ಪುತ್ತೂರು: ಸರಕಾರದಿಂದ ಸಿಗುವ ಎಲ್ಲಾ ಯೋಜನೆಗಳನ್ನು ವಿಕಲಚೇತನರ ಮನೆಬಾಗಿಲಿಗೆ ತಲುಪಿಸುವ ಯೋಜನೆಯನ್ನು ಕಳೆದ 15 ವರ್ಷಗಳಿಂದ ಮಾಡುತ್ತಾ ಬಂದಿರುವ ನಮ್ಮನ್ನು ಖಾಯಂ ಗೊಳಿಸಬೇಕು ಮತ್ತು ಖಾಯಂ ಗೊಳಿಸುವ ತನಕ ಸುಪ್ರಿಂ ಕೋರ್ಟ್‌ನ ಕಾಯ್ದೆಯಂತೆ ಕನಿಷ್ಠ ಗೌರವ ಧನ ನೀಡಬೇಕೆಂದು ಆಗ್ರಹಿಸಿ ಬೆಳಗಾವಿ ಅಧಿವೇಶನದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ವಿಕಲಚೇತನರ ವಿವಿಧೋದ್ದೇಶ ಗ್ರಾಮೀಣ ಮತ್ತು ನಗರ ಪುನರ್ವಸತಿ ಕಾರ್ಯಕರ್ತರ ಜಿಲ್ಲಾಧ್ಯಕ್ಷ ಜಾನ್ ಬ್ಯಾಪ್ಟಿಸ್ಟ್ ಡಿಸೋಜ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ರಾಜ್ಯ ವಿಕಲಚೇತನರ ವಿವಿದೋದ್ದೇಶ ಗ್ರಾಮೀಣ ಮತ್ತು ನಗರ ಪುನರ್ವಸತಿ ಕಾರ್ಯಕರ್ತರ ಸಂಘದ ನಿರ್ದೇಶನದಂತೆ ಈ ಪ್ರತಿಭಟನೆ ನಡೆಯಲಿದ್ದು, ರಾಜ್ಯದಲ್ಲ 6ಸಾವಿರ ಮತ್ತು ಜಿಲ್ಲೆಯಲ್ಲಿ ಸುಮಾರು 120 ಮಂದಿ ಕಾರ್ಯಕರ್ತರಿದ್ದು, ಡಿ.6ರಂದು ಬೆಳಗಾವಿಗೆ ತೆರಳಲಿದ್ದಾರೆ. ಪುನರ್ವಸತಿ ಕಾರ್ಯಕರ್ತರು ಸರಕಾರದಿಂದ ಸಿಗುವ ಎಲ್ಲಾ ಯೋಜನೆಗಳನ್ನು ವಿಕಲಚೇತನರ ಮನೆಬಾಗಿಲಿಗೆ ತಲುಪಿಸುವ ಯೋಜನೆಯನ್ನು ಕಳೆದ 15 ವರ್ಷಗಳಿಂದ ಮಾಡುತ್ತಾ ಬಂದಿದ್ದೇವೆ. ಆದರೆ ಇಷ್ಟರ ತನಕ ಯಾವುದೇ ಸರಕಾರ ಬಂದರೂ ಇಲ್ಲಿನ ತನಕ ನಮ್ಮ ಬೇಡಿಕೆಗಳು ಈಡೇರಿಲ್ಲ. ನಮ್ಮ ಗೌರವಧನ, ಪ್ರಯಾಣ ಭತ್ತೆ ಕುರಿತು ಕಳೆದ 10 ವರ್ಷಗಳಿಂದ ಬೇಡಿಕೆಯನ್ನು ಇಟ್ಟಿದ್ದೇವೆ. ಇದುವರೆಗೆ ಈಡೇರಿಕೆ ಆಗಿಲ್ಲ. ಈ ನಿಟ್ಟಿನಲ್ಲಿ ಬೆಳಗಾವಿ ಅಧಿವೇಶನದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಹಲವು ಬೇಡಿಕೆಗಳನ್ನು ಮುಂದಿಡಲಿದ್ದೇವೆ. ನಮ್ಮನ್ನು ಸರಕಾರ ಅಡಿಯಲ್ಲಿ ಖಾಯಂ ಗೊಳಿಸಬೇಕು. ಎಮ್.ಆರ್.ಡಬ್ಲ್ಯೂಗೆ ಪ್ರಸ್ತುತ ರೂ.15ಸಾವಿರ ಮತ್ತು ವಿಆರ್‌ಡಬ್ಲ್ಯೂ ಅವರಿಗೆ ರೂ.9 ಸಾವಿರ ಗೌರವ ಧನ ನೀಡಲಾಗುತ್ತಿದ್ದು, ಅದನ್ನು ಕನಿಷ್ಠ ವೇತನಕ್ಕೆ ಏರಿಸಬೇಕು ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಪುನರ್ವಸತಿ ಕಾರ್ಯಕರ್ತರ ರಾಜ್ಯ ಸಮಿತಿ ನಿರ್ದೇಶಕ ಪ್ರವೀಣ್ ನಾಯಕ್ ಸುಳ್ಯ, ಜಿಲ್ಲಾ ಖಜಾಂಜಿ ಮುತ್ತಪ್ಪ ಪೆರಾಬೆ, ಸದಸ್ಯರಾದ ಸಹನ ಆರ್ ಕಡಬ, ಶರ್ಮಿಲ ಮಂಗಳೂರು ಉಪಸ್ಥಿತರಿದ್ದರು.