ಪುತ್ತೂರು: ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿದ್ದ ಇಬ್ರಾಹಿಂ ಶಾ ಎಂಬವರಿಗೆ ತಂಗಿಯ ಮದುವೆಯಲ್ಲಿ ಭಾಗವಹಿಸಲು ನ್ಯಾಯಾಲಯ ಎರಡು ದಿನಗಳ ಜಾಮೀನು ಮಂಜೂರು ಮಾಡಿತ್ತು. ಸುಳ್ಯದ ಇಬ್ರಾಹಿಂ ಶಾ ನಾವೂರು ಪ್ರಕರಣದಲ್ಲಿ 15ನೇ ಆರೋಪಿಯಾಗಿ ಪೊಲೀಸರು ಬಂಧಿಸಿದ್ದರು. ಸುಳ್ಯದಲ್ಲಿ ಈತನ ತಂಗಿಯ ಮದುವೆ ಶನಿವಾರ ನಡೆದಿದ್ದು, ಮದುವೆಯಲ್ಲಿ ಭಾಗಿಯಾಗಲೆಂದು ಈತನಿಗೆ ಎರಡು ದಿನಗಳ ಜಾಮೀನು ಮಂಜೂರಾಗಿತ್ತು. ಮೈಸೂರು ಜೈಲಲ್ಲಿದ್ದ ಈತನನ್ನು ಪೊಲೀಸ್ ಭದ್ರತೆಯಲ್ಲಿ ಮದುವೆ ಸಮಾರಂಭ ಸ್ಥಳಕ್ಕೆ ಕರೆ ತರಲಾಗಿತ್ತು. ಮದುವೆ ಮುಗಿದು ಆತನನ್ನು ಮತ್ತೆ ಜೈಲಿಗೆ ಹಾಜರುಪಡಿಸಲಾಗಿದೆ. 2022 ಜುಲೈ 26ರಂದು ರಾತ್ರಿ ಪ್ರವೀಣ್ ನೆಟ್ಟಾರು ಅವರ ಹತ್ಯೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಎನ್ಐಎ ಹಲವರನ್ನು ಬಂಧಿಸಿ ಜೈಲಿಗಟ್ಟಿತ್ತು. ನಾಪತ್ತೆಯಾಗಿರುವ ಕೆಲವು ಆರೋಪಿಗಳಿಗಾಗಿ ಎನ್ ಐಎ ಶೋಧ ನಡೆಸುತ್ತಿದೆ.