ಪುತ್ತೂರು: ಪುತ್ತೂರು ನಗರಸಭೆಯಲ್ಲಿ ತೆರವಾಗಿರುವ ಎರಡು ಸದಸ್ಯ ಸ್ಥಾನಗಳಿಗೆ ದ.27ರಂದು ಚುನಾವಣೆ ನಡೆಯಲಿದ್ದು ಅಭ್ಯರ್ಥಿಗಳ ಆಯ್ಕೆ ಕುರಿತು ಪಕ್ಷದೊಳಗೆ ಚರ್ಚೆ ನಡೆಯುತ್ತಿದೆ. ಈ ನಡುವೆ ಅಭ್ಯರ್ಥಿಗಳ ಆಯ್ಕೆ ಕುರಿತು ಅಭಿಪ್ರಾಯ ಸಂಗ್ರಹಣೆಗಾಗಿ ಬಿಜೆಪಿ, ಕಾಂಗ್ರೆಸ್ ಪ್ರಮುಖರ ಸಭೆ ನಡೆದಿದೆ.
ವಾರ್ಡ್ ನಂ.11 ನೆಲ್ಲಿಕಟ್ಟೆ ವಾರ್ಡ್‌ಗೆ ಬಿಜೆಪಿ ಅಭ್ಯರ್ಥಿ ಆಯ್ಕೆ ಕುರಿತು ದ.6ರಂದು ಪಕ್ಷದ ಪ್ರಮುಖರ ಸಭೆ ನಡೆಯಿತು. ಮಾಜಿ ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ರೋಟರಿ ಟ್ರಸ್ಟ್ ಹಾಲ್‌ನಲ್ಲಿ ಸಭೆ ನಡೆಯಿತು. ನೆಲ್ಲಿಕಟ್ಟೆ ವಾರ್ಡ್‌ಗೆ ಮಾಜಿ ಪುರಸಭಾ ಅಧ್ಯಕ್ಷ ರಾಜೇಶ್ ಬನ್ನೂರು, ಮಾಜಿ ಪುರಸಭಾ ಸದಸ್ಯ ಸತೀಶ್ ನಾಕ್, ನಗರಸಭೆಯ ಮಾಜಿ ಸದಸ್ಯ ರಮೇಶ್ ರೈ ಮತ್ತು ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಪೈಯವರ ಹೆಸರು ಸಭೆಯಲ್ಲಿ ಪ್ರಸ್ತಾಪವಾಯಿತು. ಈ ಪೈಕಿ ರಾಜೇಶ್ ಬನ್ನೂರು ಮತ್ತು ಸತೀಶ್ ನಾಕ್ ಅವರ ಅನುಪಸ್ಥಿತಿಯಲ್ಲಿ ಅವರ ಹೆಸರುಗಳು ಪ್ರಸ್ತಾಪವಾದವು. ರಮೇಶ್ ರೈ ನೆಲ್ಲಿಕಟ್ಟೆ ಮತ್ತು ಉಲ್ಲಾಸ್ ಪೈ ಅವರು ಸಭೆಯಲ್ಲಿ ಉಪಸ್ಥಿತರಿದ್ದರು. ನಾನು ಈ ಕ್ಷೇತ್ರದಲ್ಲಿ ಕೆಲಸ ಕಾರ್ಯಗಳನ್ನು ಮಾಡಿದ್ದು ಪಕ್ಷ ಅವಕಾಶ ಕೊಟ್ಟರೆ ಸ್ಪರ್ಧಿಸುವುದಾಗಿ ಉಲ್ಲಾಸ್ ಪೈಯವರು ಸಭೆಯಲ್ಲಿ ಅನಿಸಿಕೆ ವ್ಯಕ್ತಪಡಿಸಿದರು. ಮುಂದೆ ಕೋರ್ ಕಮಿಟಿಯಲ್ಲಿಟ್ಟು ಅಭ್ಯರ್ಥಿಯ ಆಯ್ಕೆ ಅಂತಿಮಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ವರದಿಯಾಗಿದೆ. ಮಾಜಿ ಪುರಸಭಾ ಉಪಾಧ್ಯಕ್ಷರೂ ಆಗಿರುವ ಕ್ಷೇತ್ರ ಬಿಜೆಪಿ ಮಾಜಿ ಅಧ್ಯಕ್ಷ ಎಸ್.ಅಪ್ಪಯ್ಯ ಮಣಿಯಾಣಿ,ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಹೇರಳೆ, ಯುವರಾಜ್, ಜಯಶ್ರೀ ಎಸ್.ಶೆಟ್ಟಿ, ನಗರಸಭಾ ಸದಸ್ಯರಾದ ವಿದ್ಯಾ ಆರ್.ಗೌರಿ, ಭಾಮಿ ಅಶೋಕ್ ಶೆಣೈ ಸಹಿತ ಪಕ್ಷದ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು ಎಂದು ತಿಳಿದು ಬಂದಿದೆ.ಕಲ್ಲೇಗ ವಾರ್ಡ್ ನಂ.1ರ ಅಭ್ಯರ್ಥಿ ಆಯ್ಕೆಯೂ ಕೋರ್ ಕಮಿಟಿಯಲ್ಲಿ ಚರ್ಚೆಯಾಗಿ ಅಂತಿಮಗೊಳ್ಳಲಿದೆ.
ಕಾಂಗ್ರೆಸ್‌ನಿಂದ ನಾನೂ ಆಕಾಂಕ್ಷಿ-ರೋಹಿತ್:ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಕುರಿತು ಕಾಂಗ್ರೆಸ್ ಪ್ರಮುಖರೂ ಸಭೆ ಸೇರಿ ಚರ್ಚೆ ನಡೆಸಿದ್ದಾರೆ. ನೆಲ್ಲಿಕಟ್ಟೆ ವಾರ್ಡ್ ನಂ.11ಕ್ಕೆ ನಗರಸಭಾ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿಯವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗುವುದು ಖಚಿತ ಎನ್ನಲಾಗುತ್ತಿದೆ. ದಾಮೋದರ ಭಂಡಾರ್ಕರ್ ಅವರೂ ಓರ್ವ ಆಕಾಂಕ್ಷಿಯಾಗಿದ್ದಾರೆ.ಈ ನಡುವೆ ಸ್ನೇಹ ಸಂಗಮ ರಿಕ್ಷಾ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ರೋಹಿತ್ ನೆಲ್ಲಿಕಟ್ಟೆ ಅವರೂ, ನೆಲ್ಲಿಕಟ್ಟೆ ವಾರ್ಡ್ 11ಕ್ಕೆ ನಾನೂ ಓರ್ವ ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿ ಎಂದು ಹೇಳಿದ್ದಾರೆ.ಪಕ್ಷದ ಪ್ರಮುಖರ ಸಭೆಯಲ್ಲಿಯೂ ಅವರು ಈ ವಿಚಾರ ಪ್ರಸ್ತಾಪಿಸಿದ್ದಾರೆ. ಪುತ್ತಿಲ ಪರಿವಾರದಿಂದಲೂ ಈ ಎರಡೂ ವಾರ್ಡ್‌ಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದ್ದು ಅಭ್ಯರ್ಥಿಗಳ ಆಯ್ಕೆ ಇನ್ನಷ್ಟೆ ಅಂತಿಮವಾಗಬೇಕಿದೆ.
ನಗರಸಭಾ ಉಪಚುನಾವಣೆ 2023
ನಾಮಪತ್ರ ಸಲ್ಲಿಕೆ ನಾಳೆ ಆರಂಭ
ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ದ.8ರಂದು ಪ್ರಾರಂಭಗೊಳ್ಳಲಿದೆ.ದ.15 ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದೆ.