206 ಪುತ್ತೂರು ವಿಧಾನಸಭಾ ಕ್ಷೇತ್ರ ’ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2024’

0

18 ವರ್ಷ ಮೇಲ್ಪಟ್ಟವರು ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಿ- ನವೀನ್ ಭಂಡಾರಿ

ಪುತ್ತೂರು: 18 ವರ್ಷ ಮೇಲ್ಪಟ್ಟ ಯುವ ಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಡಿ.9 ರವರೆಗೆ ಅವಕಾಶವಿದ್ದು ಮುಂಚಿತವಾಗಿ ಮತದಾರರ ಪಟ್ಟಿಯಲ್ಲಿ 18 ವರ್ಷ ಮೇಲ್ಪಟ್ಟವರು ತಮ್ಮ ಹೆಸರನ್ನು ಸೇರ್ಪಡೆಗೊಳಿಸಬೇಕು ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರು ತಿದ್ದುಪಡಿಗೊಳಿಸಲು ಅವಕಾಶವಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಹೆಚ್ ಅವರು ಹೇಳಿದರು.


ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನ.25ರಂದು ನಡೆದ 206 ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಗ್ರಾಮ ಆಡಳಿತ ಅಧಿಕಾರಿಗಳು, ಕಾಲೇಜುಗಳ ಪ್ರಾಂಶುಪಾಲರು, ಅಂಗನವಾಡಿ ಮೇಲ್ವಿಚಾರಕರು, ಇಎಲ್‌ಸಿ ಕೋ ಆರ್ಡಿನೇಟರ್‌ಗಳಿಗೆ ನಡೆದ ’ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2024’ ಕಾಯಕ್ರಮದಲ್ಲಿ ಅವರು ಮಾತನಾಡಿದರು.


ನಮೂನೆ 7ನ್ನು ನೀಡಿ ವಲಸೆ ಹೋದ, ಮೃತಪಟ್ಟ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲು ಹಾಗೂ ಮತದಾರರ ಪಟ್ಟಿಯಲ್ಲಿ ನೋಂದಾಯಿಸಲ್ಪಟ್ಟ ನಮೂದುಗಳಲ್ಲಿ ಯಾವುದಾದರು ತಿದ್ದುಪಡಿ ಅವಶ್ಯವಿದ್ದಲ್ಲಿ ನಮೂನೆ 8 ಅನ್ನು ನೀಡಿ ಬದಲಾವಣೆ ಮಾಡಿಕೊಳ್ಳಬಹುದು ಎಂದು ಹೇಳಿದರು. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಎಲ್ಲಾ ಬೂತ್ ಮಟ್ಟದ ಅಧಿಕಾರಿಗಳು ಹಾಗೂ ಬಿಎಲ್‌ಓ, ಮೇಲ್ವಿಚಾರಕರು ಸಾರ್ವಜನಿಕರ ಹೆಸರು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲ್ಪಟ್ಟಿದೆಯೇ ಎಂಬುದನ್ನು ಪರಿಶೀಲಿಸುವುದು. ಈ ಬಗ್ಗೆ ಹೆಚ್ಚಿನ ಪ್ರಚಾರ ಕೈಗೊಳ್ಳುವುದು ಅತಿ ಮುಖ್ಯ. ಚುನಾವಣಾ ಸಂಬಂಧಿತ ಸಂದೇಹಗಳಿಗೆ ಮತದಾರರ ಸಹಾಯವಾಣಿ 1950 ಕರೆಮಾಡಬಹುದಾಗಿದೆ. ಯಾವುದೇ ಮತದಾರರ ಮತದಾನದಿಂದ ಹೊರಗುಳಿಯಬಾರದು ಅದಕ್ಕಾಗಿ ’ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2024’ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.


ಮೊಬೈಲ್ ಆಯಪ್ ಬಳಸಿಯೂ ಹೆಸರು ನೋಂದಾಯಿಸಬಹುದು:
ತಹಶೀಲ್ದಾರ್ ಶಿವಶಂಕರ್ ಅವರು ಮಾತನಾಡಿ, ಮುಂಬರುವ 2024ರ ಲೋಕಸಭಾ ಚುನಾವಣೆ ಹತ್ತಿರದಲ್ಲಿದ್ದು, ಯುವ ಮತದಾರರು ಆಂಡ್ರಾಯ್ಡ್ ಮೊಬೈಲ್ ಅಪ್ಲಿಕೇಶನ್ ವಿಎಚ್‌ಎ ಮೊಬೈಲ್ ಆಪ್ ಬಳಸಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಅಥವಾ ಬಿಎಲ್‌ಒಗಳ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಗೆ ಅವಕಾಶವಿದೆ. ಮತ್ತು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿರುವುದನ್ನು ಪರಿಶೀಲಿಸಿಕೊಳ್ಳಬಹುದು ಎಂದರು. ಐಟಿಐ, ಪದವಿ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ಕಾಲೇಜಿನ ಪ್ರಾಂಶುಪಾಲರ ಸಹಾಯ ಪಡೆದು ಆನ್‌ಲೈನ್ ಮೂಲಕ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸತಕ್ಕದ್ದು ಹಾಗೂ ಬಿಎಲ್‌ಒಗಳ ಮೂಲಕ ಬೂತ್ ವ್ಯಾಪ್ತಿಯ ಹೊಸ ಮತದಾರರ ಹಾಗೂ ಪರಿಷ್ಕರಣೆ ಇದ್ದಲ್ಲಿ ತುರ್ತಾಗಿ ಮಾಡುವಂತೆ ತಿಳಿಸಿದರು. ವಿವೇಕಾನಂದ ಕಾಲೇಜಿನ ಸ್ವೀಪ್ ಕಾರ್ಯಕ್ರಮದ ಸಂಯೋಜಕಿ ದೀಪಿಕಾ ಅವರು ವೋಟರ‍್ಸ್ ಹೆಲ್ಪ್ ಲೈನ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸುವ ಕುರಿತು ಮಾಹಿತಿಯನ್ನು ನೀಡಿದರು. ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕ ಗೋಪಾಲ ಅವರು ವಂದಿಸಿದರು.

LEAVE A REPLY

Please enter your comment!
Please enter your name here