ಬ್ರೇಕಿಂಗ್ ನ್ಯೂಸ್ ನೀಡಲು ಸುದ್ದಿ ಗ್ರಹಿಕೆಯ ಕಲೆ ಅತ್ಯವಶ್ಯ: ಸ್ವಪ್ನ ಮಡೆಪ್ಪಾಡಿ
ಪುತ್ತೂರು: ದೃಶ್ಯ ಮಾಧ್ಯಮಗಳಲ್ಲಿ ಅತೀ ಕಡಿಮೆ ಸಮಯದಲ್ಲಿ ನಿಖರ ಮಾಹಿತಿ ನೀಡಬೇಕಾದ ಸವಾಲು ಇರುತ್ತದೆ. ಪ್ರತಿಯೊಂದು ಕ್ಷಣವೂ ಅಮೂಲ್ಯವಾಗಿದ್ದು, ಸುದ್ದಿ ಸಂಗ್ರಹದೊಂದಿಗೆ ಕಲೆಹಾಕಿದ ಮಾಹಿತಿಗಳ ಸತ್ಯಾಸತ್ಯತೆಗಳನ್ನು ಅರಿತುಕೊಳ್ಳಬೇಕಾದ ಅಗತ್ಯತೆ ಇರುತ್ತದೆ. ಬ್ರೇಕಿಂಗ್ ನೀಡುವ ಸಂದರ್ಭದಲ್ಲಿ ಆ ಸುದ್ದಿಯ ಗಂಭೀರತೆಯನ್ನು ತಿಳಿದುಕೊಂಡು ನೀಡಬೇಕಿದೆ, ಇತ್ತೀಚಿನ ದಿನಗಳಲ್ಲಿ ಸಣ್ಣ ಪುಟ್ಟ ಸುದ್ದಿಗಳನ್ನೂ ಕೆಲವು ಮಾಧ್ಯಮಗಳಲ್ಲಿ ಬ್ರೇಕಿಂಗ್ ನ್ಯೂಸ್ ಎಂದು ಪ್ರಕಟಿಸುತ್ತಿರುವುದು ಬ್ರೇಕಿಂಗ್ ನ್ಯೂಸ್‌ನ ನೈಜ ಮಹತ್ವವನ್ನು ಕಡಿತಗೊಳಿಸುತ್ತಿದೆ ಎಂದು ಪತ್ರಕರ್ತೆ ಸ್ವಪ್ನ ಮಡೆಪ್ಪಾಡಿ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗ ಹಾಗೂ ರೂರಲ್ ಮಿರರ್ ಡಿಜಿಟಲ್ ಮೀಡಿಯಾ ಜಂಟಿ ಆಶ್ರಯದಲ್ಲಿ ಹಮ್ಮಿಳ್ಳಲಾಗಿರುವ ಸಕಾರಾತ್ಮಕ ಪತ್ರಿಕೋದ್ಯಮ ಉಪನ್ಯಾಸ ಸರಣಿಯಲ್ಲಿ ಭಾಗವಹಿಸಿ ಬ್ರೇಕಿಂಗ್ ನ್ಯೂಸ್ ಅವಾಂತರಗಳು ಹಾಗೂ ಮಾಧ್ಯಮಗಳಲ್ಲಿನ ಅವಕಾಶಗಳ ಕುರಿತು ಶನಿವಾರ ಉಪನ್ಯಾಸ ನೀಡಿದರು.
ಸುದ್ದಿ ಮೂಲಗಳು ಬಲವಾಗಿದ್ದಾಗ ಮಾಹಿತಿ ಸಂಗ್ರಹಣೆ ಸುಲಭವಾಗುತ್ತದೆ. ನ್ಯಾಯಾಲಯ ವರದಿಗಾರಿಕೆ, ಅಧಿವೇಶನ ಹಾಗೂ ಅಪರಾಧ ವರದಿಗಾರಿಕೆಯಲ್ಲಿ ಹೆಚ್ಚು ಸವಾಲುಗಳಿರುತ್ತವೆ. ಯಾವುದನ್ನು ಪ್ರಕಟಿಸಬೇಕು ಎಂಬ ಅರಿವಿರಬೇಕು ಹಾಗೂ ಸುದ್ದಿ ಸಂಗ್ರಹಣೆಯಲ್ಲಿ ತೊಡಗಿರುವ ಸಂದರ್ಭ ಒಂದಷ್ಟು ನಿಯಮಗಳನ್ನು ಪಾಲಿಸಬೇಕು. ಇದನ್ನು ಮರೆತಲ್ಲಿ ವರದಿಗಾರ ತನ್ನ ವೃತ್ತಿ ಗಂಭೀರತೆಯನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಮುಖ್ಯವಾಗಿ ವಿದ್ಯಾರ್ಥಿಗಳು ತಮ್ಮ ಜ್ಞಾನ ಹೆಚ್ಚಿಸಿಕೊಂಡಾಗ ವರದಿಗಾರಿಕೆ ಸಂದರ್ಭ ಮಾಹಿತಿ ಸಂಗ್ರಹಣೆಗೆ ಸುಲಭವಾಗುತ್ತದೆ. ವೇಗವಾಗಿ ಕನ್ನಡ ಟೈಪಿಂಗ್ ಮಾಡುವುದನ್ನು ಅರಿಯುವುದೂ ಸುದ್ದಿಮನೆಗೆ ಅತ್ಯಗತ್ಯವಾಗಿದೆ ಎಂದರು.
ಕಾಲೇಜು ಹಂತದಲ್ಲಿಯೇ ವರದಿಗಾರಿಕೆಯ ಪಟ್ಟುಗಳನ್ನು ವಿದ್ಯಾರ್ಥಿಗಳು ಅರಿತಾಗ ಮಾಧ್ಯಮ ಜಗತ್ತಿನಲ್ಲಿ ಹೆಚ್ಚು ಗುರುತಿಸಿಕೊಳ್ಳಲು ಸಹಕಾರಿಯಾಗುತ್ತದೆ. ಲೇಖನಗಳನ್ನು ಮಿಂಚಂಚೆ ಮೂಲಕ ಸಮಯ ಸಂದರ್ಭ ಗಮನಿಸಿ ಮಾಧ್ಯಮಗಳಿಗೆ ಕಳುಹಿಸಿದಲ್ಲಿ ಶೀಘ್ರವಾಗಿ ಪ್ರಕಟಗೊಳ್ಳುವ ಸಾಧ್ಯತೆಯಿರುತ್ತದೆ. ಮಾಧ್ಯಮಗಳಲ್ಲಿ ಪ್ರಸ್ತುತ ವಿಫುಲ ಅವಕಾಶಗಳಿದ್ದು ಪತ್ರಿಕೆ, ದೃಶ್ಯ ಮಾಧ್ಯಮ ಹಾಗೂ ವೆಬ್ ಸೈಟ್‌ಗಳಲ್ಲಿ ಉದ್ಯೋಗಗಳಿವೆ. ಪತ್ರಿಕೋದ್ಯಮದಲ್ಲಿ ಅಭ್ಯಾಸ ನಡೆಸಿದವರಿಗೆ ಪ್ರಸ್ತುತ ಕಾಲಘಟ್ಟದಲ್ಲಿ ಪಿಆರ್‌ಓ, ಇವೆಂಟ್ ಮ್ಯಾನೇಜ್‌ಮೆಂಟ್ ಮಾತ್ರವಲ್ಲದೆ ಯೂಟ್ಯೂಬ್ ಚಾನಲ್ ಆರಂಭಿಸುವ ಮೂಲಕವೂ ಸ್ವ- ಉದ್ಯೋಗ ನಡೆಸುವ ಅವಕಾಶಗಳಿವೆ. ಆದರೆ ನಾವು ನಮ್ಮನ್ನು ಹೊರಜಗತ್ತಿಗೆ ತೆರೆದುಕೊಂಡು ಸೂಕ್ತ ಪೂರ್ವತಯಾರಿಗಳನ್ನು ನಡೆಸಿಕೊಳ್ಳುವುದು ಅತೀ ಅಗತ್ಯವಾಗಿದೆ ಎಂದರು.
ರೂರಲ್ ಮಿರರ್ ಡಿಜಿಟಲ್ ಮೀಡಿಯಾ ಸ್ಥಾಪಕ ಮಹೇಶ್ ಪುಚ್ಚಪ್ಪಾಡಿ ಮಾತನಾಡಿ ಸರಣಿ ಕಾರ್ಯಕ್ರಮಗಳಲ್ಲಿ ಈಗಾಗಲೇ ಧನಾತ್ಮಕ ಪತ್ರಿಕೋದ್ಯಮದ ವಿವಿಧ ಮಜಲುಗಳ ಕುರಿತು ಚರ್ಚಿಸಲಾಗಿದ್ದು ಮುಂದೆಯೂ ವಿವಿಧ ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನಿಡಲಿದ್ದಾರೆ. ಈ ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ ಕುಮಾರ್ ಕಮ್ಮಜೆ, ಪತ್ರಿಕೋದ್ಯಮ ಉಪನ್ಯಾಸಕ ಹರ್ಷಿತ್ ಪಿಂಡಿವನ, ಅಂಬಿಕಾ ಪದವಿಪೂರ್ವ ವಿದ್ಯಾಲಯದ ಇಂಗ್ಲಿಷ್ ಉಪನ್ಯಾಸಕ ಆಶಿಕ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ನವ್ಯಾ ಸ್ವಾಗತಿಸಿ, ಜಯಶ್ರೀ ವಂದಿಸಿದರು.