ನೆಲ್ಯಾಡಿ: ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು, ಗ್ರಾಮ ಪಂಚಾಯತ್ ಬಜತ್ತೂರು ಇವರ ಸಹಕಾರದೊಂದಿಗೆ ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇವರ ಸಂಯೋಜನೆಯಲ್ಲಿ ಹೊರನಾಡ ಕನ್ನಡಿಗ ಮಿತ್ರಂಪಾಡಿ ಜಯರಾಮ ರೈ ಅಬುಧಾಬಿಯವರ ಮಹಾಪೋಷಕತ್ವದಲ್ಲಿ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಅಭಿಯಾನದಂಗವಾಗಿ ನಡೆಯುತ್ತಿರುವ ‘ಗ್ರಾಮ ಸಾಹಿತ್ಯದ ದಶ ಸಂಭ್ರಮ-2023’ ನ.25ರಂದು ಬಜತ್ತೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಬಜತ್ತೂರು ಗ್ರಾ.ಪಂ.ಅಧ್ಯಕ್ಷ ಗಂಗಾಧರ ಪಿ.ಎನ್. ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಬೆಂಗಳೂರು, ಮೈಸೂರಿನಂತಹ ಪಟ್ಟಣಗಳಿಗೆ ಸೀಮಿತವಾಗಿದ್ದ ಸಾಹಿತ್ಯ ಸಂಭ್ರಮವನ್ನು ಗ್ರಾಮ ಮಟ್ಟಕ್ಕೆ ತಂದ ಕೀರ್ತಿ ಉಮೇಶ್ ನಾಯಕ್ ನೇತೃತ್ವದ ಕನ್ನಡ ಸಾಹಿತ್ಯ ಪರಿಷತ್‌ನ ಪುತ್ತೂರು ಘಟಕಕ್ಕೆ ಸಲ್ಲಬೇಕು ಎಂದರು. ಹೆಚ್ಚಿನ ಸಾಹಿತಿಗಳು ಗ್ರಾಮೀಣ ಪ್ರದೇಶದಿಂದಲೇ ಬೆಳೆದು ಬಂದಿದ್ದಾರೆ. ಕನ್ನಡದ ಕಂಪನ್ನು ದೇಶ, ವಿದೇಶದೆಲ್ಲೆಡೆ ಪಸರಿಸಿದ್ದಾರೆ ಎಂದು ಹೇಳಿದ ಅವರು, ಈಗ ಕನ್ನಡ ಪರ ಹೋರಾಟವೂ ದಂಧೆಯಾಗುತ್ತಿದೆ. ಸರಕಾರದ ಧೋರಣೆಯೂ ಕನ್ನಡದ ಮೇಲಿನ ಆಸಕ್ತಿಯನ್ನು ಕಡಿಮೆ ಮಾಡುತ್ತಿದೆ. ಕನ್ನಡದಲ್ಲೇ ಉನ್ನತ ಶಿಕ್ಷಣ ಪಡೆಯುವ ವ್ಯವಸ್ಥೆ ಜಾರಿಗೊಳ್ಳಬೇಕೆಂದು ಹೇಳಿದರು.
ಅತಿಥಿಯಾಗಿದ್ದ ಬಜತ್ತೂರು ಕ್ಲಸ್ಟರ್ ಸಿಆರ್‌ಪಿ ಮಂಜುನಾಥ್ ಕೆ.ವಿ.ಮಾತನಾಡಿ, 20 ವರ್ಷದ ಹಿಂದೆಯೇ ಗ್ರಾಮ ಮಟ್ಟದಲ್ಲಿ ಸಾಹಿತ್ಯ ಸಂಭ್ರಮ ನಡೆಯುತ್ತಿದ್ದಲ್ಲಿ ಈಗ ಎಲ್ಲರ ಕೈಯಲ್ಲೂ ಮೊಬೈಲ್ ಬದಲು ಪುಸ್ತಕ ಇರುತಿತ್ತು. ಗ್ರಾಮ ಮಟ್ಟದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಮಕ್ಕಳಿಗೆ ಸದಾವಕಾಶ. ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ ಎಂದರು. ಇನ್ನೋರ್ವ ಅತಿಥಿ ಹಿರಿಯ ಪತ್ರಕರ್ತ, ಕಸಾಪ ಪುತ್ತೂರು ತಾಲೂಕು ಕಾರ್ಯಕಾರಿ ಸಮಿತಿ ಸದಸ್ಯ ಉದಯಕುಮಾರ್ ಯು.ಎಲ್. ಅವರು ಮಾತನಾಡಿ, ಇದೊಂದು ವಿದ್ಯಾರ್ಥಿಗಳಿಗೆ ಸಿಕ್ಕಿರುವ ಮಹತ್ವಪೂರ್ಣ ಅವಕಾಶ. ಮಕ್ಕಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದಕ್ಕೆ ಗ್ರಾಮ ಸಾಹಿತ್ಯ ಸಂಭ್ರಮ ಪ್ರೇರಣೆಯಾಗಲಿ ಎಂದರು. ಸನ್ಮಾನ ನೆರವೇರಿಸಿದ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕುವೆಚ್ಚಾರು ಅವರು ಮಾತನಾಡಿ, ರಾಜ್ಯದಲ್ಲಿಯೇ ಮೊದಲ ಬಾರಿಗೆ ಗ್ರಾಮ ಮಟ್ಟದಲ್ಲಿ ಸಾಹಿತ್ಯ ಸಂಭ್ರಮ ಆಯೋಜಿಸಿರುವುದು ತಳಮಟ್ಟದಲ್ಲೇ ಕನ್ನಡದ ಬೆಳವಣಿಗೆಗೆ ನೀಡಿರುವ ಕೊಡುಗೆಯಾಗಿದೆ. ಇಂತಹ ಕಾರ್ಯಕ್ರಮದಲ್ಲಿ ಸಾಹಿತ್ಯದ ಬೆಳವಣಿಗೆಗೆ ಸೇವೆ ಸಲ್ಲಿಸಿರುವವರನ್ನು ಗುರುತಿಸಿ ಸನ್ಮಾನಿಸಿರುವುದು ಅವರಿಗೆ ಇನ್ನಷ್ಟೂ ಪ್ರೋತ್ಸಾಹ ದೊರೆತಂತಾಗಿದೆ. ಉಮೇಶ್ ನಾಯಕ್ ಅವರು ಉದ್ಯಮ ಬಿಟ್ಟು ಸಾಹಿತ್ಯದ ಬೆಳವಣಿಗೆಗೆ ಗ್ರಾಮದೆಡೆಗೆ ಬಂದಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಪುತ್ತೂರು ತಾಲೂಕು ಅಧ್ಯಕ್ಷ ಉಮೇಶ್ ನಾಯಕ್ ಅವರು ಮಾತನಾಡಿ, 5 ವರ್ಷದಲ್ಲಿ ತಾಲೂಕಿನ 32 ಗ್ರಾಮಗಳಲ್ಲೂ ಗ್ರಾಮ ಸಾಹಿತ್ಯ ಸಂಭ್ರಮ ನಡೆಯಲಿದೆ. ಸಾಹಿತ್ಯದಲ್ಲಿ ಆಸಕ್ತಿ ಇರುವ ಗ್ರಾಮದ ಶಾಲೆಗಳಲ್ಲಿನ ವಿದ್ಯಾರ್ಥಿಗಳನ್ನು ಆಯಾ ಶಾಲೆಯ ಮುಖ್ಯಸ್ಥರೇ ಆಯ್ಕೆ ಮಾಡಿ ಗೋಷ್ಠಿಗಳಿಗೆ ಕಳಿಸಬೇಕು. ಈ ತನಕ 1425 ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸಿಕೊಟ್ಟಿzವೆ ಎಂದರು. ಬಜತ್ತೂರು ಗ್ರಾ.ಪಂ.ಉಪಾಧ್ಯಕ್ಷೆ ವಿಮಲಾ ಭರತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾಮ ಸಾಹಿತ್ಯದ ಸಂಚಾಲಕ ನಾರಾಯಣ ಕುಂಬ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಳಾಲು ಸರಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಚಕ್ರಪಾಣಿ ಸ್ವಾಗತಿಸಿ, ರಶ್ಮಿತಾಸುರೇಶ್ ಜೋಗಿಬೆಟ್ಟು ವಂದಿಸಿದರು. ಯುವ ಸಾಹಿತಿ ಜಗದೀಶ್ ಬಾರಿಕೆ ನಿರೂಪಿಸಿದರು. ಬಜತ್ತೂರು ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಆರಂಭಿಸಲಾಯಿತು.
ಸನ್ಮಾನ:
ಪತ್ರಕರ್ತರಾದ ಸುದ್ದಿ ಬಿಡುಗಡೆ ಹಿರಿಯ ವರದಿಗಾರ ಹರೀಶ್ ಬಾರಿಂಜ, ವಿಲ್ಫ್ರೆಡ್ ಡಿ.ಸೋಜ, ಮೇಘಾ ಪಾಲೆತ್ತಡಿ, ಯುವ ಸಾಹಿತಿ ಜಗದೀಶ್ ಬಾರಿಕೆ, ಶೋಭಾನೆ ಹಾಡುಗಾರ್ತಿ ಪ್ರೇಮಾ ಬಾರಿಕೆ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮಕ್ಕಳ ಸಂಖ್ಯೆ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಕಾಂಚನ ಶ್ರೀ ಲಕ್ಷ್ಮೀ ನಾರಾಯಣ ಅನುದಾನಿತ ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕರು ಹಾಗೂ ಶಿಕ್ಷಕರಿಗೆ ಗೌರವಾರ್ಪಣೆ ಮಾಡಲಾಯಿತು. ಗ್ರಾಮ ಸಾಹಿತ್ಯ ಸಂಭ್ರಮಕ್ಕೆ ಸಹಕಾರ ನೀಡಿದ ಮನೋಜ್ ಅವರಿಗೂ ಗೌರವಾರ್ಪಣೆ ಮಾಡಲಾಯಿತು. ಸನ್ಮಾನಿತರ ಪರವಾಗಿ ವಿಲ್ಫ್ರೆಡ್ ಡಿ.ಸೋಜ ಅವರು ಮಾತನಾಡಿ ಕೃತಜ್ಞತೆ ಸಲ್ಲಿಸಿದರು.
ವಿವಿಧ ಗೋಷ್ಠಿ:
ಬೆಳಗ್ಗಿನಿಂದ ಸಂಜೆ ತನಕ ಗ್ರಾಮ ಸಾಹಿತ್ಯ ಸಂಭ್ರಮ ನಡೆಯಿತು. ಶಾಲಾ ವಿದ್ಯಾರ್ಥಿಗಳಿಗಾಗಿ ಬಾಲಕವಿಗೋಷ್ಠಿ, ಬಾಲಕಥಾಗೋಷ್ಠಿ ನಡೆಯಿತು. ಮಧ್ಯಾಹ್ನ ಬಜತ್ತೂರು ಗ್ರಾಮದ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅಪರಾಹ್ನ ಸಾರ್ವಜನಿಕರಿಗಾಗಿ ಯುವಕವಿಗೋಷ್ಠಿ ನಡೆಯಿತು. ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು. ಶಾಲಾ ವಿದ್ಯಾರ್ಥಿಗಳು, ಗ್ರಾಮಸ್ಥರು, ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.