ಮಹಿಳೆಯರು ಯಕ್ಷಗಾನದತ್ತ ಆಕರ್ಷಿತರಾಗುತ್ತಿರುವುದು ಒಳ್ಳೆಯ ಬೆಳವಣಿಗೆ: ಶ್ರೀ ಸಚ್ಚೀದಾನಂದ ಭಾರತೀ ಸ್ವಾಮೀಜಿ
ಪುತ್ತೂರು: ಯಕ್ಷಗಾನ ಕೇವಲ ಪುರುಷರಿಗೆ ಮಾತ್ರ ಸೀಮಿತವಾಗಿದ್ದ ಕಾಲದಲ್ಲಿ ಇಂದು ಮಹಿಳೆಯರು ಕೂಡ ತಮ್ಮ ಪ್ರತಿಭೆಯನ್ನು ಯಕ್ಷಗಾನದಲ್ಲಿ ಅನಾವರಣಗೊಳಿಸುತ್ತಿರುವುದು ಶ್ಲಾಘನೀಯ. ಮಹಿಳೆಯರು ಕೂಡ ಇಂದು ಯಕ್ಷಗಾನ ಕಲೆಯತ್ತ ಆಕರ್ಷಿತರಾಗುತ್ತಿರುವುದು ಸಾಂಸ್ಕೃತಿಕವಾಗಿ ಒಳ್ಳೆಯ ಬೆಳವಣಿಗೆ ಆಗಿದೆ ಎಂದು ಕಾಸರಗೋಡು ಶ್ರೀ ಎಡನೀರು ಮಠದ ಶ್ರೀ ಸಚ್ಚೀದಾನಂದ ಭಾರತೀ ಶ್ರೀಪಾದಂಗಳವರು ಹೇಳಿದರು.
ಅವರು ಪುತ್ತೂರು ಧೀಶಕ್ತಿ ಮಹಿಳಾ ಯಕ್ಷ ಬಳಗದ ದಶಮಾನೋತ್ಸವ ಸಂಭ್ರಮವನ್ನು ಡಿ.10ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ಸಭಾಭವನದ ನಟರಾಜ ವೇದಿಕೆಯಲ್ಲಿ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ ಆಶೀರ್ವಚನ ನೀಡಿದರು. ಬಹಳಷ್ಟು ಜಿಲ್ಲೆಯಲ್ಲಿ ಮಹಿಳೆಯರು ಯಕ್ಷಗಾನ ಕಲೆಯತ್ತ ಒಲವು ತೋರಿಸುತ್ತಿರುವುದು ಕಂಡು ಬರುತ್ತಿದೆ. ಇದು ಸಾಂಸ್ಕೃತಿಕವಾಗಿ ಸಂತಸದ ವಿಷಯವಾಗಿದೆ ಎಂದ ಸ್ವಾಮೀಜಿಯವರು, ಯಕ್ಷಗಾನದಲ್ಲೂ ಬಹಳಷ್ಟು ಅವಿಷ್ಕಾರಗಳು ನಡೆಯುತ್ತಿದ್ದು ಆದರೆ ಮೂಲಭೂತ ಚೌಕಟ್ಟನ್ನು ಮೀರದೆ ಆವಿಷ್ಕಾರಗೊಂಡಾಗ ಕಲೆಯ ಸಾರ ಉಳಿಯುತ್ತದೆ. ಈ ನಿಟ್ಟಿನಲ್ಲಿ ಧೀಶಕ್ತಿ ಮಹಿಳಾ ಯಕ್ಷ ಬಳಗವು ಹತ್ತು ವರ್ಷಗಳ ಸಂಭ್ರಮವನ್ನು ಆಚರಿಸುತ್ತಿದ್ದು ಮುಂದಿನ ದಿನಗಳಲ್ಲಿ ಬಳಗದಿಂದ ಇನ್ನಷ್ಟು ಯಕ್ಷಪ್ರತಿಭೆಗಳು ಮೂಡಿಬರಲಿ, ಬಳಗಕ್ಕೆ ಯಶಸ್ಸು ಸಿಗಲಿ ಎಂದು ಸ್ವಾಮೀಜಿಯವರು ಶುಭಾಶೀರ್ವಾಚನ ಮಾಡಿದರು.
ಸಭಾಧ್ಯಕ್ಷತೆ ವಹಿಸಿದ್ದ ಪುತ್ತೂರಿನ ಸ್ವರ್ಣೋದ್ಯಮಿ ಬಲರಾಮ ಆಚಾರ್ಯರವರು ಮಾತನಾಡಿ, ಯಕ್ಷಗಾನ ಕಲೆಯನ್ನು ಕರಗತಮಾಡಿಕೊಳ್ಳುವುದರಿಂದ ನಮಗೆ ಬಹಳಷ್ಟು ಲಾಭವಿದೆ ಅದರಲ್ಲೂ ನಮ್ಮ ಭಾಷಾ ಪರಿಶುದ್ಧತೆಯಾಗುತ್ತದೆ ಎಂದ ಅವರು ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಯಕ್ಷಗಾನ ಕಲೆಯತ್ತ ಒಲವು ತೋರಿಸುತ್ತಿರುವುದು ತುಂಬಾ ಒಳ್ಳೆಯ ಬೆಳವಣಿಗೆಯಾಗಿದೆ. ಈ ನಿಟ್ಟಿನಲ್ಲಿ ಧೀಶಕ್ತಿ ಮಹಿಳಾ ಯಕ್ಷ ಬಳಗ ಇನ್ನಷ್ಟು ಹೊಸ ಹೊಸ ಪ್ರತಿಭೆಗಳನ್ನು ಹುಟ್ಟುಹಾಕಲಿ ಎಂದು ಹೇಳಿ ಶುಭ ಹಾರೈಸಿದರು.
ವಿನಯ ಕೇಕುಣ್ಣಾಯ ಮತ್ತು ಬಳಗದವರು ಪ್ರಾರ್ಥಿಸಿದರು. ಧೀಶಕ್ತಿ ಮಹಿಳಾ ಯಕ್ಷ ಬಳಗದ ಮುಖ್ಯಸ್ಥೆ ಪದ್ಮಾ ಕೆ.ಆರ್.ಆಚಾರ್ಯ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಪ್ರೇಮಾ ಕಿಶೋರ್ ವರದಿ ವಾಚಿಸಿದರು. ಗೀತಾ ಕೊಂಕೋಡಿ, ಜ್ಯೋತಿ ರಾವ್, ವಿನಯ, ಹೀರಾ ಉದಯ್, ಶಂಕರಿ ಶರ್ಮ,ಹರಿಪ್ರಸಾದ್ ಅತಿಥಿಗಳಿಗೆ ವೀಳ್ಯ, ಶಾಲು ನೀಡಿ ಸ್ವಾಗತಿಸಿದರು.ಜಯಲಕ್ಷ್ಮೀ ಡಿ.ಭಟ್ ವಂದಿಸಿದರು. ಶ್ರೀವಿದ್ಯಾ ಕೆ ರಾವ್, ಮಮತಾ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.
ಯಕ್ಷ ದಂಪತಿಗಳಿಗೆ ಸನ್ಮಾನ
ತಮ್ಮ ಇಳಿ ವಯಸ್ಸಿನಲ್ಲಿ ಯಕ್ಷಗಾನ ತಾಳಮದ್ದಳೆಯಲ್ಲಿ ತೊಡಗಿಸಿಕೊಂಡು ಸಾಧನೆ ಮಾಡುತ್ತಿರುವ ಸುರತ್ಕಲ್ ಶ್ರೀ ದುರ್ಗಾಂಭಾ ಮಹಿಳಾ ಯಕ್ಷಗಾನ ಮಂಡಳಿ ತಡಂಬೈಲು ಇದರ ಯಕ್ಷದಂಪತಿಗಳಾದ ವಾಸುದೇವ ರಾವ್ ಮತ್ತು ಸುಲೋಚನ ರಾವ್‌ರವರನ್ನು ಈ ಸಂದರ್ಭದಲ್ಲಿ ಶಾಲು,ಫಲಪುಷ್ಪ, ಸ್ಮರಣಿಕೆಯೊಂದಿಗೆ ಧೀಶಕ್ತಿ ದಶಮಾನೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸನ್ಮಾನಿತರ ಬಗ್ಗೆ ಕುಂಬಳೆ ಕಣಿಪುರ ಮಾಸಪತ್ರಿಕೆಯ ಸಂಪಾದಕ ಎಂ.ನಾ ಚಂಬಲ್ತಿಮಾರ್‌ರವರು ಅಭಿನಂದನಾ ಭಾಷಣಾ ಮಾಡುತ್ತಾ, ವಾಸುದೇವರಾವ್‌ರವರಿಗೆ ಈಗ 80ರ ಹರೆಯ ಹಾಗೇ ಸುಲೋಚನ ರಾವ್‌ರವರಿಗೆ 75ರ ಹರೆಯ, ಇವರಿಬ್ಬರು ಯಕ್ಷಗಾನಕ್ಕೆ ಕಾಲಿಟ್ಟಿದ್ದು ತಮ್ಮ 60ರ ವಯಸ್ಸಿನ ನಂತರವೇ ಆಗಿದೆ. ತಮ್ಮ ಇಳಿವಯಸ್ಸಿನಲ್ಲಿ ಯಕ್ಷಗಾನ ತಾಳಮದ್ದಳೆಯನ್ನು ಕಲಿತು ಬಹಳಷ್ಟು ಮಂದಿಗೆ ಕಲೆಯನ್ನು ಕಲಿಸುತ್ತಿರುವ ಇವರು ಕರಾವಳಿಯ ಅಪರೂಪದ ತಾಳಮದ್ದಳೆ ಕಲಾವಿದರಾಗಿದ್ದಾರೆ ಎಂದು ಹೇಳಿ ಅಭಿನಂದನೆ ಸಲ್ಲಿಸಿದರು. ಶಾಲಿನಿ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಧೀಶಕ್ತಿ ಮಹಿಳಾ ಯಕ್ಷ ಬಳಗದ ಸಾರಥ್ಯ ವಹಿಸಿಕೊಂಡಿರುವ ಪದ್ಮಾ ಕೆ.ಆರ್.ಆಚಾರ್ಯ ಮತ್ತು ಜಯಲಕ್ಷ್ಮೀ ಡಿ.ಭಟ್‌ರವರನ್ನು ಇದೇ ಸಂದರ್ಭದಲ್ಲಿ ಧೀಶಕ್ತಿ ಬಳಗದ ವತಿಯಿಂದ ಸನ್ಮಾನಿಸಲಾಯಿತು.
ಯಕ್ಷಗಾನ ತಾಳಮದ್ದಳೆ
ಸಭಾ ಕಾರ್ಯಕ್ರಮದ ಬಳಿಕ ಧೀಶಕ್ತಿ ಮಹಿಳಾ ಸದಸ್ಯೆಯರಿಂದ ಹಲಸಿನ ಹಳ್ಳಿ ನರಸಿಂಹ ಶಾಸ್ತ್ರೀ ವಿರಚಿತ ‘ವೀರಮಣಿ ಕಾಳಗ’ ಹಾಗೂ ಅಪರಾಹ್ನ ಧೀಶಕ್ತಿ ಬಾಲಿಕಾ ಯಕ್ಷ ಬಳಗದ ಸದಸ್ಯೆಯರಿಂದ ‘ಧುರವೀಳ್ಯ-ಕರ್ಣಬೇಧನ’ ಮತ್ತು ಯಕ್ಷ ಸುದತಿಯರು‘ ದಶ ಧ್ವನಿ’ ಎನ್ನುವ ಯಕ್ಷಗಾನ ತಾಳಮದ್ದಳೆ ಜರಗಿತು. ಶಂಕರಿ ಶರ್ಮ, ಹೀರಾ ಉದಯ್, ಗೀತಾ ಕೊಂಕೋಡಿ ಕಾರ್ಯಕ್ರಮ ನಿರೂಪಿಸಿದರು.
‘ 2013 ರಲ್ಲಿ ಕೇವಲ 5 ಸದಸ್ಯೆಯರಿಂದ ಆರಂಭವಾದ ಧೀಶಕ್ತಿ ಮಹಿಳಾ ಯಕ್ಷ ಬಳಗ ಪ್ರಸ್ತುತ 30ಕ್ಕೂ ಅಧಿಕ ಹಿರಿಯ ಕಿರಿಯ ಸದಸ್ಯೆಯನ್ನು ಹೊಂದಿದೆ. 2020 ರಲ್ಲಿ ಧೀಶಕ್ತಿ ಬಾಲಿಕಾ ಯಕ್ಷ ಬಳಗವನ್ನು ಆರಂಭಿಸಿ ಹೆಣ್ಣು ಮಕ್ಕಳಲ್ಲೂ ಕಲೆಯ ಅಭಿರುಚಿ ಹುಟ್ಟಿಸುವ ಕೆಲಸ ಆಗುತ್ತಿದೆ. ಭವಿಷ್ಯದ ಹಲವು ಯೋಜನೆಗಳೊಂದಿಗೆ ಮುನ್ನಡೆಯುವ ಬಳಗಕ್ಕೆ ತಮ್ಮೆಲ್ಲರ ಸಹಕಾರ ಪ್ರೋತ್ಸಾಹ ಇರಲಿ.’
ಪದ್ಮಾ ಕೆ.ಆರ್ ಆಚಾರ್ಯ,
ಧೀಶಕ್ತಿ ಮಹಿಳಾ ಯಕ್ಷ ಬಳಗ ತೆಂಕಿಲ ಪುತ್ತೂರು