ಪುತ್ತೂರು: ಅಂತರಾಷ್ಟ್ರೀಯ ಮಾನ್ಯತೆಯ ‘ಜೈಪುರ ಸಾಹಿತ್ಯೋತ್ಸವ’ದ ಮಾದರಿಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನ ಅಶೋಕ ಲೀಲಾ ಪ್ಯಾಲೇಸ್ ನಲ್ಲಿ ಡಿಸೆಂಬರ್ 2 ಮತ್ತು 3ರಂದು ನಡೆದ ‘ಬೆಂಗಳೂರು ಲಿಟರೇಚರ್ ಫೆಸ್ಟಿವಲ್’ ಕಾರ್ಯಕ್ರಮದಲ್ಲಿ ಪುತ್ತೂರಿನ ಡಾ. ನರೇಂದ್ರ ರೈ ದೇರ್ಲ ಮತ್ತು ಜಬ್ಬಾರ್ ಸಮೋ ಅವರು ಭಾಗವಹಿಸಿದ್ದರು. ಕಳೆದ 12 ವರ್ಷಗಳಿಂದ ನಡೆದು ಬರುತ್ತಿರುವ ಈ ಸಾಹಿತ್ಯೋತ್ಸವದಲ್ಲಿ ಈ ಬಾರಿ ಸುಮಾರು 300 ಜನ ರಾಷ್ಟ್ರೀಯ – ಅಂತರಾಷ್ಟ್ರೀಯ ಖ್ಯಾತಿಯ ಸಂಪನ್ಮೂಲ ವ್ಯಕ್ತಿಗಳು ಸಾಹಿತ್ಯ, ಇತಿಹಾಸ, ಅನುವಾದ, ಪುರಾಣ, ಕಲೆ – ಸಂಗೀತ – ಸಾಹಿತ್ಯದ ಬಗ್ಗೆ ಉಪನ್ಯಾಸ-ಪ್ರಾತ್ಯಕ್ಷಿಕೆಗಳನ್ನು ನೀಡಿದರು.
ಕನ್ನಡ, ಇಂಗ್ಲಿಷ್, ಹಿಂದಿ, ಮುಂತಾದ ಭಾಷೆಗಳ ಪ್ರೌಢ ಉಪನ್ಯಾಸ ಸರಣಿ ಕಾರ್ಯಕ್ರಮಗಳ ನಡುವೆ ತುಳು, ಕೊಂಕಣಿ, ಬ್ಯಾರಿ, ಕನ್ನಡ ಭಾಷೆಯ ಕವಿಗೋಷ್ಠಿ ಈ ಬಾರಿ ಸೇರಿಕೊಂಡದ್ದು ವಿಶೇಷವಾಗಿತ್ತು. ಸತತ ದಿನವಿಡೀ ಸುಮಾರು ಏಳು ವೇದಿಕೆಗಳಲ್ಲಿ ನಡೆದ ಎರಡು ದಿನದ ಕಾರ್ಯಕ್ರಮಗಳಲ್ಲಿ ಸುಮಾರು 25 ಸಾವಿರಕ್ಕಿಂತ ಹೆಚ್ಚು ಜನರು ಕೇಳುಗರಾಗಿ ಭಾಗವಹಿಸಿದ್ದರು. ಚಂದ್ರಶೇಖರ ಕಂಬಾರ, ಶಶಿ ತರೂರು, ರಾಮಚಂದ್ರ ಗುಹಾ, ಸುಧಾ ಮೂರ್ತಿ, ಅಬ್ರಾಹಂ, ಅರುಂಧತಿ, ಅಮಿಷ ತ್ರಿಪಾಠಿ, ಕೆ ವಿ ಅಕ್ಷರ, ಪುರುಷೋತ್ತಮ ಬಿಳಿಮಲೆ, ವಸುದೇಂದ್ರ, ವಿವೇಕ್ ಶಾನುಬಾಗ್, ಹನೂರು ಕೃಷ್ಣಮೂರ್ತಿ, ಬಸವಲಿಂಗಯ್ಯ ಮುಂತಾದ ತಜ್ಞರ ಭಾಗವಿಸುವಿಕೆಯ ಜೊತೆಗೆ ಕರಾವಳಿಯ ಪುತ್ತೂರಿನಿಂದ ಲೇಖಕ – ಅಂಕಣಕಾರ ನರೇಂದ್ರ ರೈ ದೇರ್ಲ ಮತ್ತು ಯಕ್ಷಗಾನ ಕಲಾವಿದ ಜಬ್ಬಾರ್ ಸಮೋ ಭಾಗವಹಿಸಿದ್ದರು. ಪುರುಷೋತ್ತಮ ಬಿಳಿಮಲೆಯವರು ನಿರ್ವಹಿಸಿದ ಕವಿಗೋಷ್ಠಿಯಲ್ಲಿ ಏಕೈಕ ತುಳು ಕವಿಯಾಗಿ ದೇರ್ಲ ಅವರು ‘ಅಮರ’ ಎನ್ನುವ ಕವಿತೆಯನ್ನು ವಾಚಿಸಿದರು. ಯಕ್ಷಗಾನ ಪ್ರಾತ್ಯಕ್ಷಿಕೆಯನ್ನು ಜಬ್ಬಾರ್ ಅವರು ಅರ್ಥಪೂರ್ಣವಾಗಿ ನಡೆಸಿಕೊಟ್ಟದ್ದು ಪ್ರೇಕ್ಷಕರ ಅಭಿನಂದನೆಗೆ ಪಾತ್ರವಾಯಿತು.