ಕಡಬ: ಅಯೋಧ್ಯೆಯ ಪವಿತ್ರ ಮಂತ್ರಾಕ್ಷತೆ ವಿತರಣೆ

0

ಅಯೋಧ್ಯೆಯ ರಾಮ ಮಂದಿರ ಲೋಕಾರ್ಪಣೆ ಕ್ಷಣವನ್ನು ಸಂಭ್ರಮಿಸೋಣ: ಮುಕ್ತಾನಂದ ಶ್ರೀ

ಕಡಬ: ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣವಾಗಬೇಕೆಂಬುದು ದೇಶವಾಸಿಗಳ ಬಹುಕಾಲದ ಕನಸಾಗಿದೆ. ಮಂದಿರ ನಿರ್ಮಾಣದಿಂದಾಗಿ ದೇಶಕ್ಕೆ ಹೊಸ ಚೈತನ್ಯ ಬಂದಂತಾಗಿದೆ, ಈ ಕ್ಷಣವನ್ನು ಸಂಭ್ರಮಿಸೋಣ ಎಂದು ಕರಿಂಜೆ ಮಠದ ಶ್ರೀ ಮುಕ್ತಾನಂದ ಸ್ವಾಮೀಜಿ ನುಡಿದರು.


ಅವರು ಸೋಮವಾರ ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಂತ್ರಾಕ್ಷತೆಗೆ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು. ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ಭಾರತದ ಆತ್ಮ. ಆದರೆ ಶ್ರೀರಾಮಚಂದ್ರ ಜನ್ಮಭೂಮಿಯಲ್ಲಿ ದೇವಾಲಯದ ಬದಲು ಆಕ್ರಮಣದ ಗುರುತಾಗಿದ್ದ ಮಸೀದಿ ಇದ್ದುದು ಕಳಂಕದ ಸಂಕೇತವಾಗಿತ್ತು. ಕಳೆದ 500 ವರ್ಷಗಳಿಂದ ನಡೆದ ನಿರಂತರ ಹೋರಾಟದ ಫಲವಾಗಿ ಕಳಂಕ ತೊಡೆದು ಭವ್ಯ ರಾಮ ಮಂದಿರವನ್ನು ಕಾಣುವ ಸುಯೋಗ ನಮ್ಮೆಲ್ಲರದ್ದಾಗಿದೆ. ಆ ಸಂತೋಷದ ಐತಿಹಾಸಿಕ ಕ್ಷಣಗಳನ್ನು ನಾವು ಸಂಭ್ರಮಿಸಲು ಈಗಿನಿಂದಲೇ ಸಿದ್ಧತೆಗಳನ್ನು ನಡೆಯುತ್ತಿದ್ದು, ಪ್ರತಿಯೊಬ್ಬರೂ ಅರದಲ್ಲಿ ಭಾಗವಹಿಸುವ ಮೂಲಕ ಶ್ರೀರಾಮನ ಕೃಪೆಗೆ ಪಾತ್ರರಾಗಬೇಕು ಎಂದರು.


ವಿಶ್ವ ಹಿಂದೂ ಪರಿಷತ್‌ನ ಮಂಗಳೂರು ವಿಭಾಗ ಕಾರ್ಯದರ್ಶಿ ದೇವಿಪ್ರಸಾದ್ ಶಟ್ಟಿ ಅವರು ಮಾತನಾಡಿ ಅಯೋಧ್ಯೆಯಲ್ಲಿ 3 ಲಕ್ಷಕ್ಕೂ ಮಿಕ್ಕಿ ರಾಮ ಭಕ್ತರ ಬಲಿದಾನದ ಫಲವಾಗಿ ಇಂದು ಭವ್ಯ ಮಂದಿರ ಎದ್ದು ನಿಲ್ಲುತ್ತಿದೆ. ಜನ್ಮಭೂಮಿಯಲ್ಲಿನ ಕಳಂಕದ ಸಂಕೇತವನ್ನು ತೊಡೆದುಹಾಕಲು 72 ಕ್ಕೂ ಹೆಚ್ಚು ಬಾರಿ ಯುದ್ಧಗಳಾಗಿವೆ. ಸಾಮ್ರಾಜ್ಯ ವಿಸ್ತರಣೆ ಹಾಗೂ ಮತೀಯ ಕಾರಣಗಳಿಗಾಗಿ ನಡೆದ ಯುದ್ಧಗಳಿಗಿಂತಲೂ ರಾಮ ಜನ್ಮಭೂಮಿಯ ಮುಕ್ತಿಗಾಗಿ ನಡೆದ ಹೋರಾಟ ಅತ್ಯಂತ ಭಾವನಾತ್ಮಕವಾದುದು ಎಂದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಪ್ರಾಂತ ಸಹ ಸೇವಾ ಪ್ರಮುಖ್ ನಾ. ಸೀತಾರಾಮ ಹಾಗೂ ಕಡಬ ತಾಲೂಕು ಸಂಘ ಚಾಲಕ್ ದಿವಾಕರ ರಾವ್ ಉಪಸ್ಥಿತರಿದ್ದರು.


ವಿಹಿಂಪ ಕಡಬ ಪ್ರಖಂಡ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ ಸ್ವಾಗತಿಸಿ, ಜತೆ ಕಾರ್ಯದರ್ಶಿ ಪ್ರಮೀಳಾ ಲೋಕೇಶ್ ವಂದಿಸಿದರು. ಜಿಲ್ಲಾ ಧರ್ಮ ಪ್ರಸಾರ ಪ್ರಮುಖ್ ಮೂಲಚಂದ್ರ ಕಾಂಚನ ನಿರೂಪಿಸಿ, ಉಮೇಶ್ ಆಚಾರ್ಯ ಗೋಳಿಯಡ್ಕ ಹನುಮಾನ್ ಚಾಲೀಸ ಪಠಿಸಿದರು. ವಿವಿಧ ಉಪ ವಸತಿ ಕೇಂದ್ರಗಳಿಂದ ಆಗಮಿಸಿದ ಪ್ರಮುಖರು ಪವಿತ್ರ ಮಂತ್ರಾಕ್ಷತೆ ಸ್ವೀಕರಿಸಿ ತಮ್ಮ ತಮ್ಮ ಭಾಗಗಳಿಗೆ ವಿತರಣೆಗೈಯಲು ಕೊಂಡೊಯ್ದರು.

LEAVE A REPLY

Please enter your comment!
Please enter your name here