ಉಪ್ಪಿನಂಗಡಿ: ನೈತಿಕ ಪೊಲೀಸ್‌ಗಿರಿಯ ವಿಡಿಯೋ ವೈರಲ್

0

ಉಪ್ಪಿನಂಗಡಿ: ಒಂದೇ ಕೋಮಿನ ಯುವಕ ಹಾಗೂ ಅಪ್ರಾಪ್ತೆಯೋರ್ವಳು ಮಾತನಾಡುತ್ತಿದ್ದ ವೇಳೆ ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿ, ನೈತಿಕ ಪೊಲೀಸ್‌ಗಿರಿ ಪ್ರದರ್ಶಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಲಾಗುತ್ತಿದ್ದು, ಇದು ಕಳೆದ ನವೆಂಬರ್‌ನಲ್ಲಿ ಪೊಕ್ಸೋ ಪ್ರಕರಣ ದಾಖಲಿಸಲ್ಪಟ್ಟ ಯುವಕನ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಎನ್ನಲಾಗುತ್ತಿದೆ.
ಉಪ್ಪಿನಂಗಡಿ ಹಳೇ ಕುಮಾರಧಾರಾ ಸೇತುವೆಯ ಬಳಿ ಯುವಕ ಹಾಗೂ ಅಪ್ರಾಪ್ತೆಯು ಮಾತನಾಡುತ್ತಿದ್ದಾಗ ಅಲ್ಲಿಗೆ ಬಂದ ಮೂರು ಮಂದಿಯಿದ್ದ ಗುಂಪೊಂದು ಭಾರೀ ರೊಮ್ಯಾನ್ಸ್ ಮಾಡುತ್ತೀರಾ? ಎಂದು ಪ್ರಶ್ನಿಸಿ, ಯುವಕನ ಮೊಬೈಲ್ ಪೋನ್ ಕಿತ್ತುಕೊಳ್ಳುವುದು ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಿಸುತ್ತಿದೆ. ವಿಡಿಯೋದಲ್ಲಿನ ಸಂಭಾಷಣೆಯನ್ನು ಆಲಿಸಿದಾಗ, ಹಲ್ಲೆ ನಡೆಸುವ ಮಂದಿಗೂ ಯುವಕ ಹಾಗೂ ಆಕೆಯೊಂದಿಗಿದ್ದ ಅಪ್ರಾಪ್ತೆಗೂ ಯಾವುದೇ ಸಂಬಂಧ, ಪರಿಚಯ ಇಲ್ಲದಿರುವುದು ಗೋಚರಿಸುತ್ತದೆ.
ಪೋಕ್ಸೋ ಕಾಯ್ದೆಯಡಿ ಪ್ರಕರಣ: ಅಪ್ರ್ರಾಪ್ತ ವಯಸ್ಕ ಬಾಲಕಿಯನ್ನು ಪ್ರೀತಿಸುವಂತೆ ಒತ್ತಾಯಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದನ್ವಯ 19ರ ವಯಸ್ಸಿನ ಯುವಕನೋರ್ವನ ವಿರುದ್ದ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಳೆದ ನವೆಂಬರ್‌ನಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಹಲ್ಲೆಗೊಳಗಾಗುತ್ತಿರುವ ಯುವಕ ಪೋಕ್ಸೋ ಕಾಯ್ದೆಯಡಿಯ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯೇ ಆಗಿದ್ದಾನೆ ಎನ್ನಲಾಗುತ್ತಿದ್ದು, ಅಂದು ಕುಮಾರಧಾರ ಹಳೆ ಸೇತುವೆಯ ಬಳಿ ಇವರಿರುವಾಗ ನಡೆದ ನೈತಿಕ ಪೊಲೀಸ್‌ಗಿರಿಯ ವಿಡಿಯೋ ಇದು ಎನ್ನಲಾಗುತ್ತಿದೆ.

LEAVE A REPLY

Please enter your comment!
Please enter your name here