ಪುತ್ತೂರು: ಡಿ.9ರಂದು ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗ ಹಾಗೂ ಇನ್ಸ್ಟಿಟ್ಯೂಷನ್ಸ್ ಇನೋವೇಶನ್ ಕೌನ್ಸಿಲ್ ಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸ್ನಾತಕೋತ್ತರ ವಿಭಾಗದ ಸಭಾಂಗಣದಲ್ಲಿ ʼಉದ್ಯಮಶೀಲತೆ ಮತ್ತು ಇನ್ನೋವೇಶನ್ ಎಂಜಿನ್ʼ ಎಂಬ ವಿಷಯದ ಕುರಿತಾಗಿ ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಲಾಯಿತು.
ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂ|ಡಾ| ಆಂಟೊನಿ ಪ್ರಕಾಶ್ ಮೊಂತೇರೊರವರು ವಿದ್ಯಾರ್ಥಿಗಳನ್ನುದ್ದೇಶಿಸಿ “ಪ್ರತಿಯರ‍್ವ ವ್ಯಕ್ತಿಯಲ್ಲೂ ವಿವಿಧ ಕಲ್ಪನೆಗಳಿರುತ್ತವೆ. ಅವುಗಳನ್ನು ಮೂರ್ತರೋಪಕ್ಕೆ ತರುವಲ್ಲಿ ಧೈರ್ಯ, ಸಾಹಸ ಪ್ರವೃತ್ತಿ, ಕ್ರಿಯಾಶೀಲತೆ ಹಾಗೂ ನಿರಂತರ ಪರಿಶ್ರಮ ಅತ್ಯಗತ್ಯ. ವಿದ್ಯಾಭ್ಯಾಸ ಪೂರೈಸಿದ ಬಳಿಕ ಉದ್ಯೋಗಗಳನ್ನರಸಿ ನಗರಗಳತ್ತ ತೆರಳುತ್ತಾರೆ. ಇದರ ಬದಲಾಗಿ ಒಂದು ಪುಟ್ಟ ಉದ್ಯಮದ ರೂಪುರೇಷೆಗಳನ್ನು ಆ ಕ್ಷೇತ್ರದಲ್ಲಿನ ಪರಿಣಿತರೊಂದಿಗೆ ಚರ್ಚಿಸಿ ಕಾರ್ಯರೂಪಕ್ಕೆ ತಂದಲ್ಲಿ ನಾವು ನಮ್ಮಂತಹ ಇತರ ಹತ್ತಾರು ಜನರಿಗೆ ಉದ್ಯೋಗದಾತರಾಗಿ ದೇಶದ ಆರ್ಥಿಗತೆಯ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಹಿಂದಿನ ಕಾಲದಲ್ಲಿ ಸರಕಾರಿ ಉದ್ಯೋಗ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಾಗಿ ಜನರು ಹಾತೊರೆಯುತ್ತಿದ್ದರು. ಇಂದಿನ ಶಿಕ್ಷಣವು ಯುವಕರಲ್ಲಿ ಉದ್ಯಮಶೀಲತೆಗೆ ಆದ್ಯತೆ ನೀಡುತ್ತಿದೆ. ಪ್ರತಿಯೊಂದು ಕಲ್ಪನೆಯೂ ದೊಡ್ಡ ಉದ್ಯಮವಾಗಿ ಬೆಳೆಯಬೇಕೆಂದಿಲ್ಲ. ಉದ್ಯಮದ ಸಾಧ್ಯಾಸಾಧ್ಯತೆಗಳ ಬಗ್ಗೆ ನುರಿತವರ ಮಾರ್ಗದರ್ಶನ ಅಗತ್ಯ” ಎಂದು ಹೇಳಿದರು. ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಪುತ್ತೂರಿನ ಮರಿಕೆ ಆರ್ಗ್ಯಾನಿಕ್ಸ್ ನ ಮಾಲಕರಾದ ಸುಹಾಸ್ ಮರಿಕೆ ಅವರು ಮಾತನಾಡಿ “ಒಂದು ಉದ್ಯಮವನ್ನು ಸ್ಥಾಪಿಸಬೇಕೆಂದಿದ್ದಲ್ಲಿ ಆ ವ್ಯಕ್ತಿಯು ಶೀಘ್ರವಾಗಿ ಲಾಭ ಗಳಿಸುವ ಯೋಜನೆಗಳನ್ನು ಹಾಕಬಾರದು. ದೂರದೃಷ್ಟಿ, ಸಾಹಸ ಹಾಗೂ ಕ್ರಿಯಾಶೀಲತೆಗಳು ಉದ್ಯಮವನ್ನು ಯಶಸ್ಸಿನೆಡೆಗೆ ಕೊಂಡೊಯ್ಯುತ್ತವೆ. ನಮ್ಮದೇ ಕ್ಷೇತ್ರದಲ್ಲಿ ಉದ್ಯಮ ನಡೆಸುತ್ತಿರುವ ಹಲವಾರು ವ್ಯಕ್ತಿಗಳಿರುತ್ತಾರೆ. ನಾವು ತಯಾರಿಸುವ ಉತ್ಪನ್ನವು ಇತರರ ಉತ್ಪನ್ನಗಳಿಂದ ಬೇರೆಯಾಗಿರಬೇಕು. ಆಹಾರ ಉದ್ಯಮವು ಯಾವತ್ತಿಗೂ ಬೇಡಿಯೆಯಿಂದ ಕೂಡಿರುವ ಕ್ಷೇತ್ರ. ಇಂದಿನ ಈ ಕಾಲಘಟ್ಟದಲ್ಲಿ ಜನರು ಆರೋಗ್ಯದೆಡೆಗೆ ಅತ್ಯಂತ ಗಮನ ಹರಿಸಬೇಕಾದ ಅನಿವಾರ್ಯತೆಯಿದೆ. ಆದ್ದರಿಂದ ಅವರಿಗೆ ಕೃತಕ ಬಣ್ಣ, ರುಚಿವರ್ಧಕಗಳು, ಹಾಗೂ ಆಹಾರ ಪದಾರ್ಥಗಳನ್ನು ಕೆಡದಂತಿಡುವ ರಾಸಾಯನಿಕ ವಸುಗಳ ಬಳಕೆಯನ್ನು ಮಾಡದೆ ಉತ್ತಮ ಗುಣಮಟ್ಟದ ಆಹಾರವನ್ನು ಪೂರೈಸುವ ಉದ್ಯಮವು ಯಶಸ್ವಿಯಾಗಲು ಬಹಳ ಅವಕಾಶಗಳಿವೆ. ನಾವು ತಯಾರಿಸುವ ಯಾವುದೇ ಉತ್ಪನ್ನಗಳ ಗುಣಮಟ್ಟದ ಅಭಿವೃದ್ಧಿಯ ಉದ್ದೇಶವು ನಮ್ಮದಾಗಿದ್ದಲ್ಲಿ ನಾವು ತಯಾರಿಸುವ ವಸ್ತುವಿಗೆ ಸದಾ ಬೇಡಿಕೆಯಿರುತ್ತದೆ” ಎಂದು ಹೇಳಿ ರಾಸಾಯನಿಕ ವಸ್ತುಗಳನ್ನು ಬಳಸದೆ ತಾವು ತಯಾರಿಸುವ ಐಸ್ ಕ್ರೀಮ್‌ಗೆ ಇರುವ ಬೇಡಿಕೆಯ ಬಗ್ಗೆ, ಈ ಉದ್ಯಮದ ಪ್ರಾರಂಭಿಕ ಘಟ್ಟದಲ್ಲಿ ತಮಗೆದುರಾದ ಸಮಸ್ಯೆಗಳ ಬಗ್ಗೆ ನಿದರ್ಶನಗಳ ಸಹಾಯದಿಂದ ವಿವರಿಸಿದರು.
ಶ್ರೀರಾಗ ಮತ್ತು ಹಂಸನಂದಿನಿ ಪ್ರಾರ್ಥಿಸಿದರು. ಪೂಜಾ ಸ್ವಾಗತಿಸಿ ಪ್ರಸ್ತಾವನೆಗೈದರು. ಪೂಜಾ ಎಸ್ ರೈ ವಂದಿಸಿದರು. ಸೌಮ್ಯಶ್ರೀ ಎಸ್ ಆರ್ ಕಾರ್ಯಕ್ರಮ ನಿರೂಪಿಸಿದರು. ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಸಂಯೋಜಕರಾದ ಹರ್ಷಿತ್ ಹಾಗೂ ಸಹಾಯಕ ಪ್ರಾಧ್ಯಾಪಕರಾದ ಪೃಧ್ವಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.