ಬೆಂಗಳೂರಿನಲ್ಲಿಯೂ ಸುದ್ದಿ ಮಾಡುತ್ತಿದೆ ತುಳುನಾಡಿನ ಪ್ರಾಚೀನ ಕಲೆ ಕಂಬಳ-ರಾಜ-ಮಹಾರಾಜ ಕಂಬಳದ ಕನಸು ಹುಟ್ಟಿದ್ದು ಹೇಗೆ? ಕಿರು ಪರಿಚಯ ಇಲ್ಲಿದೆ

0

ಬರಹ: ದಾಮೋದರ ದೊಂಡೋಲೆ

ತುಳುನಾಡಿನ ಪ್ರಾಚೀನ ಕಲೆಯಾಗಿರುವ ಕಂಬಳ ಕೂಟ ರಾಜ್ಯ ರಾಜಧಾನಿ ಬೆಂಗಳೂರುನಲ್ಲಿಯೂ ಸುದ್ದಿಯಾಗುತ್ತಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಪ್ರಥಮ ಬಾರಿ ನಡೆಯುತ್ತಿರುವ ರಾಜ-ಮಹಾರಾಜ ಕಂಬಳ ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಸದ್ದು ಮಾಡುತ್ತಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಭಾಗದಲ್ಲಿ ಸಾಂಪ್ರದಾಯಿಕವಾಗಿ ಧಾರ್ಮಿಕ ಆಚರಣೆಯೊಂದಿಗೆ ನಡೆಯುವ ಕಂಬಳ ಕೂಟ ನವೆಂಬರ್ 25 ಮತ್ತು 26ರಂದು ಬೆಂಗಳೂರಿನಲ್ಲಿ ವಿಜೃಂಭಿಸಲಿದೆ. ಹತ್ತಾರು ಸೆಲಿಬ್ರೆಟಿಗಳು, ಗಣ್ಯಾತಿಗಣ್ಯ ಜನಪ್ರತಿನಿಧಿಗಳು, ರಾಜಕಾರಣಿಗಳು, ಖ್ಯಾತ ಉದ್ಯಮಿಗಳು ಸೇರಿದಂತೆ ಲಕ್ಷಾಂತರ ಮಂದಿಯ ಸಮ್ಮುಖದಲ್ಲಿ ನಡೆಯುವ ಬೆಂಗಳೂರು ಕಂಬಳ ನಮ್ಮ ಕಂಬಳದ ಯಶಸ್ಸಿಗಾಗಿ ಅಹರ್ನಿಶಿ ಪ್ರಯತ್ನ ನಡೆಯುತ್ತಿದೆ. ಕಂಬಳ ಪ್ರೇಮಿಗಳ ಚಿತ್ತ ಇದೀಗ ರಾಜಧಾನಿಯತ್ತ ನೆಟ್ಟಿದ್ದರೆ ಬೆಂಗಳೂರಿನಲ್ಲಿರುವ ಕನ್ನಡಿಗರು ಕಾಂತಾರದಲ್ಲಿ ತೋರಿಸಿರುವ ಕಂಬಳವನ್ನು ನಾವೂ ನೋಡ್ಬೇಕು ಎಂಬ ತುಡಿತದಲ್ಲಿದ್ದಾರೆ. .


ಬೆಂಗಳೂರು ಕಂಬಳದ ಕಾನ್ಸೆಪ್ಟ್ ಹುಟ್ಟಿದ್ದು ಹೇಗೆ?:
ಬೆಂಗಳೂರಿನಲ್ಲಿ ಕಂಬಳ ಮಾಡಬೇಕು ಎಂಬ ಕನಸು ಹಲವು ತುಳುವರಲ್ಲಿತ್ತು. ಹಲವಾರು ಬಾರಿ ಈ ಬಗ್ಗೆ ಅಲ್ಲಲ್ಲಿ ಚರ್ಚೆಗಳೂ ಆಗಿತ್ತು. ಆದರೆ ಆ ಕನಸು ನನಸಾಗಿಸುವ ಯೋಜನೆ ರೂಪುಗೊಂಡಿರಲಿಲ್ಲ. ಜೊತೆಗೆ ಸಂಪನ್ಮೂಲ ಕ್ರೋಢೀಕರಣದ ಬಗ್ಗೆಯೂ ಅನುಮಾನಗಳಿತ್ತು. ಆದರೆ ಈ ಬಾರಿ ಪುತ್ತೂರಿನ ಶಾಸಕರಾಗಿ ಚುನಾಯಿತರಾದ ಉಪ್ಪಿನಂಗಡಿ ವಿಜಯ-ವಿಕ್ರಮ ಜೋಡುಕರೆ ಕಂಬಳದ ಸಾರಥಿ, ಕಂಬಳಕ್ಕೆ ಕಂಟಕ ಬಂದಾಗ ಸುಪ್ರೀಂಕೋರ್ಟ್‌ವರೆಗೂ ಕಾನೂನು ಹೋರಾಟ ನಡೆಸಿದ್ದ ಅಶೋಕ್ ಕುಮಾರ್ ರೈಯವರು ಅಽವೇಶನದಲ್ಲಿ ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕು, ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ತುಳುವನ್ನು ಘೋಷಿಸಬೇಕು ಎಂದು ತುಳುವಿನಲ್ಲೇ ಆಗ್ರಹಿಸಿದರು. ಅಲ್ಲದೆ, ಅಽವೇಶನದಲ್ಲಿ ತುಳು ಮಾತನಾಡಿ ಕರಾವಳಿಯ ಜನರಿಂದ ಮೆಚ್ಚುಗೆಗೆ ಪಾತ್ರವಾಗಿದ್ದರು. ಅಶೋಕ್ ಕುಮಾರ್ ರೈಯವರ ತುಳುವಿನ ಮೇಲಿನ ಪ್ರೀತಿಯನ್ನು ಕೊಂಡಾಡಿದ ತುಳುಕೂಟ ಸಂಘಟನೆಯವರು ಬೆಂಗಳೂರಿನಲ್ಲಿ ಅವರಿಗೆ ಸನ್ಮಾನ ಆಯೋಜಿಸಿದ್ದರು. ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಬೆಂಗಳೂರಿನ ತುಳುಕೂಟದವರು ಕರ್ನಾಟಕದ ಕರಾವಳಿಯ ಕಂಬಳವನ್ನು ಬೆಂಗಳೂರಿನಲ್ಲಿಯೂ ಮಾಡುವ ಬಗ್ಗೆ ಅಶೋಕ್ ರೈಯವರಲ್ಲಿ ಪ್ರಸ್ತಾವನೆ ಇಟ್ಟಿದ್ದರು. ಪ್ರಾಣಿದಯಾ ಸಂಘದವರ ಜತೆ ಹೋರಾಟ ಮಾಡಿಕೊಂಡು ರಾಷ್ಟ್ರಪತಿ ಅಂಗಳದಿಂದಲೇ ಕಂಬಳಕ್ಕೆ ಗ್ರೀನ್ ಸಿಗ್ನಲ್ ತರುವಂತೆ ಮಾಡಿದ್ದ ಅಶೋಕ್ ರೈಯವರು ತುಳುಕೂಟದವರ ಕನಸು ನನಸು ಮಾಡಲು ಮುಂದಾದರು. ಬೆಂಗಳೂರಿನಲ್ಲಿಯೂ ಕಂಬಳ ಮಾಡುವ ಎಂದು ಹೇಳಿದರು. ಮುಂದೆ ಪ್ರತಿ ಹೆಜ್ಜೆಗೂ ವೇಗ ಸಿಕ್ಕಿತು. ಅಶೋಕ್ ಕುಮಾರ್ ರೈ ರಾಜಧಾನಿಯಲ್ಲಿ ನಮ್ಮ ರಾಜ ಕೋಣಗಳ ಓಟ ನಡೆಸಲೇಬೇಕೆಂದು ಪಣ ತೊಟ್ಟು ಕಣಕ್ಕಿಳಿದರು. ಅವರಿಗೆ ಹಲವು ಪ್ರಮುಖರು ಸಾಥ್ ನೀಡಿದರು.


ಅರಮನೆ ಮೈದಾನದಲ್ಲಿ ನಾಗ ಪ್ರತ್ಯಕ್ಷ- ನಾಗಾರಾಧನೆಯ ನಂತರ ಪವಾಡಗಳ ಸೃಷ್ಠಿ:
ಕಂಬಳದ ಕೆಲಸ ಮಾಡುವ ಸಂದರ್ಭ ಅರಮನೆ ಮೈದಾನದಲ್ಲಿ ನಾಗ ಸಂಚಾರವಿತ್ತು. ಕೆಲಸ ನಿರತರಿಗೆ ಅಂದು ಕಂಡುಬಂದಿತ್ತು. ಇಷ್ಟೇ ಅಲ್ಲದೇ, ಕಂಬಳದ ಕರೆ ಮಾಡುವ ಸ್ಥಳದ ಪಕ್ಕದಲ್ಲೇ ನಾಗನ ಹುತ್ತವೂ ಕಾಣ ಸಿಕ್ಕಿತ್ತು. ಇದಾದ ನಂತರ ಪ್ರಮುಖರು ಸೇರಿ ನಾಗಾರಾಧನೆಯನ್ನು ಮಾಡಿದರು. ಅಲ್ಲದೇ, ಅಲ್ಲಿದ್ದ ನಾಗನ ಹುತ್ತಕ್ಕೆ ಕಟ್ಟೆಯನ್ನು ಕಟ್ಟಿ ಅದರ ಆರಾಧನೆಯಲ್ಲಿ ತೊಡಗಿಕೊಂಡರು. ಇದಾದ ನಂತರ ಪವಾಡಗಳೇ ಅರಮನೆ ಮೈದಾನದಲ್ಲಿ ನಡೆದುಹೋಯಿತು.


ಜಾಗ ಬದಲಿಸಿ ಅರಮನೆ ಮೈದಾನದಲ್ಲಿ ಕಂಬಳಕ್ಕೆ ಅವಕಾಶ ನೀಡಿದ ಮಹಾರಾಣಿ:
ಕಂಬಳ ನಡೆಸಲು ಬೆಂಗಳೂರಿನ ಅರಮನೆ ಮೈದಾನದಲ್ಲಿ 300 ಎಕರೆ ಜಾಗವಿದೆ ಅನ್ನುವ ಮಾಹಿತಿ ಬಂದ ನಂತರ ಕಂಬಳ ನಡೆಸಲು ಮುಂದಾದ ಪ್ರಮುಖರೆಲ್ಲರೂ ಸೇರಿ ಮಹಾರಾಣಿಯವರನ್ನು ಮಾತಾಡಿಸಿದರು. ಕಂಬಳ ನಡೆಸಲು ಅರಮನೆ ಮೈದಾನದಲ್ಲಿ ಅವಕಾಶ ಕೇಳಿದರು. ನಂತರ ಮಹಾರಾಣಿಯವರ ಸೂಚನೆಯಂತೆ ಜಾಗವನ್ನು ಗೊತ್ತುಪಡಿಸಿ ತೆರಳಿದರು. ಇದಾದ ನಂತರ ಮಹಾರಾಣಿ ರಾಜಪುರೋಹಿತರಲ್ಲಿ ಚರ್ಚಿಸಿ ಅರಮನೆ ಮೈದಾನದ ಜಾಗವನ್ನು ಬದಲಿಸಿ ಕಂಬಳ ನಡೆಸಲು ಅನುಮತಿ ನೀಡಿದರು. ಇದಾದ ನಂತರ ನೋಡಿದ ಜಾಗವೇ ಟಿವಿ ಟವರ್ ಮುಂಭಾಗದಲ್ಲಿರುವ ಅರಮನೆ ಮೈದಾನದ ಜಾಗ. ಈಗ ಕಂಬಳಕ್ಕೆ ಸರ್ವಸನ್ನದ್ಧವಾಗಿರುವ ಜಾಗ.


ಕಸದ ಕೊಂಪೆಯಾಗಿದ್ದ ಜಾಗ ಸ್ವಚ್ಛಗೊಳಿಸಿ ಕರೆ ನಿರ್ಮಾಣ:
ಈಗಿರುವ ಕಂಬಳದ ಕರೆ ನಿರ್ಮಾಣವೇ ಒಂದು ಸಾಹಸ. ಅರಮನೆ ಮೈದಾನದ ಕೊನೆಯಲ್ಲಿರುವ ಈ ಜಾಗ ಕಸ ಬಿಸಾಡುವ ಜಾಗವಾಗಿತ್ತು. ದುರ್ವಾಸನೆಯಿಂದ ತುಂಬಿತ್ತು. ಆದರೆ, ಅಶೋಕ್ ಕುಮಾರ್ ರೈ ಈ ಜಾಗವನ್ನು ನೋಡಿ ಸಂಪೂರ್ಣ ಕ್ಲೀನ್ ಮಾಡಿದಾಗ ಕಂಬಳದ ಕರೆ ಇಲ್ಲಿ ತುಂಬಾ ಚೆನ್ನಾಗಿ ನಿರ್ಮಾಣ ಮಾಡಬಹುದು ಎಂದು ಆಲೋಚಿಸಿ ಇಲ್ಲೇ ಮಾಡುವ ಅನ್ನುವ ನಿರ್ಧಾರಕ್ಕೆ ಬಂದರು. ನಂತರ ಜೆಸಿಬಿ ಇಳಿಸಿ ಕಂಬಳ ಮಾಡುವುದೇ ಅನ್ನುವ ನಿರ್ಧಾರವನ್ನು ಮಾಡಿಯೇ ಬಿಟ್ಟರು. ದಕ್ಷಿಣದಿಂದ ಉತ್ತರಕ್ಕೆ ಕರೆ ನಿರ್ಮಿಸುವ ನಿರ್ಧಾರ ಮಾಡಿದರು.


ಬೋರ್‌ವೆಲ್‌ನಲ್ಲಿ 250 ಅಡಿಯಲ್ಲೇ ನೀರು ಲಭ್ಯ:
ಕಂಬಳ ಆರಂಭವಾಗುವಾಗ ಕರೆಗೆ ನೀರಿನ ಸಮಸ್ಯೆ ಗಂಭೀರವಾಗಿ ಕಾಣಿಸಿತ್ತು. ಆವಾಗ ಚರ್ಚೆಗಳು ಮಾಡಿದಾಗ ದೇವರ ಆರಾಧನೆ, ದೈವಾರಾಧನೆ ಮತ್ತು ನಾಗಾರಾಧನೆಯ ನಂತರ ಎಲ್ಲವೂ ಸುಸೂತ್ರವಾಯಿತು. ಭೂಮಿ ಪೂಜೆ ವೇಳೆ ಹೆಚ್ಚಿನ ಬಹುತೇಕ ದೇವಸ್ಥಾನಗಳ ಪ್ರಸಾದವನ್ನು ಅರ್ಪಿಸಿ ಬೋರ್‌ವೆಲ್ ತೆಗೆಯಲಾಯಿತು. ಸುತ್ತಮುತ್ತಲಿರುವ ಎಲ್ಲಾ ಚೌಲ್ಟ್ರಿ, ವರ್ಲ್ಡ್ ಮುಂತಾದೆಡೆ ಇರುವ 18ಕ್ಕೂ ಅಧಿಕ ಬೋರ್‌ವೆಲ್‌ಗಳಲ್ಲಿ 1000 ಅಡಿಯ ನಂತರವೇ ನೀರು ಸಿಕ್ಕಿದ್ದು ಪೂಜೆ ಪುನಸ್ಕಾರದ ನಂತರ ಕಂಬಳ ಕರೆಯ ಸಮೀಪವೇ ಬೋರ್‌ವೆಲ್ ತೆಗೆದಾಗ 120 ಅಡಿಗೆ ನೀರಿನ ಸೆಲೆ ಸಿಕ್ತು. ನಂತರ 400 ಅಡಿಯವರೆಗೆ ತೆಗೆದು ಮೂರು ಇಂಚಿನವರೆಗೆ ನೀರು ಸಿಕ್ತು. ಅಲ್ಲದೆ 250 ಅಡಿಯಲ್ಲೇ ನೀರು ಯಥೇಚ್ಛವಾಗಿ ಸಿಕ್ಕಿತು. ಇದೇ ರೀತಿ ಎರಡು ಬೋರ್‌ವೆಲ್ ತೆಗೆಯಲಾಯಿತು. ಎರಡರಲ್ಲಿಯೂ ಕೂಡ ನೀರು ಸಿಕ್ಕಿದ್ದು ಅಕ್ಕಪಕ್ಕದವರಿಗೂ ಅಚ್ಚರಿ, ಜೊತೆಗೆ ಬೆಂಗಳೂರಿನಲ್ಲಿ ಇದೊಂದು ಪವಾಡ ಅಂತಲೇ ಬಣ್ಣಿಸಲಾಗುತ್ತಿದೆ.


ಕೋಣಗಳ ಇರುವಿಕೆಗೆ ಟೆಂಟ್ ವ್ಯವಸ್ಥೆ:
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಿರ್ಮಾಣವಾಗಿರುವ ಕಂಬಳ ಕರೆಯ ಪಕ್ಕದಲ್ಲೇ ಕೋಣಗಳ ಟೆಂಟ್ ನಿರ್ಮಾಣ ಮಾಡಲಾಗಿದೆ. ಕೋಣಗಳ ವಾಸಕ್ಕಾಗಿ 20 ಬೈ 20ಯ ಟೆಂಟ್ ನಿರ್ಮಾಣ ಮಾಡಲಾಗಿದೆ. ಕಂಬಳ ಕೋಣಗಳ ಮಾಲೀಕರ ಬೇಡಿಕೆಗೆ ಅನುಗುಣವಾಗಿ ಊರಿನಿಂದಲೇ ನೀರಿನ ವ್ಯವಸ್ಥೆ, ಜೊತೆಗೆ ಪ್ರತಿಯೊಂದು ಕೋಣದ ತಂಡದ ಜೊತೆ ಸ್ವಯಂಸೇವಕರು ಸಾಥ್ ನೀಡಲಿದ್ದು, ಎಲ್ಲಾ ತಯಾರಿಗಳು ಪೂರ್ಣಗೊಂಡು ಕೋಣಗಳು ಕೂಡ ರಾಜಮಾರ್ಗದಲ್ಲಿ ಸಾಗಿಬಂದು ರಾಜಧಾನಿ ಸೇರಿಕೊಂಡಿವೆ.

ಬೆಂಗಳೂರು ಕಂಬಳದ ಹೈಲೈಟ್ಸ್
ಬೆಂಗಳೂರಿನಲ್ಲಿ ನಡೆಯುತ್ತಿರುವ ಮೊದಲ ಕಂಬಳವೆಂದ ಇತಿಹಾಸ ಸೃಷ್ಟಿ
’ರಾಜ – ಮಹಾರಾಜ’ ಕರೆ
ಅರಮನೆ ಮೈದಾನದ 55ಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ನಡೆಯುವ ಕಾರ್ಯಕ್ರಮ
150ಕ್ಕೂ ಹೆಚ್ಚು ಚಾಂಪಿಯನ್ ಕೋಣಗಳ ಜೋಡಿ ಹಾಗೂ ನುರಿತ ಓಟಗಾರರು ಭಾಗಿ
20 ಲಕ್ಷಕ್ಕೂ ಅಧಿಕ ಕರಾವಳಿ ಪ್ರೇಕ್ಷಕರನ್ನು ಒಂದಾಗಿಸಲು ಕಂಬಳ ಕಾರಣ
8 ಲಕ್ಷಕ್ಕೂ ಅಧಿಕ ಜನರು ಕಂಬಳ ನೋಡಲು ಬರುವ ನಿರೀಕ್ಷೆ
ಪ್ರಸಿದ್ಧ ಚಿತ್ರ ತಾರೆಯರು, ಪ್ರಖ್ಯಾತ ಕ್ರಿಕೆಟರ್ಸ್, ಯುವ ಐಕಾನ್‌ಗಳು ಭಾಗಿ
ಸಾರ್ವಜನಿಕರಿಗಾಗಿ ಅರಮನೆ ಮೈದಾನದಲ್ಲಿ 24 ಕಡೆ ಪಾರ್ಕಿಂಗ್ ವ್ಯವಸ್ಥೆ
69 ಸಂಘ ಸಂಸ್ಥೆಗಳು ಸಹಭಾಗಿತ್ವ
ಮುಸ್ಲಿಂ ಸಮುದಾಯದ 6 ಜೋಡಿ, ಕ್ರಿಶ್ಚಿಯನ್ ಸಮುದಾಯದ 4 ಜೋಡಿ ಕೋಣ ಭಾಗಿ
ಫುಡ್ ಕೋರ್ಟ್ ಸೇರಿದಂತೆ 130 ಸ್ಟಾಲ್‌ಗಳು

6 ಸಾವಿರ ಮಂದಿಯ ವೀಕ್ಷಣಾ ಗ್ಯಾಲರಿ

ಬೆಂಗಳೂರಿನಲ್ಲಿ 151 ಮೀಟರ್‌ನ ಕರೆ ನಿರ್ಮಾಣ
ಬೆಂಗಳೂರಿನಲ್ಲಿ ತುಳುಕೂಟ ತನ್ನ 51ನೇ ವರ್ಷಾಚರಣೆಯಲ್ಲಿದೆ. ಈ ಹಿನ್ನೆಲೆಯಲ್ಲಿ 151 ಮೀಟರ್‌ನ ಕರೆ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಕರೆ ನಿರ್ಮಾಣದಲ್ಲಿ ಪರಿಣಿತರಾದ ಸರಪಾಡಿ ಅಪ್ಪಣ್ಣ ಎಂದೇ ಪ್ರಸಿದ್ಧರಾಗಿರುವ ಜಾನ್ ಸಿರಿಲ್ ಡಿಸೋಜರವರು ಕರೆ ನಿರ್ಮಾಣ ಮಾಡಿದ್ದಾರೆ. ಅಲ್ಲದೆ, ಮಣ್ಣಿನ ಜೊತೆ ಮರಳು ನಿಯಮಿತವಾಗಿ ಬಳಸಿ ಅತ್ಯುತ್ತಮ ಕರೆ ನಿರ್ಮಾಣ ಮಾಡಲಾಗಿದೆ.

ಮೈಸೂರು ಅರಮನೆಗೂ ಕಂಬಳಕ್ಕೂ ಉಂಟು ನಂಟು:
ಮೈಸೂರು ರಾಜಮನೆತನಕ್ಕೂ ಕಂಬಳಕ್ಕೂ ನಂಟಿತ್ತು ಅನ್ನುವುದು ಬೆಂಗಳೂರು ಕಂಬಳ ಆಯೋಜನೆ ಮಾಡಿದ ನಂತರ ಗೊತ್ತಾಗಿದೆ. ಮೂಲ್ಕಿ ಸೀಮೆಯ ಅರಸು ಕಂಬಳದಲ್ಲಿ ಮೈಸೂರು ಮಹಾರಾಜರುಗಳು ಭಾಗಿಯಾಗುತ್ತಿದ್ದರು. ಅಲ್ಲದೆ ಮೂಲ್ಕಿ ಸೀಮೆಯ ಕಂಬಳಕ್ಕೆ ನೆರವು ನೀಡುತ್ತಿದ್ದರು. ಹೀಗೆ ಕಂಬಳ ಕ್ರೀಡೆಯೊಂದಿಗೆ ರಾಜಮನೆತನದವರು ಒಲವು ಇಟ್ಟಿದ್ದರು ಅನ್ನುವುದು ಇತಿಹಾಸ.

ಮುಖ್ಯ ವೇದಿಕೆಗೆ ಪುನೀತ್ ಹೆಸರು-ಒಡೆಯರ್ ಹೆಸರಲ್ಲಿ ಸಾಂಸ್ಕೃತಿಕ ವೇದಿಕೆ
ಕಂಬಳದ ಮುಖ್ಯ ವೇದಿಕೆಗೆ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ವೇದಿಕೆ ಎಂದು ಹೆಸರಿಡಲಾಗಿದೆ. ಸಾಂಸ್ಕೃತಿಕ ವೇದಿಕೆಗೆ ಕೃಷ್ಣರಾಜ ಒಡೆಯರ್ ವೇದಿಕೆ ಎಂದು ಹೆಸರಿಡಲಾಗಿದೆ.

ಗುರುಕಿರಣ್ ನೈಟ್ಸ್ , ಅರ್ಜುನ್ ಜನ್ಯರಿಂದ ಸಂಗೀತ ಸಂಜೆ
ಕಂಬಳದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವವೇ ತೆರೆದುಕೊಳ್ಳಲಿದೆ. ನ.25ನೇ ತಾರೀಕಿನಂದು ಸಂಜೆ 7 ಗಂಟೆಗೆ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ನೇತೃತ್ವದಲ್ಲಿ ಗುರುಕಿರಣ್ ನೈಟ್ಸ್ ನಡೆಯಲಿದೆ. ಮಾಲ್ಗುಡಿ ಶುಭ, ಚೈತ್ರಾ, ಸಂತೋಷ್ ವೆಂಕಿ ಮುಂತಾದವರಿಂದ ಸಂಗೀತದ ರಸಧಾರೆ ಹರಿಯಲಿದೆ. ನವೆಂಬರ್ ೨೬ರಂದು ಸಂಜೆ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನೇತೃತ್ವದಲ್ಲಿ ಇಂದು ನಾಗರಾಜ್, ಶರ್ಮಿತಾ ಮಲ್ನಾಡ್‌ರವರಿಂದ ಸಂಗೀತ ಸಂಜೆ ನಡೆಯಲಿದೆ.

ಕರಾವಳಿಯ ತಿಂಡಿ ತಿನಿಸುಗಳ ಸವಿಯಲು ಫುಡ್ ಫೆಸ್ಟಿವಲ್‌ನಲ್ಲಿ ಅವಕಾಶ
ಕಂಬಳದ ಜೊತೆ ಜೊತೆಗೆ ಕರಾವಳಿಯ ತಿಂಡಿ ತಿನಿಸುಗಳನ್ನು ಸವಿಯಲು ಫುಡ್ ಫೆಸ್ಟಿವಲ್ ಆಯೋಜಿಸಲಾಗಿದೆ. ಕೋಳಿ ರೊಟ್ಟಿ, ಕೋರಿ ಪುಂಡಿ, ಮೀನಿನ ವಿವಿಧ ಖಾದ್ಯಗಳು, ಶುದ್ಧ ಸಸ್ಯಾಹಾರಿ, ಮಾಂಸಾಹಾರಿ ಖಾದ್ಯಗಳು ಇಲ್ಲಿ ಲಭ್ಯವಿರಲಿದೆ. 170ರಷ್ಟು ಸ್ಟಾಲ್‌ಗಳಲ್ಲಿ ಬಹುತೇಕ ಸ್ಟಾಲ್‌ಗಳಲ್ಲಿ ಆಹಾರ ಸಂಬಂಧಿತ ಸ್ಟಾಲ್ ಇದ್ರೆ, ಮತ್ತೆ ಕೆಲವು ಬ್ಯುಸಿನೆಸ್ ಸ್ಟಾಲ್‌ಗಳು ಇರಲಿವೆ. ಇದರ ಜೊತೆ ತುಳುನಾಡಿನ ಸಾಂಪ್ರದಾಯಿಕ ಜೀವನ ಶೈಲಿಯನ್ನು ಪ್ರದರ್ಶಿಸುವ ಮಳಿಗೆಗಳ ಮೂಲಕ ತುಳುನಾಡಿನ ಚರಿತ್ರೆ ಸಾರುವ ಯೋಚನೆ ಇದೆ.

ಸೆಲೆಬ್ರಿಟಿಗಳ ದಂಡು ಕಂಬಳಕ್ಕೆ ಆಗಮನ
ಬೆಂಗಳೂರು ಕಂಬಳದಲ್ಲಿ ಚಿತ್ರರಂಗದ ಸೆಲೆಬ್ರಿಟಿಗಳ ದಂಡೇ ಬರುವ ನಿರೀಕ್ಷೆಯಿದೆ. ಕ್ರಿಕೆಟರ್ ಕೆ.ಎಲ್. ರಾಹುಲ್, ಚಿತ್ರತಾರೆಯರಾದ ಅನುಷ್ಕಾ ಶೆಟ್ಟಿ, ರೋಹಿತ್ ಶೆಟ್ಟಿ, ವಿವೇಕ್ ಒಬೆರಾಯ್, ವಿ. ರವಿಚಂದ್ರನ್, ಶಿವರಾಜ್ ಕುಮಾರ್, ಉಪೇಂದ್ರ, ಸುದೀಪ್, ದರ್ಶನ್, ರಿಷಭ್ ಶೆಟ್ಟಿ, ರಮೇಶ್ ಅರವಿಂದ್, ರಕ್ಷಿತ್ ಶೆಟ್ಟಿ, ರಚಿತಾ ರಾಮ್, ಅಽತಿ ಪ್ರಭುದೇವ, ತಾರಾ ಅನುರಾಧ, ರಾಜ್ ಬಿ. ಶೆಟ್ಟಿ, ಜೂನಿಯರ್ ಎನ್‌ಟಿಆರ್, ಗಣೇಶ್, ಯೋಗಿ, ನೆನಪಿರಲಿ ಪ್ರೇಮ್, ಅಭಿಷೇಕ್ ಅಂಬರೀಶ್, ಸಪ್ತಮಿ ಗೌಡ, ಸುಧಾರಾಣಿ, ರಾಗಿಣಿ, ಐಂದ್ರಿತಾ, ದಿಗಂತ್ ಮುಂತಾದವರು ಭಾಗಿಯಾಗಲಿದ್ದಾರೆ.

ಕೋಣಗಳೊಂದಿಗೆ ಸೆಲ್ಫಿಗೆ ಅವಕಾಶ, ಆದರೆ ಮುಟ್ಟುವಂತಿಲ್ಲ
ಕಂಬಳ ಪ್ರೇಮಿಗಳು ತಮ್ಮ ಫೆವರಿಟ್ ಕೋಣಗಳ ಜೊತೆ ಸೆಲ್ಫಿ ತೆಗೆದು ಕೊಳ್ಳಬಹುದು. ಆದರೆ ದೂರದಿಂದಲೇ ತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಕೋಣಗಳನ್ನು ಮುಟ್ಟಲು, ಅವರ ಟೆಂಟಿಗೆ ಹೋಗಿ ಸೆಲ್ಫಿ ತೆಗೆದುಕೊಳ್ಳಲು ಅವಕಾಶಗಳಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ.

ಅಶೋಕ್ ರೈಯವರೊಂದಿಗೆ ಸಮಿತಿಯಲ್ಲಿ ಗಣ್ಯರ ಸಾಥ್
ಬೆಂಗಳೂರು ಕಂಬಳದ ರೂವಾರಿ ಉಪ್ಪಿನಂಗಡಿ ವಿಜಯ ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ. ಇವರೊಂದಿಗೆ ರಾಜ್ಯದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಗೌರವಾಧ್ಯಕ್ಷರಾಗಿ, ಗೋಲ್ಡ್‌ಫಿಂಚ್‌ನ ಕೆ.ಪ್ರಕಾಶ್ ಶೆಟ್ಟಿ ಬಂಜಾರ ಇವರು ಗೌರವಾಧ್ಯಕ್ಷರಾಗಿ ಶಕ್ತಿ ತುಂಬಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಕಾರ್ಯಾಧ್ಯಕ್ಷರಾಗಿದ್ದರೆ, ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ಉಪಾಧ್ಯಕ್ಷರಾಗಿ ಕಂಬಳದ ಆಯೋಜನೆಗೆ ಶ್ರಮಿಸಿದ್ದಾರೆ. ಟ್ರಸ್ಟಿಗಳಾಗಿ ರಾಜೇಂದ್ರ ಕುಮಾರ್ ಕೆ.ವಿ, ಸುಂದರ್‌ರಾಜ್ ರೈ, ಯತೀಶ್ ಕುಮಾರ್, ಅಕ್ಷಯ್ ರೈ ಡಿ ಎಸ್. ಸಂಘಟನಾ ಅಧ್ಯಕ್ಷರುಗಳಾಗಿ ಉಮೇಶ್ ಶೆಟ್ಟಿ, ಬೆಳಪು ದೇವಿಪ್ರಸಾದ್ ಶೆಟ್ಟಿ, ಕಾರ್ಯಾಧ್ಯಕ್ಷರುಗಳಾಗಿ ಮುರಳೀಧರ ರೈ ಮಠಂತಬೆಟ್ಟು, ದೀಪಕ್ ಶೆಟ್ಟಿ, ಉದಯ ಶೆಟ್ಟಿ ಕಾರ್ಯನಿರ್ವಹಿಸುತ್ತಿದ್ದಾರೆ. ಉಪಾಧ್ಯಕ್ಷರುಗಳಾಗಿ ಉಪೇಂದ್ರ ಶೆಟ್ಟಿ, ಗೋಪಾಲ್ ಶೆಟ್ಟಿ, ಗುಣಪಾಲ ಕಡಂಬ, ರಾಘವೇಂದ್ರ ರಾವ್, ಬೇಳೂರು ರಾಘವೇಂದ್ರ ಶೆಟ್ಟಿ, ಕಾವು ಹೇಮನಾಥ ಶೆಟ್ಟಿ, ನವೀನ್ ಭಂಡಾರಿ, ಪಿ.ಸಿ.ರಾವ್, ಬಾಲಚಂದರ್, ಪ್ರಸಾದ್ ಶೆಟ್ಟಿ ಹುಬ್ಬಳ್ಳಿ, ರಾಘವೇಂದ್ರ ಸುವರ್ಣ, ದೇವೇಂದ್ರ ಹೆಗ್ಡೆ ಕೊಕ್ರಾಡಿ, ಪುರುಷೋತ್ತಮ ಚೇಂಡ್ಲಾ, ಮರಳೀಧರ ಹೆಗ್ಡೆ, ಮಧುಕರ್, ಸಂಚಾಲಕ ಕಾರ್ಯದರ್ಶಿಗಳಾಗಿ ರಾಜೀವ್ ಶೆಟ್ಟಿ ಎಡ್ತೂರು, ನಿರಂಜನ ರೈ ಮಠಂತಬೆಟ್ಟು ಕಾರ್ಯನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here