ಉಪ್ಪಿನಂಗಡಿಯಲ್ಲಿ ಟ್ರಾಫಿಕ್ ಜಾಮ್ ನಿತ್ಯ ನಿರಂತರ-ಪಾರ್ಕಿಂಗಿಗೂ ಸ್ಥಳವಿಲ್ಲ: ಪಾದಚಾರಿಗಳಿಗೂ ಜಾಗವಿಲ್ಲ

0

ಕಿರಿದಾದ ರಸ್ತೆ ಬದಿ ಬೆಳೆಯುತ್ತಿರುವ ಪೇಟೆ

ಉಪ್ಪಿನಂಗಡಿ: ಪುತ್ತೂರು ತಾಲೂಕಿನ ಪ್ರಮುಖ ವಾಣಿಜ್ಯ ನಗರವಾಗಿ ಉಪ್ಪಿನಂಗಡಿ ಬೆಳೆಯುತ್ತಿದ್ದರೂ, ಸ್ಥಳಾವಕಾಶದ ವಿಷಯದಲ್ಲಿ ಪೇಟೆ ತೀರಾ ಇಕ್ಕಟ್ಟಾಗಿದೆ. ಪೇಟೆಯೊಳಗೆ ವಾಹನಗಳ ಪಾರ್ಕಿಂಗ್‌ಗೂ ಸ್ಥಳವಿಲ್ಲ. ಪಾದಚಾರಿಗಳ ಓಡಾಟಕ್ಕೂ ಜಾಗವಿಲ್ಲದಂತಾಗಿದ್ದು, ಟ್ರಾಫಿಕ್ ಜಾಮ್‌ನ ಕಿರಿಕಿರಿ ಇಲ್ಲಿ ನಿತ್ಯ ನಿರಂತರವಾಗಿದೆ.


ರಾಷ್ಟ್ರೀಯ ಹೆದ್ದಾರಿ 75ರಿಂದ ತಿರುವು ಪಡೆದು ಉಪ್ಪಿನಂಗಡಿಯ ಬಸ್ ನಿಲ್ದಾಣಕ್ಕೆ ಬರುವ ಉಪ್ಪಿನಂಗಡಿ- ಗುರುವಾಯನಕೆರೆ ರಾಜ್ಯ ಹೆದ್ದಾರಿಯೂ ಉಪ್ಪಿನಂಗಡಿಯಲ್ಲಿ ದಿನದಲ್ಲಿ ಅದೆಷ್ಟೋ ಬಾರಿ ಟ್ರಾಫಿಕ್ ಜಾಮ್‌ಗೆ ಸಿಲುಕುತ್ತದೆ. ಬಸ್ ನಿಲ್ದಾಣದಿಂದ ಹೊರಡುವ ಬಸ್‌ಗಳು ಸ್ವಲ್ಪ ಮುಂದಕ್ಕೆ ಹೋಗಿ ರಾಜ್ಯ ಹೆದ್ದಾರಿಯಲ್ಲೇ ಬಸ್ ನಿಲ್ಲಿಸಿ ಜನರನ್ನು ಹತ್ತಿಸುವುದು, ರಸ್ತೆಗಳಲ್ಲೇ ನಿಲ್ಲಿಸಿ ಸಮೀಪದ ಅಂಗಡಿಗಳಿಗೆ ಹೋಗುವ ಖಾಸಗಿ ವಾಹನದವರು, ಫುಟ್‌ಪಾತ್ ಅನ್ನು ಆಕ್ರಮಿಸಿಕೊಂಡಿರುವ ಅನಧಿಕೃತ ವ್ಯಾಪಾರಸ್ಥರು, ವಾಹನಗಳ ಭರಾಟೆ, ರಾಜ್ಯ ಹೆದ್ದಾರಿಯ ಬದಿಯಲ್ಲೇ ಇರುವ ಜೀಪು, ರಿಕ್ಷಾ ನಿಲ್ದಾಣಗಳು ಹೀಗೆ ಹತ್ತು ಹಲವು ಕಾರಣಗಳಿಂದಾಗಿ ಇಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.


ಹೊಸತನಕ್ಕೆ ತೆರೆಯದ ರಸ್ತೆಗಳು!:
ಇನ್ನು ಉಪ್ಪಿನಂಗಡಿಯಲ್ಲಿ ಹೆಚ್ಚಿನ ವಾಣಿಜ್ಯ ಕೇಂದ್ರಗಳಿರುವ ಬ್ಯಾಂಕ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಹೇಳತೀರದಂತಿದೆ. ಇಲ್ಲಿ ವಾಹನಗಳಿಗೆ ಮಾತ್ರ ಅಲ್ಲ. ಪಾದಚಾರಿಗಳ ಓಡಾಟವೂ ಕಷ್ಟಕರವಾಗಿದೆ. ಪೇಟೆಯೂ ದಿನೇ ದಿನೇ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದು, ವಾಣಿಜ್ಯ ವಹಿವಾಟುಗಳು ಹೆಚ್ಚಾಗಿವೆ. ಹಲವು ಹೊಸ ಹೊಸ ವಾಣಿಜ್ಯ ಕಟ್ಟಡಗಳು ತಲೆಯೆತ್ತುತ್ತಿವೆ. ಪೇಟೆಯೊಳಗೆ ಜನನಿಭಿಡತೆ, ವಾಹನಗಳ ಸಂಖ್ಯೆಯೂ ಹೆಚ್ಚುತ್ತಿದೆ. ಆದರೆ ದಿನೇ ದಿನೇ ಇಲ್ಲಿನ ರಸ್ತೆಗಳು ಕುಗ್ಗುತ್ತಿವೆಯೇ ಹೊರತು ಹಿಗ್ಗುತ್ತಿಲ್ಲ. ಹೊಸತನಕ್ಕೆ ತೆರೆದುಕೊಳ್ಳಲು ಅವುಗಳಿಗೆ ಸಾಧ್ಯವಾಗುತ್ತಿಲ್ಲ.


ಮತ್ತೆ ಅನುಷ್ಠಾನಗೊಳ್ಳದ ನಿಯಮ:
ಇಲ್ಲಿನ ಗ್ರಾ.ಪಂ. ಕೆಲವು ವರ್ಷಗಳ ಹಿಂದೆ ಪೇಟೆಯೊಳಗೆ ವಾಹನ ನಿಲುಗಡೆಗೆ ನಿಯಮವೊಂದನ್ನು ಜಾರಿಗೆ ತಂದಿತ್ತು. ಕೆಲವು ಕಡೆ ಪೇ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಿತ್ತು. ವಿದ್ಯಾರ್ಥಿಗಳು ಶಾಲಾ- ಕಾಲೇಜುಗಳಿಗೆ ಹೋಗುವ ಹಾಗೂ ಬರುವ ಸಮಯದಲ್ಲಿ ಅಂಗಡಿಗಳಿಗೆ ಸಾಮಾನು ಸರಂಜಾಮುಗಳನ್ನು ತರುವ ಲಾರಿ, ಟೆಂಪೋ ಸೇರಿದಂತೆ ವಾಹನಗಳ ಅನ್‌ಲೋಡಿಂಗ್‌ಗೆ ನಿರ್ಬಂಧ ಹೇರಿತ್ತು. ಒಂದು ದಿನ ಒಂದು ಬದಿ ಪಾರ್ಕಿಂಗ್ ವ್ಯವಸ್ಥೆ ಮಾಡಿತ್ತು. ಅಂಗಡಿಗಳವರು ಫುಟ್‌ಪಾತ್‌ಗಳನ್ನು ಆಕ್ರಮಿಸಿಕೊಳ್ಳುವುದನ್ನು ನಿಷೇಧಿಸಿತ್ತು. ಇದರಿಂದಾಗಿ ಟ್ರಾಫಿಕ್ ಜಾಮ್ ಸಮಸ್ಯೆಗೆ ಸಂಪೂರ್ಣ ಪರಿಹಾರ ದೊರೆಯದಿದ್ದರೂ, ತಕ್ಕ ಮಟ್ಟಿಗೆ ಸಮಸ್ಯೆಯನ್ನು ನೀಗಿಸಿತ್ತು. ಆದರೆ ಕೊರೋನಾ ಕಾಲಘಟ್ಟದ ಬಳಿಕ ಮಾತ್ರ ಈ ನಿಯಮಗಳ ಅನುಷ್ಠಾನ ಎಲ್ಲೂ ಕಾಣಲಿಲ್ಲ.


ರಸ್ತೆ ಮಾರ್ಜಿನ್‌ನಲ್ಲೇ ಕಟ್ಟಡಗಳು:
ಹೊಸದಾಗಿ ನಿರ್ಮಾಣವಾಗಿರುವ ಕೆಲ ವಾಣಿಜ್ಯ ಮಳಿಗೆಗಳು ಈಗಿನ ನಿಯಮದಂತೆ ರಸ್ತೆ ಮಾರ್ಜಿನ್ ಬಿಟ್ಟು ನಿರ್ಮಾಣವಾಗಿದ್ದರೂ, ಇಲ್ಲಿರುವುದು ಹೆಚ್ಚಿನ ಹಳೆಯ ವಾಣಿಜ್ಯ ಕಟ್ಟಡಗಳು ಅವೆಲ್ಲಾ ರಸ್ತೆಯ ಬದಿಯಲ್ಲಿಯೇ ಇವೆ. ಇದರಿಂದ ಒಂದು ಸಮಸ್ಯೆಯಾದರೆ, ಹೊಸದಾಗಿ ನಿರ್ಮಾಣವಾದ ಕೆಲವು ಬಹುಮಹಡಿ ವಾಣಿಜ್ಯ ಕಟ್ಟಡಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಮೊದಲು ಕಟ್ಟಡದ ತಳ ಅಂತಸ್ತನ್ನು ವಾಹನ ಪಾರ್ಕಿಂಗ್‌ಗೆ ತೋರಿಸಿ ಎನ್‌ಒಸಿ ಪಡೆಯಲಾಗುತ್ತದೆಯಾದರೂ, ಕಟ್ಟಡ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಯಾಗಿ ನಾಲ್ಕೈದು ತಿಂಗಳ ಬಳಿಕ ಪಾರ್ಕಿಂಗ್‌ಗೆ ತೋರಿಸಿರುವ ಜಾಗದಲ್ಲಿ ಒಂದೊಂದೇ ಅಂಗಡಿ ಕೋಣೆಗಳು ತಲೆಯೆತ್ತಲು ಆರಂಭವಾಗುತ್ತದೆ. ಇಲ್ಲಿರುವ ಭ್ರಷ್ಟ ವ್ಯವಸ್ಥೆಗಳಿಂದಾಗಿ ಅದಕ್ಕೆ ಗ್ರಾ.ಪಂ.ನಿಂದ ಡೋರ್ ನಂಬರ್ ಕೂಡಾ ಸಿಗುತ್ತದೆ. ಇದು ಕೂಡಾ ಇಲ್ಲಿನ ಟ್ರಾಫಿಕ್ ಸಮಸ್ಯೆಗೆ ಕಾರಣವಾಗಿದೆ. ಅಲ್ಲದೇ, ಹೆಚ್ಚಿನ ಅಂಗಡಿಗಳವರ ಸಾಮಾನು- ಸರಂಜಾಮುಗಳು ಫುಟ್‌ಪಾತ್ ಅನ್ನು ಆವರಿಸಿವೆ. ಕೆಲವು ಕಡೆ ಅನಧಿಕೃತ ವ್ಯಾಪಾರಿಗಳು ಫುಟ್‌ಫಾತ್ ಅನ್ನು ಅತಿಕ್ರಮಿಸಿಕೊಂಡಿದ್ದಾರೆ.


ಅಸ್ತ್ರವಿಲ್ಲದ ಪೊಲೀಸರು!:
ವಾಹನ ನಿಲುಗಡೆಗೆ ಗ್ರಾ.ಪಂ. ನಿಯಮವನ್ನೇ ಅನುಷ್ಠಾನ ಮಾಡಿಲ್ಲ. ಹಾಗಾಗಿ ಪೇಟೆಯೊಳಗೆ ವಾಹನಗಳು ನಿಂತಾಗ ಪೊಲೀಸರಿಗೂ ಕ್ರಮ ತೆಗೆದುಕೊಳ್ಳಲು ಕಷ್ಟಸಾಧ್ಯವಾಗುವಂತಹ ಪರಿಸ್ಥಿತಿ ಇದೆ. ಯಾಕೆಂದರೆ ಇಲ್ಲಿ ನೋ ಪಾರ್ಕಿಂಗ್ ಅಂತ ಬೋರ್ಡ್ ಇದೆಯಾ? ಪಾರ್ಕಿಂಗ್ ಜಾಗ ಎಲ್ಲಿದೆ ಎಂದು ಕೇಳಿದರೆ ಪೊಲೀಸರ ಬಳಿಯೂ ಅದಕ್ಕೆ ಉತ್ತರವಿಲ್ಲ. ಆದರೂ ರಸ್ತೆಯಲ್ಲೇ ವಾಹನವನ್ನು ನಿಲ್ಲಿಸಿ ಹೋಗುವಂತವರ ಮೇಲೆ ಪೊಲೀಸರು ಕಾನೂನು ಕ್ರಮ ಜರಗಿಸುತ್ತಿರಬೇಕು. ಆಗ ವಾಹನ ಸಂಚಾರಕ್ಕೆ ತೊಂದರೆಯಾಗುವ ಹಾಗೆ ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆಗೊಳಿಸುವವರಿಗೆ ಸ್ವಲ್ಪ ಭಯ ಹುಟ್ಟುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.


ಲಂಗು- ಲಗಾಮಿಲ್ಲ:
ಹೆಚ್ಚಿನವರಿಗೆ ದೂರದಲ್ಲಿ ವಾಹನ ನಿಲ್ಲಿಸಿ ಅಂಗಡಿಗಳಿಗೆ ನಡೆದುಕೊಂಡು ಬರುವಷ್ಟು ವ್ಯವಧಾನವಿಲ್ಲ. ಅಂಗಡಿಯ ಬಾಗಿಲವರೆಗೂ ವಾಹನದಲ್ಲೇ ಬರುವ ಮನೋಸ್ಥಿತಿ. ನಿಲ್ಲಿಸಲು ಜಾಗವಿಲ್ಲದಿದ್ದರೆ ಮಾರ್ಗದಲ್ಲೇ ವಾಹನಗಳನ್ನು ನಿಲ್ಲಿಸಿ ಅಂಗಡಿಗಳಿಗೆ ತೆರಳುತ್ತಾರೆ. ವಾಹನ ನಿಲುಗಡೆಗೆ ಎಲ್ಲಾದರೂ ಸ್ವಲ್ಪ ಸ್ಥಳಾವಕಾಶವಿದ್ದರೂ, ಇಲ್ಲಿಂದ ದೂರದ ಪ್ರದೇಶಕ್ಕೆ ಕೆಲಸಗಳಿಗೆ ತೆರಳುವವರು, ವಿದ್ಯಾರ್ಥಿಗಳು ತಮ್ಮ ವಾಹನಗಳನ್ನು ಅಲ್ಲಿ ನಿಲ್ಲಿಸಿ ತೆರಳುತ್ತಾರೆ. ಹಾಗೆ ವಾಹನ ನಿಲ್ಲಿಸಿ ಹೋದವರು ಅದನ್ನು ತೆಗೆಯುವುದು ಸಂಜೆಯ ಬಳಿಕವೇ. ಹೀಗಾಗಿ ಇಲ್ಲಿ ಸಂಚಾರ ದಟ್ಟಣೆ ಅನ್ನುವುದು ಮಾಮೂಲಿಯಾಗಿಬಿಟ್ಟಿದೆ. ಶಾಲಾ ಕಾಲೇಜು ಬಿಡುವ ಸಂದರ್ಭದಲ್ಲಿ ಪೇಟೆಯೊಳಗಿನ ಬ್ಯಾಂಕ್ ರಸ್ತೆ ಸಂಪೂರ್ಣ ಜನ ಹಾಗೂ ವಾಹನ ದಟ್ಟಣೆಯಿಂದ ಕೂಡಿರುತ್ತದೆ.
ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ನಡೆಯುವ ಸಭೆಗಳು ಕೇವಲ ವಿಚಾರ ವಿನಿಮಯ ಮಾಡಿ ಬಿಸ್ಕೆಟ್- ಚಾ ತಿಂದು ಎದ್ದು ಬರೋದಕ್ಕೆ ಸೀಮಿತಗೊಳ್ಳದೇ, ಅಲ್ಲಿ ಕೇಳಿ ಬರುವ ಅಭಿಪ್ರಾಯಗಳ ಅನುಷ್ಠಾನಕ್ಕೆ ಪ್ರಯತ್ನ ಪಟ್ಟರೇ ಮಾತ್ರ ಈ ಸಮಸ್ಯೆಗೆ ಸ್ವಲ್ಪವಾದರೂ ಮುಕ್ತಿ ಸಿಗಲು ಸಾಧ್ಯ ಎಂಬುದು ಸಾರ್ವಜನಿಕರ ಅನಿಸಿಕೆ.

ಇಲ್ಲಿನ ಸರಕಾರಿ ಮಾದರಿ ಶಾಲೆಯ ರಸ್ತೆಯಲ್ಲಿ ಚರಂಡಿ ಮೇಲೆ ಸ್ಲ್ಯಾಬ್ ಹಾಕಿ ಅದರ ಮೇಲೆ ವಾಹನ ನಿಲುಗಡೆಗೆ ಅವಕಾಶ ನೀಡುವ ಬಗ್ಗೆ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಬಳಿ ಮಣ್ಣು ಹಾಕಿ ಇನ್ನಷ್ಟು ಸ್ಥಳವಕಾಶ ಹೆಚ್ಚಿಸಿಕೊಂಡು ಅಲ್ಲಿಯೂ ಪಾರ್ಕಿಂಗ್ ಅವಕಾಶ ನೀಡುವ ಬಗ್ಗೆ ಯೋಜನೆ ಹಾಕಿಕೊಳ್ಳಲಾಗಿದೆ.
ವಿದ್ಯಾಲಕ್ಷ್ಮೀ ಪ್ರಭು
ಉಪಾಧ್ಯಕ್ಷರು, ಉಪ್ಪಿನಂಗಡಿ ಗ್ರಾ.ಪಂ.

ಪ್ರತಿ ವರ್ಷ ವಾಹನಗಳು ಜಾಸ್ತಿಯಾಗುತ್ತಲೇ ಇವೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ವಾಹನಗಳು ಹೆಚ್ಚಾದಂತೆ ರಸ್ತೆ ವಿಸ್ತರಣೆಯಾಗುತ್ತಿಲ್ಲ. ಇಲ್ಲಿ ಕೆಲವು ಬಹುಮಹಡಿ ಕಟ್ಟಡಗಳಲ್ಲೂ ಕೂಡಾ ಪಾರ್ಕಿಂಗ್‌ಗೆ ವ್ಯವಸ್ಥೆ ಇಲ್ಲ. ಇದನ್ನೆಲ್ಲಾ ಸರಿ ಮಾಡಬೇಕಾದವರು ಗ್ರಾ.ಪಂ.ನವರು. ಪಾರ್ಕಿಂಗ್ ವ್ಯವಸ್ಥೆಯ ಬಗ್ಗೆ ಇವರೊಂದು ನಿಯಮವನ್ನು ರೂಪಿಸಿ, ನಮಗೆ ಕೊಡಲಿ. ಅದು ಕಟ್ಟುನಿಟ್ಟಾಗಿ ಅನುಷ್ಠಾನವಾಗುವ ಹಾಗೆ ಪೊಲೀಸ್ ಇಲಾಖೆ ನೋಡಿಕೊಳ್ಳುತ್ತದೆ. ಇಲ್ಲಿ ಪೇಟೆ ರಸ್ತೆಯನ್ನು ಒನ್‌ವೇ ಮಾಡಿದರಷ್ಟೇ ಟ್ರಾಫಿಕ್ ಜಾಮ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಟ್ರಾಫಿಕ್ ಸಮಸ್ಯೆಯ ವಿಷಯದಲ್ಲಿ ಇಲ್ಲಿ ಕೋಲು ಮುರಿಯಬಾರದು. ಹಾವು ಸಾಯಬಾರದು ಎನ್ನುವ ಮನೋಸ್ಥಿತಿಯಿದೆ. ಸಭೆಗಳಲ್ಲಿ ಒಬ್ಬ ಹೇಳಿದ ಸಲಹೆ ಇನ್ನೊಬ್ಬನಿಗೆ ಆಗಲ್ಲ. ಇನ್ನೊಬ್ಬ ಹೇಳಿದ ಸಲಹೆ ಮತ್ತೊಬ್ಬನಿಗೆ ಆಗಲ್ಲ. ಆದ್ದರಿಂದ ವರ್ತಕರು, ಗ್ರಾ.ಪಂ.ನವರು, ಜನರು ಒಮ್ಮತದ ತೀರ್ಮಾನಕ್ಕೆ ಬಂದು ಪಾರ್ಕಿಂಗ್ ಬಗ್ಗೆ ಸೂಕ್ತ ನಿಯಮವನ್ನು ರೂಪಿಸುವುದು ಮುಖ್ಯವಾಗಿದೆ.
ರವಿ ಬಿ.ಎಸ್.
ವೃತ್ತ ನಿರೀಕ್ಷಕರು, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ

LEAVE A REPLY

Please enter your comment!
Please enter your name here