ ಅಸಾಧ್ಯವಾಗುವಂತಿದೆ. ಮಳೆಗಾಲದಲ್ಲಿ ಎರಡೂ ಬದಿ ನೀರು ಹರಿಯುವ ತೋಡುಗಳಾಗಿ ಸರ್ವೀಸ್ ರಸ್ತೆ ಮಾರ್ಪಡುತ್ತಿದೆ. ಸುತ್ತುಮುತ್ತಲಿನ ಸುಮಾರು 10 ಗ್ರಾಮಗಳ ರೈತರು ತಮ್ಮ ಕೃಷಿ ಉತ್ಪನ್ನಗಳ ಮಾರಾಟಕ್ಕೆ ನೆಲ್ಯಾಡಿ ಪೇಟೆಗೆ ಬರಬೇಕು. ಬುಧವಾರ ವಾರದ ಸಂತೆಯಿಂದ ಪೇಟೆಯು ಜನ ಜಂಗುಳಿಯಿಂದ ಹಾಗೂ ವಾಹನ ದಟ್ಟಣೆಯಿಂದ ಕೂಡಿರುತ್ತದೆ. ನೆಲ್ಯಾಡಿ ಪೇಟೆಯಲ್ಲಿ ದಿನನಿತ್ಯವೂ ವಾಹನ ದಟ್ಟಣೆ ಇರುವುದರಿಂದ ಎತ್ತರಿಸಲ್ಪಟ್ಟ ರಸ್ತೆಯಿಂದಾಗಿ ಜನರು ಸಮಸ್ಯೆ ಅನುಭವಿಸಬೇಕಾಗುತ್ತದೆ.


ಫ್ಲೈಓವರ್ ಸೂಕ್ತ:
ಜನ ಹಾಗೂ ವಾಹನ ದಟ್ಟಣೆಯಿಂದ ಕೂಡಿರುವ ನೆಲ್ಯಾಡಿ ಪೇಟೆಗೆ ಫ್ಲೈಓವರ್ ಸೂಕ್ತವಾಗಿರುತ್ತದೆ. ಫ್ಲೈಓವರ್ ನಿರ್ಮಿಸಿದಲ್ಲಿ ಅಡಿಭಾಗದಲ್ಲಿ ವಾಹನ ನಿಲುಗಡೆ ಮತ್ತು ಜನರ ಓಡಾಟಕ್ಕೆ ಸಾಕಷ್ಟು ಸ್ಥಳಾವಕಾಶ ಸಿಗಲಿದೆ. ಪೇಟೆಯೂ ಅಭಿವೃದ್ದಿ ಹೊಂದುತ್ತದೆ. ಶಾಲೆಗೆ ಬರುವ ಸಾವಿರಾರು ವಿದ್ಯಾರ್ಥಿಗಳಿಗೆ, ಬ್ಯಾಂಕ್, ಆಸ್ಪತ್ರೆ, ಗ್ರಾ.ಪಂ.ಸೇರಿದಂತೆ ವಿವಿಧ ಕೆಲಸಗಳಿಗೆ ನೆಲ್ಯಾಡಿ ಪೇಟೆಗೆ ಬರುವ ಗ್ರಾಮಸ್ಥರಿಗೂ ಅನುಕೂಲವಾಗಲಿದೆ. ಆದ್ದರಿಂದ 1 ಕಿಲೋ ಮೀಟರ್ ಉದ್ದದ ನೆಲ್ಯಾಡಿ ಪಟ್ಟಣವನ್ನು ಉಳಿಸಬೇಕಾಗಿರುವುದು ಊರವರ ಜವಾಬ್ದಾರಿ ಹಾಗೂ ಹಕ್ಕಾಗಿದೆ. ಹೆದ್ದಾರಿ ನಿರ್ಮಾಣದ ಆರಂಭದಿಂದಲೇ ಮೇಲ್ಸೇತುವೆ ಇಲ್ಲಿನ ಜನರ ಬೇಡಿಕೆ ಆಗಿತ್ತು. ಇದರ ಬದಲು ಪೇಟೆಯ ಎರಡು ಕಡೆ ಅಂಡರ್‌ಪಾಸ್ ನಿರ್ಮಿಸಿ ಉಳಿದ ಭಾಗದಲ್ಲಿ ಮಣ್ಣು ತುಂಬಿಸಿ ಕಲ್ಲುಕಟ್ಟಿ ಎತ್ತರಿಸಲ್ಪಟ್ಟ ರಸ್ತೆ ನಿರ್ಮಿಸುತ್ತಿರುವುದರಿಂದ ಈಗ ಸಮಸ್ಯೆ ಉಂಟಾಗಿದೆ. ಆದ್ದರಿಂದ ಕಲ್ಲಡ್ಕ ಪೇಟೆಯಲ್ಲಿ ನಿರ್ಮಾಣ ಆಗುತ್ತಿರುವ ಮೇಲ್ಸೇತುವೆ ಮಾದರಿಯಲ್ಲಿಯೇ ನೆಲ್ಯಾಡಿ ಪೇಟೆಯಲ್ಲೂ 1 ಕಿ.ಮೀ ಉದ್ದದ ಮೇಲ್ಸೇತುವೆ ನಿರ್ಮಾಣ ಮಾಡಬೇಕೆಂದು ಅವರು ಹೇಳಿದರು.


ಗಡ್ಕರಿಗೂ ಮನವಿ:
ಹೆದ್ದಾರಿ ನಿರ್ಮಾಣ ಯೋಜನೆಯಲ್ಲಿ ನೆಲ್ಯಾಡಿ ಪೇಟೆಗೆ ಫ್ಲೈ ಓವರ್ ಇಲ್ಲವಾಗಿದ್ದಲ್ಲಿ ಪುನ: ನಿರ್ಮಾಣ ಯೋಜನೆ ಸಿದ್ಧಪಡಿಸಿ ಕಾರ್ಯಗತ ಮಾಡಲು ಅವಕಾಶ ಕಲ್ಪಿಸುವಂತೆ ಕೇಂದ್ರದ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರಿಗೆ ಮನವಿ ಸಲ್ಲಿಸಿದ್ದೇವೆ. ಅಲ್ಲದೇ ಸಂಸದರು, ಶಾಸಕರಿಗೆ, ರಾಜ್ಯದ ಮಂತ್ರಿಗಳಿಗೆ, ಜಿಲ್ಲಾಧಿಕಾರಿ, ಯೋಜನಾ ನಿರ್ದೇಶಕರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜನಪ್ರತಿನಿಧಿಗಳು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಮನವಿ ಸಲ್ಲಿಸಿದ್ದೇವೆ. ನೆಲ್ಯಾಡಿ ಹಾಗೂ ಅಸುಪಾಸಿನ ಗ್ರಾಮಗಳ ಜನರ ನ್ಯಾಯಯುತವಾದ ಬೇಡಿಕೆಗೆ ಜನಪ್ರತಿನಿಧಿ ಹಾಗೂ ಅಧಿಕಾರಿವರ್ಗದವರು ಸ್ಪಂದಿಸಬಹುದೆಂಬ ನಂಬಿಕೆ ಇದೆ ಎಂದು ಅವರು ಹೇಳಿದ್ದಾರೆ.

ಮಾಹಿತಿ ನೀಡಿಲ್ಲ:
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ವೇಳೆ ನೆಲ್ಯಾಡಿ ಪೇಟೆಯಲ್ಲಿ ಹೆದ್ದಾರಿ ಯಾವ ರೀತಿ ಹಾದುಹೋಗಲಿದೆ ಎಂಬ ಬಗ್ಗೆ ಇಲ್ಲಿನ ಗ್ರಾಮ ಪಂಚಾಯತ್‌ಗಾಗಲೀ, ಜನಪ್ರತಿನಿಧಿಗಳಿಗಾಗಲೀ ಮಾಹಿತಿ ಕೊಟ್ಟಿಲ್ಲ. ಈ ಹಿಂದೆ ನೆಲ್ಯಾಡಿ ತಾಲೂಕು ಕೇಂದ್ರ ಆಗಬೇಕೆಂಬ ನಿಟ್ಟಿನಲ್ಲಿ ಹೋರಾಟ ನಡೆಸಿದ್ದೇವೆ. ಆದರೆ ಈಗಿನ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಪೇಟೆಯ ಅಸ್ತಿತ್ವವೇ ಕಳೆದುಕೊಳ್ಳುವ ಭೀತಿ ಉಂಟಾಗಲಿದೆ. ವ್ಯಾಪಾರವೂ ಕುಂಠಿತ ಆಗಲಿದೆ. ಈ ಹಿನ್ನೆಯಲ್ಲಿ ಪೇಟೆ ಉಳಿಸುವ ಹೋರಾಟ ಮಾಡಬೇಕಾದ ಅನಿವಾರ್ಯತೆ ಒದಗಿಬಂದಿದೆ. ನೆಲ್ಯಾಡಿ-ಕೌಕ್ರಾಡಿ ಪೇಟೆ ಉಳಿಸುವ ನಿಟ್ಟಿನಲ್ಲಿ ಹೋರಾಟ ಮಾಡಬೇಕಾಗಿದೆ. ಈ ಹೋರಾಟಕ್ಕೆ ಎಲ್ಲರೂ ಕೈ ಜೋಡಿಸುವಂತೆ ಹೋರಾಟ ಸಮಿತಿಯವರು ಮನವಿ ಮಾಡಿದರು.


ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್, ನೆಲ್ಯಾಡಿ ಜ್ಞಾನೋದಯ ಬೆಥನಿ ಪ.ಪೂ.ಕಾಲೇಜಿನ ಪ್ರಾಂಶುಪಾಲ ರೆ.ಫಾ.ವರ್ಗೀಸ್ ಕೈಪುನಡ್ಕ, ಹೋರಾಟ ಸಮಿತಿ ಉಪಾಧ್ಯಕ್ಷ ಸರ್ವೋತ್ತಮ ಗೌಡ, ಕಾರ್ಯದರ್ಶಿ ಪ್ರಶಾಂತ್ ಸಿ.ಹೆಚ್., ಜೊತೆ ಕಾರ್ಯದರ್ಶಿ ಉಷಾ ಅಂಚನ್‌ರವರು ಹೆದ್ದಾರಿ ಕಾಮಗಾರಿಯಿಂದ ಆಗುತ್ತಿರುವ ಸಮಸ್ಯೆ ಹಾಗೂ ಹೋರಾಟದ ಕುರಿತು ಮಾಹಿತಿ ನೀಡಿದರು.
ನೆಲ್ಯಾಡಿ ವರ್ತಕ ಸಂಘದ ಅಧ್ಯಕ್ಷ ರಫೀಕ್ ಸೀಗಲ್, ಉಪಾಧ್ಯಕ್ಷ ಗಣೇಶ್ ಕೆ.ರಶ್ಮಿ, ಜಿ.ಪಂ.ಮಾಜಿ ಸದಸ್ಯ ಪಿ.ಪಿ.ವರ್ಗೀಸ್, ನೆಲ್ಯಾಡಿ-ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿಯ ಉಪಾಧ್ಯಕ್ಷ ಬಾಲಕೃಷ್ಣ ಬಾಣಜಾಲು, ಕೋಶಾಧಿಕಾರಿ ಸತೀಶ್ ಕೆ.ಎಸ್.ದುರ್ಗಾಶ್ರೀ, ನೆಲ್ಯಾಡಿ ಬದ್ರಿಯಾ ವಿದ್ಯಾಸಂಸ್ಥೆ ಅಧ್ಯಕ್ಷ ನಾಝೀಂ ಸಾಹೇಬ್ ನೆಲ್ಯಾಡಿ, ನೆಲ್ಯಾಡಿ ಆಟೋ ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ರವಿಪ್ರಸಾದ್ ಗುತ್ತಿನಮನೆ, ನೆಲ್ಯಾಡಿ ಟೆಂಪೋ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಹನೀಫ್ ಕರಾವಳಿ, ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್, ಹೋರಾಟ ಸಮಿತಿ ಸದಸ್ಯರಾದ ವಿ.ಜೆ.ಜೋಸೆಫ್,ಎಂ.ಕೆ.ಇಬ್ರಾಹಿಂ, ರಾಮಣ್ಣ ಗೌಡ, ರಿಕ್ಷಾ ಚಾಲಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ರಸ್ತೆ ತಡೆ ಇಲ್ಲ, ಅನಿರ್ದಿಷ್ಟಾವಧಿ ಹೋರಾಟ:
ನೆಲ್ಯಾಡಿ ಪೇಟೆಯಲ್ಲಿ ಫ್ಲೈಓವರ್ ನಿರ್ಮಾಣಕ್ಕಾಗಿ ನ.23ರಂದು ಶಾಂತಿಯುತವಾಗಿ ಪ್ರತಿಭಟನೆ, ಮೆರವಣಿಗೆ ನಡೆಯಲಿದೆ. ಎಲ್ಲಾ ವರ್ತಕರೂ ವ್ಯವಹಾರ ಸ್ಥಗಿತಗೊಳಿಸಿ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ. ರಸ್ತೆ ತಡೆ ಮಾಡುವುದಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿ ಮೇಲ್ಸೇತುವೆ ನಿರ್ಮಾಣಕ್ಕೆ ಭರವಸೆ ನೀಡುವ ತನಕ ಹೋರಾಟ ನಡೆಸುತ್ತೇವೆ.
-ಎ.ಕೆ.ವರ್ಗೀಸ್, ಅಧ್ಯಕ್ಷರು
ನೆಲ್ಯಾಡಿ-ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿ

LEAVE A REPLY

Please enter your comment!
Please enter your name here