ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೀಪಾವಳಿಯ ಬಲೀಂದ್ರ ಪೂಜೆಯಂದು ಬಲಿಹೊರಟು, ಶ್ರೀ ದೇವರ ವರ್ಷದ ಪ್ರಥಮ ಸವಾರಿಯ ಪೂಕರೆ ಉತ್ಸವವು ಕಾರ್ತಿಕ ಮಾಸದ ಹಸ್ತಾ ನಕ್ಷತ್ರ ಒದಗುವ ಡಿ.7ರಂದು ಸಂಜೆ ವೈಭವದಿಂದ ನಡೆಯಿತು.
ನಂದಿ ಮುಖವಾಡ ಧರಿಸಿದ ‘ಬಸವ’ ದೈವ ಶ್ರೀ ದೇವರನ್ನು ಪೂಕರೆ ಕಟ್ಟೆಗೆ ಕರೆದುಕೊಂಡು ಬರುವುದೇ ವಿಶೇಷ.ಸಂಜೆ ಶ್ರೀ ದೇವರ ಬಲಿ ಹೊರಟು ದೇಗುಲದ ಪಶ್ಚಿಮ ದ್ವಾರದಿಂದ ರಾಜಮಾರ್ಗದಲ್ಲಿ ಭಂಡಾರದ ಬಿರುದಾವಳಿ, ಛತ್ರ ಚಾಮರ, ಬೇತಾಳ,ಹಸ್ರಕೊಡೆ, ದಂಡುಶಿಲಾಲು, ವಾದ್ಯ ಮೇಳ, ಬಸವ ದೈವದೊಂದಿಗೆ ನೇರವಾಗಿ ಪೂಕರೆ ಕಟ್ಟೆಗೆ ತೆರಳಿ, ಪೂಕರೆ ಕಟ್ಟೆಯಿಂದ ದೇವಳದ ಗದ್ದೆಯನ್ನು ನೋಡಿದ ಬಳಿಕ ಶ್ರೀ ದೇವರು ಕಟ್ಟೆಯಲ್ಲಿ ವಿರಾಜಮಾನರಾದರು.ವೇ.ಮೂ.ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ವಿಷ್ಣುಪ್ರಸಾದ್ ತಂತ್ರಿ ಮತ್ತು ಪ್ರಧಾನ ಅರ್ಚಕ ವೇ.ಮೂ.ವಸಂತ ಕೆದಿಲಾಯ ಅವರು ಮೂಲ ನಾಗ ಸನ್ನಿಧಿಗೆ ತೆರಳಿದರು.
ತಂತ್ರಿಯವರು ಪೂಕರೆ ಗದ್ದೆಗೆ ಪ್ರಾರ್ಥನೆ ಮಾಡಿದರು.ಪ್ರಧಾನ ಅರ್ಚಕ ವೇ.ಮೂ.ವಸಂತ ಕೆದಿಲಾಯ ಅವರು ಮೂಲನಾಗ ಸನ್ನಿಽಯಲ್ಲಿ ಪೂಜೆ ನೆರವೇರಿಸಿದರು.ಇದೇ ಸಂದರ್ಭದಲ್ಲಿ ಪೂಕರೆ ಸಿದ್ಧ ಪಡಿಸಿದ ಸ್ಥಳದಲ್ಲಿ ಹಿರಿಯರಾದ ಕಿಟ್ಟಣ್ಣ ಗೌಡ ಅವರ ನೇತೃತ್ವದಲ್ಲಿ ಮಧ್ಯಸ್ಥ ಶಶಾಂಕ್ ನೆಲ್ಲಿತ್ತಾಯ ಅವರು ನುಡಿಗಟ್ಟಿನೊಂದಿಗೆ ಪ್ರಾರ್ಥಿಸಿದರು.ಪೂಕರೆ ಉತ್ಸವಕ್ಕೆ ಸಂಬಂಽಸಿದವರು ಜೋಡು ಪೂಕರೆಯನ್ನು ದೇವರಮಾರು ಗದ್ದೆ ಮತ್ತು ಬಾಕಿತಮಾರು ಗದ್ದೆಯಲ್ಲಿ ಇಟ್ಟು ಪ್ರಾರ್ಥನೆ ಮಾಡಿದರು.ಬಳಿಕ ಪೂಕರೆ ಕಟ್ಟೆಯಲ್ಲಿ ಶ್ರೀದೇವರಿಗೆ ದೀವಟಿಗೆ ಪ್ರಣಾಮ್, ಕಟ್ಟೆಪೂಜೆ ನಡೆದು,ಬುಲೆಕಾಣಿಕೆ ಸಂಪ್ರದಾಯದಂತೆ ಸೀಮಿತ ಭಕ್ತರಿಗೆ ಸೀಯಾಳ ವಿತರಣೆ ನಡೆಯಿತು.
ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಶೇಖರ್ ನಾರಾವಿ, ಡಾ.ಸುಧಾ ಎಸ್ ರಾವ್, ರಾಮ್‌ದಾಸ್ ಗೌಡ, ರವೀಂದ್ರನಾಥ ರೈ ಬಳ್ಳಮಜಲು, ಬಿ.ಐತ್ತಪ್ಪ ನಾಯ್ಕ್, ರಾಮಚಂದ್ರ ಕಾಮತ್, ಬಿ.ಕೆ.ವೀಣಾ, ಕಾರ್ಯನಿರ್ವಹಣಾಽಕಾರಿ ಕೆ.ವಿ.ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಸಿಬ್ಬಂದಿ ರವೀಂದ್ರ, ಪೂಕರೆ ಕಟ್ಟೆಯ ಸೇವೆ ಮಾಡುತ್ತಿರುವ ಕೆ.ವಿ.ಪೈ ಮತ್ತು ಬಾಲಕೃಷ್ಣ ಪೈ, ಮಾಜಿ ಆಡಳಿತ ಮೊಕ್ತೇಸರ ಎನ್.ಕೆ.ಜಗನ್ನಿವಾಸ ರಾವ್, ಮಾಜಿ ಮೊಕ್ತೇಸರ ಚಿದಾನಂದ ಬೈಲಾಡಿ, ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಸುಧಾಕರ್ ಶೆಟ್ಟಿಯವರ ಪತ್ನಿ ಗೀತಾ, ಪುತ್ರ ಅಭಿಜಿತ್, ನಗರಸಭಾ ಸದಸ್ಯರಾಗಿರುವ ದೇವಳದ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್, ಪಿ.ಜಿ.ಚಂದ್ರಶೇಖರ್ ರಾವ್, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು, ನಗರಸಭೆ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ರತ್ನಾಕರ ನಾಕ್, ಶ್ರೀಧರ್ ಪಟ್ಲ, ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ.ದಿವಾಕರ ಭಟ್, ರಾಧಾಕೃಷ್ಣ ನಂದಿಲ, ನಾಗೇಶ್ ರಾವ್, ಹರಿಪ್ರಸಾದ್ ನೆಲ್ಲಿಕಟ್ಟೆ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.
ಶ್ರೀ ದೇವರು ದೇವಳದಿಂದ ಹೊರಡುವ ಸಂದರ್ಭ ಒಳಾಂಗಣದಲ್ಲಿ ಎರಡು ಬಲಿ ಉತ್ಸವ ಸುತ್ತು ಬಂದು ಹೊರಾಂಗಣದಲ್ಲಿ ಒಂದೂವರೆ ಸುತ್ತಿನೊಂದಿಗೆ ಪಶ್ಚಿಮ ದ್ವಾರದ ಮೂಲಕ ರಾಜಮಾರ್ಗದಲ್ಲಿ ಪೂಕರೆ ಕಟ್ಟೆಗೆ ನೇರವಾಗಿ ಬರುತ್ತಾರೆ.ಆಗ ಎಲ್ಲಿಯೂ ಆರತಿ ಸ್ವೀಕರಿಸದ ದೇವರು ಮರಳಿ ದೇವಸ್ಥಾನಕ್ಕೆ ಹೋಗುವ ದಾರಿಯುದ್ದಕ್ಕೂ ಭಕ್ತರಿಂದ ಆರತಿ ಸ್ವೀಕರಿಸುತ್ತಾರೆ. ಜೊತೆಗೆ ಪಶ್ಚಿಮ ದ್ವಾರದಿಂದಲೇ ಹೊರಾಂಗಣದ ಬಲಿ ಉತ್ಸವ ಸುತ್ತು ಪೂರ್ತಿ ಮಾಡಿ ಒಳಾಂಗಣಕ್ಕೆ ತೆರಳುತ್ತಾರೆ.
ಪೂಕರೆ ಅಲಂಕಾರ ವಿಶೇಷ
ಸಂಪ್ರದಾಯದಂತೆ ತೆಂಕಿಲದ ಮೋಂಟ ಮೊಗೇರ ಅವರ ಪುತ್ರರಾದ ಲೋಕೇಶ್ ಮತ್ತು ಲೋಹಿತ್ ಮತ್ತಿತರರು ಸೇರಿಕೊಂಡು ಪೂಕರೆ ನೆಡುತ್ತಾರೆ.ಇದಕ್ಕೂ ಮೊದಲು ಪೂಕರೆಯನ್ನು ಅಡಿಕೆ ಮರ ಮತ್ತು ಬೆತ್ತವನ್ನು ಉಪಯೋಗಿಸಿ ಕಟ್ಟಲಾಗುತ್ತದೆ.ಕೃಷ್ಣನಗರದ ಹರೀಶ್ ಆಚಾರ್ಯ ಅದನ್ನು ನಿರ್ಮಾಣ ಮಾಡಿದ ಬಳಿಕ ದೇವಿಪ್ರಸಾದ್ ಭಂಡಾರಿ ಅವರು ಕೇಪುಳ ಮತ್ತು ಪಾದೆ ಹೂವನ್ನು ಕದಳಿ ಬಾಳೆಗಿಡದ ನಾರಿನಿಂದ ಕಟ್ಟಿ ಪೂಕರೆಯನ್ನು ಶೃಂಗರಿಸಲಾಗುತ್ತದೆ.ಕೊನೆಗೆ ಎರಡು ಮಡಲಿನ ಸೂಟೆಯೊಂದಿಗೆ ಪೂಕರೆಯನ್ನು ‘ಪೊಳಿಯೇ’ ಎಂದು ಘೋಷಣೆ ಹಾಕಿಕೊಂಡು ಪೂಕರೆ ಗದ್ದೆಗೆ ಕೊಂಡು ಹೋಗಿ ಅಲ್ಲಿ ಇರಿಸಲಾಗುತ್ತದೆ.ದೇವರಮಾರು ಗದ್ದೆಗೆ ಸುಂದರ, ವಸಂತ, ಚನಿಯ, ವಿಜಯ ಮತ್ತು ಬಾಕಿತಮಾರು ಗದ್ದೆಗೆ ದೇವಳದ ಉತ್ಸವ ಸೇವೆಯ ನೌಕರರು ಪೂಕರೆಯನ್ನು ಕೊಂಡೊಯ್ಯುವಲ್ಲಿ ಸಹಕರಿಸಿದರು.