ವಿವಿಧ ಸಂಘ-ಸಂಸ್ಥೆಗಳಿಂದ ವಿಶ್ವ ಮಧುಮೇಹ ಮಾಸಾಚರಣೆ ಪ್ರಯುಕ್ತ ವಾಕಥಾನ್-ಜಾಗೃತಿ ಜಾಥಾ, ಪ್ರಾಜೆಕ್ಟ್ ಸ್ವೀಟ್ ಚೈಲ್ಡ್-ಮಕ್ಕಳ ಸಮ್ಮಿಲನ

0

ಮನುಷ್ಯ ಸದಾ ಚಟುವಟಿಕೆಯಿಂದಿದ್ದಾಗ ಆರೋಗ್ಯದಲ್ಲಿ ನಿಯಂತ್ರಣ-ಡಾ.ಭಾಸ್ಕರ್ ಎಸ್
ಮಧುಮೇಹ ನಿಯಂತ್ರಣಕ್ಕೆ ಜಾಗೃತಿಯೇ ಅಗತ್ಯ-ಗಿರೀಶ್‌ನಂದನ್
ಭಾರತದಲ್ಲಿ 74 ಮಿಲಿಯನ್ ಡಯಾಬಿಟೀಸ್-ಡಾ.ಶ್ರೀಪತಿ ರಾವ್
ಪ್ರಾಜೆಕ್ಟ್ ಸ್ವೀಟ್ ಚೈಲ್ಡ್ ಮೂಲಕ ಮಕ್ಕಳಿಗೆ ಪ್ರಯೋಜನ-ಡಾ.ನಝೀರ್ ಅಹಮ್ಮದ್
ರೋಟರಿ ಪುತ್ತೂರು ಆರೋಗ್ಯ ಕ್ಷೇತ್ರದಲ್ಲಿ ಬಹಳಷ್ಟು ಸಾಧಿಸಿದೆ-ಜೈರಾಜ್ ಭಂಡಾರಿ

ಪುತ್ತೂರು:ಇಂದಿನ ಆಧುನಿಕ ಜಗತ್ತಿನಲ್ಲಿ ಮನುಷ್ಯ ತನ್ನ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡದೆ ಬೊಜ್ಜು, ಬಿಪಿ, ಮಧುಮೇಹ, ಹೃದಯದ ಕಾಯಿಲೆಯ ಜೊತೆಗೆ ಕ್ಯಾನ್ಸರ್ ಹೀಗೆ ನಾನಾ ತರಹದ ಕಾಯಿಲೆಗಳಿಗೆ ತುತ್ತಾಗುತ್ತಿರುವುದು ನಾವು ಕಾಣುತ್ತಿದ್ದೇವೆ. ಮನುಷ್ಯ ಸದಾ ಚಟುವಟಿಕೆಯಿಂದ ಇದ್ದಾಗ ಮಾತ್ರ ಆರೋಗ್ಯ ಕೂಡ ನಿಯಂತ್ರಣದಲ್ಲಿರಲು ಸಾಧ್ಯ ಎಂದು ಪಿಡಿಜಿ ಡಾ.ಭಾಸ್ಕರ್ ಎಸ್ ರವರು ಹೇಳಿದರು.


ನ.29 ರಂದು ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದಲ್ಲಿ ರೋಟರಿ ಕ್ಲಬ್ ಪುತ್ತೂರು ಇದರ ಆಶ್ರಯದಲ್ಲಿ ಡಾ.ನಝೀರ್ ಡಯಾಬಿಟಿಸ್ ಸೆಂಟರ್ ಪುತ್ತೂರು, ಇ.ಡಿ.ಆರ್.ಟಿ ಬೆಂಗಳೂರು, ಪ್ರಗತಿ ಸ್ಪೆಶಾಲಿಟಿ ಆಸ್ಪತ್ರೆ ಪುತ್ತೂರು, ಇನ್ನರ್ ವ್ಹೀಲ್ ಕ್ಲಬ್ ಪುತ್ತೂರು, ರೋಟರ್ಯಾಕ್ಟ್ ಕ್ಲಬ್ ಪುತ್ತೂರು, ರೋಟರ‍್ಯಾಕ್ಟ್ ಪ್ರಗತಿ ಪ್ಯಾರಾಮೆಡಿಕಲ್ ಕಾಲೇಜು ಪುತ್ತೂರು, ರೋಟರ‍್ಯಾಕ್ಟ್ ಕ್ಲಬ್ ಪುತ್ತೂರು ಸ್ವರ್ಣ, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಪುತ್ತೂರು, ಹಾಸ್ಪಿಟಲ್ ಅಸೋಸಿಯೇಶನ್ ಪುತ್ತೂರು ಇವುಗಳ ಸಹಭಾಗಿತ್ವದಲ್ಲಿ ಜರಗಿದ ವಿಶ್ವ ಮಧುಮೇಹ ಮಾಸಾಚರಣೆ ಪ್ರಯುಕ್ತ ವಾಕಥಾನ್-ಜಾಗೃತಿ ಜಾಥಾ ಮತ್ತು ಪ್ರಾಜೆಕ್ಟ್ ಸ್ವೀಟ್ ಚೈಲ್ಡ್- ಮಕ್ಕಳ ಸಮ್ಮಿಲನ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಮನುಷ್ಯ ಕುಳಿತಲ್ಲಿಂದಲೇ ಕೆಲಸ ಮಾಡುತ್ತಾ ಒಂಥರಹ ರಿಮೋಟ್ ಕಂಟ್ರೋಲ್ ತರಹ ಆಗಿ ಬಿಟ್ಟಿದ್ದಾನೆ. ಮನುಷ್ಯ ಹಣ ಮಾಡುವಲ್ಲಿಯೇ ಗಮನ ಕೇಂದ್ರೀಕರಿಸಿದ್ದಾನೆಯೇ ಹೊರತು ತಾನು ಸೇವಿಸುವ ಆಹಾರ ಕ್ರಮ, ವ್ಯಾಯಾಮ, ಸಕಾರಾತ್ಮಕ ಚಿಂತನೆ ಬಗ್ಗೆ ಆಲೋಚಿಸದೆ ಆರೋಗ್ಯವನ್ನು ಕಡೆಗಣಿಸುತ್ತಿದ್ದಾನೆ. ಈ ನಿಟ್ಟಿನಲ್ಲಿ ಡಾ.ನಝೀರ್ ಅಹಮದ್‌ರವರು ಪುತ್ತೂರಿಗೆ ಆಗಮಿಸಿದ ಬಳಿಕ ಮಧುಮೇಹದ ಕುರಿತು ಸಾಕಷ್ಟು ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.


ಮಧುಮೇಹ ನಿಯಂತ್ರಣಕ್ಕೆ ಜಾಗೃತಿಯೇ ಅಗತ್ಯ-ಎ.ಸಿ ಗಿರೀಶ್‌ನಂದನ್:
ಪ್ರಗತಿ ಆಸ್ಪತ್ರೆ ಸಭಾಂಗಣದಲ್ಲಿ ಜರಗಿದ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಸಹಾಯಕ ಆಯುಕ್ತ ಗಿರೀಶ್ ನಂದನ್ ಮಾತನಾಡಿ, ನಾವು ದಿನಕ್ಕೆ ಎಷ್ಟು ಬಾರಿ ಮೊಬೈಲ್ ಬಳಕೆ ಮಾಡುತ್ತೇವೆ ಎಂಬುದನ್ನು ಅರಿತರೆ ನಮ್ಮ ದೇಹವನ್ನು ಯಾವುದು ನಿಯಂತ್ರಣ ಮಾಡುತ್ತಿದೆ ಎಂಬುದು ಗೊತ್ತಾಗುತ್ತದೆ. ನಮ್ಮ ದೇಹ ಒಂದು ಯಂತ್ರದಂತೆ. ನಾವು ಮಾಡುವ ಉತ್ತಮ ಅಭ್ಯಾಸಗಳಿಂದ ಆರೋಗ್ಯ ಕಾಪಾಡಬಹುದು. ಈ ನಿಟ್ಟಿನಲ್ಲಿ ಯೋಗ, ಮಿತವಾದ ಆಹಾರ ತಿನ್ನುವುದನ್ನು ಮಾಡಬೇಕು. ಸಮಯಕ್ಕೆ ಸರಿಯಾಗಿ ಆಹಾರ ಸ್ವೀಕರಿಸಬೇಕೆಂಬ ವಿಚಾರಗಳು ಮಕ್ಕಳ ಪಾಠದಲ್ಲೂ ಬರುತ್ತದೆ. ಆದರೆ ಅದನ್ನು ಯಾರು ಫೋಲೋಅಪ್ ಮಾಡುತ್ತಾರೆ ಎಂಬುದನ್ನು ನಮ್ಮನ್ನು ನಾವೇ ವಿಮರ್ಶೆ ಮಾಡಬೇಕಾಗಿದೆ. ಬಹಳಷ್ಟು ಮಂದಿ ಮೊಬೈಲ್‌ನಲ್ಲೇ ಸಮಯ ಕಳೆಯುತ್ತಾರೆ. ಆದರೆ ಅದನ್ನು ಒಳ್ಳೆಯ ರೀತಿಯಲ್ಲಿ ಬಳಸಿದರೆ ತೊಂದರೆಯಿಲ್ಲ. ಅಡಿಕ್ಟ್ ಆಗಬಾರದು ಎಂದರು.


ಭಾರತದಲ್ಲಿ 74 ಮಿಲಿಯನ್ ಡಯಾಬಿಟೀಸ್-ಡಾ.ಶ್ರೀಪತಿ ರಾವ್:
ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷರಾಗಿರುವ ಪ್ರಗತಿ ಆಸ್ಪತ್ರೆಯ ಡಾ.ಶ್ರೀಪತಿ ರಾವ್ ಅವರು ಮಾತನಾಡಿ, ಸಾಂಕ್ರಾಮೀಕ ರೋಗಗಳು ಹೆಚ್ಚಿರುವ ಸಂದರ್ಭ ಡಯಾಬಿಟಿಸ್ ಅಪರೂಪಕ್ಕೆ ಬರುವಂತಹ ಕಾಲವೊಂದಿತ್ತು. ಆದರೆ ಆಧುನಿಕ ಯುಗದಲ್ಲಿ ಡಯಾಬಿಟೀಸ್ ಹೆಚ್ಚಾಗಿದೆ. ಭಾರತದಲ್ಲಿ 74 ಮಿಲಿಯನ್ ಡಯಾಬಿಟೀಸ್ ಇದ್ದು ಸದ್ಯದಲ್ಲೆ ಚೀನಾವನ್ನು ಮೀರಿಸಲಿದೆ ಎಂದರು. 2019ರಲ್ಲಿ ಕೋವಿಡ್-19 ಜೀವನದ ಪಾಠ ಕಲಿಸಿದೆ. ಈ ರೋಗವನ್ನು ಚಿಕಿತ್ಸೆಯಿಂದಲ್ಲ ತಡೆಗಟ್ಟುವುದು, ನಮ್ಮ ಲೈಫ್ ಸ್ಟೈಲ್ ಚೇಂಜ್ ಮಾಡಿದರೆ ರೋಗ ತಡೆಗಟ್ಟಬಹುದು ಎಂದವರು ಹೇಳಿದರು.‌


ಪ್ರಾಜೆಕ್ಟ್ ಸ್ವೀಟ್ ಚೈಲ್ಡ್ ಮೂಲಕ ಮಕ್ಕಳಿಗೆ ಪ್ರಯೋಜನ-ಡಾ.ನಝೀರ್ ಅಹಮದ್:
ಕಾರ್ಯಕ್ರಮ ಸಂಯೋಜಕರಾಗಿರುವ ಕಲ್ಲಾರೆ ಡಾ.ನಝೀರ್ ಡಯಾಬಿಟಿಸ್ ಸೆಂಟರ್‌ನ ಡಾ.ನಝೀರ್ ಅಹಮದ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಡಯಾಬಿಟೀಸ್ ಜೀವನ ಶೈಲಿ ಆಧಾರಿತ ರೋಗವಾಗಿದೆ. ಪ್ರತಿ ೫ ಸೆಕೆಂಡಿಗೆ ಪ್ರಪಂಚದಲ್ಲಿ ಡಯಾಬಿಟೀಸ್‌ನಿಂದ ಸಾವಾಗುತ್ತಿದೆ. ಭವಿಷ್ಯದಲ್ಲಿ ಮಧುಮೇಹ ಬರಬಹುದುವೆಂದು ತಿಳಿದುಕೊಳ್ಳುವ ವ್ಯವಸ್ಥೆಯೂ ಇವತ್ತಿದೆ. ಹಾಗಾಗಿ ಡಯಾಬಿಟೀಸ್ ಇಲ್ಲದವರು ಬರುವ ಸಾಧ್ಯತೆಯನ್ನು ಗುರುತಿಸಿಕೊಳ್ಳಿ, ಇದ್ದವರು ನಿಯಂತ್ರಣ ಮಾಡಿಕೊಳ್ಳಿ. ನಮ್ಮ ಆಹಾರದಲ್ಲಿ ಪತ್ಯೆ ಮಾಡಿ. ಜಂಕ್ -ಡ್ ಕಂಟ್ರೋಲ್ ಮಾಡಿ. ತಿನ್ನುವ ಪ್ರಮಾಣ ಕಡಿಮೆ ಮಾಡಿ, ನಿತ್ಯ ವ್ಯಾಯಾಮ, ಸರಿಯಾದ ನಿದ್ದೆ, ಮಾನಸಿಕ ನೆಮ್ಮದಿ, ಉತ್ತಮ ಹವ್ಯಾಸದಿಂದ ಡಯಾಬಿಟೀಸ್ ಕಂಟ್ರೋಲ್ ಮಾಡಬಹುದು ಎಂದರು. ಇವತ್ತು ಸಣ್ಣ ಮಕ್ಕಳಲ್ಲೂ ಡಯಾಬಿಟೀಸ್ ಬರುತ್ತದೆ. ಅವರಿಗೆ ಇನ್ಸುಲಿನ್ ಅಗತ್ಯವಿರುತ್ತದೆ. ಇದನ್ನು ಶಾಲೆಯಲ್ಲಿ ಕೊಡಲು ಮಕ್ಕಳ ಪೋಷಕರು ಹಿಂಜರಿಯುತ್ತಾರೆ. ಈ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ. ಪ್ರಾಜೆಕ್ಟ್ ಸ್ವೀಟ್ ಚೈಲ್ಡ್ ಮೂಲಕ ನಾವು ಎಷ್ಟೋ ಮಕ್ಕಳಿಗೆ ಪ್ರಯೋಜನ ಕೊಡಲು ಸಿದ್ದರಿದ್ದೇವೆ ಎಂದರು.


ರೋಟರಿ ಪುತ್ತೂರು ಆರೋಗ್ಯ ಕ್ಷೇತ್ರದಲ್ಲಿ ಬಹಳಷ್ಟು ಸಾಧಿಸಿದೆ-ಜೈರಾಜ್ ಭಂಡಾರಿ:
ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಜೈರಾಜ್ ಭಂಡಾರಿರವರು ಉದ್ಘಾಟಕರಾದ ಪಿಡಿಜಿ ಡಾ.ಭಾಸ್ಕರ್ ಎಸ್.ರವರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುತ್ತೂರಿನ ಹಿರಿಯ ಕ್ಲಬ್ ಎನಿಸಿದ ರೋಟರಿ ಪುತ್ತೂರು ಕ್ಲಬ್ ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದೆ. ಬ್ಲಡ್ ಬ್ಯಾಂಕ್, ಡಯಾಲಿಸಿಸ್ ಸೆಂಟರ್, ಕಣ್ಣಿನ ಆಸ್ಪತ್ರೆಯನ್ನು ಸಮಾಜಕ್ಕೆ ಪರಿಚಯಿಸಿದ ಹೆಗ್ಗುರುತು ಕ್ಲಬ್ ನದ್ದಾಗಿದೆ ಎಂದರು.

ಕಲಿಕಾ ಚಟುವಟಿಕೆ ವಿತರಣೆ/ಸ್ಪರ್ಧಾ ವಿಜೇತರಿಗೆ ಬಹುಮಾನ:
ಪ್ರಾಜೆಕ್ಟ್ ಸ್ವೀಟ್ ಚೈಲ್ಡ್ ಮೂಲಕ ಎಂಬಿಎ ವಿದ್ಯಾರ್ಥಿನಿ ಉಮಾಶ್ರೀ ಮತ್ತು ನಸೀಬಾ ಅವರಿಗೆ ಕಲಿಕಾ ಚುಟುವಟಿಕೆ ವಿತರಿಸಲಾಯಿತು. ಉಮಾಶ್ರೀ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಪ್ರಗತಿ ಪ್ಯಾರಮೆಡಿಕಲ್ ವಿದ್ಯಾರ್ಥಿಗಳಿಗೆ ವಿಶ್ವ ಮಧುಮೇಹ ಕುರಿತು ವಿವಿಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಅದರಲ್ಲಿ ವಿಜೇತರಿಗೆ ಇದೇ ಸಂದರ್ಭ ಬಹುಮಾನ ವಿತರಣೆ ನಡೆಯಿತು.
ಡಾ.ಅಶೋಕ್ ಪಡಿವಾಳ್ ಅತಿಥಿಗಳಿಗೆ ಸ್ಮರಣಿಕೆ ನೀಡಿದರು. ಅಂಕಿತಾ ಪ್ರಾರ್ಥಿಸಿದರು. ರೋಟರಿ ಕ್ಲಬ್ ಕಾರ್ಯದರ್ಶಿ ಸುಜಿತ್ ರೈ ವಂದಿಸಿದರು. ಪ್ರೀತಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಜಾಥಾ ಹಾಗೂ ಸಭಾ ಕಾರ್ಯಕ್ರಮದಲ್ಲಿ ಚೇತನಾ ಆಸ್ಪತ್ರೆಯ ಡಾ.ಶ್ರೀಕಾಂತ್ ರಾವ್, ಚರ್ಮರೋಗ ತಜ್ಞ ಡಾ.ನರಸಿಂಹ ಶರ್ಮ ಕಾನಾವು, ಪುತ್ತೂರು ಸಿಟಿ ಆಸ್ಪತ್ರೆಯ ಡಾ.ಗೋಪಿನಾಥ್ ಪೈ, ಪುತ್ತೂರು ವರ್ತಕ ಸಂಘದ ಅಧ್ಯಕ್ಷ ವಾಮನ್ ಪೈ, ಸಮುದಾಯ ವಿಭಾಗದ ನಿರ್ದೇಶಕ ಸೋಮಶೇಖರ್ ರೈ ಸಹಿತ ಸದಸ್ಯರು, ಪ್ರಗತಿ ಪ್ಯಾರಾಮೆಡಿಕಲ್ ನ ವಿದ್ಯಾರ್ಥಿಗಳು, -.ಪತ್ರಾವೋ ಆಸ್ಪತ್ರೆ ಸಿಬ್ಬಂದಿ, ಡಾ.ನಝೀರ್ ಡಯಾಬಿಟಿಸ್ ಸೆಂಟರ್ ಸಿಬ್ಬಂದಿ ಸಹಿತ ಹಲವರು ಪಾಲ್ಗೊಂಡಿದ್ದರು.

ವಾಕಥಾನ್ ಜಾಥಾ…
ವಾಕಥಾನ್ ಜಾಥಾ ಉದ್ಘಾಟನೆ ಬಳಿಕ ಜಾಥಾವು ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದಿಂದ ಸಿಟಿ ಆಸ್ಪತ್ರೆ-ಅರುಣಾ ಥಿಯೇಟರ್ ಮೂಲಕ ಪುತ್ತೂರು ಬಸ್ಸು ನಿಲ್ದಾಣ, ಎಂ.ಟಿ ರಸ್ತೆ-ಎಪಿಎಂಸಿ ರಸ್ತೆ-ಶ್ರೀಧರ್ ಭಟ್ ಅಂಗಡಿ ಎದುರಿನಿಂದ ಸಾಗಿ ಬೊಳ್ವಾರು ಪ್ರಗತಿ ಆಸ್ಪತ್ರೆಗೆ ಆಗಮಿಸಿತು. ಈ ಸಂದರ್ಭದಲ್ಲಿ ಜಾಥಾದಲ್ಲಿ ಭಾಗವಹಿಸಿದವರು ಮಧುಮೇಹ ಜಾಗೃತಿಯ ಟೀ-ಶರ್ಟ್ ಅನ್ನು ಧರಿಸಿ ಜಾಥಾದ ಕಳೆಯನ್ನು ಹೆಚ್ಚಿಸಿದ್ದರು.

15 ಮಕ್ಕಳಿಗೆ ತಿಂಗಳಿಗೆ ರೂ.20 ಸಾವಿರದಂತೆ ವೆಚ್ಚ..
ಮಧುಮೇಹಿ ಮಕ್ಕಳಿಗೆ ನೆರವಾಗಲು ಪ್ರಾಜೆಕ್ಟ್ ಸ್ವೀಟ್ ಚೈಲ್ಡ್(ರೋಟರಿ ಪುತ್ತೂರು ಡಯಾಬಿಟಿಕ್ ಚಿಲ್ಡ್ರನ್ ಕೇರ್ ಸೆಂಟರ್) ಎಂಬ ಯೋಜನೆಯನ್ನು ರೋಟರಿ ಕ್ಲಬ್ ಪುತ್ತೂರು ವತಿಯಿಂದ ಡಾ. ನಝೀರ್ ಡಯಾಬಿಟಿಕ್ ಸೆಂಟರ್ ಮತ್ತು ಇಡಿಆರ್‌ಟಿ ಬೆಂಗಳೂರು ಇವರ ಸಹಯೋಗದೊಂದಿಗೆ ಟೈಪ್-1 ಮಧುಮೇಹದಿಂದ ಬಳಲುತ್ತಿರುವ ಅರ್ಹ ಫಲಾನುಭವಿ ಮಕ್ಕಳಿಗೆ ತಿಂಗಳಿಗೆ 20 ಸಾವಿರದಂತೆ ಸುಮಾರು 15 ಮಕ್ಕಳಿಗೆ ಬೆಲೆ ಬಾಳುವ ಇನ್ಸುಲಿನ್ ಮತ್ತು ಗ್ಲುಕೋಮೀಟರ್ ಅನ್ನು ಕಳೆದ ನಾಲ್ಕು ವರ್ಷಗಳಿಂದ ನೀಡುತ್ತಾ ಬಂದಿದೆ. ಈ ಯೋಜನೆಯು ಮಕ್ಕಳಿಗೆ ವೈದ್ಯಕೀಯ ನೆರವು, ಅವಶ್ಯಕ ವೈದ್ಯಕೀಯ ಉಪಕರಣಗಳು, ಔಷಧ ವಿತರಿಸುವ ಮತ್ತು ಅವಶ್ಯಕತೆ ಇರುವವರಿಗೆ ಶಿಕ್ಷಣಕ್ಕೆ ಆರ್ಥಿಕ ನೆರವನ್ನು ಒದಗಿಸುವ ಮತ್ತು ಟೈಪ್ 1 ಡಯಾಬಿಟೀಸ್ ರೋಗ ಮತ್ತು ಅದರ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿ ಮಕ್ಕಳು ಮತ್ತು ಪೋಷಕರ ಆತ್ಮವಿಶ್ವಾಸವನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ.
-ಡಾ.ನಝೀರ್ ಅಹಮದ್, ಕಾರ್ಯಕ್ರಮ ಸಂಯೋಜಕರು

LEAVE A REPLY

Please enter your comment!
Please enter your name here