ನೆಲ್ಯಾಡಿ: ನೆಲ್ಯಾಡಿ ಪೇಟೆಯಲ್ಲಿ ಫ್ಲೈಓವರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ನೆಲ್ಯಾಡಿ-ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿ ಪದಾಧಿಕಾರಿಗಳು ನ.20ರಂದು ಮಂಗಳೂರಿನಲ್ಲಿ ಸಂಸದ ನಳಿನ್‌ಕುಮಾರ್ ಕಟೀಲ್‌ರವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ನೆಲ್ಯಾಡಿಯಲ್ಲಿ ಎತ್ತರಿಸಿದ ತಡೆಗೋಡೆಯೊಂದಿಗೆ ರಸ್ತೆ ನಿರ್ಮಾಣದ ಬದಲು ಫ್ಲೈಓವರ್ ನಿರ್ಮಾಣ ಮಾಡಬೇಕೆಂದು ಹೋರಾಟ ಸಮಿತಿಯವರು ಸಂಸದರಿಗೆ ಮನವಿ ಮಾಡಿದರು. ಅಲ್ಲದೇ ಈ ಸಂಬಂಧ ನ.23ರಂದು ನೆಲ್ಯಾಡಿಯಲ್ಲಿ ನಡೆಯುವ ಪ್ರತಿಭಟನೆಯ ಕುರಿತು ಹೋರಾಟ ಸಮಿತಿ ಪದಾಧಿಕಾರಿಗಳು ಸಂಸದರಿಗೆ ಮನವರಿಕೆ ಮಾಡಿದರು. ಸಭೆಯಲ್ಲಿ ನೆಲ್ಯಾಡಿ-ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿ, ನೆಲ್ಯಾಡಿ ವರ್ತಕರ ಸಂಘ, ನೆಲ್ಯಾಡಿ ಕಟ್ಟಡ ಮಾಲಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿಯ ಯೋಜನಾ ನಿರ್ದೇಶಕರು, ಕೆಎನ್‌ಆರ್ ಕಂಪನಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸುಳ್ಯ ಶಾಸಕರಿಂದ ಸಂಸದರಿಗೆ ಪತ್ರ:
ಜನರ ಬೇಡಿಕೆಯಂತೆ ನೆಲ್ಯಾಡಿ ಪೇಟೆಯಲ್ಲಿ ಫ್ಲೈಓವರ್ ನಿರ್ಮಾಣ ಮಾಡಿಕೊಡಬೇಕೆಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಸಂಸದ ನಳಿನ್‌ಕುಮಾರ್ ಕಟೀಲ್‌ರವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ನೆಲ್ಯಾಡಿ ಪೇಟೆಯಲ್ಲಿ ಫ್ಲೈಓವರ್ ನಿರ್ಮಾಣ ಮಾಡುವಂತೆ ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿಯವರು ಸಹ ಸಂಸದ ನಳಿನ್‌ಕುಮಾರ್ ಕಟೀಲ್ ಅವರಿಗೆ ಮನವಿ ಮಾಡಿದ್ದಾರೆ.