ಪುತ್ತೂರು ಕಡಬ ತಾಲೂಕಿನ ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಿ ಪ್ರತಿಭಟನೆಯಲ್ಲಿ ಭಾಗಿ
ತಾ| ಅಂಗನವಾಡಿ ಕಾರ್ಯಕರ್ತೆಯರ ಸಹಾಯಕಿಯರ ಸಂಘದ ಸಭೆಯಲ್ಲಿ ತೀರ್ಮಾನ
ಪುತ್ತೂರು: ಪುತ್ತೂರು ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದ ವಿಶೇಷ ಸಭೆ ನಡೆಯಿತು. ಸಂಘದ ಅಧ್ಯಕ್ಷೆ ಕಮಲ ಮಾವಿನಕಟ್ಟೆ ಅಧ್ಯಕ್ಷತೆ ವಹಿಸಿ ಮಾತನಾಡಿ ಅಂಗನವಾಡಿ ಕೇಂದ್ರಗಳು ಆರಂಭವಾಗಿ 48 ವರ್ಷಗಳು ಕಳೆದಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ಕನಿಷ್ಠವೇತನ ನೀಡದೆ ಗೌರವಧನದ ಅಡಿಯಲ್ಲಿ ದುಡಿಸುತ್ತಿರುವುದು ಬೇಸರವಾಗಿದೆ. ಸೇವಾ ಭದ್ರತೆ, ಆರೋಗ್ಯವಿಮೆ, ಆರೋಗ್ಯವಿಮೆಯ ಯಾವುದೇ ಸೌಲಭ್ಯಗಳಿಲ್ಲ. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂದು ಸುಪ್ರೀಂಕೋರ್ಟ್ನ ಆದೇಶವಿದ್ದರೂ ಯಾವುದೇ ಸರಕಾರ ಇದರ ಬಗ್ಗೆ ಗಮನಹರಿಸುತ್ತಿಲ್ಲ. 2023ರ ಜನವರಿ ತಿಂಗಳಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿತ್ತು. ಆ ಬಾರಿ ಗ್ರಾಚ್ಯುಟಿ ಹಾಗೂ ಕನಿಷ್ಟವೇತನ ಜಾರಿ ಮಾಡುತ್ತೇವೆಂದು ಭರವಸೆ ನೀಡಿದ್ದರು. ಬಜೆಟ್ನಲ್ಲಿ ರೂ.1000 ಗೌರವಧನ ಏರಿಕೆ ಎಂದು ಘೋಷಣೆ ಮಾತ್ರ ಮಾಡಲಾಗಿತ್ತು. ಆದುದರಿಂದ ಪುನಃ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಸಂಘದ ಮುಖ್ಯ ಬೇಡಿಕೆಯಾದ ಕನಿಷ್ಟ ವೇತನ ಜಾರಿಗೊಳಿಸುವಂತೆ ಒತ್ತಾಯಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ವತಿಯಿಂದ ನ.23ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಪುತ್ತೂರು ಹಾಗೂ ಕಡಬ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಈ ಪ್ರತಿಭಟನೆಯಲ್ಲಿ ಭಾಗವಹಿಸುವುದೆಂದು ತೀರ್ಮಾನಿಸಲಾಯಿತು. ಸಂಘದ ಜಿಲ್ಲಾಧ್ಯಕ್ಷೆ ತಾರಾಬಲ್ಲಾಳ್, ಮಾಜಿ ಜಿಲ್ಲಾಧ್ಯಕ್ಷೆ ಅರುಣಾ ಡಿ. ಬೀರಿಗ, ಮಾಜಿ ಅಧ್ಯಕ್ಷರುಗಳಾದ ಮಲ್ಲಿಕಾ ಆಳ್ವ, ಶ್ರೀಲತಾ ಮೊಟ್ಟೆತ್ತಡ್ಕ, ಮೀನಾಕ್ಷಿ ಬೆಳ್ಳಿಪ್ಪಾಡಿ, ಕವಿತಾ ಜಯನ್ ಶಿರಾಡಿ, ಮಾಜಿ ಕಾರ್ಯದರ್ಶಿ ಸುಲೋಚನ, ಉಪಾಧ್ಯಕ್ಷೆ ಸಂಧ್ಯಾ, ಜತೆ ಕಾರ್ಯದರ್ಶಿ ತೀರ್ಥಕುಮಾರಿ ಹಾಗೂ ವಲಯ ಪ್ರತಿನಿಧಿಗಳು ಉಪಸ್ಥಿತರಿದ್ದರು. ಕಾರ್ಯದರ್ಶಿ ಪುಷ್ಪಲತಾ ಕೊಳ್ತಿಗೆ ಸ್ವಾಗತಿಸಿ ಖಜಾಂಜಿ ಶೈಲಜಾ ಈಶ್ವರಮಂಗಲ ವಂದಿಸಿದರು.