ಬರಹ: ವಿಜಯ ಕುಮಾರ್ ಕಡಬ
ಕಡಬ: ತಾಲೂಕು ಕೇಂದ್ರವಾಗಿ, ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿದ್ದರೂ ಕಡಬ ಪೇಟೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಮಾತ್ರ ಜೀವಂತವಾಗಿಯೇ ಉಳಿದಿದೆ. ಅದರಲ್ಲೂ ವಾಹನ ಪಾರ್ಕಿಂಗ್ ಸಮಸ್ಯೆಯಂತೂ ದಿನದಿಂದ ದಿನಕ್ಕೆ ಕಗ್ಗಂಟಾಗಿದೆ. ಎಲ್ಲೆಂದರಲ್ಲಿ ವಾಹನಗಳ ಪಾರ್ಕಿಂಗ್ ಸಾರ್ವಜನಿಕರಿಗೆ ನಡೆದಾಡಲು ಕಷ್ಟವಾಗುವಂತೆ ಮಾಡಿದೆ. ಹತ್ತು ವರ್ಷಗಳ ಹಿಂದಿನ ಗ್ರಾ.ಪಂ.ನ ಯೋಜನೆ ಕೈಗೂಡದೇ ಇರುವುದು ಇಂದಿನ ಪಾರ್ಕಿಂಗ್ ಸಮಸ್ಯೆಗೆ ಕಾರಣವಾಗಿದೆ.
ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಬರುವ ಕಡಬ ಮುಖ್ಯ ಪೇಟೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ, ಕಟ್ಟಡಗಳು ವ್ಯಾಪಾರ ವ್ಯವಹಾರ ಮಳಿಗೆಗಳು ಹೆಚ್ಚಾಗುತ್ತಲೇ ಇವೆ. ಅಂತೆಯೇ ವಾಹನಗಳ ಸಂಖ್ಯೆ ಕೂಡಾ ಅಷ್ಟೇ ವೇಗವಾಗಿ ವೃದ್ಧಿಯಾಗುತ್ತಿದೆ. ಹೆಸರಿಗೆ ಇಲ್ಲಿ ಕೆ.ಎಸ್.ಆರ್ಟಿಸಿ ಸಂಚಾರ ನಿಯಂತ್ರಕರ ಕಛೇರಿ ಇದೆ, ಇಲ್ಲಿನ ಬಸ್ ನಿಲ್ದಾಣದ ನಿರ್ಮಾಣ ಮಾತ್ರ ಕನಸಿನ ಮಾತಾಗಿದೆ. ಒಳಚರಂಡಿ ವ್ಯವಸ್ಥೆ ಕೂಡ ಅಷ್ಟಕ್ಕಷ್ಟೆ. ಜೋರು ಮಳೆಯಾದರೆ ಕೆಲವೆಡೆ ಚರಂಡಿ ನೀರು ರಸ್ತೆಯಲ್ಲೇ ಹರಿದಾಡುತ್ತಿದೆ. ಈ ಎಲ್ಲಾ ಮೂಲಭೂತ ಸೌಕರ್ಯಗಳ ಕೊರತೆಯ ಮಧ್ಯೆ ಇಲ್ಲಿ ಜನತೆಗೆ ಮುಖ್ಯವಾಗಿ ಕಾಡುವುದು ವಾಹನಗಳ ಪಾರ್ಕಿಂಗ್ ವ್ಯವಸ್ಥೆ.
ಕಡಬದಲ್ಲಿ ಪಾರ್ಕಿಂಗ್ ಎನ್ನುವುದೇ ದೊಡ್ಡ ಸಮಸ್ಯೆ, ಕಡಬ ಪೇಟೆಗೆ ನಾನಾ ಕಡೆಗಳಿಂದ ಬರುವ ವಾಹನಗಳಿಗೆ, ಬಾಡಿಗೆ ವಾಹನಗಳಿಗೆ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಇಲ್ಲವೇ ಇಲ್ಲ. ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುವುದೇ ಇಲ್ಲಿ ದೊಡ್ಡ ಸಮಸ್ಯೆಯಾಗಿದೆ. ಕಡಬದಲ್ಲಿ ಒಂದು ಕಾಲದಲ್ಲಿ ಸಮಾರು 75-80 ಖಾಸಗೀ ಜೀಪುಗಳು ಗ್ರಾಮೀಣ ಭಾಗದಿಂದ ಕಡಬಕ್ಕೆ ಬಾಡಿಗೆ ಮಾಡುತ್ತಿದ್ದವು. ಇದೀಗ ಅಷ್ಟೊಂದು ಜೀಪುಗಳಿಲ್ಲದಿದ್ದರೂ ಕೆಲವು ಜೀಪುಗಳು ಹಾಗೂ ಪಿಕ್ಅಪ್ ವಾಹನಗಳು ಪೇಟೆಯಲ್ಲಿ ರಸ್ತೆ ಬದಿಯಲ್ಲಿಯೇ ಪಾರ್ಕಿಂಗ್ ಮಾಡುವುದು ಅನಿವಾರ್ಯವಾಗಿದೆ. ಇನ್ನು ೩೫೦ಕ್ಕೂ ಹೆಚ್ಚು ಇರುವ ಅಟೋ ರಿಕ್ಷಾಗಳು ಪಂಜ ರಸ್ತೆಯ ಬದಿಯಲ್ಲಿರುವ ಅಟೋ ಪಾರ್ಕಿಂಗ್ ಹಾಗೂ ಮಾಡದ ಬಳಿ ಇರುವ ಅಟೋ ಪಾರ್ಕಿಂಗ್ನಲ್ಲಿ ನಿಲುಗಡೆಯಾಗುತ್ತಿದ್ದರೂ ಅದು ಸಾಕಾಗುತ್ತಿಲ್ಲ. ನೂತನ ತಾಲೂಕು ಕಛೇರಿ ಬಳಿ ‘ಅಟೋ ತಂಗುದಾಣ’ದ ನಾಮ ಫಲಕವಿದ್ದರೂ ಅಲ್ಲಿ ಅಟೋಗಳು ನಿಲ್ಲುವುದು ಕಡಿಮೆ, ಹಾಗಂತ ಪೇಟೆಯಲ್ಲಿ ಕೆಲವು ಕಡೆ ಅಟೋಗಳು ನಿಲುಗಡೆ ಮಾಡುತ್ತವೆ. ಟ್ಯಾಕ್ಸಿಗಳು, ವ್ಯಾನ್ಗಳಿಗೆ ನಿಗದಿತ ಪಾರ್ಕಿಂಗ್ ವ್ಯವಸ್ಥೇಯೇ ಇಲ್ಲ. ಇವೆಲ್ಲಾ ಪಂಜ ರಸ್ತೆಯ ಬಳಿಯಿರುವ ಪ.ಪಂ. ಕಛೇರಿ ಸನಿಹದ ಮುಖ್ಯ ರಸ್ತೆಯಲ್ಲಿ ನಿಲ್ಲುತ್ತವೆ. ಅಘೋಷಿತ ತಾತ್ಕಾಲಿಕ ವ್ಯವಸ್ಥೆಗಳು ಈಗ ಕಡಬದ ಅಂದವನ್ನು ಕೆಡಿಸುವುದಲ್ಲದೆ, ಪಾದಾಚಾರಿಗಳಿಗೆ ದ್ವಿಚಕ್ರವಾಹನ ಸವಾರರಿಗೆ ಅನಾನುಕೂಲ ಪರಿಸ್ಥಿತಿ ನಿರ್ಮಿಸಿವೆ. ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಇಲ್ಲಿನ ವಾಹನ ದಟ್ಟಣೆ ಹಾಗೂ ಅನಿಯಮಿತ ಪಾರ್ಕಿಂಗ್ ವ್ಯವಸ್ಥೆಯಿಂದ ರಸ್ತೆ ದಾಟುವುದೇ ದುಸ್ತರ ಎನ್ನುವಂತಾಗಿದೆ.
ಬೆಳಿಗ್ಗೆ ಹಾಗೂ ಸಂಜೆಯ ವೇಳೆ ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳ ಭರಾಟೆಯಲ್ಲಿ ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದುಕೊಂಡು ನಡೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಅಂದಿನ ಪಂಚಾಯತ್ ಯೋಜನೆ ಕೈಗೂಡಲೇ ಇಲ್ಲ!:
ಕಡಬದಲ್ಲಿ ಶುಲ್ಕ ಸಹಿತ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆಗೆ ಅಂದಿನ ಗ್ರಾಮ ಪಂಚಾಯಿತಿ ಹತ್ತು ವರ್ಷಗಳ ಹಿಂದೆ ನಿರ್ಧಾರ ಮಾಡಿತ್ತು. ಈ ಯೋಜನೆ ಕೈಗೂಡದೆ ಹಳ್ಳ ಹಿಡಿದಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಪ್ರಥಮ ಬಾರಿಗೆ ಎಂಬಂತೆ ಕಡಬದಲ್ಲಿ ವ್ಯವಸ್ಥಿತ ಶುಲ್ಕ ಸಹಿತ ವಾಹನ ಪಾರ್ಕಿಂಗ್ ವ್ಯವಸ್ಥೆ ಆಗುತ್ತಿತ್ತು. ಆದರೆ ಅದು ಕನಸಾಗಿಯೇ ಉಳಿದಿದೆ. ಕಡಬ ಗ್ರಾ. ಪಂ. ನ ಅಪೇಕ್ಷೆಗೆ ಜಿಲ್ಲಾಧಿಕಾರಿಗಳು ಹಸಿರು ನಿಶಾನೆ ತೋರಿಸಿ ಸಂಬಂಧಪಟ್ಟ ಇಲಾಖೆಯಿಂದ ವರದಿ ಕೇಳಿದ್ದರು. ಕಡಬ ಠಾಣಾಧಿಕಾರಿಯವರು ಜಿಲ್ಲಾಧಿಕಾರಿಗಳ ಆದೇಶದಂತೆ ಉದ್ದೇಶಿತ ಸ್ಥಳ ಪರಿಶೀಲನೆ ಮಾಡಿ ವರದಿ ಕೂಡಾ ನೀಡಿದ್ದರು. ಅಂದಿನ ಗ್ರಾ. ಪಂ. ಅಧ್ಯಕ್ಷ ಕೆ.ಎಂ.ಹನೀಫ್ ಅವರು ವರ್ತಕರು, ವಾಹನ ಚಾಲಕ ಮಾಲಕರು, ಜನಪ್ರತಿನಿಧಿಗಳು, ಕಂದಾಯ ಹಾಗೂ ಪೋಲೀಸ್ ಅಧಿಕಾರಿಗಳ ಸಭೆ ನಡೆಸಿ ಒಮ್ಮತದ ನಿರ್ಣಯಕ್ಕೆ ಬಂದು ಕಡಬ ಸೈಂಟ್ ಜೋಕಿಮ್ಸ್ ವಿದ್ಯಾ ಸಂಸ್ಥೆಯ ಎದುರುಗಡೆ ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬದಿಯಲ್ಲಿ ಸರ್ವೆ ನಂ 62 1ಎ 1ಪಿ3 ರಲ್ಲಿ 50 ಸೆಂಟ್ಸ್ ಹಾಗೂ ಸ.ನಂ 62 1ಎ1ಪಿ 2 ರ 42 ಸೆಂಟ್ಸ್ ಜಾಗವನ್ನು ಗುರುತಿಸಿ ಅಂದಿನ ವಿಶೇಷ ತಹಶಿಲ್ದಾರ್ ವೈದ್ಯನಾಥ್ ಮುಖಾಂತರ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಗಿತ್ತು. ಈ ಬಗ್ಗೆ ಲೋಕೋಪಯೋಗಿ ಇಲಾಖೆಯಿಂದ ನಿರಾಕ್ಷೇಪಣಾ ಪತ್ರವನ್ನೂ ಪಡೆಯಲಾಗಿತ್ತು. ಪಂಚಾಯಿತಿ ಸೂಚಿಸಿದ ಉದ್ದೇಶಿತ ಸ್ಥಳ ಪಾರ್ಕಿಂಗ್ ವಲಯ ಎಂದು ನೋಟಿಸ್ ಮಾಡಬೇಕಾಗಿತ್ತು. ಉದ್ದೇಶಿತ ಸ್ಥಳದಲ್ಲಿ ಸಮತಟ್ಟುಗೊಳಿಸಲಾಗಿತ್ತು. ಅಂದು ಇದು ಐವತ್ತು ಲಕ್ಷ ರೂ.ನ ಯೋಜನೆಯಾಗಿತ್ತು. ವಿವಿಧ ಹಂತದಲ್ಲಿ ಕಾಮಗಾರಿಯನ್ನು ಪೂರ್ತಿಗೊಳಿಸಲು ನಿರ್ಧರಿಸಲಾಗಿತ್ತು. ಗ್ರಾ.ಪಂ. ನಿಂದ ನಾಲ್ಕು ಲಕ್ಷ ರೂ ಕಾದಿರಿಸುವುದು,. ಸಂಸದರು, ಶಾಸಕರು, ಜಿ.ಪಂ., ತಾ.ಪಂ.ಗಳ ಅನುದಾನಗಳನ್ನು ಕ್ರೋಢೀಕರಿಸಿ ಪಾರ್ಕಿಂಗ್ ಮಾಡುವ ಉದ್ದೇಶ ಹೊಂದಲಾಗಿತ್ತು. ಪಾರ್ಕಿಂಗ್ನಲ್ಲಿ ವ್ಯವಸ್ಥಿತ ಕಟ್ಟಡ, ಶೌಚಾಲಯ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಮುಂತಾದ ಮೂಲಭೂತ ಸೌಕರ್ಯಗಳೊಂದಿಗೆ ಸಣ್ಣದೊಂದು ಗಾರ್ಡನ್ ಕೂಡಾ ಈ ಯೋಜನೆಯಲ್ಲಿ ಸೇರಿತ್ತು. ಇದು ಸಾಕಾರಗೊಳ್ಳುತ್ತಿದ್ದರೆ ಕಡಬದ ಟ್ರಾಫಿಕ್ ಸಮಸ್ಯೆ ನಿವಾರಣೆಯಾಗುತ್ತಿತ್ತು. ಆದರೆ ಇದು ಈಗ ಇತಿಹಾಸ.
ಸ್ಥಳೀಯ ಆಡಳಿತ ಎಚ್ಚೆತ್ತುಕೊಳ್ಳುವುದು ಯಾವಾಗ?
ಅಧಿಕಾರಿಗಳು, ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆ-ಹನೀಫ್ ಕೆ.ಎಂ.
ಈ ಬಗ್ಗೆ ಮಾಜಿ ಗ್ರಾ.ಪಂ. ಅಧ್ಯಕ್ಷ ಹನೀಫ್ ಕೆ.ಎಂ. ಅವರು ಪ್ರತಿಕ್ರಿಯೆ ನೀಡಿ, ನನ್ನ ಅಧ್ಯಕ್ಷತೆಯ ಅವಧಿಯಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಒಂದು ರೂಪುರೇಷೆ ನೀಡಲು ಸಾಕಷ್ಟು ಪ್ರಯತ್ನ ನಡೆಸಲಾಗಿತ್ತು, ಈ ಪ್ರಯತ್ನದ ಫಲವಾಗಿ ಕಡತ ಜಿಲ್ಲಾಧಿಕಾರಿಗಳ ಕಛೇರಿಗೆ ತಲುಪಿತ್ತು, ನನ್ನ ಅವಧಿ ಮುಗಿದ ಬಳಿಕ ಅದನ್ನು ಅಲೋಅಪ್ ಮಾಡುವವರು ಇರಲಿಲ್ಲ, ಅಲ್ಲದೆ ಪಟ್ಟಣ ಪಂಚಾಯತ್ ಆದ ಬಳಿಕವೂ ಅಧಿಕಾರಿಗಳು ಈ ಬಗ್ಗೆ ಯಾವುದೇ ಇಚ್ಚಾಶಕ್ತಿಯನ್ನು ತೋರ್ಪಡಿಸಲಿಲ್ಲ, ಪರಿಣಾಮ ಇಂದು ಕಡಬ ಪೇಟೆಯಲ್ಲಿ ರಸ್ತೆಯಲ್ಲಿಯೇ ವಾಹನ ಪಾರ್ಕಿಂಗ್ ಮಾಡುವಷ್ಟರ ಮಟ್ಟಕ್ಕೆ ತಲುಪಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಪಂಚಾಯತ್ ಹಾಗೂ ಜನಪ್ರತಿನಿಽಗಳು ಗಮನಹರಿಸುವುದು ಉತ್ತಮ ಎಂದು ಹೇಳಿದರು.
ಪಾರ್ಕಿಂಗ್ ಅವ್ಯವಸ್ಥೆ ಗಮನಕ್ಕೆ ಬಂದಿದೆ-ಎಸ್.ಐ. ಅಭಿನಂದನ್
ಈ ಬಗ್ಗೆ ಕಡಬ ಎಸ್.ಐ. ಅಭಿನಂದನ್ ಅವರು ಪ್ರತಿಕ್ರಿಯೆ ನೀಡಿ ಕಡಬ ಪೇಟೆಯಲ್ಲಿ ಪಾರ್ಕಿಂಗ್ ಅವ್ಯವಸ್ಥೆ ಇರುವುದು ಕಂಡುಬಂದಿದೆ, ರಸ್ತೆಯಲ್ಲಿ ವಾಹನ ನಿಲುಗಡೆ, ನಿಯಮ ಮೀರಿ ವಾಹನ ಪಾರ್ಕಿಂಗ್ಗೆ ನಾವು ಕಡಿವಾಣ ಹಾಕುತ್ತೇವೆ, ಆದರೆ ಪಾರ್ಕಿಂಗ್ ವ್ಯವಸ್ಥೆ ಸ್ಥಳ ಗುರುತು ಮೊದಲಾದ ಕೆಲಸಗಳು ಸ್ಥಳೀಯ ಆಡಳಿತ ಮಾಡಬೇಕಾಗಿದ್ದು ಬಳಿಕ ನಮಗೆ ಪೂರ್ಣ ಪ್ರಮಾಣದಲ್ಲಿ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ಈಗಾಗಲೇ ಪಿಡಬ್ಲ್ಯೂಡಿ ರಸ್ತೆಯಲ್ಲಿ ಅಪಘಾತಗಳ ಪ್ರಮಾಣ ಹೆಚ್ಚಿರುವುದಕ್ಕೆ ಕೆಲವೊಂದು ಮಾರ್ಪಡುಗಳನ್ನು ಸೂಚಿಸಿ ಪಿಡಬ್ಲ್ಯೂಡಿ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.