ತುಳುನಾಡಿನ ಜಾನಪದ ಕ್ರೀಡೆ ಕಂಬಳ

0

ಹಚ್ಚ ಹಸುರಿನ ಪಶ್ಚಿಮಘಟ್ಟಗಳ ತಪ್ಪಲಿನಲ್ಲಿರುವ ತುಳುನಾಡಿನ ಪ್ರಮುಖವಾದ ಜಾನಪದ ಕ್ರೀಡೆ ಕಂಬಳ. ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜಾನಪದದೊಂದಿಗೆ ಹಾಸು ಹೊಕ್ಕಾಗಿದೆ ಈ ಕ್ರೀಡೆ. ದಷ್ಟಪುಷ್ಟವಾಗಿ ಸಾಕಿ, ಬೆಳೆಸಿದ ಕೋಣಗಳನ್ನು ಹಸನಾಗಿ ಹದ ಮಾಡಿದ ಕೆಸರು ಮಣ್ಣಿನ ಗದ್ದೆಯಲ್ಲಿ ಓಡಿಸುವ ಸ್ಪರ್ಧೆಯೇ ಕಂಬಳ. ಕರಾವಳಿಯ ರೈತಾಪಿ ಜನರು ಭತ್ತದ ಕೊಯಿಲಿನ ನಂತರ ತಮ್ಮ ಮನರಂಜನೆಗೋಸ್ಕರ ಏರ್ಪಡಿಸುತ್ತಿದ್ದ ಈ ಕ್ರೀಡೆ ಕಳೆದ ಅನೇಕ ವರ್ಷಗಳಿಂದ ವ್ಯವಸ್ಥಿತವಾಗಿ ಬೆಳೆಯುತ್ತಿದೆ. ಜೊತೆಗೆ ಸಾಕಷ್ಟು ಜನಪ್ರಿಯತೆಯನ್ನೂ ಪಡೆದುಕೊಂಡಿದೆ.

✍️ಗೌತಮ್‌ ಶೆಟ್ಟಿ ಪುತ್ತೂರು

ಕಂಬಳದ ಇತಿಹಾಸ:
ಕರಾವಳಿಯ ಜಾನಪದ ಕ್ರೀಡೆಯಾಗಿ ಜನರ ಮನಸ್ಸಿನಲ್ಲಿ ಹಾಸುಹೊಕ್ಕಾಗಿರುವ ಕಂಬಳವು ಇಂದು ನಿನ್ನೆ ಹುಟ್ಟಿಕೊಂಡ ಕ್ರೀಡೆಯಲ್ಲ. ಇದಕ್ಕೆ ನೂರಾರು ವರ್ಷಗಳ ಪ್ರಾಚೀನ ಇತಿಹಾಸವಿದೆ. ಉಡುಪಿ ತಾಲೂಕಿನ ಕೆಂಜೂರಿನ ಸಮೀಪದ ಕರ್ಜೆ ಎಂಬಲ್ಲಿ ದೊರಕಿದ ಆಳುಪ ರಾಣಿ ಬಲ್ಲಮಹಾದೇವಿಗೆ ಸಂಬಂಽಸಿದ ಕ್ರಿ.ಶ.1200 (ಶಕ ವರ್ಷ 1281)ರ ಶಾಸನದಲ್ಲಿ. “ಸುಗ್ಗಡಿಯ ಕಂಬಳಕ್ಕೆ ಎರಡು ಎತ್ತು ಕರೆತರಬಹುದು” ಎಂದು ಉಲ್ಲೇಖವಿದೆ. ಕ್ರಿ.ಶ.1402ರ ಬಾರಕೂರು ಶಾಸನದಲ್ಲಿ ಆ ಗದ್ದೆಯ ಕೆಳಗಿನ ಕಂಬಳ ಬಗ್ಗೆ’ ಎಂದು ಉಲ್ಲೇಖವಿದೆ. ಕ್ರಿ.ಶ.1421ರ ಬಾರಕೂರು ಶಾಸನದಲ್ಲಿ “ದೇವರು ಸಾವಂತನ ಕಂಬಳ ಗದ್ದೆಯ ಮೇಲೆ” ಎಂದು ಕಂಬಳಗದ್ದೆಯನ್ನು ಉಲ್ಲೇಖಿಸಲಾಗಿದೆ. ಕ್ರಿ.ಶ.1424ರ ಬಾರಕೂರು ಶಾಸನದಲ್ಲಿ “ಹೊತ್ತಾಗಿ ಮಾಡಿದ ಕಂಬಳ ಗದ್ದೆ” ಎಂದಿದೆ. ಕ್ರಿ.ಶ.1437ರ ಉಡುಪಿ ಶಾಸನವು “ಮೂಲವಾಗಿ ಕೊಡಬಾಳು ಕಂಬಳ ಗದ್ದೆ ಕೊಯಿಲ್ ಹದಿನಾರು” ಎಂದಿದೆ. ಕ್ರಿ.ಶ.1482ರ ಕೊಲ್ಲೂರು ಶಾಸನದಲ್ಲಿ “ಅವರಿಗೆ ಒಬ್ಬ ಬಾಳು ಕಂಬಳ ಗದ್ದೆ” ಎಂದು ಉಲ್ಲೇಖವಿದೆ. ಕ್ರಿ.ಶ.1521ರ ಬಾರಕೂರು ಶಾಸನದಲ್ಲಿ ಕಂಬಳ ಗದ್ದೆಯಲಿ ನಡುಹುಣಿ ಎಂದು ಉಲ್ಲೇಖಿಸಿದೆ. ಕ್ರಿ.ಶ.1676ರ ಸುಬ್ರಹ್ಮಣ್ಯದ ಕಲ್ಲುಮಾಣೆರು ಶಂಕರದೇವಿ ಬಲ್ಲಾಳ್ತಿಯ ಹೆಸರಿನಲ್ಲಿರುವ ಶಾಸನದಲ್ಲಿ ‘ನನ್ನ ಕಂಬಲ ಗದ್ದೆಯಿಂದ ನಡೆಸಬಹುದು’ ಎಂಬಲ್ಲಿ ಕಂಬಳಗದ್ದೆಯ ಉಲ್ಲೇಖವಿದೆ. ಹೀಗೆ ಕಂಬಳಕ್ಕೆ 800-900 ವರ್ಷಗಳ ಇತಿಹಾಸವಿದೆ ಎನ್ನುವುದು ಜಾನಪದ ಅಧ್ಯಯನಕಾರರ ಅಧ್ಯಯನಗಳಿಂದ ತಿಳಿದುಬಂದಿದೆ.

ಕಂಬಳದಲ್ಲಿರುವ ಪ್ರಕಾರಗಳು:
ಇಂದು ಕಂಬಳ ಕ್ರೀಡೆಯು ಬಹಳಷ್ಟು ಜನಪ್ರಿಯತೆ, ದೇಶ-ವಿದೇಶೀಯರ ಮನ್ನಣೆಯನ್ನು ಪಡೆಯುತ್ತಿದೆ. ತಲೆತಲಾಂತರದಿಂದ ನಡೆದುಕೊಂಡು ಬಂದ ಕಂಬಳವನ್ನು ನಾಲ್ಕು ವಿಧಗಳಲ್ಲಿ ವಿಂಗಡಿಸಲಾಗಿದೆ. ಅವುಗಳೆಂದರೆ (1) ಪೂಕರೆ ಕಂಬಳ. (2) ಬಾರೆ ಕಂಬಳ (3) ಅರಸು ಮತ್ತು ದೇವರ ಕಂಬಳ (4) ಆಧುನಿಕ ಕಂಬಳ. ಇವುಗಳಲ್ಲಿ ಆಧುನಿಕ ಕಂಬಳ ಹಾಗೂ ಅರಸು ಮತ್ತು ದೇವರ ಕಂಬಳಗಳಲ್ಲಿ ಕೋಣಗಳ ಓಟದ ಸ್ಪರ್ಧೆ ಇರುತ್ತದೆ. ಬಾರೆ ಕಂಬಳ, ಅರಸು ಮತ್ತು ದೇವರ ಕಂಬಳ ಹಾಗೂ ಪೂಕರೆ ಕಂಬಳಗಳಲ್ಲಿ ಸಾಂಪ್ರದಾಯಿಕ ಆಚರಣೆಗಳು ಮತ್ತು ದೈವ-ನಾಗನ ಆರಾಧನೆಗೆ ಮಹತ್ವ ಇದೆ.

ಪೂಕರೆ ಕಂಬಳ:
ಇದೊಂದು ವಿಶಿಷ್ಟವಾದ, ತುಳುವರ ಭಾವನಾತ್ಮಕವಾದ ಆಚರಣೆ. ಇದನ್ನು ಗದ್ದೆಯ ಮದುವೆ ಎಂದು ಕೂಡ ಕರೆಯುತ್ತಾರೆ. ಗದ್ದೆಯನ್ನು ಉತ್ತು ಬಿತ್ತನೆಗೆ ತಯಾರು ಮಾಡುವುದನ್ನು ಕಂಬಳ ಕೋರಿ ಎನ್ನುತ್ತಾರೆ. ಕಂಬಳ ಕೋರಿಯಂದು ಗದ್ದೆಯಲ್ಲಿ ಪೂಕರೆ ಕಂಬವನ್ನು ನೆಡುವ ಸಂಪ್ರದಾಯ ಪೂಕರೆ ಕಂಬಳಗಳಲ್ಲಿದೆ. ಸುಮಾರು ಮೂವತ್ತಡಿ ಎತ್ತರದ ಅಡಿಕೆಯ ಮರಕ್ಕೆ ರಂಧ್ರಗಳನ್ನು ಕೊರೆದು, ಅದಕ್ಕೆ ಅಡಿಕೆ ಮರದ ಸಲಾಕೆಗಳನ್ನು ಸಿಕ್ಕಿಸಿ, ಹನ್ನೆರಡು ತ್ರಿಕೋನಾಕಾರದ ನೆಲೆಗಳನ್ನು ಮಾಡಿ ಕಲಶವನ್ನು ಇಟ್ಟು, ಹಳದಿ ಹೂಗಳಿಂದ, ಕೇಪುಳ ಹೂ ಹಾಗೂ ಪಾದೆಯ ಹೂಗಳ ಮಾಲೆಯಿಂದ ಅಲಂಕರಿಸಿದ ಕಂಬವನ್ನು ‘ಪೂಕರೆ ಕಂಬ’ ಎನ್ನುತ್ತಾರೆ. ಪೂಕರೆ ಹಾಕುವುದನ್ನು ‘ಕಂಡೊದ ಮದಿಮೆ’ ಅಂದರೆ ಗದ್ದೆಯ ಮದುವೆ ಎನ್ನುತ್ತಾರೆ. ಇಲ್ಲಿ ಸೇಡಿಯಿಂದ ಸಿಂಗರಿಸಿದ ಗದ್ದೆ ಮದುಮಗಳಾದರೆ, ಪೂಕರೆ ಕಂಬವನ್ನು ಮದುಮಗ ಎಂದು ಪರಿಗಣಿಸುತ್ತಾರೆ. ಪೂಕರೆಯ ಕೆಳಗಿನ ಅಂತಸ್ತನ್ನು ‘ತೊಟ್ಟಿಲಗೆಣೆ’ ಎಂದು ಕರೆಯುತ್ತಾರೆ. ಪೂಕರೆ ಕಂಬವನ್ನು ನಾಗಧ್ವಜ ಎನ್ನುತ್ತಾರೆ.

ಬಾರೆ ಕಂಬಳ (ಬಾಳೆ ಕಂಬಳ):

ಈ ವಿಧದಲ್ಲಿ ಗದ್ದೆಯಲ್ಲಿ ಪೂಕರೆ ಕಂಬಕ್ಕೆ ಬದಲಾಗಿ ಕಂಬಳ ಗದ್ದೆಯ ನಡುವೆ ಒಂದು ಬಾಳೆಗಿಡವನ್ನು ನೆಡುತ್ತಾರೆ. ಪೂಕರೆ ಕಂಬಳ ಅಥವಾ ದೇವರ ಮತ್ತು ಅರಸು ಕಂಬಳದಂತೆ ಇದರಲ್ಲಿ ವೈಭವದ ಆಚರಣೆಗಳಿಲ್ಲ. ಬಹಳ ಸರಳವಾದ ಆಚರಣೆ ಇದು. ನಿಶ್ಚಿತ ದಿನದಂದು ಮುಗೇರ ಅಥವಾ ನಲಿಕೆ ಸಮುದಾಯಕ್ಕೆ ಸೇರಿದವರು ಬಂದು, ಹೊಂಡ ತೋಡಿ ಹೊಂಡಕ್ಕೆ ಹಾಲು ಹಾಕಿ ಬಾಳೆ ಗಿಡ ನೆಡುತ್ತಾರೆ. ಒಂದು ನಿಶ್ಚಿತ ಸಮಯದ ನಂತರ ಬಾಳೆಗಿಡವನ್ನು ತೆಗೆಯುತ್ತಾರೆ.

ಅರಸು ಮತ್ತು ದೇವರ ಕಂಬಳ:
ಇವುಗಳಲ್ಲಿ ಪೂಕರೆ ಕಂಬಳಗಳ ಎಲ್ಲ ಆಚರಣೆಗಳು ಇದರಲ್ಲಿ ಇರುತ್ತವೆ. ಪೂಕರೆ ಕಂಬಳಗಳಲ್ಲಿ ಕೋಣಗಳ ಓಟದ ಸ್ಪರ್ಧೆ ಇರುವುದಿಲ್ಲ. ಅರಸು ಮತ್ತು ದೇವರ ಕಂಬಳಗಳಲ್ಲಿ ವೈಭವದ ಧಾರ್ಮಿಕ ಆಚರಣೆಗಳೊಂದಿಗೆ ಅದ್ದೂರಿಯ ಕೋಣಗಳ ಓಟದ ಸ್ಪರ್ಧೆ ಕೂಡ ಇರುತ್ತದೆ. ಇದು ಧಾರ್ಮಿಕವಾಗಿ ಮತ್ತು ಸ್ಪರ್ಧಾತ್ಮಕವಾಗಿ ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿರುವ ಕಂಬಳ.

ಆಧುನಿಕ ಕಂಬಳ:
ಇದರಲ್ಲಿ ಇತರ ಕಂಬಳಗಳಂತೆ ಯಾವುದೇ ಆರಾಧನೆ ಅಥವಾ ಆಚರಣೆಗಳು ಇರುವುದಿಲ್ಲ. ಆಧುನಿಕ ಕಂಬಳಗಳು ಇಂಥದ್ದೇ ದಿನ ನಡೆಯಬೇಕು ಇತ್ಯಾದಿಯಾದ ಕಾಲದ ನಿರ್ಬಂಧವೂ ಇಲ್ಲ. ಈ ಕಂಬಳಗಳು ನಿಜವಾಗಿ ಗದ್ದೆಯಲ್ಲಿ ಇರುವುದಿಲ್ಲ. ಕೋಣಗಳ ಓಟದ ಸ್ಪರ್ಧೆಗಾಗಿಯೇ ಕೃತಕವಾಗಿ ತಯಾರಿಸಿದ ಕರೆ(ಟ್ರ್ಯಾಕ್)ನಲ್ಲಿ ನಡೆಯುತ್ತದೆ. ಕೋಣಗಳ ನಡುವಿನ ಸ್ಪರ್ಧೆಯೇ ಇಲ್ಲಿ ಮುಖ್ಯ. ಮನೋರಂಜನೆಯ ಮುಖ್ಯ ಉದ್ದೇಶದಿಂದ ಇವುಗಳನ್ನು ನಡೆಸಲಾಗುತ್ತದೆ. ಇದರಲ್ಲಿ ಗೆದ್ದ ಕೋಣಗಳಿಗೆ ಬಂಗಾರದ ಪದಕ, ಪ್ರಶಸ್ತಿಗಳನ್ನು ಕೊಡುತ್ತಾರೆ. ಕಂಬಳ ಕೂಟಗಳ ಸ್ಪರ್ಧೆಯಲ್ಲಿ ಜಿಲ್ಲೆಯ ಹಲವೆಡೆಯ ಕಂಬಳ ಕೋಣಗಳನ್ನು ಸಾಕುತ್ತಿರುವ ಕೋಣಗಳ ಮಾಲಕರು ಪಾಲ್ಗೊಳ್ಳುತ್ತಾರೆ. ಅತ್ಯಂತ ಅಕ್ಕರೆ, ಪ್ರೀತಿಯಿಂದ ಮಕ್ಕಳಂತೆ ಸಾಕಿದ ಕೋಣಗಳನ್ನು ಕಂಬಳ ಕೂಟಕ್ಕೆ ಸ್ಪರ್ಧೆಗೆ ಕರೆತರುತ್ತಾರೆ. ಕಂಬಳದಲ್ಲಿ ಕೋಣಗಳನ್ನು ಓಡಿಸುವುದು, ಪದಕ ಗೆಲ್ಲುವುದು ಕಂಬಳ ಕೋಣಗಳ ಯಜಮಾನರಿಗೆ, ಕೋಣಗಳನ್ನು ಓಡಿಸುವವರಿಗೆ ಪ್ರತಿಷ್ಠೆಯ ವಿಚಾರವಾಗಿದೆ.

ಕಂಬಳದ ಕರೆ:
ಹಿಂದಿನ ಕಾಲದಲ್ಲಿ ಭತ್ತದ ಕಟಾವು ನಡೆದ ನಂತರ ಖಾಲಿ ಗದ್ದೆ ಅಥವಾ ಬಳಸದೇ ಬಿಟ್ಟ ಗದ್ದೆಗಳಲ್ಲಿ ಕಂಬಳವನ್ನು ಬಹುವಾಗಿ ಏರ್ಪಡಿಸಲಾಗುತ್ತಿತ್ತು. ಆದರೆ ಇಂದು ಕಂಬಳಕ್ಕಾಗಿಯೇ ವಿಶೇಷವಾಗಿ ಕಂಬಳದ ಗದ್ದೆಗಳನ್ನು ಶಾಶ್ವತವಾಗಿ ನಿರ್ಮಿಸಲಾಗಿರುತ್ತದೆ. ಕರೆಯ ಮಧ್ಯಭಾಗದಲ್ಲಿ ಉದ್ದಕ್ಕೆ ದಂಡೆಯನ್ನು ನಿರ್ಮಿಸಿ ಏಕಕಾಲದಲ್ಲಿ ಎರಡು ಜೊತೆ ಕೋಣಗಳನ್ನು ಓಡಿಸುವ ವ್ಯವಸ್ಥೆ ಇರುತ್ತದೆ. ಹದ ಮಾಡಲಾದ ಗದ್ದೆಯ ಮಣ್ಣಿಗೆ ಅದು ಜಿಗುಟಾಗದಿರುವಂತೆ ಸೂಕ್ತ ಪ್ರಮಾಣದಲ್ಲಿ ಮರಳನ್ನು ಸೇರಿಸಿ ಅದರ ಮೇಲೆ ನಿಗದಿತ ಪ್ರಮಾಣದ ನೀರನ್ನು ತುಂಬಿಸಿ ಸಿದ್ಧಪಡಿಸಿದ ಜಾಗವೇ ಕಂಬಳದ ಕರೆ. ಸಾಮಾನ್ಯವಾಗಿ ಈ ಕರೆಯು ಭೂಮಿಯ ಮಟ್ಟಕ್ಕಿಂತ 4 ರಿಂದ 5 ಅಡಿಗಳಷ್ಟು ಆಳದಲ್ಲಿದ್ದು, ಕಂಬಳದ ಓಟ ಪ್ರಾರಂಭವಾಗುವ ಪ್ರದೇಶ ಇಳಿಜಾರು ಮಾಡಿ ಕೋಣಗಳನ್ನು ಸಲೀಸಾಗಿ ಅಂಕಣದೊಳಗೆ ಇಳಿಸಲು ಸಾಧ್ಯವಾಗುವಂತೆ ನಿರ್ಮಿಸಲಾಗಿರುತ್ತದೆ. ಕೋಣಗಳು ಆರಂಭಿಕ ಹಂತದಲ್ಲಿ ನಿಲ್ಲುವ ಈ ಜಾಗವನ್ನು ಗಂತ್ ಎಂದು ಕರೆಯಲಾಗುತ್ತದೆ. ಕಂಬಳದ ಆರಂಭದ ಮತ್ತು ಅಂತ್ಯದ ಗೆರೆಗಳನ್ನು, ಮಾವಿನ ತೋರಣವನ್ನು ಕಟ್ಟುವ ಮೂಲಕ ನಿರ್ಮಿಸಲಾಗಿರುತ್ತದೆ. ಕಂಬಳ ಅಂಕಣ ಮುಕ್ತಾಯದ ಭಾಗವನ್ನು ಸ್ವಲ್ಪ ಏರು ರೀತಿಯಲ್ಲಿ ನಿರ್ಮಿಸುತ್ತಿದ್ದು, ಈ ಪ್ರದೇಶವನ್ನು ಮಂಜೊಟ್ಟಿ ಎಂದು ಕರೆಯುತ್ತಾರೆ. ಕೋಣಗಳ ಯಜಮಾನರ ಹೆಸರುಗಳನ್ನು ಧ್ವನಿವರ್ಧಕದ ಮೂಲಕ ಹೇಳಿದಂತೆ ಕೋಣಗಳು ಸರದಿ ಪ್ರಕಾರ ಓಡುತ್ತವೆ. ಅತ್ಯಂತ ವೇಗವಾಗಿ ಓಡಿಕೊಂಡು ಬರುವ ಬಲಿಷ್ಟ ಕೋಣಗಳು ಎತ್ತರಪ್ರದೇಶವಾದ ಮಂಜೊಟ್ಟಿ ತಲುಪುತ್ತಿದ್ದಂತೆ ವೇಗ ನಿಧಾನ ಮಾಡುತ್ತವೆ. ಇಲ್ಲಿ ಬಲಿಷ್ಠ ಯುವಕರು ನಿಂತಿದ್ದು ಆ ಕೋಣಗಳನ್ನು ಹಿಡಿದು ನಿಯಂತ್ರಿಸುತ್ತಾರೆ. ಸ್ಪರ್ಧೆಯಲ್ಲಿ ನಿರ್ಣಾಯಕರು ಕೋಣಗಳ ಓಟದ ನಿಯಮಗಳಿಗನುಗುಣವಾಗಿ ತೀರ್ಪು ನೀಡುತ್ತಾರೆ. ಕಂಬಳದ ಗದ್ದೆಯಲ್ಲಿ ಎರಡು ವಿಧಗಳಿದ್ದು ಅವುಗಳೆಂದರೆ ಒಂಟಿ ಗದ್ದೆ ಕಂಬಳ ಮತ್ತು ಜೋಡಿ ಗದ್ದೆ ಕಂಬಳ. ಕಂಬಳದಲ್ಲಿ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ನಡೆಯುತ್ತದೆ.

ಓಟದ ಸ್ಪರ್ಧೆಯ ವಿಭಾಗಗಳು:
ಕೋಣಗಳ ಓಟದ ಸ್ಪರ್ಧೆಯಲ್ಲಿ ಸೀನಿಯರ್ ಮತ್ತು ಜೂನಿಯರ್ ಎಂದು ವಯಸ್ಸನ್ನು ಆಧರಿಸಿ ಎರಡು ವಿಭಾಗಗಳಿರುತ್ತವೆ. ಕೋಣಗಳ ವಯಸ್ಸನ್ನು ಹಲ್ಲುಗಳ ಆಧಾರದಲ್ಲಿ ನಿರ್ಧಾರ ಮಾಡುತ್ತಾರೆ. ಕೋಣಗಳ ಬಾಯಿಯಲ್ಲಿ ಉದುರಿದ ಹಲ್ಲುಗಳನ್ನು ಎಣಿಸುತ್ತಾರೆ. ಈ ಮೂಲಕ ಜೂನಿಯರ್ ಮತ್ತು ಸೀನಿಯರ್ ಸೇರಿ ಒಟ್ಟು 6 ವಿಭಾಗಗಳ ಸ್ಪರ್ಧೆ ನಡೆಯುತ್ತದೆ ಅವೆಂದರೆ ಕನೆಹಲಗೆ, ಅಡ್ಡಹಲಗೆ, ನೇಗಿಲು ಕಿರಿಯ, ನೇಗಿಲು ಹಿರಿಯ, ಹಗ್ಗ ಕಿರಿಯ ಮತ್ತು ಹಗ್ಗ ಹಿರಿಯ.

ಪೂರ್ವಸಿದ್ದತೆಗಳು:
ಕಂಬಳ ಒಂದೆರಡು ದಿನ ನಡೆಯುವ ಮನರಂಜನಾ ಕ್ರೀಡೆ ಆದರೂ ಅದಕ್ಕೆ ನಡೆಯುವ ತಯಾರಿ ಬಹಳಷ್ಟು ಪ್ರಮುಖದ್ದು. ಕಂಬಳಕ್ಕೆ ಹಲವು ದಿನಗಳ ಮೊದಲೇ ಗದ್ದೆಯ ತಯಾರಿ, ಚಪ್ಪರ, ವೇದಿಕೆಯ ತಯಾರಿ ನಡೆಯುತ್ತದೆ. ನಿಗದಿತ ದಿನದಂದು ವಿಧ್ಯುಕ್ತ ಉದ್ಘಾಟನೆಯೊಂದಿಗೆ ಕಂಬಳ ಆರಂಭವಾಗುತ್ತದೆ. ಇತ್ತೀಚಿನ ಕಂಬಳಗಳಲ್ಲಿ ವಿವಿಧ ವಿಭಾಗಗಳಲ್ಲಿ ಇನ್ನೂರಕ್ಕೂ ಹೆಚ್ಚಿನ ಜೋಡಿಗಳ ಭಾಗವಹಿಸುವಿಕೆ ಇರುತ್ತದೆ. ಲೀಗ್, ಸೆಮಿಫೈನಲ್, ಫೈನಲ್ ಓಟಗಳು ನಡೆಯುತ್ತವೆ. ಜೋಡುಕರೆ ಕಂಬಳದಲ್ಲಿ ಏಕ ಕಾಲಕ್ಕೆ ಎರಡು ಜೊತೆಗಳನ್ನು ಬಿಟ್ಟು ವಿಜಯಿಯಾದವುಗಳ ಮಧ್ಯೆ ಮತ್ತೆ ಸ್ಪರ್ಧೆ ಏರ್ಪಡಿಸಿ ಅಂತಿಮ ವಿಜೇತ ಜೋಡಿಗಳನ್ನು ನಿರ್ಧರಿಸಲಾಗುತ್ತದೆ. ಕಂಬಳದ ಕೋಣಗಳನ್ನು ಲಾರಿಯಿಂದ ಇಳಿಸಿ ಕಣದ ಬಳಿ ತರುವಾಗ ಅಥವಾ ಸ್ಪರ್ಧೆಯಲ್ಲಿ ಓಡಿಸುವ ಮೊದಲು ಭರ್ಜರಿ ವಾಲಗ, ಕಹಳೆ, ಡೋಲುಗಳ ಗೌಜು ನಡೆಯುವುದೂ ಇದೆ. ಕಂಬಳದ ಗದ್ದೆಯ ಇಕ್ಕೆಲಗಳಲ್ಲೂ ಕೈಯಲ್ಲಿ ನಾಗರ ಬೆತ್ತವನ್ನು ಹಿಡಿದು ತಿರುಗಾಡುತ್ತಿರುವ ಕೋಣಗಳ ಯಜಮಾನರುಗಳು, ಕೋಣಗಳನ್ನು ಓಡಿಸುವ ಕಟ್ಟುಮಸ್ತಾದ ಕಟ್ಟಾಳುಗಳು, ಅವರೊಡನೆ ಕೋಣಗಳ ಆರೈಕೆ ಮಾಡುವ ಹಾಗೂ ನೋಡಿಕೊಳ್ಳುವ ಸಹಾಯಕರು, ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಪ್ರೇಕ್ಷಕರು, ಧ್ವನಿವರ್ಧಕಗಳ ಮೂಲಕ ವಿವರಣೆ ಕೊಡುವ ಉದ್ಘೋಷಕರು ಇವೆಲ್ಲವನ್ನೂ ನೋಡುವಾಗ ಒಂದು ಸಂಭ್ರಮದ ವಾತಾವರಣ ನಿರ್ಮಾಣವಾಗಿರುತ್ತದೆ. ಕಂಬಳದ ಅಂತಿಮ ಸುತ್ತಿನ ಓಟ ಮುಗಿದು -ಲಿತಾಂಶ ತಯಾರಾಗುತ್ತಿದ್ದಂತೆಯೇ ವೇದಿಕೆಯ ಮೇಲೆ ಬಹುಮಾನ ವಿತರಣೆಯ ಸಮಾರಂಭ ಆರಂಭವಾಗುತ್ತದೆ. ಮುಖ್ಯ ಅತಿಥಿಗಳಿಂದ ವಿಜೇತ ಕೋಣಗಳ ಒಡೆಯನಿಗೆ ಶಾಲು ಹೊದೆಸಿ ಚಿನ್ನದ ಪದಕ ನೀಡಲಾಗುತ್ತದೆ. ಮೊದಲನೆಯ ಮತ್ತು ಎರಡನೆಯ ಸ್ಥಾನ ಪಡೆದ ಜೋಡಿಯ ಯಜಮಾನರಿಗೆ ಬಹುಮಾನಗಳಲ್ಲದೆ, ಕೋಣಗಳ ಜೋಡಿಗಳನ್ನು ಓಡಿಸಿದವರಿಗೂ ಬಹುಮಾನ ನೀಡಲಾಗುತ್ತದೆ.

ಸ್ಪರ್ಧೆ ನಡೆಯುವುದು ಹೀಗೆ:

ಕಂಬಳ ಗದ್ದೆಯ ಆರಂಭದ ಕೊನೆಯಲ್ಲಿ ಕೋಣದ ಜೋಡಿಯನ್ನು ಕರೆಗಿಳಿಸಿ ಅವುಗಳನ್ನು ಆರಂಭದ ತೋರಣದ ಕೆಳಗೆ ನಿಲ್ಲಿಸಲಾಗುತ್ತದೆ. ಅವುಗಳನ್ನು ನಿಲ್ಲಿಸುವುದೇ ಒಂದು ಕಸರತ್ತು. ಕೋಣಗಳನ್ನು ಓಡಿಸುವಾತನೂ ಆತನ ಸಹಾಯಕರೂ ಸೇರಿ ಅವುಗಳನ್ನು ಗದ್ದೆಗಿಳಿಸಿ, ಕೋಣಗಳು ಹಠಮಾರಿಯಾಗಿದ್ದಲ್ಲಿ ಅವುಗಳನ್ನು ಮಣಿಸಿ, ಅವುಗಳೊಂದಿಗೇ ಕೆಲವು ಸುತ್ತು ಕೆಸರಲ್ಲಿ ತಿರುಗಿ ಏಗಾಡಿ ಅಂತೂ ಇಂತೂ ನಿಂತವು ಎನ್ನುವಾಗ ಪಕ್ಕದ ಕೋಣವೋ ಅಥವಾ ಜೋಡುಕರೆಯಾಗಿದ್ದಲ್ಲಿ ಆ ಕಡೆಯ ಜೋಡಿಯೋ ಮುಖ ಸಿಂಡರಿಸಿ ಕೊಸರಾಡಿ ಎಲ್ಲೋ ತಿರುಗಿರುತ್ತದೆ. ಎಲ್ಲವೂ ತಯಾರಾದರೆ ದಡದ ಮೇಲೆ ನಿಂತಾತ ಕೆಂಪು ಬಾವುಟ ಎತ್ತಿ ಓಟದ ಆರಂಭ ಸೂಚಿಸುತ್ತಲೇ ಛಟೀರ್ ಎಂದು ಬೆನ್ನಿಗೆ ಏಟು ಬಿದ್ದ ಕೋಣಗಳು ಓಡಲಾರಂಭಿಸುತ್ತವೆ. ಪ್ರೇಕ್ಷಕರ ಜೈಕಾರ, ಹುರಿದುಂಬಿಸುವಿಕೆಯೊಂದಿಗೆ, ಓಡಿಸುವಾತನ ಬೊಬ್ಬೆಯೂ ಸೇರಿ ಕೆಲವೇ ಕ್ಷಣಗಳಲ್ಲಿ ಕೋಣಗಳೂ ಓಡಿಸುವಾತನೂ ಮಂಜೊಟ್ಟಿಯನ್ನೇರುತ್ತಿದ್ದಂತೆಯೇ ಮೊದಲೇ ಈ ತುದಿಯಲ್ಲಿ ತಯಾರಾಗಿ ನಿಂತಿದ್ದ ಇನ್ನು ಕೆಲವು ಸಹಾಯಕರು ಓಟ ಮುಗಿಸಿದ ಕೋಣಗಳನ್ನು ಹಿಡಿದು ನಿಲ್ಲಿಸುತ್ತಾರೆ. ಅದೇ ಸಮಯಕ್ಕೆ ನಿರ್ಣಾಯಕರಿಂದ ಓಟದ ಫಲಿತಾಂಶ ಪ್ರಕಟವಾಗುತ್ತದೆ, ಇನ್ನೊಬ್ಬರಿಂದ ದಾಖಲೂ ಆಗುತ್ತದೆ. ಈಗಿನ ದಿನಗಳಲ್ಲಿ ಮುಕ್ತಾಯದ ಗೆರೆಯಲ್ಲಿ ಕ್ಯಾಮೆರಾಗಳನ್ನು ಅಳವಡಿಸಿದ ಗಣಕ ಯಂತ್ರಗಳನ್ನಿರಿಸಿ ಫಲಿತಾಂಶ ಹಾಗೂ ಸಮಯವನ್ನು ನಿಖರವಾಗಿ ಅಳೆಯಲಾಗುತ್ತದೆ. ಈ ರೀತಿ ಎಲ್ಲಾ ಜೋಡಿಗಳ ಪಂದ್ಯಗಳೂ ಮುಗಿದು ವಿವಿಧ ವಿಭಾಗಗಳಲ್ಲಿನ ಅಂತಿಮ ಫಲಿತಾಂಶ ಪ್ರಕಟವಾಗುವುದು ಎರಡನೆಯ ದಿನ ಮಧ್ಯಾಹ್ನವೋ ಸಂಜೆಯೋ ಆದ ಮೇಲೆಯೇ. ಹಾಗಾಗಿ ಕಂಬಳಗಳು ಆರಂಭದ ದಿನ ಬೆಳಗ್ಗಿನಿಂದ ರಾತ್ರಿ ಮುಗಿದು ಮಾರನೆಯ ದಿನದವರೆಗೂ ನಡೆಯುತ್ತವೆ. ಇದನ್ನು ಕಣ್ತುಂಬಿಕೊಳ್ಳಲು ಸಾವಿರಾರು ಮಂದಿ ಸೇರುತ್ತಾರೆ.

ಬಹುಮಾನಗಳು:
ಈ ರೀತಿ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಸಿ ವಿಜೇತರಾದ ಕೋಣಗಳ ಜೋಡಿಗಳಿಗೆ ಬಹುಮಾನ ನೀಡಲಾಗುತ್ತದೆ. ಸಾಮಾನ್ಯವಾಗಿ ಚಿನ್ನದ ಪದಕಗಳನ್ನು (2 ಪವನು, 1 ಪವನು ಇತ್ಯಾದಿ) ವಿಜೇತ ಜೋಡಿಯ ಯಜಮಾನನಿಗೆ ನೀಡುವುದು ವಾಡಿಕೆ. ಅಂತೆಯೇ ವಿಜಯೀ ಕೋಣಗಳ ಜೋಡಿಯನ್ನು ಓಡಿಸಿದಾತನಿಗೂ ಬಹುಮಾನ ನೀಡುತ್ತಾರೆ. ಹೆಚ್ಚಾಗಿ ಜೋಡು ಕೆರೆ ಕಂಬಳದ ಗದ್ದೆಗಳಿಗೆ ಜಾನಪದ ಪುರಾಣದಲ್ಲಿ ಸಿಗುವ ಅವಳಿ ಜವಳಿ ಅಥವಾ ಜೋಡುನುಡಿ ಪದಗಳನ್ನಿಟ್ಟು ಗುರುತಿಸುತ್ತಾರೆ.

LEAVE A REPLY

Please enter your comment!
Please enter your name here