ಸರಕಾರಿ ಶಾಲೆಯ ಮಕ್ಕಳು ಯಾವುದೇ ಸೌಲಭ್ಯದಿಂದ ವಂಚಿತರಾಗಬಾರದು-ವಿಶಾಲಾಕ್ಷಿ
ಪುತ್ತೂರು: ಇಡ್ಯೊಟ್ಟು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಎಸ್‌ಡಿಎಂಸಿ ಮತ್ತು ಪೋಷಕರ ಸಭೆ ನ.27ರಂದು ನಡೆಯಿತು.ಶಾಲಾ ಮಕ್ಕಳ ಗುರುತಿನ ಚೀಟಿಯನ್ನು ಕೊಡುಗೆಯಾಗಿ ನೀಡಿದ ಆನಡ್ಕ ಸ.ಹಿ.ಪ್ರಾ. ಶಾಲಾ ಶಿಕ್ಷಕಿ ವಿಶಾಲಾಕ್ಷಿ ಮಾತನಾಡಿ ವಿದ್ಯೆ ಎಂಬುವುದು ನಿಂತ ನೀರಾಗದೆ ಹರಿವ ನೀರಾಗಬೇಕು ಇದಕ್ಕಾಗಿ ಸರಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಯಾವುದೇ ರೀತಿಯಲ್ಲಿ ಸೌಲಭ್ಯದಿಂದ ವಂಚಿತರಾಗಬಾರದು, ಗುರುತಿನ ಚೀಟಿ ಕೊಡುಗೆ ನೀಡಲು ನನಗೆ ಅವಕಾಶ ಸಿಕ್ಕಿರುವುದು ನನಗೆ ಸಂತೋಷ ತಂದಿದೆ ಎಂದರು. ನಂತರ ಅಕ್ಷರ ದಾಸೋಹ ತಾಯಂದಿರಿಗೆ ಸೀರೆಯನ್ನು ನೀಡಿ ಅವರು ಗೌರವಿಸಿದರು.
ಶಾಲೆಗೆ ದೀಪವೊಂದನ್ನು ಕೊಡುಗೆಯಾಗಿ ನೀಡಿದ ನಿವೃತ್ತ ಶಿಕ್ಷಕಿ ಕಸ್ತೂರಿ ಸಂಪ್ಯ ಮಾತನಾಡಿ ದೀಪ ಬೆಳಗುತ್ತಿರುವಂತೆ ಈ ಶಾಲೆಯು ಬೆಳಗುತ್ತಿರಲಿ ಎಂದು ಹೇಳಿ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅದ್ರಾಮ ಮಾತನಾಡಿ ಶಿಕ್ಷಕಿ ವಿಶಾಲಾಕ್ಷಿಯವರು ಕಳೆದ ಕೆಲವು ವರ್ಷಗಳಿಂದ ನಮ್ಮ ಶಾಲೆಗೆ ಕೊಡುಗೆಗಳನ್ನು ನೀಡಿ ವಿದ್ಯಾರ್ಥಿಗಳಿಗೆ ಸಿಹಿ ಹಂಚುತ್ತಿರುವುದು ನಮ್ಮ ಶಾಲೆಯ ಪ್ರಗತಿಗೆ ಪೂರಕವಾಗಿದೆ ಪ್ರಶಂಶಿಸಿದರು. ನಂತರ ದಾನಿಗಳನ್ನು ಶಾಲಾ ವತಿಯಿಂದ ಶಾಲು ಹಾಗೂ ನೆನಪಿನ ಕಾಣಿಕೆಯೊಂದಿಗೆ ಗೌರವಿಸಲಾಯಿತು.
ಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷೆ ಗೀತಾ ಜಿ, ಸದಸ್ಯರುಗಳಾದ ಐತಪ್ಪ ಅಮ್ಮುಂಜ, ಶ್ರೀಪತಿ ಹೆಬ್ಬಾರ್ ಕರಜ, ನೀಲಾವತಿ ಕಟ್ಟದಬೈಲ್, ಆನಂದ ಇಡಬೆಟ್ಟು, ಸುರೇಶ ಇಡಬೆಟ್ಟು, ಮೋಹಿನಿ ಕರಜ, ಗೀತಾ ನೈತಾಡಿ, ಜಲಜಾಕ್ಷಿ ಪರಂಕಿಲು ಉಪಸ್ಥಿತರಿದ್ದರು.
ಸ್ವಾಗತಿಸಿದ ಶಾಲಾ ಮುಖ್ಯಗುರು ಪ್ರೇಮಾರವರು ನಮ್ಮ ಶಾಲೆಗೆ ದಾನಿಗಳು ಕೊಡುಗೆಗಳನ್ನು ನೀಡಿರುವುದು ಒಂದು ಸಂತಸದ ವಿಷಯವಾಗಿದೆ ಎಂದು ಹೇಳಿದರು. ಶಿಕ್ಷಕ ದೇವಪ್ಪ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ಸುರರಾಜ್ ವಂದಿಸಿದರು. ಜಿಪಿಟಿ ಶಿಕ್ಷಕಿ ಆಶಾ ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕಿ ರಂಸೀನಾ ಸಹಕರಿಸಿದರು.