ಉಪ್ಪಿನಂಗಡಿ: ಇಲ್ಲಿನ ಗ್ರಾ.ಪಂ. ವ್ಯಾಪ್ತಿಯ ಮಕ್ಕಳ ಗ್ರಾಮ ಸಭೆ ನ.20ರಂದು ಉಪ್ಪಿನಂಗಡಿ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭ ಮಕ್ಕಳಿಂದ ಹಲವು ಸಮಸ್ಯೆಗಳು ಅನಾವರಣಗೊಂಡವು.
ಗ್ರಾ.ಪಂ. ಅಧ್ಯಕ್ಷೆ ಲಲಿತಾ ಅವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಉಪ್ಪಿನಂಗಡಿ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯೋರ್ವಳು ತಮ್ಮ ಶಾಲೆಯ ಬದಿ ಚರಂಡಿಯೊಂದಿದ್ದು, ಅದರಲ್ಲಿ ತ್ಯಾಜ್ಯ ನೀರು ಹರಿದು ಹೋಗದೇ ಅಲ್ಲೇ ಸಂಗ್ರಹಗೊಂಡು ನಿಂತಿದೆ. ಇದರಿಂದ ಶಾಲಾ ಆವರಣ ದುರ್ವಾಸನೆಯಿಂದ ಕೂಡಿದೆ ಎಂದಳು. ಗ್ರಾ.ಪಂ. ಸದಸ್ಯ ಅಬ್ದುರ್ರಹ್ಮಾನ್ ಕೆ. ಅವರು ಇದಕ್ಕೆ ಉತ್ತರಿಸಿ, ಚತುಷ್ಪಥ ಹೆದ್ದಾರಿ ಕಾಮಗಾರಿಯಿಂದಾಗಿ ಈ ಸಮಸ್ಯೆಯಾಗಿದೆ. ಇದನ್ನು ಸರಿಪಡಿಸುವುದಾಗಿ ಭರವಸೆ ನೀಡಿದರು. ಅದೇ ಶಾಲೆಯ ವಿದ್ಯಾರ್ಥಿ ಜ್ಞಾನೇಶ್ ರೈ ತಮ್ಮ ಶಾಲೆಯ ಕಾಂಪೌಂಡ್ ಬದಿ ಇರುವ ರಸ್ತೆಯ ಫುಟ್ಪಾತ್ನ ಉದ್ದಕ್ಕೂ ವಾಹನಗಳ ಪಾರ್ಕಿಂಗ್ ನಡೆಸಲಾಗುತ್ತಿದೆ. ಇದರಿಂದ ಮಕ್ಕಳಿಗೆ ನಡೆದಾಡಲು ಸಮಸ್ಯೆಯಾಗಿದೆ ಎಂದನು. ಉಪ್ಪಿನಂಗಡಿಯಲ್ಲಿ ಪಾರ್ಕಿಂಗ್ ಜಾಗ ಇಲ್ಲದಿದ್ದು, ಆದ್ದರಿಂದ ಶಾಲಾ ಬಳಿ ಇರುವ ಜಾಗದಲ್ಲಿ ವಾಹನಗಳ ಪಾರ್ಕಿಂಗ್ಗೆ ಅವಕಾಶ ನೀಡಲಾಗಿದೆ. ಆದರೆ ಶಾಲಾ ಗೇಟಿನ ಎದುರುಗಡೆ ವಾಹನಗಳನ್ನು ಪಾರ್ಕಿಂಗ್ ಮಾಡದಂತೆ ವ್ಯವಸ್ಥೆ ಮಾಡುವ ಭರವಸೆ ಗ್ರಾ.ಪಂ.ನಿಂದ ದೊರೆಯಿತು. ಹಿರ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತ್ಯಾಜ್ಯ ಸಂಗ್ರಹದ ವಾಹನ ಬಾರದ ಬಗ್ಗೆ ವಿದ್ಯಾರ್ಥಿನಿಯೋರ್ವಳು ಸಭೆಯ ಗಮನಸೆಳೆದರೆ, ಪೆರಿಯಡ್ಕದ ಸರ್ವೋದಯ ಪ್ರೌಢಶಾಲೆಯ ವಿದ್ಯಾರ್ಥಿನಿಯೋರ್ವಳು, ನಾವು ಮಕ್ಕಳ ಹಕ್ಕುಗಳು, ರಕ್ಷಣೆಗಳ ಬಗ್ಗೆ ಮಾತನಾಡುತ್ತೇವೆ. ಆದರೆ ಕೆಲವು ಮಕ್ಕಳು ಭಿಕ್ಷಾಟನೆಗೆ ತಳ್ಳಲ್ಪಡುತ್ತಾರೆ. ಅವರಿಗೆ ರಕ್ಷಣೆ ನೀಡುವವರು ಯಾರು ಎಂದು ಪ್ರಶ್ನಿಸಿದಳು. ಸುಬ್ರಹ್ಮಣ್ಯ ಕಡೆಯಿಂದ ಬರುವ ಬಸ್ಗಳು ವೇಗದೂತ ಬಸ್ಗಳಾದ ಕಾರಣ ಎಲ್ಲಾ ಕಡೆ ಅವುಗಳನ್ನು ನಿಲ್ಲಿಸುತ್ತಿಲ್ಲ. ಇದರಿಂದ ನಮಗೆ ಶಾಲೆಗೆ ಸರಿಯಾದ ಸಮಯಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಸರ್ವೋದಯ ಪ್ರೌಢಶಾಲೆಯ ವಿದ್ಯಾರ್ಥಿನಿಯೋರ್ವಳು ತಮ್ಮ ಸಮಸ್ಯೆಯನ್ನು ಹೇಳಿಕೊಂಡಳು.
ಕನ್ನಡ ಮಾಧ್ಯಮ, ಗ್ರಾಮೀಣ ಸೇರಿದಂತೆ ಇನ್ನಿತರ ಮೀಸಲಾತಿಯಿಂದಾಗಿ ಉನ್ನತ ಶಿಕ್ಷಣದ ಸಂದರ್ಭ ಉತ್ತಮವಾಗಿ ಓದುವ ವಿದ್ಯಾರ್ಥಿ ಆತನಾಗಿದ್ದರೂ, ಆತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾತಿ ಪಡೆದುಕೊಳ್ಳುವಲ್ಲಿ ವಂಚಿತನಾಗುತ್ತಾನೆ ಎಂದು ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿನಿಯೋರ್ವಳು ಸಮಸ್ಯೆ ಮುಂದಿಟ್ಟಾಗ, ಇದಕ್ಕೆ ಸದಸ್ಯ ಅಬ್ದುರ್ರಹ್ಮಾನ್ ಕೆ. ಉತ್ತರಿಸಿ, ಎಲ್ಲರಿಗೂ ಸಮಾನವಾದ ಹಕ್ಕು ಸಿಗಬೇಕೆಂಬ ಉದ್ದೇಶದಿಂದ ಸರಕಾರ ಈ ಮೀಸಲಾತಿಯನ್ನು ಜಾರಿಗೆ ತಂದಿದೆ. ಮೀಸಲಾತಿ ಇಲ್ಲದಿದ್ರೆ ಹಿಂದುಳಿದವರು ಇಂದಿಗೂ ಹಿಂದೆನೇ ಉಳಿಯುತ್ತಿದ್ದರು. ಕೇವಲ ಬಲಾಢ್ಯರು ಮಾತ್ರ ಸಮಾಜದ ಉನ್ನತ ಸ್ಥಾನದಲ್ಲಿ ಗುರುತಿಸಿಕೊಳ್ಳುತ್ತಿದ್ದರು. ಉದಾಹರಣೆಗೆ ಉಪ್ಪಿನಂಗಡಿ ಗ್ರಾ.ಪಂ.ನಲ್ಲಿ ಪರಿಶಿಷ್ಟ ಜಾತಿಯ ಮಹಿಳೆಯೋರ್ವರು ಅಧ್ಯಕ್ಷರಾಗಿದ್ದಾರೆ ಅಂದ್ರೆ ಅದಕ್ಕೆ ಈ ಮೀಸಲಾತಿನೇ ಕಾರಣ. ಒಟ್ಟಿನಲ್ಲಿ ಸಾಮಾಜಿಕ ಸಮಾನತೆಯ ದೃಷ್ಟಿಯಿಂದ ಮೀಸಲಾತಿಯನ್ನು ಸರಕಾರ ಜಾರಿಗೆ ತಂದಿದೆ ಎಂದರು.
ಅರಫಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಯೋರ್ವ ನಮಗೆ ಕಸ ಸುಡಲು ಅನುಕೂಲವಾಗುವಂತೆ ಸಿಮೆಂಟ್ನ ತೊಟ್ಟಿ ಕೊಡಿ ಎಂದು ಬೇಡಿಕೆ ಮುಂದಿಟ್ಟಾಗ, ಫ್ಲಾಸ್ಟಿಕ್ ತ್ಯಾಜ್ಯಗಳನ್ನು ಸುಡುವುದು ಪರಿಸರಕ್ಕೆ ಹಾನಿಕಾರಕ. ನೀವು ಕಸವನ್ನು ಗ್ರಾ.ಪಂ.ಗೆ ನೀಡಿ. ಎರಡು ಬಕೆಟ್ಗಳನ್ನು ಇಟ್ಟುಕೊಂಡು ಹಸಿ ಕಸ, ಒಣ ಕಸವೆಂದು ಬೇರ್ಪಡಿಸಿ ನೀಡಿ. ಅಲ್ಲಿಗೆ ವಾರದಲ್ಲಿ ಎರಡು ಬಾರಿ ಬೇಕಾದರೆ ತ್ಯಾಜ್ಯ ಸಂಗ್ರಹದ ವಾಹನವನ್ನು ಕಳುಹಿಸಲಾಗುವುದು ಎಂಬ ಉತ್ತರ ಗ್ರಾ.ಪಂ.ನಿಂದ ದೊರಕಿತು. ನಮ್ಮ ಶಾಲೆಗೆ ನಾಮಫಲಕದ ವ್ಯವಸ್ಥೆಯಾಗಬೇಕೆಂದು ಪುಳಿತ್ತಡಿ ಮಠದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಮನವಿ ಮಾಡಿದಾಗ, ನಾಮಫಲಕ ಮಾಡಿಸಿಕೊಡುವ ಭರವಸೆ ಗ್ರಾ.ಪಂ.ನಿಂದ ಸಿಕ್ಕಿತು. ಇಂದ್ರಪ್ರಸ್ಥ ಶಾಲಾ ರಸ್ತೆಯಲ್ಲಿ ಎರಡು ಶಾಲೆಗಳು ಬರುತ್ತದೆ. ಈ ರಸ್ತೆ ತೀರಾ ಇಕ್ಕಟ್ಟಾಗಿರುವುದರಿಂದ ಇಲ್ಲಿ ವಾಹನ ದಟ್ಟನೆ ಜಾಸ್ತಿಯಾಗಿ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಇದರಿಂದ ಶಾಲೆಗೆ ಹೋಗುವ ಸಮಯ ಹಾಗೂ ಶಾಲೆ ಬಿಡುವ ಸಮಯದಲ್ಲಾದರೂ ಈ ರಸ್ತೆಯನ್ನು ಏಕಮುಖ ರಸ್ತೆಯನ್ನಾಗಿ ಪರಿವರ್ತಿಸಬೇಕೆಂಬ ಆಗ್ರಹ ವಿದ್ಯಾರ್ಥಿಯೋರ್ವ ವ್ಯಕ್ತಪಡಿಸಿದಾಗ, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವ ಭರವಸೆ ನೀಡಲಾಯಿತು.
ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಗಳಾದ ಋಷಿಕೇಷ್ ಮತ್ತು ತಂಡದವರು ಡ್ರ್ಯಾಗನ್ ಫ್ರೂಟ್ಸ್ನ ಸಿಪ್ಪೆಯಿಂದಾಗುವ ಉಪಯೋಗದ ಬಗ್ಗೆ ಹಾಗೂ ಚಾರ್ವಿ ಮತ್ತು ತಂಡದವರು ಪೌಷ್ಟಿಕ ಆಹಾರದ ಬಗ್ಗೆ ವರದಿ ಮಂಡಿಸಿದರು. ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಸುಜಾತ ಅವರು ಮಕ್ಕಳ ಹಕ್ಕುಗಳು, ಅವುಗಳ ರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು. ಆರೋಗ್ಯ ಸಹಾಯಕಿ ಗಾಯತ್ರಿ ಅವರು ಪೌಷ್ಟಿಕ ಆಹಾರ ಮತ್ತು ಆರೋಗ್ಯ ರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಸದಸ್ಯರಾದ ಸಣ್ಣಣ್ಣ, ರುಕ್ಮಿಣಿ, ಉಷಾಚಂದ್ರ ಮುಳಿಯ, ಸೌಧ, ನೆಬಿಸಾ, ಶೋಭಾ, ಉಷಾ, ವನಿತಾ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಿಲ್ಫ್ರೇಡ್ ಲಾರೆನ್ಸ್ ರೊಡ್ರಿಗಸ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಗೀತಾ ಶೇಖರ್ ಸ್ವಾಗತಿಸಿ, ವಂದಿಸಿದರು.