ಬರಹ: ಸಿಶೇ ಕಜೆಮಾರ್
ಪುತ್ತೂರು: ಕಸ,ತ್ಯಾಜ್ಯ ಮುಕ್ತ ಪರಿಸರವಾಗಬೇಕೆಂದು ಎಷ್ಟೇ ಪ್ರಯತ್ನ ಪಟ್ಟರೂ ಅದು ಸಾಧ್ಯವಾಗದೇ ಇರುವುದು ವಿಪರ‍್ಯಾಸ. ಅದರಲ್ಲೂ ರಸ್ತೆ ಬದಿಗಳಲ್ಲಿ ಕಸ, ತ್ಯಾಜ್ಯ ಸುರಿಯಬೇಡಿ ಎಂದು ಪರಿಸರವಾದಿಗಳು, ಅಧಿಕಾರಿಗಳು ಎಷ್ಟೇ ಬೊಬ್ಬೆ ಹೊಡೆದರೂ ಅದು ಕಸ,ತ್ಯಾಜ್ಯ ಸುರಿಯುವ ಜನರಿಗೆ ಅರ್ಥವಾಗದಿರುವುದು ದುರಂತವೇ ಸರಿ. ಕಸ,ತ್ಯಾಜ್ಯ ಹಾಕಬೇಡಿ, ದಂಡ ವಿಧಿಸುತ್ತೇವೆ, ಸಿಸಿ ಕ್ಯಾಮರ ಅಳವಡಿಸಿದ್ದೇವೆ ಎಂದೆಲ್ಲಾ ಬರೆದು ಬೋರ್ಡ್ ಅಳವಡಿಸಿದರೂ ಬೋರ್ಡ್ ಕೆಳಗೆಯೇ ತ್ಯಾಜ್ಯ ತಂದು ಹಾಕುವ ಜನರಿರುವ ತನಕ ನಮ್ಮ ಪರಿಸರ ಸ್ವಚ್ಛ ಪರಿಸರ ಆಗೋದು ಕನಸಿನ ಮಾತು. ಪುತ್ತೂರು ಬೈಪಾಸ್ ರಸ್ತೆಯ ಬದಿಯಲ್ಲೊಂದು ಅನಧಿಕೃತ ಕಸ, ತ್ಯಾಜ್ಯದ ಡಂಪಿಂಗ್ ಯಾರ್ಡ್ ನಿರ್ಮಾಣವಾಗಿದೆಯೋ ಎನ್ನುವಷ್ಟರ ಮಟ್ಟಿಗೆ ಇಲ್ಲಿ ಗೋಣಿ ಗೋಣಿ ತ್ಯಾಜ್ಯ, ಕಸದ ರಾಶಿ ಬಂದು ಬಿದ್ದಿದೆ. ದರ್ಬೆ-ಪರ್ಲಡ್ಕ ಬೈಪಾಸ್ ರಸ್ತೆಯಲ್ಲಿ ದುಗ್ಗಮ್ಮ ದೇರಣ್ಣ ಮದುವೆ ಹಾಲ್‌ನಿಂದ ಸ್ವಲ್ಪ ಮುಂದೆ ಹೋದಾಗ ರಸ್ತೆ ಬದಿಯಲ್ಲಿ ಕಸ,ತ್ಯಾಜ್ಯದ ರಾಶಿ ಬಿದ್ದಿರುವುದನ್ನು ಕಾಣಬಹುದಾಗಿದೆ.
ಗೋಣಿ,ಗೋಣಿಗಳಲ್ಲಿದೆ ಕಸ,ತ್ಯಾಜ್ಯ…!
ಎಲ್ಲೋ ಒಂದಷ್ಟು ಕಸ,ಕಡ್ಡಿಗಳನ್ನು ತಂದು ಹಾಕಲಾಗಿದೆ ಎಂದುಕೊಂಡಿದ್ದರೆ ಇಲ್ಲಿ ಗೋಣಿಗಳಲ್ಲಿಯೇ ಕಸ,ತ್ಯಾಜ್ಯಗಳನ್ನು ತುಂಬಿ ತಂದು ರಾಶಿ ಹಾಕಿದ್ದಾರೆ. ಇಷ್ಟಕ್ಕೂ ಒಂದಲ್ಲ ಎರಡಲ್ಲೂ ಸುಮಾರು ಗೋಣಿ ಚೀಲಗಳಲ್ಲಿ ಕಸ,ತ್ಯಾಜ್ಯಗಳನ್ನು ತಂದು ಹಾಕಲಾಗಿದೆ. ಹಸಿ ಕಸ, ತ್ಯಾಜ್ಯ, ಒಣ ಕಸ ಹೀಗೆ ಎಲ್ಲವೂ ಇಲ್ಲಿದೆ. ಎಲ್ಲವನ್ನು ತಂದು ರಸ್ತೆ ಬದಿಯ ಓಣಿಯಲ್ಲಿ ರಾಶಿ ಹಾಕಲಾಗಿದೆ.
ಗಬ್ಬು ನಾರುತ್ತಿರುವ ಪರಿಸರ
ತ್ಯಾಜ್ಯ, ಕಸ, ಕಡ್ಡಿಗಳನ್ನು ಗೋಣಿ ಚೀಲಗಳಲ್ಲಿ ತುಂಬಿಸಿ ಕಟ್ಟಿ ತಂದು ರಾಶಿ ಹಾಕಿದ್ದರಿಂದ ಅವುಗಳು ಕೊಳೆತು ಇಡೀ ಪರಿಸರ ಗಬ್ಬು ವಾಸನೆಯಿಂದ ನಾರುತ್ತಿದೆ. ನೊಣ,ಸೊಳ್ಳೆಗಳು ಉತ್ಪತ್ತಿಯಾಗಿವೆ. ನಾಯಿಗಳು ಗೋಣಿ ಚೀಲವನ್ನು ಕಚ್ಚಿ ಎಳೆದೊಯ್ದು ಅದರಲ್ಲಿರುವ ಕಸ,ತ್ಯಾಜ್ಯಗಳನ್ನು ಚೆಲ್ಲಾಪಿಲ್ಲಿ ಮಾಡಿ ಹಾಕಿದೆ. ನಗರಸಭಾ ಅಧಿಕಾರಿಗಳು ಇತ್ತ ಒಂದ್ಸಲ ಭೇಟಿ ಕೊಟ್ಟು ನೋಡಬೇಕಾಗಿದೆ. ಕಸ, ತ್ಯಾಜ್ಯ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾದ ಅಗತ್ಯತೆ ಇದೆ.