ಕೆ.ಎಂ.ಎಫ್ ಹಾಲು ಸಂಸ್ಕರಣಾ ಘಟಕಕ್ಕೆ ಗ್ರೀನ್ ಸಿಗ್ನಲ್ – ಚಿಕ್ಕಮುಡ್ನೂರು ಗ್ರಾಮದಲ್ಲಿ 10.10 ಎಕ್ರೆ ಜಮೀನು ಮಂಜೂರು

0

ದಾರಂದಕುಕ್ಕು ಕಟಾರದಲ್ಲಿ ಸ.ನಂ.14/1 ರಲ್ಲಿ 10.10 ಎಕ್ರೆ ಜಮೀನು ಮಂಜೂರು

1.5 ಲಕ್ಷ ಲೀಟರ್ ಹಾಲು ಸಂಸ್ಕರಣೆ, ಪ್ಯಾಕಿಂಗ್ ಪುತ್ತೂರಿನ ನೂರಾರು ಮಂದಿಗೆ ಉದ್ಯೋಗ ನಿರೀಕ್ಷೆ

ಶಾಸಕ ಅಶೋಕ್ ರೈಯವರ ಮುತುವರ್ಜಿಯಿಂದ ಯಶಸ್ವಿ

ಪುತ್ತೂರಿನಲ್ಲಿ ಹಾಲು ಸಂಸ್ಕರಣಾ ಘಟಕ ನಿರ್ಮಾಣವಾದರೆ ಈ ಭಾಗದ ಸುಮಾರು ನೂರಾರು ಮಂದಿಗೆ ಉದ್ಯೋಗ ಸಿಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ 375 ಹಾಲಿನ ಸೊಸೈಟಿಗಳ ಪೈಕಿ ಬಹುಪಾಲು ಸೊಸೈಟಿಗಳು ಪುತ್ತೂರು ಉಪ ವಿಭಾಗ ವ್ಯಾಪ್ತಿಯಲ್ಲೇ ಇದೆ. ಈ ನಿಟ್ಟಿನಲ್ಲಿ ಶಾಸಕ ಅಶೋಕ್ ಕುಮಾರ್ ರೈ ಪುತ್ತೂರು ಚಿಕ್ಕಮುಡ್ನೂರು ಗ್ರಾಮದಲ್ಲಿ ಸರಕಾರಿ ಜಾಗವನ್ನು ಒಕ್ಕೂಟಕ್ಕೆ ಮಂಜೂರು ಮಾಡುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ.

ಸಾಗಾಟ ವೆಚ್ಚ ಉಳಿಕೆ
ಪುತ್ತೂರು, ಸುಳ್ಯ, ಕಡಬ, ವಿಟ್ಲ ಮತ್ತು ಬೆಳ್ತಂಗಡಿ ಭಾಗದಿಂದ ಹಾಲನ್ನು ಕುಲಶೇಖರ ಡೈರಿಗೆ ಒಯ್ಯಲು ಪ್ರತೀ ದಿನ ಕಿ.ಮೀ.ಒಂದಕ್ಕೆ 1 ರೂ.ಸಾಗಾಟ ವೆಚ್ಚ ಬೀಳುತ್ತದೆ. ಪ್ಯಾಕೆಟ್ ಹಾಲು ಮರಳಿ ತರಲು ಪ್ರತೀ ದಿನ ಪ್ರತೀ ಲೀಟರ್‌ಗೆ 85 ಪೈಸೆ ಸಾಗಾಟ ವೆಚ್ಚ ತಗುಲುತ್ತದೆ. ಪುತ್ತೂರಿನಲ್ಲಿ ಡೈರಿ ನಿರ್ಮಾಣವಾದರೆ ಈ ವೆಚ್ಚ ಉಳಿಯಲಿದೆ. ಕಳೆದ ದಶಕಗಳಿಂದ ಸಾಗಾಟಕ್ಕಾಗಿಯೇ ಕೋಟ್ಯಂತರ ರೂ. ಹಣವನ್ನು ಡಿಕೆಎಂಯುಎಲ್ ವ್ಯಯಿಸಿದೆ.ಇದಲ್ಲದೆ ಇಡೀ ಜಿಲ್ಲೆಯಲ್ಲಿ ಉತ್ಪತ್ತಿಯಾಗುವ ಒಟ್ಟು ಹಾಲಿನಲ್ಲಿ ಸಿಂಹಪಾಲು ಪುತ್ತೂರು ಉಪ ವಿಭಾಗ ವ್ಯಾಪ್ತಿಯಲ್ಲಿಉತ್ಪತ್ತಿಯಾಗುತ್ತಿದೆ.

ಪುತ್ತೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವ್ಯಾಪ್ತಿಗೆ ಬರುವ ಪುತ್ತೂರಿನಲ್ಲಿ ಹಾಲು ಸಂಸ್ಕರಣಾ ಘಟಕಕ್ಕೆ ಚಿಕ್ಕಮುಡ್ನೂರು ಗ್ರಾಮದ ದಾರಂದಕುಕ್ಕು ಸಮೀಪದ ಕಟಾರದಲ್ಲಿ ಸ.ನಂ.14/1ರಲ್ಲಿ 10.10 ಎಕ್ರೆ ಜಾಗ ಸರಕಾರದಿಂದ ಮಂಜೂರುಗೊಂಡಿದೆ.ಮುಂದೆ ಇಲ್ಲಿ ಅತ್ಯಾಧುನಿಕ ಡೈರಿ ನಿರ್ಮಾಣವಾಗಿ ಸ್ಥಳೀಯರಿಗೆ ಉದ್ಯೋಗ ಸಿಗುವ ಭರವಸೆಯೂ ಇದೆ.
10.10 ಎಕ್ರೆ ಮಂಜೂರುಗೊಂಡಿರುವ ಜಮೀನಿಗೆ ಸಂಬಂಽಸಿದಂತೆ 9.20 ಎಕ್ರೆಗೆ ನ್ಯಾಯಾಲಯದಲ್ಲಿ ಯಾವುದೇ ಪ್ರಕರಣಗಳು ದಾಖಲಾಗಿರದ ಕಾರಣ ಹಾಗೂ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ಸರಕಾರದ ಅಧೀನಕ್ಕೆ ಒಳಪಡುವ ಸಂಸ್ಥೆಯಾಗಿದ್ದು, ಯಾವುದೇ ಖಾಸಗಿ ಸಂಸ್ಥೆಯ ಸಹಭಾಗಿತ್ವ ಅಥವಾ ಪಾಲುದಾರಿಕೆ ಹೊಂದಿರದ ಕಾರಣ 2014ರ ಜ.1ರಂದು ಸರಕಾರದ ಪತ್ರ ಸಂಖ್ಯೆ ಆರ್‌ಡಿ 21 ಎಲ್‌ಜಿಪಿ 2003ರಲ್ಲಿ ನಿರ್ದೇಶಿಸಿರುವ ಪ್ರಕಾರ ಮತ್ತು ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 79(2)ರಲ್ಲಿ ಕಲ್ಪಿಸಿರುವ ಅವಕಾಶದಂತೆ ಕುಮ್ಕಿ ಶೀರ್ಷಿಕೆಯಿಂದ ವಿಹಿತಗೊಳಿಸಿದ ನಂತರ ಕರ್ನಾಟಕ ಭೂ ಮಜೂರಾತಿ ನಿಯಮಗಳು, 1969ರ ನಿಯಮ 20(1)(ಸಿ)ರಂತೆ ಮಾರುಕಟ್ಟೆ ಮೌಲ್ಯದ ಶೇಕಡ 50ರಷ್ಟನ್ನು ವಿಧಿಸಿ ಮಂಜೂರು ಮಾಡಲು ಸರಕಾರವು ಅನುಮತಿಸಿದೆ ಎಂದು ಕಂದಾಯ ಇಲಾಖೆಯ ಭೂ ಮಂಜೂರಾತಿ ಪೀಠಾಧಿಕಾರಿಯವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ಮಂಜೂರಾತಿ ಅದೇಶ ಕಳುಹಿಸಿದ್ದಾರೆ. ಈ ನಡುವೆ ಅಲ್ಲಿ ಇನ್ನೂ ಸುಮಾರು 4 ಎಕ್ರೆ ಜಾಗ ಖಾಸಗಿ ಒಡೆತನದಲ್ಲಿದ್ದು ಅದನ್ನು ಖರೀದಿಸಲು ಕೆಎಮ್‌ಎಫ್ ಮುಂದಾಗಿದೆ.‌ ಒಟ್ಟು 14 ಎಕ್ರೆಯಷ್ಟು ಜಾಗ ಕೆಎಮ್‌ಎಫ್ ಗೆ ಲಭ್ಯವಾಗಲಿದೆ.
1.5 ಲಕ್ಷ ಲೀಟರ್ ಸಾಮರ್ಥ್ಯ: ಉಪ್ಪೂರಿನಲ್ಲಿರುವ ಸಂಸ್ಕರಣಾ ಘಟಕದಲ್ಲಿ ಎರಡೂವರೆ ಲಕ್ಷ ಲೀಟರ್ ಹಾಲನ್ನು ಸ್ವಯಂ ಚಾಲಿತ ಯಂತ್ರಗಳ ಮೂಲಕ ಸಂಸ್ಕರಣೆ ಮಾಡಿ ಪ್ಯಾಕಿಂಗ್ ಮಾಡಲಾಗುತ್ತಿದೆ.ಪುತ್ತೂರಿನಲ್ಲಿ 1.5 ಲಕ್ಷ ಲೀಟರ್ ಹಾಲು ಸಂಸ್ಕರಣೆ ಮತ್ತು ಪ್ಯಾಕಿಂಗ್ ಕಾರ್ಯವನ್ನು ಸ್ವಯಂ ಚಾಲಿತ ಯಂತ್ರಗಳ ಮೂಲಕ ನಡೆಸಲು ಉದ್ದೇಶಿಸಲಾಗಿದೆ.‌ ಪುತ್ತೂರು ಭಾಗದಲ್ಲಿ ಹಾಲು ಸಂಸ್ಕರಣಾ ಘಟಕ ನಿರ್ಮಿಸುವ ಯೋಜನೆ ಇದ್ದರೂ ಜಮೀನು ಸಿಗದ ಕಾರಣ ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಕಾಲ ಕೂಡಿ ಬಂದಿದೆ. ಜಮೀನು ಮಂಜೂರು ಆಗಿದೆ.

LEAVE A REPLY

Please enter your comment!
Please enter your name here