8 ದಿನಗಳೊಳಗೆ ಹಕ್ಕುಪತ್ರ ನೀಡಲು ಜಿಲ್ಲಾಧಿಕಾರಿ ಸೂಚಿಸಿದ್ದರೂ ನಡೆಯದ ಪ್ರಕ್ರಿಯೆ
15 ದಿನಗಳೊಳಗೆ ಕಡತ ವಿಲೇವಾರಿಗೆ ಲೋಕಾಯುಕ್ತ ಅಧಿಕಾರಿಗಳ ಸೂಚನೆ
ಕಡತ ವಿಲೇವಾರಿ ಆಗದಿದ್ದರೆ ಮಾಹಿತಿ ನೀಡಲು
ಕಡಬ:ಕರ್ನಾಟಕ ಲೋಕಾಯುಕ್ತದ ಮಂಗಳೂರು ವಿಭಾಗದ ಅಽಕಾರಿಗಳಿಂದ ಲೋಕಾಯುಕ್ತ ಜನಸಂಪರ್ಕ ಸಭೆ, ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ ಕಡಬ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.ಐದು ಸಾರ್ವಜನಿಕ ದೂರುಗಳು ಸಲ್ಲಿಕೆಯಾಗಿದ್ದು ಮುಂದಿನ ಕ್ರಮಕ್ಕೆ ಲೋಕಾಯಕ್ತ ಅಧಿಕಾರಿಗಳು ಸಂಬಂಧಿಸಿದವರಿಗೆ ಸೂಚನೆ ನೀಡಿದರು.
ಅಕ್ರಮ ಸಕ್ರಮ ಕಡತ ವಿಲೇವಾರಿ ಮಾಡದೆ ಅನ್ಯಾಯ-ಕಣ್ಣೀರಿಟ್ಟ ಮಹಿಳೆ:
ಕುಟ್ರುಪ್ಪಾಡಿ ಗ್ರಾಮದ ಉಳಿಪ್ಪು ನಿವಾಸಿ ಶಿಬು ಎಂಬವರ ಪತ್ನಿ ಸೌಮ್ಯ ಎಂಬವರು, ಅಕ್ರಮ ಸಕ್ರಮ ಕಡತ ವಿಲೇವಾರಿಯಲ್ಲಿ ಅಧಿಕಾರಿಗಳಿಂದ ತನಗಾಗಿರುವ ಅನ್ಯಾಯವನ್ನು ಹೇಳಿ ಗಳಗಳನೆ ಅತ್ತು ಕಣ್ಣೀರಿಟ್ಟ ಘಟನೆಯೂ ನಡೆಯಿತು.ಕಳೆದ ಎಂಟು ವರ್ಷಗಳಿಂದ ನನ್ನ ಅಕ್ರಮ ಸಕ್ರಮ ಕಡತವನ್ನು ವಿಲೇವಾರಿ ಮಾಡದೆ ವಿನಾ ಕಾರಣ ಸತಾಯಿಸುತ್ತಿದ್ದಾರೆ.ಕಳೆದ ವರ್ಷ ಕುಟ್ರುಪ್ಪಾಡಿಯಲ್ಲಿ ನಡೆದ ಜಿಲ್ಲಾಧಿಕಾರಿಯವರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ನಾವು ಈ ಕುರಿತು ದೂರು ನೀಡಿದಾಗ, ಒಂದು ವಾರದೊಳಗೆ ಕಡತ ವಿಲೇವಾರಿ ಮಾಡಿ ಹಕ್ಕು ಪತ್ರ ನೀಡಬೇಕೆಂದು ಕಂದಾಯ ಅಧಿಕಾರಿಗಳಿಗೆ ಡಿ.ಸಿ ಸೂಚನೆ ನೀಡಿದ್ದರು.ಆದರೆ ಈವರೆಗೆ ಯಾವ ಪ್ರಕ್ರಿಯೆಯೂ ನಡೆದಿಲ್ಲ, ನನಗೆ ಎಂಟು ವರ್ಷಗಳಿಂದ ಅನ್ಯಾಯ ಮಾಡಲಾಗುತ್ತಿದೆ ಎಂದು ಸೌಮ್ಯರವರು ಲೋಕಾಯುಕ್ತ ಅಧಿಕಾರಿಗಳ ಎದುರು ಕಣ್ಣೀರಿಟ್ಟು ತನ್ನ ಅಳಲು ತೋಡಿಕೊಂಡರು.ತಹಸೀಲ್ದಾರ್, ಉಪತಹಸೀಲ್ದಾರ್‌ರವರುಗಳನ್ನು ಈ ವಿಚಾರದಲ್ಲಿ ತೀವ್ರ ತರಾಟೆಗೆತ್ತಿಕೊಂಡ ಲೋಕಾಯುಕ್ತ ಎಸ್.ಪಿ.ಯವರು, ಹದಿನೈದು ದಿನಗಳ ಒಳಗೆ ಸೌಮ್ಯರವರ ಕಡತ ವಿಲೇವಾರಿ ಮಾಡಿಕೊಡುವಂತೆ ಸೂಚನೆ ನೀಡಿದರು.ಕಡತ ವಿಲೇವಾರಿ ಆಗದಿದ್ದರೆ ಮತ್ತೆ ನಮಗೆ ತಿಳಿಸಿ ಎಂದು ಸೌಮ್ಯ ಅವರಿಗೆ ಲೋಕಾಯುಕ್ತ ಅಽಕಾರಿಗಳು ಸೂಚನೆ ನೀಡಿದರು.
ಕೆರೆ ಒತ್ತುವರಿ ಮಾಡಿ ಸಾರ್ವಜನಿಕರಿಗೆ ದಾರಿಯಿಲ್ಲವಾಗಿದೆ:
ಸೀತಾರಾಮ ನಾಯ್ಕ್ ಹಾಗೂ ವೆಂಕಟ್ರಾಜ್ ಕೋಡಿಬೈಲು ಎಂಬವರು ದೂರು ನೀಡಿ, ಕಡಬದಲ್ಲಿ ಕೆರೆ ಒತ್ತುವರಿ ಮಾಡಿಕೊಂಡು ಸಾರ್ವಜನಿಕರಿಗೆ ದಾರಿ ಇಲ್ಲದಂತೆ ಮಾಡಲಾಗಿದೆ.ನಮಗೆ ನ್ಯಾಯ ಒದಗಿಸಬೇಕೆಂದು ವಿನಂತಿಸಿದರು.ತಕ್ಷಣ ಕೆರೆ ಒತ್ತುವರಿ ತೆರವು ಕಾರ್ಯ ಮಾಡಿ ರಸ್ತೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಪಟ್ಟಣ ಪಂಚಾಯತ್ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಸೂಚನೆ ನೀಡಿದರು.
ಲೋಕಾಯುಕ್ತ ಡಿವೈಎಸ್‌ಪಿಗಳಾದ ಡಾ.ಗಾನಾ ಪಿ.ಕುಮಾರ್,ಚೆಲುವರಾಜ್, ಕಡಬ ತಹಸೀಲ್ದಾರ್ ಪ್ರಭಾಕರ ಖಜೂರೆ, ಉಪತಹಸೀಲ್ದಾರ್‌ಗಳಾದ ಮನೋಹರ್ ಕೆ.ಟಿ, ಗೋಪಾಲ್ ಕಲ್ಲುಗುಡ್ಡೆ, ಕಡಬ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೀಲಾವತಿ, ಕಂದಾಯ ನಿರೀಕ್ಷಕ ಪೃಥ್ವಿರಾಜ್ ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ತೊಂದರೆಯಾದರೆ ದೂರು ನೀಡಿ:
ಸಭೆಯ ಅಧ್ಯಕ್ಷತೆ ವಹಿಸಿದ್ದ ಲೋಕಾಯುಕ್ತ ಮಂಗಳೂರು ವಿಭಾಗದ ಎಸ್.ಪಿ ಸೈಮನ್ ಅವರು ಮಾತನಾಡಿ, ಕಡಬ ತಾಲೂಕಿನಲ್ಲಿ ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ಅಧಿಕಾರಿಗಳು ಸರಿಯಾಗಿ ಸ್ಪಂದನೆ ನೀಡದೇ ಇದ್ದರೆ,ಸರಕಾರಿ ಸವಲತ್ತುಗಳನ್ನು ದೊರಕಿಸಿಕೊಡುವಲ್ಲಿ ವಿನಾಕಾರಣ ತೊಂದರೆ ನೀಡಿದಲ್ಲಿ, ಅಧಿಕಾರಿಗಳು ಸಾರ್ವಜನಿಕರಿಗೆ ಸರಕಾರಿ ಕೆಲಸದಲ್ಲಿ ತೊಂದರೆ ನೀಡಿದರೆ ಲೋಕಾಯುಕ್ತಕ್ಕೆ ದೂರು ನೀಡಬಹುದು ಅದು ವಿಚಾರಣೆಗೆ ಯೋಗ್ಯವಾಗಿದ್ದಲ್ಲಿ ವಿಚಾರಣೆಗೆ ಒಳಪಡಿಸಲಗುವುದು.ಅದೇ ರೀತಿ ಜನರು ಕೂಡಾ ಹೆಚ್ಚಿನ ಸ್ಪಂದನೆ ಕೊಡಬೇಕು.ಇವತ್ತು ಕೇವಲ ಐದು ದೂರುಗಳು ಬಂದಿವೆ.ಅವುಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ವರ್ಗಾಯಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಇನ್ನು ಮುಂದೆ ಯಾವುದೇ ಅಽಕಾರಿಯಿಂದ ತೊಂದರೆಯಾದರೆ ಸಾರ್ವಜನಿಕರು ತಕ್ಷಣ ಲೋಕಾಯುಕ್ತಕ್ಕೆ ದೂರು ನೀಡಬಹುದು, ಎಲ್ಲಾ ದೂರುಗಳಿಗೆ ಸಾಧ್ಯವಾದಷ್ಟು ಸ್ಪಂದನೆ ನೀಡಿ ಮುಂದೆ ಸೂಕ್ತ ಕ್ರಮ ಜರಗಿಸಲು ಲೋಕಾಯುಕ್ತ ಅಧಿಕಾರಿಗಳು ಬದ್ದರಾಗಿದ್ದಾರೆ ಎಂದು ಎಸ್ಪಿ ಸೈಮನ್ ಹೇಳಿದರು.
ಲೋಕಾಯುಕ್ತಕ್ಕೆ ದೂರು ನೀಡಲು ಅಂಜಿಕೆ ಬೇಡ
ತನಗಾದ ಅನ್ಯಾಯದ ವಿರುದ್ದ ಲೋಕಾಯುಕ್ತಕ್ಕೆ ದೂರು ನೀಡಲು ಜನರು ಅಂಜಿಕೆ ಪಡುವ ಅಗತ್ಯವಿಲ್ಲ. ಸಾರ್ವಜನಿಕರ ಎಲ್ಲಾ ದೂರುಗಳಿಗೆ ಲೋಕಾಯುಕ್ತ ಕಾನೂನು ಅಡಿಯಲ್ಲಿ ಸ್ಪಂದನೆ ನೀಡಲಾಗುವುದು. ತಾಲೂಕು ಮಟ್ಟದಲ್ಲಿ ನಡೆಯುವ ಲೋಕಾಯುಕ್ತ ಅಹವಾಲು ಸ್ವೀಕಾರ ಕಾರ್ಯಕ್ರಮದ ಪ್ರಯೋಜನವನ್ನು ಜನರು ಪಡೆದುಕೊಳ್ಳಬೇಕು ಎಂದು ಲೋಕಾಯುಕ್ತ ಎಸ್.ಪಿ ಸಿ.ಎ ಸೈಮನ್ ಹೇಳಿದರು. ಲೋಕಾಯುಕ್ತ ಅಹವಾಲು ಸ್ವೀಕಾರ ಕಾರ್ಯಕ್ರಮದ ಬಳಿಕ ಅವರು ಪತ್ರಕರ್ತರೊಂದಿಗೆ ಮಾತನಾಡಿದರು. ಸರ್ಕಾರಿ ಅಽಕಾರಿಗಳಿಂದ ಸಾರ್ವಜನಿಕ ಸೇವೆಯಲ್ಲಿ ವಿಳಂಬವಾದರೆ, ಅನ್ಯಾಯವಾದರೆ ತಕ್ಷಣ ಲೋಕಾಯುಕ್ತಕ್ಕೆ ದೂರು ನೀಡಿ, ಪ್ರಕರಣ ಸಾಬೀತಾದರೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದವರು ಹೇಳಿದರು.