ರೋಟರಿ ಸ್ವರ್ಣಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ

0

ಪುತ್ತೂರಿನ ಏಳು ರೋಟರಿ ಕ್ಲಬ್ ಗಳು ‘ವೈಬ್ರಂಟ್’ ಕ್ಲಬ್ ಗಳು-ಎಚ್.ಆರ್ ಕೇಶವ್

ಪುತ್ತೂರು: ರೋಟರಿ ಕಂದಾಯ ಜಿಲ್ಲೆಗಳ ಪೈಕಿ ಮೈಸೂರು ಜಿಲ್ಲೆಯಲ್ಲಿನ ಕೆಲವು ತಾಲೂಕುಗಳಲ್ಲಿ ರೋಟರಿ ಕ್ಲಬ್ ಗಳೇ ಇಲ್ಲ. ಆದರೆ ಪುತ್ತೂರು ತಾಲೂಕಿನಲ್ಲಿಯೇ ಏಳು ರೋಟರಿ ಕ್ಲಬ್ ಗಳಿದ್ದು ತನ್ನ ಸಮಾಜಮುಖಿ ಕಾರ್ಯಗಳ ಮೂಲಕ ಹೃದಯ ವೈಶಾಲ್ಯತೆಯನ್ನು ತೋರಿಸಿಕೊಟ್ಟಿದ್ದು ‘ವೈಬ್ರಂಟ್’ ಕ್ಲಬ್ ಗಳಾಗಿ ಹೊರಹೊಮ್ಮುತ್ತಿರುವುದು ಶ್ಲಾಘನೀಯ ಎಂದು ರೋಟರಿ ಜಿಲ್ಲಾ ಗವರ್ನರ್ ಎಚ್.ಆರ್.ಕೇಶವ್ ರವರು ಹೇಳಿದರು.


ದ.7 ರಂದು ರೋಟರಿ ಮನೀಷಾ ಸಭಾಂಗಣದಲ್ಲಿ ಜರಗಿದ ರೋಟರಿ ಅಂತರ್ರಾಷ್ಟ್ರೀಯ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಸ್ವರ್ಣಗೆ ರೋಟರಿ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರೋಟರಿ ಸಂಸ್ಥೆಗೆ ಹಳೆ ಬೇರುಗಳ ಜೊತೆಗೆ ಹೊಸ ಚಿಗುರುವುಳ್ಳ ಯುವಸಮೂಹ ಸೇರ್ಪಡೆಗೊಂಡು ರೋಟರಿ ಕ್ಲಬ್ ಅನ್ನು ಬಲಿಷ್ಟಗೊಳಿಸಬೇಕು. ದಕ್ಷಿಣ ಕನ್ನಡ ಜಿಲ್ಲೆಯವರು ಒಳ್ಳೆಯ ಸಂಸ್ಕೃತಿ ಮತ್ತು ಸಂಸ್ಕಾರದಿಂದ ಬೆಳೆದು ಬಂದಿದ್ದು ಪರಸ್ಪರ ಒಗ್ಗಟ್ಟು, ಸಾಮರಸ್ಯ, ಪ್ರೀತಿಯಿಂದ ರೋಟರಿ ಸಂಸ್ಥೆ ಬೆಳೆಯುತ್ತಿದೆ ಎಂದರು.

ಅಂಗನವಾಡಿಗಳ ಅಭಿವೃದ್ಧಿಗೆ ಮನಸ್ಸು ಮಾಡಿದಾಗ ಸುಂದರ ಸಮಾಜ ನಿರ್ಮಾಣ-ಪುರಂದರ ರೈ:
ರೋಟರಿ ಅಸಿಸ್ಟೆಂಟ್ ಗವರ್ನರ್ ಪುರಂದರ ರೈಯವರು ಕ್ಲಬ್ ಬುಲೆಟಿನ್ ‘ಸ್ವರ್ಣದೀಪ’ ಬಿಡುಗಡೆ ಮಾಡಿ ಮಾತನಾಡಿ, ಒಂಭತ್ತು ವರ್ಷಗಳ ಹಿಂದೆ ಒಳ್ಳೆಯ ಭೀಜವನ್ನು ಭಿತ್ತಿ ಪ್ರೌಢಾವಸ್ಥೆಗೆ ತಲುಪಿ ಇಂದು ಕ್ಲಬ್ ಆರೋಗ್ಯಪೂರ್ಣವಾಗಿ ಬೆಳೆದು ನಿಂತಿದೆ. ಅಂಗನವಾಡಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ನಾವೆಲ್ಲ ಕೈಜೋಡಿಸಿದಾಗ ಆ ಮಕ್ಕಳು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಮೂಡಿ ಬರಲು ಸಾಧ್ಯ. ಆದ್ದರಿಂದ ನಾವೆಲ್ಲ ಒಂದೊಂದು ಅಂಗನವಾಡಿಗಳ ಅಭಿವೃದ್ಧಿಗೆ ಮನಸ್ಸು ಮಾಡಿದಾಗ ಸುಂದರ ಸಮಾಜ ನಿರ್ಮಾಣವಾಗಬಲ್ಲುದು ಎಂದರು.

ರೋಟರಿಗೆ ಸೇರ್ಪಡೆಯಾಗಿ ಸಮಾಜದ ಅಭಿವೃದ್ಧಿಗೆ ತೊಡಗಿಸಿಕೊಳ್ಳುವುದು ಆತ್ಮೀಯ ಕ್ಷಣಗಳಲ್ಲೊಂದು-ಭಾಸ್ಕರ ಕೋಡಿಂಬಾಡಿ:
ರೋಟರಿ ವಲಯ ಸೇನಾನಿ ಭಾಸ್ಕರ ಗೌಡ ಕೋಡಿಂಬಾಡಿ ಮಾತನಾಡಿ, ರೋಟರಿ ಸಂಸ್ಥೆಗೆ ಸೇರ್ಪಡೆಯಾಗಿ ಸಮಾಜದ ಅಭಿವೃದ್ಧಿಗೆ ತೊಡಗಿಸಿಕೊಳ್ಳುವುದು ಆತ್ಮೀಯ ಕ್ಷಣಗಳಲ್ಲೊಂದು. ಯಾವುದೇ ಕ್ಲಬ್ ಆಗಲಿ, ಹತ್ತು ಹದಿನೈದು ಸದಸ್ಯರನ್ನು ಸೇರ್ಪಡೆಗೊಳಿಸಿ ಸದಸ್ಯರ ಸಂಖ್ಯೆ ಹೆಚ್ಚಿಸುವುದು ಬಳಿಕ ಅವರು ಬಿಡುವುದು ಮಾಡುವುದರ ಬದಲು ಉತ್ತಮವಾದ ಕೆಲವು ಸದಸ್ಯರನ್ನು ಸೇರ್ಪಡೆಗೊಳಿಸಿ ಕ್ಲಬ್ ಬೆಳೆಯುವಂತೆ ಮಾಡುವುದು ಒಳ್ಳೆಯದು. ಪುತ್ತೂರಿನ ಎಲ್ಲಾ ರೋಟರಿ ಕ್ಲಬ್ ಸದಸ್ಯರು ರೋಟರಿ ಸ್ವರ್ಣ ಕ್ಲಬ್ಬಿನ ಮೇಲೆ ಉತ್ತಮ ಪ್ರೀತಿಯನ್ನು ಹೊಂದಿರುವುದು ಸಂತೋಷದ ವಿಚಾರವಾಗಿದೆ ಎಂದರು.

ಕ್ಲಬ್ ಸದಸ್ಯರ ವಿಶ್ವಾಸದೊಂದಿಗೆ ಕ್ಲಬ್ ಮುನ್ನೆಡೆಸುತ್ತಿದ್ದೇನೆ-ಸುಂದರ ರೈ:
ರೋಟರಿ ಸ್ವರ್ಣ ಅಧ್ಯಕ್ಷ ಸುಂದರ ರೈ ಬಲ್ಕಾಡಿರವರು ಸ್ವಾಗತಿಸಿ, ಮಾತನಾಡಿ, ಸ್ವರ್ಣ ಕ್ಲಬ್ಬಿನ ಒಂಭತ್ತನೇ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡು ಕ್ಲಬ್ಬಿಗೆ ಯಾವುದೇ ಧಕ್ಕೆಯಾಗದ ರೀತಿಯಲ್ಲಿ ಕ್ಲಬ್ಬಿನ ಸದಸ್ಯರ ಸಹಕಾರದೊಂದಿಗೆ ಕ್ಲಬ್ ಅನ್ನು ಮುನ್ನೆಡೆಸಿದ್ದೇನೆ. ರೋಟರಿ ಜಿಲ್ಲಾ ಯೋಜನೆಗಳಾದ ಅಂಗನವಾಡಿಗಳ ಅಭಿವೃದ್ಧಿಯೊಂದಿಗೆ ಸಮಾಜಮುಖಿ ಕಾರ್ಯಗಳನ್ನು ಮುಂದುವರೆಸಲಿದ್ದೇವೆ ಎಂದರು.

ನೂತನ ಸದಸ್ಯರ ಸೇರ್ಪಡೆ:
ಕ್ಲಬ್ ಸರ್ವಿಸ್ ನಡಿಯಲ್ಲಿ ಈರ್ವರು ಸದಸ್ಯರಾದ ನಿವೃತ್ತ ಬ್ಯಾಂಕ್ ಅಧಿಕಾರಿ ಹಾಗೂ ನ್ಯಾಯವಾದಿ ದಿವಾಕರ ನಿಡ್ವಾಣ್ಣಾಯರವರ ಸಹೋದರ ಕೆ.ಸುಧಾಕರ ನಿಡ್ವಾಣ್ಣಯ, ಮಹೀಂದ್ರ ಕರ್ನಾಟಕ ಏಜೆನ್ಸಿ ಉದ್ಯೋಗಿ ಗಣೇಶ್ ನಾಯಕ್ ರವರಿಗೆ ಜಿಲ್ಲಾ ಗವರ್ನರ್ ಎಚ್.ಆರ್ ಕೇಶವ್ ರವರು ರೋಟರಿ ಪಿನ್ ತೊಡಿಸಿ ಕ್ಲಬ್ ಗೆ ಅಧಿಕೃತವಾಗಿ ಸೇರ್ಪಡೆಗೊಳಿಸಿದರು. ಕ್ಲಬ್ ಸರ್ವಿಸ್ ನಿರ್ದೇಶಕ ರಾಮಣ್ಣ ರೈ ಕೈಕಾರ ನೂತನ ಸದಸ್ಯರನ್ನು ಪರಿಚಯಿಸಿದರು.

ವಿದ್ಯಾರ್ಥಿವೇತನ/ಧನಸಹಾಯ:
ಕ್ಲಬ್ ಸಮುದಾಯ ಸೇವಾ ವಿಭಾಗದಡಿಯಲ್ಲಿ ಕೈಕಾರ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಅಕ್ಷತಾ, ವೇದಿತಾ, ಸೌಭಾಗ್ಯಲಕ್ಷ್ಮೀ(4ನೇ), ಕವಿನ್ ರೈ, ಮನ್ವಿತ್ (3ನೇ)ರವರುಗಳಿಗೆ ಶಾಲಾ ಬ್ಯಾಗ್, ಝೀ ಕನ್ನಡ ಸೀಸನ್-5 ಡ್ರಾಮಾ ಜ್ಯೂನಿಯರ್ ಅಡಿಶನ್ ನಲ್ಲಿ ಭಾಗವಹಿಸಿದ ಆರನೇ ತರಗತಿ ವಿದ್ಯಾರ್ಥಿನಿ ಸಿಂಚನಾ, ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡು ತಂದೆಯ ಆರೈಕೆಯೂ ಇರದೆ ಅಜ್ಜಿಯ ಪ್ರೋತ್ಸಾಹದಿಂದ ಕಲಿಯುವ ಏಳನೇ ತರಗತಿ ವಿದ್ಯಾರ್ಥಿನಿ ಕೃತಿ ಶೆಟ್ಟಿ, ಶಾಲಾ ಮುಖ್ಯಮಂತ್ರಿಯಾಗಿ ಎಲ್ಲಾ ಶಾಲಾ ಕೆಲಸಗಳನ್ನು ಮಾಡುವ ಮೂಲಕ ಎಲ್ಲರ ಪ್ರೀತಿ ಗಳಿಸಿದ ಕಲಿಕಾ ಪ್ರತಿಭೆ ಏಳನೇ ತರಗತಿಯ ಚಿನ್ಮಯ, ಕು|ಆತ್ಮಿ ಅಲ್ಲದೆ ನೂತನ ಸಿಂಘ, ಯುವಾನಿ, ಶ್ರೇಯಸ್ ಶೆಟ್ಟಿ, ವಿಹಾನಿ ಶೆಟ್ಟಿರವರುಗಳಿಗೆ ಸ್ಕಾಲರ್ ಶಿಪ್ ಮತ್ತು ಭಾರತೀಯ ಸೇವಾಶ್ರಮ ಕನ್ಯಾನ ಇಲ್ಲಿಗೆ ರೋಟರಿ ಭೀಷ್ಮ ಕೆ.ಆರ್ ಶೆಣೈರವರ ಪ್ರಾಯೋಜಕತ್ವದಲ್ಲಿ ರೂ.12 ಸಾವಿರ ಧನಸಹಾಯವನ್ನು ಹಸ್ತಾಂತರಿಸಲಾಯಿತು. ಸಮುದಾಯ ಸೇವಾ ವಿಭಾಗದ ನಿರ್ದೇಶಕ ದೀಪಕ್ ಬೊಳ್ವಾರು ಕಾರ್ಯಕ್ರಮ ನಿರ್ವಹಿಸಿದರು.

ಟಿ.ಆರ್.ಎಫ್ ದೇಣಿಗೆ:
ಅಂತರ್ರಾಷ್ಟ್ರೀಯ ಸೇವಾ ವಿಭಾಗದಡಿಯಲ್ಲಿ ಟಿ.ಆರ್.ಎಫ್ ಧತ್ತಿನಿಧಿಗೆ ದೇಣಿಗೆ ನೀಡಿದ ಅಧ್ಯಕ್ಷ ಸುಂದರ ರೈ ಬಲ್ಕಾಡಿ, ಕಾರ್ಯದರ್ಶಿ ಯಶವಂತ ಗೌಡ ಕಾಂತಿಲ, ರೋಶನ್ ರೈ ಬನ್ನೂರುರವರುಗಳನ್ನು ಅಭಿನಂದಿಸಲಾಯಿತು. ಅಂತರ್ರಾಷ್ಟ್ರೀಯ ಸೇವಾ ನಿರ್ದೇಶಕ ಸುಭಾಶ್ ರೈ ಬೆಳ್ಳಿಪ್ಪಾಡಿರವರು ಕಾರ್ಯಕ್ರಮ ನಿರ್ವಹಿಸಿದರು.

ಕ್ಲಬ್ ನಿಕಟಪೂರ್ವ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಮಣ್ಣ ರೈ ಕೈಕಾರ ಪ್ರಾರ್ಥಿಸಿದರು. ಕಾರ್ಯದರ್ಶಿ ಯಶವಂತ ಗೌಡ ಕಾಂತಿಲ ವರದಿ ವಾಚಿಸಿದರು. ಅತಿಥಿಗಳ ಪರಿಚಯವನ್ನು ಮಾಜಿ ಅಧ್ಯಕ್ಷ ಮಹಾಬಲ ಗೌಡ, ಮಾಜಿ ಕಾರ್ಯದರ್ಶಿ ಆಶಾ ರೆಬೆಲ್ಲೋ, ಶೀನಪ್ಪ ಗೌಡರವರು ನೀಡಿದರು. ನಿಯೋಜಿತ ಅಧ್ಯಕ್ಷ ಆನಂದ ಮೂವಪ್ಪು ವಂದಿಸಿದರು. ಬುಲೆಟಿನ್ ಎಡಿಟರ್ ಮಹೇಶ್ ಕೆ.ಸವಣೂರುರವರು ಕಾರ್ಯಕ್ರಮ ನಿರೂಪಿಸಿದರು.

ರೋಟರಿ ಸ್ವರ್ಣ ಪ್ರಶಸ್ತಿ ಪ್ರದಾನ..
ಕ್ಲಬ್ ವರ್ಷಂಪ್ರತಿ ವೃತ್ತಿ ಸೇವಾ ವಿಭಾಗದಡಿಯಲ್ಲಿ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡವರಿಗೆ ‘ರೋಟರಿ ಸ್ವರ್ಣ’ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ಪ್ರಸ್ತುತ ವರ್ಷ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ರೋಟರಿ ಹಿರಿಯ ಸದಸ್ಯ ಅರಿಯಡ್ಕ ಚಿಕ್ಕಪ್ಪ ನಾಯ್ಕ್ ರವರಿಗೆ ‘ರೋಟರಿ ಸ್ವರ್ಣ’ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ವೃತ್ತಿ ಸೇವಾ ನಿರ್ದೇಶಕಿ ಸಂಧ್ಯಾರಾಣಿ ಬೈಲಾಡಿರವರು ಸನ್ಮಾನಿತರ ಪರಿಚಯ ಮಾಡಿದರು. ಸನ್ಮಾನ ಸ್ವೀಕರಿಸಿದ ಅರಿಯಡ್ಕ ಚಿಕ್ಕಪ್ಪ ನಾಯ್ಕ್ ರವರು ಮಾತನಾಡಿ ಕೃತಜ್ಞತೆ ಸಲ್ಲಿಸಿದರು.

ಕನ್ನಡವನ್ನೂ ಬಳಸಿ..
ಕಾರ್ಯಕ್ರಮದ ನಡುವೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷರಾದ ಉಮೇಶ ನಾಯಕ್ ರವರು ಮಾತನಾಡಿ, ರೋಟರಿಯ ನಾಲ್ಕು ಕಂದಾಯ ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ ಇವುಗಳಿಗೆ ಒಳಪಟ್ಟ ರೋಟರಿ ಕ್ಲಬ್ ಗಳು ತಮ್ಮ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಆಂಗ್ಲ ಭಾಷೆಯೊಂದಿಗೆ ಕನ್ನಡ ಭಾಷೆಯಲ್ಲೂ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಬೇಕು, ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಂತಾಗಬೇಕು ಎಂಬ ಮನವಿಯನ್ನು ರೋಟರಿ ಜಿಲ್ಲಾ ಗವರ್ನರ್ ಎಚ್.ಆರ್ ಕೇಶವ್ ರವರಿಗೆ ಹಸ್ತಾಂತರಿಸಿದರು.

ಚಲನಚಿತ್ರ ಪ್ರದರ್ಶನ/ಗಣಕ ಯಂತ್ರ ಕೊಡುಗೆ…
ಯೂತ್ ಸರ್ವಿಸ್ ನಡಿಯಲ್ಲಿ ಮುರ ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಮಕ್ಕಳ ಶೈಕ್ಷಣಿಕ ಬೆಳವಣಿಗಾಗಿ ಹಾಗೂ ಮನೋರಂಜನೆಗಾಗಿ ಚಲನಚಿತ್ರ ಪ್ರದರ್ಶನಕ್ಕೆ ಡಿಜಿ ಎಚ್.ಆರ್ ಕೇಶವ್ ರವರು ಈಗಾಗಲೇ ಚಾಲನೆ ನೀಡಿದ್ದಾರೆ. ಇದೊಂದು ಶಾಶ್ವತವಾದ ಯೋಜನೆಯಾಗಿದ್ದು ಮುಂಬರುವ ದಿನಗಳಲ್ಲಿ ನಮ್ಮ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಪ್ರದರ್ಶನ ಗೊಳ್ಳಲಿದೆ .ಅದೇ ರೀತಿ ಕ್ಲಬ್ ಪದಪ್ರದಾನ ಕಾರ್ಯಕ್ರಮದಂದು 75 ಮಕ್ಕಳಿಗೆ ಉಚಿತ ಪುಸ್ತಕ ವಿತರಣೆಯ ಸಂದರ್ಭದಲ್ಲಿ ಶಾಲೆಯ ಮಕ್ಕಳಿಗೆ ಕಲಿಕೆಗಾಗಿ ಒಂದು ಗಣಕಯಂತ್ರ ಕಂಪ್ಯೂಟರ್ ಅವಶ್ಯಕತೆ ಇದೆಯೆಂದು ಬೇಡಿಕೆಯನ್ನು ಇಟ್ಟಿದ್ದು, ಬೇಡಿಕೆಗೆ ಸ್ಪಂದಿಸಿ ಗಣಕ ಯಂತ್ರವನ್ನು ಡಿಜಿ ಎಚ್.ಆರ್ ಕೇಶವ್ ರವರು ಮುರ ಶಾಲೆಯ ಮುಖ್ಯ ಶಿಕ್ಷಕಿ ಗ್ಲ್ಯಾಡೀಸ್ ಡಾಯಸ್ ರವರಿಗೆ ಈ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು. ಯೂತ್ ಸರ್ವಿಸ್ ನಿರ್ದೇಶಕ ವಿಜಯ್ ಡಿ’ಸೋಜ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here