ಜೀವನ್‌ರಾಮ್ ಸುಳ್ಯ ಹೊಸೆದ ದೃಶ್ಯ ಕಾವ್ಯ: ಹಂ.ಪ. ನಾಗರಾಜಯ್ಯರ ಚಾರುವಸಂತ-ಅನಾಮಿಕೆಯಾಗಿ ಮನೋಜ್ಞ ಅಭಿನಯದಿಂದ ಗಮನ ಸೆಳೆದ ಪುತ್ತೂರಿನ ವಸಂತಲಕ್ಷ್ಮಿ

0

ಸಂತೋಷ್ ಕುಮಾರ್ ಶಾಂತಿನಗರ


ಪುತ್ತೂರು: ಜೀವನ್‌ರಾಮ್ ಸುಳ್ಯ ನಿರ್ದೇಶನದ ನಾಟಕಗಳೆಂದರೆ ಅಲ್ಲಿ ಸಮೃದ್ಧತೆ ತುಂಬಿ ತುಳುಕುತ್ತಿರುತ್ತದೆ. ಇಡೀ ವೇದಿಕೆಯಲ್ಲಿ ಪಾತ್ರಗಳು ಚುರುಕಾಗಿ, ಲವಲವಿಕೆಯಿಂದ ಓಡಾಡುತ್ತಾ ಭಾವನೆಗಳನ್ನು ಅಭಿವ್ಯಕ್ತಿಸುತ್ತಾ ಪ್ರೇಕ್ಷಕರನ್ನು ತಮ್ಮೊಳಗೆ ಎಳೆದುಕೊಳ್ಳುತ್ತವೆ. ಜೀವನ್‌ರಾಮ್ ಸುಳ್ಯ ಅವರು ಈಗ ಪ್ರಸ್ತುತಪಡಿಸುತ್ತಿರುವ ಖ್ಯಾತ ಸಾಹಿತಿ ನಾಡೋಜ ಹಂ.ಪ. ನಾಗರಾಜಯ್ಯ ವಿರಚಿತ ಖಂಡ ಕಾವ್ಯ ಚಾರುವಸಂತದ ರಂಗರೂಪ ರಾಜ್ಯಾದ್ಯಂತ ಪ್ರದರ್ಶನಗೊಳ್ಳುತ್ತಿದೆ. ನಾಟಕದ ಕೊನೆಯಲ್ಲಿ ನಮ್ಮೆದುರು ಬಂದು ನಿಲ್ಲುವ ವ್ಯಕ್ತಿತ್ವ ಜೀವನ್‌ರಾಮ್ ಸುಳ್ಯ ಅವರದು. ಅಷ್ಟು ಅದ್ಭುತವಾಗಿ ಚಾರುವಸಂತ ನಾಟಕವನ್ನು ನಿರ್ದೇಶಿಸಿ ರಂಗಪ್ರಸ್ತುತಿಯನ್ನಾಗಿಸಿದ್ದಾರೆ. ಎರಡೂವರೆ ಗಂಟೆಗಳ ಈ ನಾಟಕ ಪೂರ್ಣವಾಗಿ ಹಿಡಿದಿಟ್ಟು ಪ್ರದರ್ಶನ ಮುಗಿದ ನಂತರವೇ ವಾಸ್ತವ ಪ್ರಪಂಚಕ್ಕೆ ಮರಳಗೊಡುತ್ತದೆ. ಇಂತಹ ಅತ್ಯುತ್ತಮ ನಾಟಕದಲ್ಲಿ ವೇಶ್ಯೆ ಅನಾಮಿಕೆ ಪಾತ್ರದಲ್ಲಿ ಅಭಿನಯಿಸಿರುವ ಪುತ್ತೂರಿನ ರಂಗ ಕಲಾವಿದೆ ವಸಂತಲಕ್ಷ್ಮಿ ಅವರು ತನ್ನ ಮನೋಜ್ಞ ಅಭಿನಯದಿಂದ ಗಮನ ಸೆಳೆದಿದ್ದಾರೆ.


ಚಾರುವಸಂತ’ದಲ್ಲಿ ಗಮನ ಸೆಳೆದವಸಂತಲಕ್ಷ್ಮಿ’:
ವೈಣಿಕ ಶ್ರೇಷ್ಠ ಭಾನುದತ್ತ ಮತ್ತು ಆತನ ಪತ್ನಿ ದೇವಿಲೆ ಧರ್ಮದ ದಾರಿಯಲ್ಲಿ ನಡೆಯುವವರು. ವಣಿಕ ಮಂಡಳಿಯ ಅಧ್ಯಕ್ಷರೂ ಆಗಿರುವ ಭಾನುದತ್ತರು ದಾನಧರ್ಮಾದಿಗಳ ಜತೆಗೆ ತಮ್ಮ ವ್ಯಾಪ್ತಿಯಲ್ಲಿ ಅನೇಕ ಸಾಮಾಜಿಕ ಸುಧಾರಣೆಗಳನ್ನೂ ಜಾರಿಗೆ ತರುತ್ತಾರೆ. ಆದರೆ ಅವರಿಗೆ ಮಕ್ಕಳಿರುವುದಿಲ್ಲ. ಮುನಿಯೊಬ್ಬರ ಆಶೀರ್ವಾದದ ಫಲವಾಗಿ ಗಂಡು ಮಗುವಿನ ಜನನವಾಗುತ್ತದೆ. ಆ ಮಗುವಿಗೆ ಚಾರುದತ್ತನೆಂದು ಹೆಸರಿಡುತ್ತಾರೆ. ವಿದ್ಯಾಪಾರಂಗತನಾಗಿ ಪ್ರೌಢ ಪ್ರಾಯಕ್ಕೆ ಬಂದ ಚಾರುದತ್ತನಿಗೆ ಭಾನುದತ್ತನ ತಂಗಿಯ ಮಗಳಾದ ಮಿತ್ರಾವತಿಯೊಡನೆ ಮದುವೆ ಮಾಡಿಸುತ್ತಾರೆ. ಆದರೆ ಚಾರುದತ್ತ ಆಧ್ಯಾತ್ಮಿಕ ಜೀವಿಯಾಗಿ ಅಧ್ಯಯನದತ್ತ ಗಮನ ಕೊಡುತ್ತಾನೆ ಹೊರತು ಪತ್ನಿಯ ಕಡೆ ವಿಷಯಾಸಕ್ತನಾಗುವುದಿಲ್ಲ. ಇದರಿಂದ ಪತ್ನಿ ಮಿತ್ರಾವತಿ ಹಾಗೂ ತಾಯಿ ದೇವಿಲೆ ಚಿಂತಾಕ್ರಾಂತರಾಗುತ್ತಾರೆ. ಇವನ ಮನಪರಿವರ್ತನೆಗಾಗಿ ದೇವಿಲೆ ಪತ್ನಿ ತನ್ನ ತಮ್ಮನನ್ನು ಕರೆಸುತ್ತಾಳೆ. ಇದನ್ನು ತನ್ನ ಆದಾಯ ಮೂಲವಾಗಿ ಪರಿವರ್ತಿಸಲು ತಂತ್ರ ಹೂಡಿದ ತಮ್ಮ ಚಾರುದತ್ತನ ಮನಸ್ಸನ್ನು ಪರಿವರ್ತಿಸಿ ವೇಶ್ಯೆ ಅನಾಮಿಕೆಯ ಮನೆಗೆ ಕರೆದೊಯ್ಯುತ್ತಾನೆ. ಅನಾಮಿಕೆಯ ಪುತ್ರಿ ವಸಂತ ತಿಲಕೆಯೊಂದಿಗೆ ಅನುರಕ್ತನಾದ ಚಾರುದತ್ತ ಆಕೆಯೊಂದಿಗೆ ಭೋಗ ವಿಲಾಸದಲ್ಲಿ ಮುಳುಗಿ ತನ್ನ ಮನೆಯನ್ನು ಮರೆತುಬಿಡುತ್ತಾನೆ. ಚಾರುದತ್ತನ ವೆಚ್ಚಕ್ಕೆಂದು ಭಾನುದತ್ತನ ಅರಮನೆಯಿಂದ ಗಂಟು ಗಂಟು ವರಹಗಳನ್ನು ನಿಯಮಿತವಾಗಿ ಅನಾಮಿಕೆಯ ಮನೆಗೆ ತಾಯಿ ದೇವಿಲೆ ಕಳುಹಿಸಿ ಕೊಡುತ್ತಿರುತ್ತಾಳೆ. ಪತಿಯ ಅವಗಣನೆಯಿಂದ ಶೋಕತಪ್ತಳಾಗಿ ಮಿತ್ರಾವತಿ, ಮಗನ ಚಿಂತೆಯಿಂದ ಶೋಕತಪ್ತಳಾಗಿ ತಾಯಿ, ಮಗನ ಸ್ಥಿತಿಯಿಂದ ದುಃಖತಪ್ತನಾದ ಭಾನುದತ್ತ ಕೊರಗುತ್ತಿರುತ್ತಾರೆ. ಕೊನೆಗೊಂದು ದಿನ ಭಾನುದತ್ತನಿಗೆ ವೈರಾಗ್ಯ ಮೂಡಿ ಆತ ಸಂಸಾರ ತೊರೆದು ತಪಸ್ಸಿಗೆ ಹೋಗುತ್ತಾನೆ. ಇದರಿಂದಾಗಿ ವ್ಯಾಪಾರ ನೆಲಕಚ್ಚುತ್ತದೆ. ಚಾರುದತ್ತನ ನೆನಪಲ್ಲೇ ಶೋಕ ಸಾಗರದಲ್ಲಿರುವ ತಾಯಿ ಮತ್ತು ಪತ್ನಿ ತಮ್ಮಲ್ಲಿದ್ದ ಧನ ಕನಕಗಳನ್ನೆಲ್ಲಾ ಅನಾಮಿಕೆಗೆ ನೀಡಿ ನೀಡಿ ತಮ್ಮ ಅರಮನೆಯನ್ನೇ ಮಾರುವ ಪರಿಸ್ಥಿತಿಗೆ ಬರುತ್ತಾರೆ. ಗತಿ ಗೋತ್ರ ಇಲ್ಲದವರಾಗುತ್ತಾರೆ. ಇವರು ಸರ್ವಸ್ವವನ್ನು ಕಳೆದುಕೊಂಡು ಪಾಪರಾದಾಗ ಇವರಿಂದ ಇನ್ನು ಏನೂ ಗಿಟ್ಟುವುದಿಲ್ಲವೆಂದು ಅರಿತ ಅನಾಮಿಕೆ ಚಾರುದತ್ತನನ್ನು ತನ್ನ ವೇಶ್ಯಾಗೃಹದಿಂದ ತಿಪ್ಪೆಗೆ ಎಸೆಯುತ್ತಾಳೆ. ಎಲ್ಲವನ್ನು ಕಳೆದುಕೊಂಡು ತಿಪ್ಪೆಗೆ ಬಿದ್ದ ಮೇಲೆ ಚಾರುದತ್ತನಿಗೆ ಬುದ್ಧಿ ಬಂದು ಮನೆ, ತಂದೆ, ತಾಯಿ, ಪತ್ನಿಯ ನೆನಪಾಗುತ್ತದೆ. ಆದರೆ ಆ ವೇಳೆಗೆ ಮನೆ ಮಾರಲ್ಪಟ್ಟಿರುತ್ತದೆ. ಪತ್ನಿ ಮತ್ತು ತಾಯಿ ಗುಡಿಸಲೊಂದರಲ್ಲಿ ಆಶ್ರಯ ಪಡೆದಿರುತ್ತಾರೆ. ಇವರನ್ನು ಸೇರುವ ಚಾರುದತ್ತನಿಗೆ ಪತ್ನಿಯ ತಂದೆ ವ್ಯಾಪಾರ ಮಾಡಲು ಸಹಕಾರ ನೀಡುವುದಾಗಿ ಹೇಳುತ್ತಾರೆ.
ಅತ್ತ ಅನಾಮಿಕೆಯ ಮನೆಯಲ್ಲಿ ತನ್ನ ಪ್ರಿಯಕರ ಚಾರುದತ್ತನನ್ನು ತನ್ನ ತಾಯಿಯೇ ಹೊರ ಹಾಕಿರುವುದು ತಿಳಿದು ವಸಂತ ತಿಲಕೆ ವ್ಯಗ್ರಳಾಗುತ್ತಾಳೆ. ತಾನು ಚಾರುದತ್ತನಿಗೆ ತನ್ನ ದೇಹ ಮತ್ತು ಮನಸ್ಸು ಎರಡನ್ನು ಅರ್ಪಿಸಿರುವುದರಿಂದ ಆತನಿಲ್ಲದೆ ಜೀವಿಸಲಾರೆ ಎಂದು ಪಟ್ಟು ಹಿಡಿದು ಅನ್ನಾಹಾರ ತ್ಯಜಿಸಿರುತ್ತಾಳೆ. ಅದರಿಂದಾಗಿ ಅನಾಮಿಕೆಯಲ್ಲಿ ಮನಪರಿವರ್ತನೆ ಉಂಟಾಗಿ, ಚಾರುದತ್ತನನ್ನು ಅಳಿಯ ಎಂದು ಸ್ವೀಕರಿಸಿ ಆತನ ಐಶ್ವರ್ಯವನ್ನೆಲ್ಲ ಆತನಿಗೆ ಹಿಂತಿರುಗಿಸಲು ನಿರ್ಧರಿಸಿ ಕನಕಗಳೊಂದಿಗೆ ಚಾರುದತ್ತ ಇರುವಲ್ಲಿಗೆ ಬಂದು ಅವುಗಳನ್ನೂ, ಮಾರಲ್ಪಟ್ಟಿದ್ದ ಆತನ ಮನೆಯನ್ನೂ ಆತನಿಗೆ ಮರಳಿ ಒಪ್ಪಿಸುತ್ತಾಳೆ. ಚಾರುದತ್ತನ ಪತ್ನಿ ಮಿತ್ರಾವತಿ ಕೂಡ ವಸಂತ ತಿಲಕೆಯನ್ನು ಸವತಿಯಾಗಿ ಸ್ವೀಕರಿಸಲು ಉದಾರ ಮನಸ್ಸಿನಿಂದ ಒಪ್ಪುತ್ತಾಳೆ. ಬಳಿಕ ಮಾವನೊಂದಿಗೆ ವ್ಯಾಪಾರಕ್ಕೆ ದೇಶ ವಿದೇಶಗಳಿಗೆ ಹೋಗುವ ಚಾರುದತ್ತ ಎದುರಾದ ಎಲ್ಲಾ ಸಂಕಷ್ಟಗಳನ್ನು ದಾಟಿ, ಅಪಾರ ಧನಕನಕಗಳೊಂದಿಗೆ ಊರಿಗೆ ಹಿಂತಿರುಗಿ, ತಾಯಿ, ಇಬ್ಬರು ಪತ್ನಿಯರು ಹಾಗೂ ಬಂಧು ಜನರೊಂದಿಗೆ ಸುಖ ಸಂಸಾರ ನಡೆಸುತ್ತಾನೆ. ಇದು ಕತೆ. ಇಂತಹ ಅದ್ಭುತ ನಾಟಕದಲ್ಲಿ ಚಾಕಚಕ್ಯತೆಯ ನಟನೆಯೊಂದಿಗೆ ಗಮನ ಸೆಳೆದಿದ್ದಾರೆ ವೇಶ್ಯೆ ಅನಾಮಿಕೆಯ ಪಾತ್ರ ನಿರ್ವಹಿಸಿದ ಪುತ್ತೂರಿನ ಸೌಂದರ್ಯ ತಜ್ಞೆಯೂ ಆಗಿರುವ ವಸಂತಲಕ್ಷ್ಮಿ ಅವರು.


ಅಪೂರ್ವ ದೃಶ್ಯಕಾವ್ಯ-ಡಾ. ಮೋಹನ್ ಆಳ್ವ ಅಭಿನಂದನಾರ್ಹರು:
ಹಂ.ಪ. ನಾಗರಾಜಯ್ಯನವರ ಈ ಕಾವ್ಯವನ್ನು ನಾ. ದಾಮೋದರ ಶೆಟ್ಟಿ ಅವರು ರಂಗರೂಪಕ್ಕೆ ಇಳಿಸಿದರೆ ಜೀವನ್‌ರಾಮ್ ಸುಳ್ಯ ನಾಟಕ ನಿರ್ದೇಶಕರಾಗಿ ಅಪೂರ್ವ ದೃಶ್ಯ ಕಾವ್ಯವನ್ನು ಕಟ್ಟಿಕೊಟ್ಟಿದ್ದಾರೆ. ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವತಿಯಿಂದ ಪ್ರಸ್ತುತಪಡಿಸಿದ ಈ ರಂಗ ಕಾವ್ಯವನ್ನು ಈಗಾಗಲೇ ಮೂಡಬಿದ್ರೆ, ಮೈಸೂರು, ಬೆಂಗಳೂರು, ಗೌರಿ ಬಿದನೂರು, ತುಮಕೂರು, ಚಿತ್ರದುರ್ಗ, ದಾವಣಗೆರೆ, ಧಾರವಾಡಗಳಲ್ಲಿ ಪ್ರದರ್ಶಿಸಿ ೯ನೇ ಪ್ರದರ್ಶನವಾಗಿ ಸುಳ್ಯದ ಸಾಂಸ್ಕೃತಿಕ ಕಲಾ ಕೇಂದ್ರದ ಜೀವನ್‌ರಾಮರ ರಂಗ ಮನೆಯಲ್ಲಿ ಪ್ರದರ್ಶಿಸಲಾಗಿದೆ. ಭಾನುದತ್ತನಿಗೆ ಮಗು ಜನಿಸಿ ನಾಮಕರಣಗೈಯುವ ಸನ್ನಿವೇಶ, ಚಾರುದತ್ತನ ಮದುವೆಯ ಸಂದರ್ಭ, ಚಾರುವಸಂತ ತಿಲಕೆಯರ ಶೃಂಗಾರಲಾಸ್ಯ, ಮಿತ್ರಾವತಿ ಪತಿಯನ್ನು ಪಡೆಯಲಾರದೆ ರೋದಿಸುವ ಹಾಗೂ ವಸಂತ ತಿಲಕೆಯನ್ನು ಸವತಿಯಾಗಿ ಸ್ವೀಕರಿಸುವ ಮನ ಕಲಕುವ ಸನ್ನಿವೇಶ, ಪಾದರಸದ ಬಾವಿಗೆ ಉಡ ಬರುವ ದೃಶ್ಯ, ಸಮುದ್ರದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗಿ ಚಾರುದತ್ತ ಹಾಗೂ ಆತನ ಮಾವ ಅನುಭವಿಸುವ ಪಡಿಪಾಟಲು ಇವೆಲ್ಲವೂ ಹೇಗೆ ನಿರೂಪಿತವಾಗಿದೆ ಎಂದರೆ ಅದನ್ನು ಶಬ್ದದಲ್ಲಿ ವಿವರಿಸಿದರೆ ಸಾಲದು. ನೋಡಿಯೇ ಅನುಭವಿಸಬೇಕು. ಎಲ್ಲ ಕಲಾವಿದರೂ ಪಾತ್ರವೇ ಆಗಿ ಮೈತಳೆದಿರುವುದು. ಸುಶ್ರಾವ್ಯ ಸಂಗೀತ, ಸ್ವಚ್ಛ ಕಾವ್ಯ ಕನ್ನಡ, ಬೆಳಕಿನ ಸಂಯೋಜನೆ, ವಸ್ತ್ರ ವಿನ್ಯಾಸ, ರಂಗ ಸಜ್ಜಿಕೆ, ರಂಗ ಪರಿಕರ ಎಲ್ಲವೂ ಪರಿಪಕ್ವ-ಪರಿಣಾಮಕಾರಿಯಾಗಿದೆ. ಸುಳ್ಯ ರಂಗಮನೆಯ ಮಾ| ಮನುಜ ನೇಹಿಗನ ಸಂಗೀತ ಸಂಯೋಜನೆ, ಜೀವನ್ ರಾಂ ಸುಳ್ಯ ಅವರ ಹಾಡುಗಳು ಮನತಣಿಸುತ್ತವೆ. ಸುಳ್ಯದ ಹಾರಂಬಿ ಯತಿನ್ ವೆಂಕಪ್ಪ ಚಾರುದತ್ತನಾಗಿ, ಸುಮನಾ ಪ್ರಸಾದ್ ತಾಯಿ ದೇವಿಲೆಯಾಗಿ, ತೃಷಾ ಶೆಟ್ಟಿ ವಸಂತ ತಿಲಕೆಯಾಗಿ, ಭಾನುದತ್ತ ಹಾಗೂ ಕಪಟ ಸನ್ಯಾಸಿಯಾಗಿ ನವೀನ್ ಕಾಂಚನ, ವೇಶ್ಯೆ ಅನಾಮಿಕೆಯಾಗಿ ಪುತ್ತೂರಿನ ವಸಂತಲಕ್ಷ್ಮೀ ಬಿ.ಎನ್., ಮಿತ್ರಾವತಿಯಾಗಿ ರಕ್ಷಿತಾ ಗೌಡ, ಭಾಗವತನಾಗಿ ರಾಜೇಂದ್ರ ಪ್ರಸಾದ್, ಸುಮಿತ್ರೆಯಾಗಿ ಚೈತ್ರ ಅಲ್ಲದೆ ಜೋಶಿತ್ ಶೆಟ್ಟಿ, ಸುಳ್ಯದ ವನ್ಯ ಹೊಸೊಳಿಕೆ, ಪ್ರಮೋದ್ ಅತ್ರಾಡಿ, ರೋನಿತ್ ರಾಯ್, ಡ್ರಾಮಾ ಜ್ಯೂನಿಯರ್ ಖ್ಯಾತಿಯ ತೇಜಸ್ವಿನಿ, ಶ್ರೀವಲ್ಲಿ ಸಾಗರ, ಸಂತೋಷ್, ರಾಹುಲ್, ಮನೀಷ್ ಮೊದಲಾದವರು ತಮ್ಮ ತಮ್ಮ ಪಾತ್ರಗಳಿಗೆ ಇನ್ನಿಲ್ಲದಷ್ಟು ಜೀವ ತುಂಬಿದ್ದಾರೆ. ಇಂತಹ ಒಂದು ವಿಶಿಷ್ಟ ಪ್ರಯೋಗಕ್ಕೆ ಕಾರಣರಾದ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ. ಮೋಹನ್ ಆಳ್ವರು ನಿಜಕ್ಕೂ ಅಭಿನಂದನಾರ್ಹರು.

ಸೌಂದರ್ಯ ತಜ್ಞೆ ವಸಂತಲಕ್ಷ್ಮಿ ಬೆಳ್ಳಿತೆರೆ, ಧಾರವಾಹಿಯಲ್ಲಿಯೂ ಬಣ್ಣ ಹಚ್ಚಿದ್ದರು
ಪುತ್ತೂರು ದರ್ಬೆ ಸಮೀಪದ ಮುಕ್ರಂಪಾಡಿಯ ರಜತಾದ್ರಿ ಮನೆಯ ನಿವಾಸಿ, ನ್ಯಾಯವಾದಿ ಶಶಿಧರ ಬಿ.ಎನ್. ಅವರ ಪತ್ನಿ ವಸಂತಲಕ್ಷ್ಮಿ ಅವರು ವೃತ್ತಿಯಲ್ಲಿ ಸೌಂದರ್ಯ ತಜ್ಞೆಯಾಗಿದ್ದಾರೆ. ಹವ್ಯಾಸಿ ರಂಗ ಕಲಾವಿದೆಯಾಗಿರುವ ವಸಂತಲಕ್ಷ್ಮಿ ಅವರು ಮಹಮ್ಮಾಯಿ ನಾಟಕದಲ್ಲಿ ಸೆಟವಿ ತಾಯಿಯಾಗಿ, ಮೂಕಜ್ಜಿನ ಕನಸಿನಲ್ಲಿ ಸೀತೆಯಾಗಿ, ಕೆರೆಗೆ ಹಾರದಲ್ಲಿ ಗೌಡ್ತಿಯಾಗಿ ಮುಖ್ಯ ಪಾತ್ರ ವಹಿಸಿದವರು. ಬೆಳ್ಳಿ ತೆರೆಯಲ್ಲಿಯೂ ಬಣ್ಣ ಹಚ್ಚಿರುವ ವಸಂತಲಕ್ಷ್ಮಿ ಅವರು ಕನಸು ಕಣ್ಣು ತೆರೆದಾಗದಲ್ಲಿ ಕಾಂಟ್ರಾಕ್ಟರ್ ಮಾಧವನ ಪತ್ನಿ ರಾಣಿಯಾಗಿ, ತೆಲಿಕದೆ ಬೊಳ್ಳಿ ದೇವದಾಸ್ ಕಾಪಿಕಾಡ್ ಅವರ ಬೊಳ್ಳಿ ಕ್ರಿಯೇಷನ್ಸ್‌ನ ಬರ್ಸ ಚಿತ್ರದಲ್ಲಿ ಅರ್ಜುನ್ ಕಾಪಿಕಾಡ್ ಅವರ ತಾಯಿಯ ಪಾತ್ರ ನಿರ್ವಹಿಸಿದ್ದರು. ಲುಂಗಿ ಚಿತ್ರದಲ್ಲಿ ರಾಧಿಕಾ ರಾವ್ ಅವರ ತಾಯಿ ಪಾತ್ರ ನಿರ್ವಹಿಸಿದ್ದರು. ಧಾರವಾಹಿಗಳಲ್ಲಿಯೂ ತನ್ನ ಪ್ರತಿಭೆ ಪ್ರದರ್ಶನ ಮಾಡಿರುವ ವಸಂತ ಲಕ್ಷ್ಮಿಯವರು ಲೋಕೇಶ್ ಪ್ರೊಡಕ್ಷನ್‌ನಲ್ಲಿ ಶೋಭರಾಜ್ ಪಾವೂರು ಅವರ ಅತ್ತೆ ಪಾತ್ರದಲ್ಲಿ, ಕಟೀಲು ದೇವಿ ಚರಿತ್ರೆಯಲ್ಲಿ ಭ್ರಗು ಋಷಿಯಾಗಿ, ಧರ್ಮದೈವ ಕಿರುಚಿತ್ರದಲ್ಲಿ ಭಾಗ 1 ಮತ್ತು ಭಾಗ 2ರಲ್ಲಿ ಗುತ್ತಿನಮನೆಯ ಯಜಮಾನಿಯಾಗಿ ರಮೇಶ್ ರೈ ಕುಕ್ಕುವಳ್ಳಿ ಅವರೊಂದಿಗೆ ಅಭಿನಯಿಸಿದ್ದರು. ರಂಗ್‌ದ ರಾಜೆ ಸುಂದರ ರೈ ಮಂದಾರ ಅವರ ಅಂಬರ ಮರ್ಲೆರ್‌ನಲ್ಲಿಯೂ ಮಿಂಚಿದ್ದ ಇವರು ನಿಸ್ವಾರ್ಥ ಕಿರುಚಿತ್ರ, ಆಲ್ಬಂ ಸಾಂಗ್ ಮತ್ತು ಇಂಡಿಯನ್ ಹಾಸ್ಪಿಟಲ್ ಜಾಹೀರಾತಿನಲ್ಲಿಯೂ ನಟಿಸಿದ್ದರು. ಕವಯತ್ರಿಯಾಗಿ, ಕೃತಿ ರಚನೆಗಾರರಾಗಿ, ಪುಸ್ತಕ ರಚನೆಗಾರರಾಗಿ, ಭಜನಾಪಟುವಾಗಿಯೂ ಗುರುತಿಸಿಕೊಂಡಿರುವ ವಸಂತಲಕ್ಷ್ಮಿಯವರು ರಂಗ ನಾಟಕ, ಮಕ್ಕಳ ಶಿಬಿರ, ರಂಗಗೀತೆ ಗಾಯನ, ಭಜನಾ ತಂಡದ ಮೂಲಕವೂ ಚಿರಪರಿಚಿತರಾಗಿದ್ದಾರೆ. ಜೆಸಿಐ, ಶಿವಳ್ಳಿ ಸಂಪದ, ಸಿರಿಗನ್ನಡ ಮುಂತಾದ ಸಮಾಜಮುಖಿ ಸಂಘಟನೆಗಳಲ್ಲಿಯೂ ವಸಂತಲಕ್ಷ್ಮಿ ತೊಡಗಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here