ಮಕ್ಕಳ ಹಕ್ಕುಗಳು ಜಾಗೃತಿಯಾದಾಗ ಉತ್ತಮ ಸಮಾಜ ನಿರ್ಮಾಣ – ನ್ಯಾಯಧೀಶ ಯೋಗೇಂದ್ರ ಶೆಟ್ಟಿ
ಪುತ್ತೂರು: ಮಕ್ಕಳ ಹಕ್ಕುಗಳ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುವುದು ಬಹಳ ಮುಖ್ಯವಾಗಿದೆ. ಮಕ್ಕಳ ಬದುಕು, ರಕ್ಷಣೆಯ ಕುರಿತು ಮಕ್ಕಳಿಗೆ ಅರಿವಾದಾಗ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಪುತ್ತೂರು 2ನೇ ಹೆಚ್ಚುವರಿ ವ್ಯವಹಾರ ಮತ್ತು ಜೆಎಮ್‌ಎಫ್‌ಸಿ ನ್ಯಾಯಾಧೀಶ ಯೋಗೇಂದ್ರ ಶೆಟ್ಟಿ ಅವರು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಕುಂಬ್ರ, ಮಕ್ಕಳ ಹಕ್ಕುಗಳ ಮಾಸೋತ್ಸವ ಸಮಿತಿ ಪುತ್ತೂರು, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ದಕ್ಷಿಣ ಕನ್ನಡ ಮತ್ತು ಶಿಕ್ಷಣ ಸಂಪನ್ಮೂಲ ಕೇಂದ್ರ ಪುತ್ತೂರು ತಾಲೂಕು ಹಾಗು ಎಸ್.ಡಿ.ಎಮ್.ಸಿ ಸಮನ್ವಯ ವೇದಿಕೆಯ ಸಹಯೋಗದೊಂದಿಗೆ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಯ ಪ್ರಚಾರ ಆಂದೋಲನ ಜಾಥಾ ಮತ್ತು ಮಾಹಿತಿ ಕಾರ್ಯಗಾರವನ್ನು ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಡಿ.5ರಂದು ಅವರು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಒಳಮೊಗ್ರು ಗ್ರಾ.ಪಂ ಅಧ್ಯಕ್ಷೆ ತ್ರಿವೇಣಿ ಅವರು ಮಾತನಾಡಿ ಮಕ್ಕಳ ಭಾಗವಹಿಸುವಿಕೆ ಪ್ರತೀಕವಾಗಿ ನಡೆಯುವ ಮಕ್ಕಳ ಗ್ರಾಮ ಸಭೆಯು ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳುವ ಉತ್ತಮ ವೇದಿಕೆಯಾಗಿದೆ. ಮಕ್ಕಳು ಈ ಗ್ರಾಮ ಸಭೆಯಲ್ಲಿ ಭಾಗವಹಿಸುವಂತೆ ವಿನಂತಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಪ್ಯಾನಲ್ ವಕೀಲೆ ಪ್ರಮಿಳಾ ಅವರು ಮಕ್ಕಳ ಹಕ್ಕುಗಳ ಬಗ್ಗೆ ಮಾತನಾಡಿದರು. ಒಕ್ಕೂಟದ ಕೋಶಾಧಿಕಾರಿ ರಾಜೇಶ್ವರಿ ಆಶಯ ಗೀತೆ ಹಾಡಿದರು. ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಪ್ಯಾರಲೀಗಲ್ ನಯನಾ ರೈ ಸ್ವಾಗತಿಸಿ, ಶಾಲಾ ಶಿಕ್ಷಕಿ ವಸಂತಿ ವಂದಿಸಿದರು. ಕಾರ್ಯಕ್ರಮದಲ್ಲಿ ಪ್ಯಾರಲೀಗಲ್ ವಕೀಲರಾದ ಪ್ರಿಯ, ಶಿಕ್ಷಣ ಸಂಪನ್ಮೂಲ ಕೇಂದ್ರದ ಕಾರ್ಯದರ್ಶಿ ಅಂಬಿಕಾ ಉಪಸ್ಥಿತರಿದ್ದರು.
ಜಾಗೃತಿ ಜಾಥಾ 10 ಗ್ರಾಮಗಳಲ್ಲಿ ನಡೆಯಲಿದೆ
ಜಾಗೃತಿ ಜಾಥಾವು ತಾಲೂಕುಗಳಲ್ಲಿ ಆಯ್ದ 10 ಗ್ರಾಮ ಪಂಚಾಯತ್‌ಗಳಲ್ಲಿ ವಿವಿಧ ದಿನಗಳಲ್ಲಿ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಮಕ್ಕಳು ಎಸ್‌ಡಿಎಮ್‌ಸಿ ಸದಸ್ಯರು, ಮ್ಕಕಳ ಪೋಷಕರು ಮತ್ತು ಗ್ರಾಮ ಪಂಚಾಯತ್ ಸದಸ್ಯರು ಭಾಗವಹಿಸುವಂತೆ ಚೈಲ್ಡ್ ರೈಟ್ಸ್ ಟ್ರಸ್ಟ್‌ನ ಸಂಯೋಜಕಿ ಕಸ್ತೂರಿ ಬೊಳುವಾರು ಹೇಳಿದರು.