ಮಕ್ಕಳಲ್ಲಿ ಆರೋಗ್ಯ ರಕ್ಷಣೆಯ ಮಾಹಿತಿ ಅಗತ್ಯ – ಡಾ. ದೀಪಕ್ ರೈ
ಪುತ್ತೂರು: ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಮತ್ತು ತಮ್ಮ ಆತ್ಮ ವಿಶ್ವಾಸ ತುಂಬಿಸುವ ನಿಟ್ಟಿನಲ್ಲಿ ಮಕ್ಕಳಲ್ಲಿ ಪಾಠದ ಜೊತೆಗೆ ಆರೋಗ್ಯ ರಕ್ಷಣೆಯ ಮಾಹತಿ ಅಗತ್ಯ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಅವರು ಹೇಳಿದರು.
ಪುತ್ತೂರು ತಾಲೂಕು ಆರೋಗ್ಯ ಇಲಾಖೆ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಪುತ್ತೂರು ಮತ್ತು ಕಡಬ ತಾಲೂಕಿನ ಪ್ರೌಢಶಾಲೆಗಳ ವಿಜ್ಞಾನ ಶಿಕ್ಷಕರಿಗೆ ಆರೋಗ್ಯ ಇಲಾಖೆಯ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಆರೋಗ್ಯ ಇಲಾಖೆಯಿಂದ ನಡೆಯುವ ರಾಷ್ಟ್ರೀಯ ಶ್ರವಣ ದೋಷ ನಿಯಂತ್ರಣ ಹಾಗು ನಿವಾರಣಾ ಕಾರ್ಯಕ್ರಮ, ಮಲೇರಿಯ ನಿಯಂತ್ರಣ, ಅನೀಮಿಯ ಮುಕ್ತ ಪೌಷ್ಠಿಕ ಕರ್ನಾಟಕ, ವಿಶ್ವ ಅಯೋಡಿನ್ ಕೊರತೆ ಹಾಗು ನಿಯಂತ್ರಣ ಬಗ್ಗೆ, ರೇಬೀಸ್ ನಿಯಂತ್ರಣ, ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನದ ಕಾರ್ಯಕ್ರಮಗಳು ನಡೆಯುತ್ತಿದ್ದು ಈ ಕುರಿತು ಅವರು ಮಾಹಿತಿ ನೀಡಿದರು. ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನಮಿತಾ ನಾಯ್ಕ್, ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಿಶಿರ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕಾರ್ಯಾಗಾರ ನಡೆಸಿದರು. ಶಿಕ್ಷಣ ಸಂಯೋಜಕ ಹರಿಪ್ರಸಾದ್ ಮತ್ತು ಕಡಬ ತಾಲೂಕು ಶಿಕ್ಷಕರ ಸಂಘದ ಕಾರ್ಯದರ್ಶಿ ದೇವಿಪ್ರಸಾದ್ ಸಂದರ್ಭೋಚಿತವಾಗಿ ಮಾತನಾಡಿದರು. ಸುಮಾರು 73 ಮಂದಿ ಶಿಕ್ಷಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪದ್ಮಾವತಿ ಸ್ವಾಗತಿಸಿ, ವಂದಿಸಿದರು.