ತಾಲೂಕು ಮಹಿಳಾ ಬಂಟರ ಸಂಘದ ವತಿಯಿಂದ ಅಭಿನಂದನೆ ಮತ್ತು ಸನ್ಮಾನ ಕಾರ್ಯಕ್ರಮ

0

ಪುತ್ತೂರು: ವಿಶ್ವ ಬಂಟರ ಸಂಘದ ಕ್ರೀಡಾಕೂಟದಲ್ಲಿ ಪುತ್ತೂರು ಬಂಟರ ಸಂಘವನ್ನು ಪ್ರತಿನಿಧಿಸಿದ ಮಹಿಳಾ ವಿಭಾಗ ಕ್ರೀಡಾಕೂಟದಲ್ಲಿ ಬಂಟರ ಸಂಘವನ್ನು ವಿಶ್ವಮಟ್ಟದಲ್ಲಿ ದಾಖಲಿಸಿದ್ದಾರೆ. ಕ್ರೀಡಾಳುಗಳನ್ನು ತರಬೇತುಗೊಳಿಸುವಲ್ಲಿ ಪ್ರೇಮನಾಥ್ ಶೆಟ್ಟಿ ಕಾವು ಮತ್ತು ದಯಾನಂದ ರೈ ಕೋರ್ಮಂಡರ ಶ್ರಮ ಶ್ಲಾಘನೀಯ. ಮುಂದೆಯೂ ಇದೇ ರೀತಿ ಮುಂದುವರೆಯಲು ಎಲ್ಲಾ ಬಂಟ ಮಹಿಳಾ ಕ್ರೀಡಾಳುಗಳು, ತರಬೇತುದಾರರು ಸಹಕರಿಸಬೇಕು ಹಾಗೂ ಡಿ.7ರಂದು ಬಂಟ್ವಾಳದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಭಾಗವಹಿಸಿ ದೊಡ್ಡ ಗೆಲುವನ್ನು ಸಾಧಿಸುವಲ್ಲಿ ಇಂದಿನಿಂದಲೇ ಅಭ್ಯಸಿಸಬೇಕು ಎಂದು ಮಹಿಳಾ ಬಂಟರ ಸಂಘದ ಮಾಸಿಕ ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಸಬಿತಾ ಭಂಡಾರಿಯವರು ಹೇಳಿದರು. ಅವರು ಉಡುಪಿಯಲ್ಲಿ ನಡೆದ ಕ್ರೀಡಾಕೂಟದ ಸಂದರ್ಭದಲ್ಲಿ ಪಾಲ್ಗೊಂಡು ಸಹಕರಿಸಿದ ಸರ್ವ ಬಂಧುಗಳಿಗೂ ಕೃತಜ್ಞತೆ ಸಲ್ಲಿಸಿದರು.

ಪುತ್ತೂರು ಬಂಟರ ಸಂಘ ಕ್ರೀಡಾಕೂಟದಲ್ಲಿ ದೊಡ್ಡ ಸ್ಪರ್ಧೆ ನೀಡುವ ಮೂಲಕ ಗೆಲುವನ್ನು ಪಡೆದು ಆರಂಭದ ಮೈಲಿಗಲ್ಲು ನೆಟ್ಟಿದ್ದಾರೆ. ಅದರಲ್ಲೂ ಸಬಿತಾ ಭಂಡಾರಿ ನೇತೃತ್ವದ ಮಹಿಳಾ ಬಂಟರ ಸಂಘ ತ್ರೋಬಾಲ್ ನಲ್ಲಿ ದ್ವಿತೀಯ ಸ್ಥಾನ ಹಾಗೂ ಅಥ್ಲೆಟಿಕ್ಸ್ ವೈಯಕ್ತಿಯ ಸಾಧನೆಯನ್ನೂ ಮಾಡಿರುವುದು ಒಳ್ಳೆಯ ವಿಷಯ ಎಂದು ಸವಣೂರು ಸೀತಾರಾಮ ರೈರವರು ಹೇಳಿದರು.

ಕಾರ್ಯಕ್ರಮದಲ್ಲಿ ವಿಶ್ವ ಬಂಟರ ಕ್ರೀಡಾಕೂಟದಲ್ಲಿ ಭಾಗವಹಿಸಿ, ಪ್ರಶಸ್ತಿ ಪಡೆದ ಕ್ರೀಡಾಳುಗಳಿಗೆ ಗೌರವಧನ ಪ್ರಧಾನ ಮಾಡಲಾಯಿತು. ಅದರೊಂದಿಗೆ ಕರ್ನಾಟಕ ಸರಕಾರದ ಪುತ್ತೂರು ತಾಲೂಕು ಅಕ್ರಮ ಸಕ್ರಮ ಸಮಿತಿಯ ಸದಸ್ಯರಾಗಿ ನೇಮಕಗೊಂಡ ರೂಪರೇಖ ಆಳ್ವರನ್ನು ಸನ್ಮಾನಿಸಲಾಯಿತು.

ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ ಬಂಟರ ಸಂಘದ ಜೊತೆಗೆ ನಿಂತು ಸಬಿತಾ ಭಂಡಾರಿ ಹಾಗೂ ತಂಡದವರು ಒಳ್ಳೆಯ ಗುಣಮಟ್ಟದ ಪ್ರದರ್ಶನ ನೀಡಿದ್ದಾರೆ. 36 ತಂಡಗಳಲ್ಲಿ ನಮ್ಮ ತಂಡ ದ್ವಿತೀಯ ಸ್ಥಾನವನ್ನು ಪಡೆದಿರುವುದು ನಮ್ಮ ಹೆಮ್ಮೆ. ಮಹಿಳಾ ಬಂಟರ ಸಂಘದ ಜೊತೆಗೆ ಎಂದೆಂದೂ ಬಂಟರ ಸಂಘ ಇದ್ದೇ ಇರುತ್ತದೆ ಎಂದು ಹೇಳಿದರು.

ಮಹಿಳಾ ಬಂಟರ ಸಂಘದ ಗೌರವಾಧ್ಯಕ್ಷೆ ಮಲ್ಲಿಕಾ ಪ್ರಸಾದ್ ರವರು ಮಾತನಾಡಿ ಕ್ರೀಡಾಳುಗಳನ್ನು ಅಭಿನಂದಿಸಿ, ಮುಂದಕ್ಕೂ ಇದೇ ರೀತಿಯ ಸಹಕಾರ ನೀಡಿ ಸರ್ವ ರೀತಿಯಲ್ಲೂ ಮಹಿಳೆಯರ ಶಕ್ತಿ, ಸಾಮರ್ಥ್ಯವನ್ನು ಲೋಕಮುಖಕ್ಕೆ ತೋರಿಸಿ ಮೆಚ್ಚುಗೆ ಗಳಿಸಬೇಕೆಂದು ಕರೆ ನೀಡಿದರು . ಮಾತೃ ಸಂಘದ ತಾಲೂಕು‌ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತು, ಬಂಟರ ಸಂಘದ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ಶೆಟ್ಟಿ ಅರಿಯಡ್ಕ ಶುಭ ಹಾರೈಸಿದರು. ಬಂಟ ಸಮಾಜದ ಹಿರಿಯರಾದ ಚಿಕ್ಕಪ್ಪ ನಾಯ್ಕ್, ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷ ಪ್ರಜನ್ ಶೆಟ್ಟಿ, ಮಾತೃ ಸಂಘದ ಸಹಸಂಚಾಲಕರಾದ ಜಯಪ್ರಕಾಶ್ ನೂಜಿಬೈಲು ಉಪಸ್ಥಿತರಿದ್ದರು.

ಮಹಿಳಾ ಬಂಟರ ಸಂಘದ ಅಧ್ಯಕ್ಷರಾದ ಸಬಿತಾ ಭಂಡಾರಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಹರಿಣಾಕ್ಷಿ ಜೆ ಶೆಟ್ಟಿ ನಿರೂಪಿಸಿ, ಶಕುಂತಳಾ ಶೆಟ್ಟಿ ಪ್ರಾರ್ಥಿಸಿ, ಕೋಶಾಧಿಕಾರಿ ವಾಣಿ ಎಸ್ ಶೆಟ್ಟಿ ವಂದಿಸಿದರು. ಸ್ವರ್ಣಲತಾ ಜೆ ರೈ ಮತ್ತು ಲಾವಣ್ಯ ನಾಯ್ಕ್ ಸಹಕರಿಸಿದರು. ಮಹಿಳಾ ಬಂಟರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here