ನೆ.ಮುಡ್ನೂರು ಗ್ರಾ.ಪಂನಲ್ಲಿ ವರ್ತಕರ ಸಭೆ

0

ತ್ಯಾಜ್ಯ ವಿಲೇವಾರಿ ಶುಲ್ಕವನ್ನು ಕ್ಲಪ್ತ ಸಮಯದಲ್ಲಿ ಪಾವತಿಸಲು ವರ್ತಕರಿಗೆ ಗ್ರಾ.ಪಂ ಸೂಚನೆ
ಸ್ವಚ್ಛತಾಗಾರರಿಗೆ 4 ತಿಂಗಳಿನಿಂದ ಸಂಬಳವೇ ಸಿಕ್ಕಿಲ್ಲ-ಅಳಲು ತೋಡಿಕೊಂಡ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ

ಪುತ್ತೂರು: ನೆಟ್ಟಣಿಗೆ ಮುಡ್ನೂರು ಗ್ರಾ.ಪಂ ವ್ಯಾಪ್ತಿಯ ವರ್ತಕರ ಸಭೆ ನ.23ರಂದು ನೆ.ಮುಡ್ನೂರು ಗ್ರಾ.ಪಂ ಸಭಾಭವನದಲ್ಲಿ ನಡೆಯಿತು. ಗ್ರಾ.ಪಂ ಅಧ್ಯಕ್ಷೆ ಫೌಝಿಯಾ ಅಧ್ಯಕ್ಷತೆ ವಹಿಸಿದ್ದರು.

ಪುತ್ತೂರು ತಾ.ಪಂನ ಕಾರ್ಯಕ್ರಮ ವ್ಯವಸ್ಥಾಪಕ ಜಗತ್ ಕೆ ಮಾಹಿತಿ ನೀಡಿ ವರ್ತಕರು, ಗ್ರಾಮಸ್ಥರು ತ್ಯಾಜ್ಯದ ಬಗ್ಗೆ ಗಂಭೀರವಾಗಿ ತಿಳಿದುಕೊಳ್ಳುವ ಮೂಲಕ ಅದರ ಮಾಹಿಯನ್ನು ಅರಿತಿರಬೇಕು, ತ್ಯಾಜ್ಯವನ್ನು ಸಂಪನ್ಮೂಲವಾಗಿ ಮರುಬಳಕೆ ಮಾಡುವಂತಾಗಬೇಕು. ನಮ್ಮ ಮನೆ, ಅಂಗಡಿ, ಪರಿಸರವನ್ನು ಶುಚಿತ್ವದಲ್ಲಿ ಇಡುವ ಮೂಲಕ ಪರಿಸರ ಸಂರಕ್ಷಿಸುವ ಕೆಲಸ ನಮ್ಮಿಂದಾಗಬೇಕು ಎಂದು ಹೇಳಿದರು.
ಅಂಗಡಿಯಲ್ಲಾಗಲೀ, ಮನೆಯಲ್ಲಾಗಲೀ ಸಂಗ್ರಹವಾದ ತ್ಯಾಜ್ಯಗಳನ್ನು ವಿಂಗಡಿಸಿ ಗೋಣಿಚೀಲದಲ್ಲಿ ತುಂಬಿಸಿಡಬೇಕೇ ಹೊರತು ಸಿಕ್ಕಿದಲ್ಲಿ ಬಿಸಾಡಬಾರದು. ಎಲ್ಲವನ್ನೂ ಸರಕಾರ ಮಾಡಬೇಕು ಎಂದು ಕಾಯದೇ ನಮ್ಮ ಜವಾಬ್ದಾರಿಯನ್ನು ನಾವು ನಿಭಾಯಿಸಿದಾಗ ನೂರಕ್ಕೆ ನೂರು ತ್ಯಾಜ್ಯ ನಿರ್ವಹಣೆ ಮಾಡಲು ಸಾಧ್ಯವಿದೆ ಎಂದು ಅವರು ಹೇಳಿದರು.

400 ವರ್ತಕರಿಗೆ ನೋಟೀಸು:
ಪಿಡಿಓ ವಸೀಂ ಗಂಧದ ಮಾತನಾಡಿ ಈ ಸಭೆಯಲ್ಲಿ ಭಾಗವಹಿಸಲು ಸುಮಾರು 400ರಷ್ಟು ವರ್ತಕರಿಗೆ ನೋಟೀಸು ನೀಡಿದ್ದೇವೆ. ನಮ್ಮದು ದೊಡ್ಡ ಗ್ರಾಮವಾಗಿರುವುದರಿಂದ ಹೆಚ್ಚು ಅಂಗಡಿಗಳಿವೆ, ಸ್ವಚ್ಛತೆಗೆ ಪ್ರತಿಯೊಬ್ಬರೂ ಆದ್ಯತೆ ನೀಡಬೇಕು ಎಂದು ಹೇಳಿದರು.

ಈಶ್ವರಮಂಗಲದಲ್ಲಿ ಪೇಟೆಯಲ್ಲಿ ಪಾರ್ಕಿಂಗ್ ಸಮಸ್ಯೆ:
ವರ್ತಕ ಅಬ್ದುಲ್ ರಹಿಮಾನ್ ಹಾಜಿ ಮೇನಾಲ ಮಾತನಾಡಿ ಈಶ್ವರಮಂಗಲ ಪೇಟೆಯಲ್ಲಿ ಪಾರ್ಕಿಂಗ್ ಸಮಸ್ಯೆ ಬಹಳವಾಗಿ ವರ್ತಕರನ್ನು ಕಾಡುತ್ತಿದ್ದು ಪೇಟೆ ಬದಿಯಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಹೋಗುವ ಪರಿಪಾಠ ಹೆಚ್ಚುತ್ತಿದೆ, ಇದರಿಂದಾಗಿ ವರ್ತಕರಿಗೆ ವ್ಯಾಪಾರ ಮಾಡಲು ತೊಂದರೆಯಾಗುತ್ತಿದ್ದು ಈ ಬಗ್ಗೆ ಗ್ರಾ.ಪಂ ಎಚ್ಚೆತ್ತುಕೊಂಡು ಸೂಕ್ತ ಕ್ರಮ ವಹಿಸಬೇಕೆಂದು ಹೇಳಿದರು.

ತೆರಿಗೆ ಕ್ಲಪ್ತ ಸಮಯದಲ್ಲಿ ಪಾವತಿಸಿ:
ಗ್ರಾ.ಪಂ ಸದಸ್ಯ ರಮೇಶ್ ರೈ ಸಾಂತ್ಯ ಮಾತನಾಡಿ ಗ್ರಾಮಸ್ಥರು, ವ್ಯಾಪಾರಸ್ಥರು ಗ್ರಾ.ಪಂಗೆ ಕೊಡಬೇಕಾದ ತೆರಿಗೆಯಾಗಲೀ, ಲೈಸೆನ್ಸ್ ರಿನೀವಲ್ ಮಾಡಿಸುವುದಾಗಲೀ ಆಯಾ ಸಂದರ್ಭಗಳಲ್ಲೇ ಮಾಡಿಸಿಕೊಳ್ಳಬೇಕು. ನಮಗೆ ಪುರುಸೊತ್ತಿಲ್ಲ, ಸಮಯವಿಲ್ಲ ಎಂದೆಲ್ಲಾ ಹೇಳಬಾರದು. ಟಿವಿ ರೀಚಾರ್ಜ್, ಮೊಬೈಲ್ ರೀಚಾರ್ಜ್‌ನ್ನು ಸಮಯಕ್ಕೆ ಸರಿಯಾಗಿ ಮಾಡುವ ನಾವು ಇದರಲ್ಲಿ ನಿರ್ಲಕ್ಷ್ಯ ವಹಿಸಲೇಬಾರದು ಎಂದು ಕಿವಿಮಾತು ಹೇಳಿದರು.

ಸ್ವಚ್ಛತಾಗಾರರಿಗೆ 4 ತಿಂಗಳಿನಿಂದ ಸಂಬಳ ಸಿಕ್ಕಿಲ್ಲ..!
ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಮೀನಾಕ್ಷಿ ಮಾತನಾಡಿ ಸಂಜೀವಿನಿ ಒಕ್ಕೂಟದ ಸ್ವಚ್ಛತಾಗಾರರಿಗೆ ನಾಲ್ಕು ತಿಂಗಳಿನಿಂದ ಸಂಬಳ ಸಿಕ್ಕಿಲ್ಲ, ಸಂಬಳ ಸಿಗದೆಯೂ ಅವರ ಕೆಲಸವನ್ನು ನಿಯ್ಯತ್ತಿನಿಂದ ಮಾಡುತ್ತಾ ಬರುತ್ತಿದ್ದಾರೆ, 93 ಅಂಗಡಿಯವರು ಇನ್ನೂ ಕಲೆಕ್ಷನ್ ಕೊಟ್ಟಿಲ್ಲ, ದೊಡ್ಡ ಅಂಗಡಿಯವರೇ ಕಲೆಕ್ಷನ್ ಕೊಟ್ಟಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು. ನಾಲ್ಕು ತಿಂಗಳಿನಿಂದ ಸಂಬಳ ಸಿಗದಿದ್ದರೆ ಕೆಲಸ ಮಾಡುವುದಾದರೂ ಹೇಗೆ ಎಂದ ಅವರು ಒಕ್ಕೂಟದಲ್ಲಿ ಯಾವುದೇ ಫಂಡ್ ಇಲ್ಲ.
ಸ್ವಚ್ಛಾತಾಗಾರ ಮಹಿಳೆಯರೂ ಮನುಷ್ಯರೇ, ಅವರಿಗೂ ಗೌರವ ಇದೆ. ಅವರ ಕಷ್ಟ ಏನೆಂದು ನಾವೆಲ್ಲಾ ಅರಿತುಕೊಳ್ಳಬೇಕು, ಅವರ ಕೆಲಸವನ್ನು ಯಾರೂ ನಿಕೃಷ್ಟವಾಗಿ ಕಾಣಬೇಡಿ ಎಂದು ಅವರು ಮನವಿ ಮಾಡಿದರು.
ಗ್ರಾ.ಪಂ ಸದಸ್ಯ ರಮೇಶ್ ರೈ ಸಾಂತ್ಯ ಮಾತನಾಡಿ ಸ್ವಚ್ಛಾತಾಗಾರ ಮಹಿಳೆಯರದ್ದು ಕರ್ತವ್ಯವಲ್ಲ, ಅದನ್ನು ನಾವೆಲ್ಲಾ ಸೇವೆ ಎಂದು ತಿಳಿದು ಗೌರವ ಕೊಡಬೇಕು ಎಂದು ಹೇಳಿದರು.
ತ್ಯಾಜ್ಯ ವಿಲೇವಾರಿ ಶುಲ್ಕವನ್ನು ಕ್ಲಪ್ತ ಸಮಯದಲ್ಲಿ ಪಾವತಿಸಲು ವರ್ತಕರಿಗೆ ಗ್ರಾ.ಪಂನಿಂದ ಸೂಚನೆ ನೀಡಲಾಯಿತು.

ಗ್ರಾ.ಪಂ ಜೊತೆ ವರ್ತಕರು ಸಹಕಾರ ನೀಡಬೇಕು:
ಈಶ್ವರಮಂಗಲ ವರ್ತಕರ ಸಂಘದ ಅಧ್ಯಕ್ಷ ರಾಮ್‌ಪ್ರಸಾದ್ ಆಳ್ವ ಮಾತನಾಡಿ ಸ್ವಚ್ಛತೆಯ ವಿಷಯದಲ್ಲಿ ಕಲೆಕ್ಷನ್ ಕೊಡದ ಅಂಗಡಿಯವರಿಗೆ ಗ್ರಾ.ಪಂನಿಂದ ಏನಾದರೂ ಸೂಚನೆ ನೀಡುವ ಕೆಲಸ ಆಗಿದೆಯಾ ಎಂದು ಪ್ರಶ್ನಿಸಿದರು. ವರ್ತಕರು ಗ್ರಾ.ಪಂ ಜೊತೆ ಸಹಕಾರ ನೀಡಬೇಕು. ಸಹಕಾರ ನೀಡದ ಗ್ರಾಹಕರಿಗೆ ಲೈಸೆನ್ಸ್ ರಿನೀವಲ್ ಮಾಡುವಾಗ ಕ್ರಮ ತೆಗೆದುಕೊಳ್ಳಿ. ನಮ್ಮ ವರ್ತಕ ಸಂಘ ಗ್ರಾ.ಪಂ ಜೊತೆ ಸಹಕಾರ ನೀಡಲು ಸದಾ ಸಿದ್ದವಿದೆ ಎಂದು ಅವರು ಹೇಳಿದರು.

ಚರಂಡಿ ವ್ಯವಸ್ಥೆ ಸರಿಪಡಿಸಿ:
ವರ್ತಕ ನಾಗರಾಜ್ ಭಟ್ ಮಾತನಾಡಿ ಹಸಿಕಸ ವಿಲೇವಾರಿ ಸಮಸ್ಯೆ ಬಗ್ಗೆ ಹಾಗೂ ಚರಂಡಿ ಅವ್ಯವಸ್ಥೆ ಬಗ್ಗೆ ಮಾತನಾಡಿ ಆದಷ್ಟು ಬೇಗ ಚರಂಡಿ ವ್ಯವಸ್ಥೆ ಸರಿಪಡಿಸುವಂತೆ ಮನವಿ ಮಾಡಿದರು.

ವರ್ತಕ ರಾಜೇಶ್ ಪಂಚೋಡಿ ಮಾತನಾಡಿ ಗ್ರಾಮಸ್ಥರು ಸರಿಯಾಗಿ ಮನೆ ತೆರಿಗೆ, ಅಂಗಡಿ ತೆರಿಗೆ ಕಟ್ಟುವುದಿಲ್ಲ, ತ್ಯಾಜ್ಯ ವಿಲೇವಾರಿಯ ಕಲೆಕ್ಷನ್ ಕೊಡುವುದಿಲ್ಲ ಎಂದೆಲ್ಲಾ ನೀವು ಹೇಳುತ್ತೀರಿ. ಹಾಗಾದ್ರೆ ಗ್ರಾಮಸ್ಥರು ಗ್ರಾ.ಪಂಗೆ ಸಹಕಾರ ನೀಡುತ್ತಿಲ್ಲ ಎಂದಾಯ್ತು. ಯಾಕೆ ಈ ಬಗ್ಗೆ ಗ್ರಾ.ಪಂ ಸರಿಯಾಗಿ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು. ಗ್ರಾ.ಪಂ ಸರಿಯಾಗಿ ಕ್ರವ ವಹಿಸಿ ಮನವರಿಕೆ ಮಾಡಿದ್ದಲ್ಲಿ ಗ್ರಾಮಸ್ಥರು ಸಹಕಾರ ನೀಡಲಿದ್ದಾರೆ, ಈ ಬಗ್ಗೆ ತಾವು ಹೆಚ್ಚು ಮುತುವರ್ಜಿ ವಹಿಸಿ ಕೆಲಸ ಮಾಡಬೇಕು ಎಂದು ಗ್ರಾ.ಪಂಗೆ ಸಲಹೆ ನೀಡಿದರು.

ಸಭೆಯಲ್ಲಿ ಗ್ರಾ.ಪಂ ಸದಸ್ಯರು, ವರ್ತಕ ಸಂಘದ ಸದಸ್ಯರು, ವರ್ತಕರು ಉಪಸ್ಥಿತರಿದ್ದು ವಿವಿಧ ಅಭಿಪ್ರಾಯ, ಸಲಹೆ ಸೂಚನೆಗಳನ್ನು ನೀಡಿದರು.ಪಿಡಿಓ ವಸೀಂ ಗಂಧದ್ ಸ್ವಾಗತಿಸಿ ವಂದಿಸಿದರು. ಉಪಾಧ್ಯಕ್ಷ ರಾಮ ಮೇನಾಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾ.ಪಂ ಸಿಬ್ಬಂದಿ ಶೀನಪ್ಪ ಸಹಕರಿಸಿದರು.

LEAVE A REPLY

Please enter your comment!
Please enter your name here