ಸಾಲ ನೀಡದಿದ್ದರೂ ಸುಳ್ಳು ಸಾಲಗಾರರನ್ನಾಗಿ ತೋರಿಸಿ ಮರುಪಾವತಿಗೆ ನೋಟೀಸ್, ಜಾಗದ ಏಲಂ ಪ್ರಕ್ರಿಯೆ ನಿಗದಿ-ಕುಂಬಾರರ ಗುಡಿಕೈಗಾರಿಕಾ ಸಹಕಾರಿ ಸಂಘದ ವಿರುದ್ಧ ರೈತ ಸಂಘದ ಉಪಾಧ್ಯಕ್ಷ ಸುರೇಶ್ ಭಟ್ ಆರೋಪ

0

ಪುತ್ತೂರು:ತನ್ನ ತಾಯಿಯ ಹೆಸರಿನಲ್ಲಿ ಜಾಗದ ಅಡಮಾನ ಸಾಲಕ್ಕಾಗಿ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ ಬಳಿಕ ಸಾಲ ನೀಡದೇ ಇದ್ದರೂ ಸುಳ್ಳು ಸಾಲಗಾರರನ್ನಾಗಿ ಮಾಡಿ, ಮರು ಪಾವತಿಗೆ ನೋಟೀಸ್ ನೀಡಿ ಜಾಗದ ಏಲಂ ಪ್ರಕ್ರಿಯೆಗೆ ಮುಂದಾಗಿದ್ದಾರೆ ಎಂದು ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ವಿರುದ್ಧ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಸುರೇಶ್ ಭಟ್ ಕೊಜಂಬೆ ಆರೋಪ ವ್ಯಕ್ತಪಡಿಸಿದ್ದು ಬಡ ಮಹಿಳೆಗಾದ ಅನ್ಯಾಯದ ವಿರುದ್ಧ ಹೈಕೋರ್ಟ್ ಮೊರೆ ಹೋಗುವುದಾಗಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.ಇದೊಂದು ನಿರಾಧಾರ ಆರೋಪ ಎಂದು ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.


ಕೆಯ್ಯೂರು ಗ್ರಾಮದ ಅಂಕತ್ತಡ್ಕ ಹಸೀನಾ ಬೇಗಂ ಎಂಬವರು ತನ್ನ ತಾಯಿ ಖತೀಜಾಬಿ ಅವರ ಹೆಸರಿನಲ್ಲಿ ಸಾಲ ಸೌಲಭ್ಯಕ್ಕೆ ಸಂಘಕ್ಕೆ ಅರ್ಜಿ ಸಲ್ಲಿಸಿದ್ದರು.ಹಸೀನಾ ಬೇಗಂ ಅವರು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದಲ್ಲಿ ಖಾತಾ ಸಂಖ್ಯೆ 4287 ಮತ್ತು ಸದಸ್ಯತನ ಸಂಖ್ಯೆ ಸಿ 0874 ಸದಸ್ಯೆಯಾಗಿದ್ದು, ಇದೇ ಬ್ಯಾಂಕಿನಲ್ಲಿ ಅವರ ತಾಯಿ ಖತೀಜಾಬಿಯವರು ಖಾತಾ ಸಂಖ್ಯೆ 4285ರಂತೆ ಸದಸ್ಯೆಯಾಗಿದ್ದರು.ಸಾಲಕ್ಕಾಗಿ ಬ್ಯಾಂಕಿಗೆ ಅರ್ಜಿ ಹಾಕಿ ಅದಕ್ಕೆ ಬೇಕಾದ ಎಲ್ಲಾ ಕೃಷಿ ಜಮೀನು ದಾಖಲೆ ಪತ್ರಗಳನ್ನು ನೀಡಲಾಗಿತ್ತು.2017ರ ಮೇ 10ರಂದು ತಾಯಿಯ ಹೆಸರಿನಲ್ಲಿ ಸಾಲ ಮಂಜೂರು ಮಾಡುವುದಾಗಿ ಬ್ಯಾಂಕ್‌ನಿಂದ ತಿಳಿಸಿದ್ದರು.ಮುಂದೆ ಎರಡು-ಮೂರು ಬಾರಿ ಬ್ಯಾಂಕ್‌ಗೆ ಹೋದಾಗ ಅವರಿಗೆ ಸಾಲ ನೀಡದೆ ಸತಾಯಿಸಿದ್ದರು.ಇದಾದ ತುಂಬಾ ಸಮಯ ಅವರು ಬ್ಯಾಂಕಿಗೆ ಹೋಗಿರಲಿಲ್ಲ.ಆದರೆ 2022ನೇ ಜ.24ರಂದು, ಅವರು ಪಡೆಯದೆ ಇರುವ ಸಾಲಕ್ಕೆ ರೂ.6,97,490 ಪಾವತಿಸುವಂತೆ ನೋಟೀಸ್ ನೀಡಿದ್ದಾರೆ.ನಾನು ಬ್ಯಾಂಕ್‌ನಿಂದ ಸಾಲವೇ ಪಡೆಯಲಿಲ್ಲ.ನನಗೆ ಯಾ ನನ್ನ ಖಾತೆಗೆ ಯಾವುದೇ ಮೊತ್ತ ಬ್ಯಾಂಕಿನಿಂದ ತುಂಬಿಲ್ಲ.ಆದರೂ ಸಾಲ ಮರುಪಾವತಿಸುವಂತೆ ಸೂಚಿಸಿದ್ದಾರೆ. ಈ ಕುರಿತು ಬ್ಯಾಂಕಿಗೆ ಹೋಗಿ ಅವರು ವಿಚಾರಿಸಿದಾಗ ನಾವು ನಿಮ್ಮ ಸಾಲದ ಬಾಬ್ತು ದಾವಾ ಸಂಖ್ಯೆ 824/18-19ರಂತೆ ಸಹಕಾರ ಸಂಘಗಳ ಸಹಾಯಕ ನಿಬಂಧಕರ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಅದರಂತೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.ಇದಾದ ನಂತರ 2022ನೇ -.28ಕ್ಕೆ ಡಿಕ್ರಿ ಮಾರಾಟ ನೋಟೀಸನ್ನು ನೀಡಿದ್ದಾರೆ.ಇದೀಗ ಡಿ.16ಕ್ಕೆ ಕೃಷಿ ಜಾಗದ ಜಮೀನನ್ನು ಏಲಂ ಮಾಡುವ ಕುರಿತು ನೋಟೀಸ್ ನೀಡಿದ್ದಾರೆ.ಒಟ್ಟಿನಲ್ಲಿ ಪಡೆಯದ ಸಾಲಕ್ಕೆ ಬಾಧ್ಯವಾಗುವಂತೆ ಇವರು ಮೋಸ ಹೋಗಿದ್ದಾರೆ.ಕಾನೂನಿನಂತೆ ರೂ.1 ಲಕ್ಷಕ್ಕೂ ಮೇಲ್ಪಟ್ಟ ವ್ಯವಹಾರವನ್ನು ಖಾತೆಗೆ ಹಣ ವರ್ಗಾಯಿಸಿ ಚೆಕ್ ಮುಖಾಂತರವೇ ವ್ಯವಹರಿಸಬೇಕು ಎಂಬುದು ನಿಯಮ.ಆದರೆ ಯಾವುದೇ ಹಣ ನೀಡದೆ, ಯಾವುದೇ ಚೆಕ್ ನೀಡದೆ ಹಸೀನಾ ಬೇಗಂ ಅವರ ಹೆಸರಿನಲ್ಲಿ ಮತ್ತು ಅವರ ತಾಯಿಯ ಹೆಸರಿನಲ್ಲಿ ಸಾಲ ತೋರಿಸಿ ಅವರನ್ನು ಸುಳ್ಳು ಸಾಲಗಾರರನ್ನಾಗಿ ಮಾಡಲಾಗಿದೆ.ಈ ಕುರಿತು ನ್ಯಾಯಕ್ಕಾಗಿ ಹೈಕೋರ್ಟ್ ಮೆಟ್ಟಲೇರಲಾಗುವುದು ಎಂದು ಸುರೇಶ್ ಭಟ್ ತಿಳಿಸಿದರು. ಹಸೀನಾ ಬೇಗಂ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ಎಲ್ಲಾ ದಾಖಲೆಗಳಿವೆ-ಆರೋಪದಲ್ಲಿ ಹುರುಳಿಲ್ಲ ಕುಂಬಾರರ ಗುಡಿಕೈಗಾರಿಕಾ ಸಹಕಾರಿ ಸಂಘದ ಸ್ಪಷ್ಟನೆ
ಕೆಯ್ಯೂರು ಗ್ರಾಮದ ಅಂಕತ್ತಡ್ಕ ನಿವಾಸಿ ಹಸೀನಾ ಬೇಗಂ ಅವರಿಗೆ ನಿಯಮಾನುಸಾರವಾಗಿಯೇ ಸಾಲ ಸೌಲಭ್ಯ ಮಂಜೂರು ಮಾಡಿ, ಅವರ ಖಾತೆ ಮೂಲಕವೇ ಸಾಲದ ಹಣವನ್ನು ನೀಡಿದ್ದು, ಖಾತೆಯಿಂದ ಅವರು ಸಾಲದ ಹಣ ಪಡೆದುಕೊಂಡಿರುವುದು ಸೇರಿದಂತೆ ಎಲ್ಲದಕ್ಕೂ ನಮ್ಮಲ್ಲಿ ದಾಖಲೆಗಳಿವೆ.ರೈತ ಸಂಘ ಹಸಿರುಸೇನೆಯ ರಾಜ್ಯ ಉಪಾಧ್ಯಕ್ಷ ಸುರೇಶ್ ಭಟ್ ಕೊಜಂಬೆ ಹಾಗೂ ಹಸೀನಾ ಬೇಗಂ ಅವರು ಸುದ್ದಿಗೋಷ್ಠಿ ನಡೆಸಿ ಸಂಘದ ವಿರುದ್ಧ ಆಧಾರ ರಹಿತ ಸುಳ್ಳು ಆರೋಪ ಮಾಡಿದ್ದಾರೆ ಎಂದು ಕುಂಬಾರರ ಗುಡಿಕೈಗಾರಿಕಾ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜನಾರ್ದನ ಮೂಲ್ಯ ಅವರು ಸ್ಪಷ್ಟನೆ ನೀಡಿದ್ದಾರೆ.


ಹಸೀನಾ ಬೇಗಂ, ಅವರ ತಾಯಿ ಖತೀಜಾಬಿ, ಪುತ್ರ ಸೈಯದ್ ಇಬ್ರಾಹಿಂ ಎಂಬವರ ಹೆಸರಲ್ಲಿ ಕುರಿಯದ 97 ಸೆಂಟ್ಸ್ ಹಾಗೂ ಅಂಕತಡ್ಕದ 1.14 ಎಕ್ರೆ, 43 ಸೆಂಟ್ಸ್ ಹಾಗೂ 65 ಸೆಂಟ್ಸ್ ಜಾಗಗಳಿಗೆ ಸಂಬಂಧಿಸಿ ಅಡಮಾನ ಸಾಲ ರೂ.15 ಲಕ್ಷ ನೀಡಲಾಗಿದೆ.ಖತಿಜಾಬಿ ಮತ್ತು ಅವರ ಪುತ್ರ ಸೈಯದ್ ಇಬ್ರಾಹಿಂ ಅವರ ಜಂಟಿ ಹೆಸರಿನಲ್ಲಿ ರೂ.9 ಲಕ್ಷ ಮತ್ತು ಹಸೀನಾ ಬೇಗಂ ಅವರ ಹೆಸರಿನಲ್ಲಿ ರೂ.6 ಲಕ್ಷ ಸಾಲವನ್ನು ಅವರು ಪಡೆದುಕೊಂಡಿದ್ದಾರೆ.ಅಂಕತ್ತಡ್ಕದ ಪರಮೇಶ್ವರ ಆಚಾರ್ಯ ಮತ್ತು ಕೊಯಿಲದ ಲೋಲಾಕ್ಷಿಯಮ್ಮ ಎಂಬವರು ಈ ಸಾಲಕ್ಕೆ ಜಾಮೀನ್ದಾರರಾಗಿದ್ದಾರೆ.ಈ ಬಗ್ಗೆ ಎಲ್ಲಾ ದಾಖಲೆಗಳೂ ಸಂಘದ ಸುಪರ್ದಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ.ಸಹಕಾರಿ ನಿಯಮದಂತೆ ಅಡಮಾನ ಸಾಲ ಪಡೆಯುವವರು ಅವರೇ ಬಂದು ಜಾಗದ ಅಡವು ಪತ್ರವನ್ನು ನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿ ಕೊಡಬೇಕಾಗುತ್ತದೆ.ಈ ಸಾಲಕ್ಕೆ ಸಂಬಂಧಿಸಿ ಅವರೇ ಬಂದು ನೋಂದಣಿ ಕಚೇರಿಯಲ್ಲಿ ನೋಂದಾವಣೆ ಮಾಡಿರುವ ಅಡವು ಪತ್ರವೂ ನಮ್ಮಲ್ಲಿದೆ.ಇಲ್ಲಿ ಯಾವುದೇ ವಂಚನೆ ಆಗಿಲ್ಲ.ಕಾನೂನು ಪ್ರಕ್ರಿಯೆ ನಡೆಸಿಯೇ ಸಾಲ ನೀಡಲಾಗುತ್ತಿದೆ.ಸಾಲ ಮರುಪಾವತಿಗಾಗಿ ಖತೀಜಾಬಿ, ಸೈಯದ್ ಇಬ್ರಾಹಿಂ ಹಾಗೂ ಹಸೀನಾ ಬೇಗಂ ಅವರಿಗೆ ಬೇಕಾದಷ್ಟು ಸಮಯಾವಕಾಶ ನೀಡಲಾಗಿತ್ತು.ಸಂಘದಿಂದ ಹಲವಾರು ನೋಟೀಸ್ ನೀಡಲಾಗಿತ್ತು.ಆದರೆ ಯಾವುದಕ್ಕೂ ಅವರು ಸ್ಪಂದಿಸಿಲ್ಲ.ಸಹಕಾರಿ ಸಂಘಗಳ ನಿಬಂಧಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದಾಗಲೂ ಅವರಿಗೆ ನೋಟೀಸ್ ಮಾಡಲಾಗಿತ್ತು.ಅವರು ನ್ಯಾಯಾಲಯಕ್ಕೂ ಹಾಜರಾಗಿಲ್ಲ.ನ್ಯಾಯಾಲಯದಲ್ಲಿ ಪ್ರಕರಣ ದಾಖಲಾದ ನಂತರವೂ ಒಂದು ವರ್ಷ ಕಾಲಾವಕಾಶ ಅವರಿಗೆ ನೀಡಿದ್ದೆವು.ಆದರೆ ಅವರಿಂದ ಯಾವುದೇ ಸ್ಪಂದನೆ ದೊರೆಯದ ಕಾರಣ ಸಾಲ ಮರುಪಾವತಿಗಾಗಿ ಅಗತ್ಯವಿರುವಷ್ಟು ಸ್ಥಳವನ್ನು ಏಲಂ ನಡೆಸಲು ಕ್ರಮಕೈಗೊಳ್ಳಲಾಗಿದೆ. ಕಾನೂನಾತ್ಮಕವಾಗಿಯೇ ಏಲಂ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಜನಾರ್ದನ ಮೂಲ್ಯ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here