29ನೇ ಆಳ್ವಾಸ್ ವಿರಾಸತ್‌: ಇಂದಿನಿಂದ ನಾಲ್ಕು ದಿನ ರಸದೌತಣ

0

ಮಂಗಳೂರು: ಸಾಂಸ್ಕೃತಿಕ ಸಿರಿ-ಸೊಬಗಿನ, ವೈವಿಧ್ಯತೆಯಲ್ಲಿ ಏಕತೆಯ ಸಂದೇಶ ಸಾರುವ, ಕಣ್ಮನಗಳಿಗೆ ರಸದೌತಣ ನೀಡುವ, ಪ್ರತಿ ವರ್ಷವೂ ವಿಭಿನ್ನ ಹಾಗೂ ಅನನ್ಯವಾದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ, 29ನೇ ವರ್ಷದ ‘ಆಳ್ವಾಸ್ ವಿರಾಸತ್ 2023’ಗೆ ವಿದ್ಯಾಗಿರಿ ಸಜ್ಜಾಗಿದೆ.


ಅಬಾಲವೃದ್ಧರಾಗಿ ಸರ್ವರ ಪಂಚೇಂದ್ರಿಯಗಳಿಗೆ ರಸದೌತಣ ನೀಡುವ, ಮನ ತಣಿಸುವ ವಿರಾಸತ್, ಈ ಬಾರಿ ಡಿ.14ರಿಂದ 17ರ ವರೆಗೆ ಮೂಡುಬಿದಿರೆಯ ಪುತ್ತಿಗೆ ಗ್ರಾಮದ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ನಡೆಯಲಿವೆ. ಸಮೀಪದ ಕೃಷಿಸಿರಿ ವೇದಿಕೆ ಸೇರಿದಂತೆ ಆವರಣದಲ್ಲಿ ‘ಸಪ್ತ ಮೇಳ’ಗಳ ಸಂಗಮವು ಜನರಿಗೆ ಖುಷಿ ನೀಡಿದರೆ, ದೀಪಾಲಂಕಾರ, ಕಲಾಕೃತಿಗಳು, ಪುಷ್ಪಫಲಗಳಿಂದ ನಂದನವನವೇ ಸೃಷ್ಟಿಯಾಗಿದೆ. ‘ನೋಡಲೆರಡು ಕಣ್ಣು ಸಾಲದಮ್ಮಾ…’ ಎಂದು ವಿದ್ಯಾಗಿರಿಯು ಕೈ ಬೀಸಿ ಕರೆಯುತ್ತಿದೆ. ವಿದ್ಯಾಗಿರಿ ‘ಸಿರಿ ಸೊಬಗಿನ ಸಾಂಸ್ಕೃತಿಕ ನಗರಿ’ಯೇ ಎಂಬ ಅಚ್ಚರಿ ಮೂಡುವಂತಿದೆ.


ರಥಾರತಿ:
ಈ ಬಾರಿಯ ವಿರಾಸತ್‌ನ ವಿಶೇಷ ‘ರಥಾರತಿ’. ಮುಖ್ಯ ವೇದಿಕೆಯ ಮುಂಭಾಗದಲ್ಲಿ ಉದ್ಘಾಟನೆ ಸಂದರ್ಭದಲ್ಲಿ ಬಲದಿಂದ ಎಡಕ್ಕೆ ಸಾಂಸ್ಕೃತಿಕ ರಥವನ್ನು ಎಳೆಯಲಾಗುತ್ತದೆ. ಈ ರಥದಲ್ಲಿ ಲೋಕ ಮಾರ್ಗದರ್ಶಕರಾದ ರಾಮ-ಕೃಷ್ಣರ ಮೂರ್ತಿ ಇರಲಿವೆ. ಶಕ್ತಿ ಮತ್ತು ಭಕ್ತಿಯ ಪ್ರತೀಕವಾಗಿ ಹನುಮಂತ, ಸಂಪತ್ತಿನ ಧ್ಯೋತಕವಾದ ಮಹಾಲಕ್ಷ್ಮೀ ಹಾಗೂ ವಿದ್ಯಾಮಾತೆ ಮಹಾ ಸರಸ್ವತಿ ಇರಲಿದ್ದಾರೆ. ರಥದ ಜೊತೆ ಮೈಸೂರು, ಪಂಡರಾಪುರ ಹಾಗೂ ಹರೇಕೃಷ್ಣ ಪಂಥದ ಭಜನಾ ತಂಡಗಳು ಪಾಲ್ಗೊಳ್ಳಲಿವೆ. ಸಮಾರೋಪದ ದಿನ ರಥವು ಮತ್ತೆ ಎಡದಿಂದ ಬಲಕ್ಕೆ ಸಂಚರಿಸಲಿದ್ದು, ಹರಿದ್ವಾರದಿಂದ ಬರುವ ಪ್ರಮುಖರು ಮಂತ್ರ ಘೋಷಗಳೊಂದಿಗೆ ಆರತಿ ಬೆಳಗಲಿದ್ದಾರೆ.


ಮೆರವಣಿಗೆ:
ಈ ಬಾರಿಯ ಸಾಂಸ್ಕೃತಿಕ ಮೆರವಣಿಗೆಗೆ 100ಕ್ಕೂ ಹೆಚ್ಚು ಜಾನಪದ ತಂಡಗಳ 5 ಸಾವಿರಕ್ಕೂ ಹೆಚ್ಚು ಕಲಾವಿದರು ಮೆರುಗು ನೀಡಲಿದ್ದಾರೆ. ಅಳಿವಿನಂಚಿನಲ್ಲಿರುವ ಜಾನಪದ ಕಲೆಯ ರಕ್ಷಣೆ ಹಾಗೂ ಜಾನಪದ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡುವುದು ಈ ಮೆರವಣಿಗೆಯ ಉದ್ದೇಶ ಎನ್ನುತ್ತಾರೆ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ.

ಫಲ-ಪುಷ್ಪ- ಕಲಾಕೃತಿ:
ವಿರಾಸತ್ ನಡೆಯುವ ವಿದ್ಯಾಗಿರಿ ಆವರಣದ ತುಂಬಾ ಸುಮಾರು ಸಾವಿರಕ್ಕೂ ಅಽಕ ಕಲಾಕೃತಿಗಳು ನಿಮ್ಮನ್ನು ಕೈ ಬೀಸಿ ಕರೆಯುತ್ತಿವೆ. ವೀರಪುರುಷರು, ಪ್ರಾಣಿ-ಪಕ್ಷಿಗಳು, ಸಾಂಸ್ಕೃತಿಕ ನಾಯಕರು, ದೈವ-ದೇವರು, ಸ್ವಾತಂತ್ರ್ಯ ಹೋರಾಟಗಾರರು, ಪುಟಾಣಿಗಳ ನೆಚ್ಚಿನ ಕಾರ್ಟೂನ್ ಪಾತ್ರಗಳು, ತಾಯಿಯ ಮಮತೆ, ಬುದ್ಧನ ಧ್ಯಾನ, ನಗಿಸುವ ಮೋಟು, ಪ್ರಾದೇಶಿಕ ಕಲಾಪ್ರಕಾರಗಳ ಕಲಾಕೃತಿಗಳು ಮನ ಸೆಳೆಯುತ್ತವೆ. ನೀವು ಹೆಜ್ಜೆ ಹಾಕಿದಂತೆ ಆನೆ, ಜಿರಾ-, ಎತ್ತು, ಮಹಿಷಾಸುರ, ಯಕ್ಷಗಾನ, ಎತ್ತಿನ ಬಂಡಿ, ಚಕ್ರ, ಗಣಪತಿ, ಸಂಗೊಳ್ಳಿ ರಾಯಣ್ಣ, ಡೊಳ್ಳು ಕುಣಿತ, ಅಂಬೇಡ್ಕರ್, ವೀರಗಾಸೆ, ಹನುಮಂತ, ಕೋಟಿ ಚೆನ್ನಯ, ಲಕ್ಷ್ಮಿ ನರಸಿಂಹ, ವೀರಭದ್ರ , ಬಾಹುಬಲಿ, ವಿವೇಕಾನಂದ, ಬುದ್ಧ, ಗಾಂಽಜಿ, ಸಂಗೊಳ್ಳಿ ರಾಯಣ್ಣ, ಬಸವೇಶ್ವರ, ಆದಿಯೋಗಿ ಶಿವ, ಮೀರಾಬಾಯಿ, ಕಥಕ್ಕಳಿ ಪ್ರತಿಮೆಗಳನ್ನು ಕಾಣಬಹುದು.


ಕಾರ್ಟೂನ್ ಪಾತ್ರಧಾರಿಗಳಾದ ಚೋಟಾ ಭೀಮ್, ಚುಟ್ಕಿ, ರಾಜು, ಕಾಲಿಯಾ, ಡೊನಾಲ್ಡ್, ಡಕ್, ಮಿಕಿ, ಜಗ್ಗು ,ಮಿನ್ನಿ ಮೌಸ್, ಇಂದುಮತಿ, ಡೋಲು ಬೋಲು ಪುಟಾಣಿಗಳಿಗೆ ಪುಳಕ ನೀಡಲಿದ್ದಾರೆ. ವರ್ಣರಂಜಿತ ಮೀನುಗಳ ಆಕೃತಿ, ಭಾರತಾಂಬೆ, ವಿವಿಧ ಸಂಸ್ಕೃತಿಯ ಪುರುಷ -ಮಹಿಳೆಯರು, ಬಿದಿರು ಗೊಂಬೆಗಳಿವೆ. ಕೃಷ, ಕುಸ್ತಿಪಟು, ಬಕ, ನವಿಲು, ಕೋಳಿ, ಹುಂಜ, -ಮಿಂಗೋ ಪಕ್ಷಿ, ಹದ್ದು, ಸರ್ಪ, ನಂದಿಗಳಿವೆ. ವೀರಭದ್ರ, ಗೊರವಜ್ಜ, ಕಿನ್ನಾಳ ಕಲೆ, ಗೊಂಬೆಗಳು ಇತ್ಯಾದಿಗಳು ಮನೋಲ್ಲಾಸ ನೀಡುತ್ತವೆ. ಈ ಕಲಾಕೃತಿಗಳನ್ನು ಮರ, ಲೋಹ, ಸಿಮೆಂಟ್, ರಬ್ಬರ್ ಇತ್ಯಾದಿಗಳಿಂದ ರಚಿಸಲಾಗಿದೆ. ಪ್ರಮುಖ ವೇದಿಕೆಯ, ರಸ್ತೆ ಬದಿಯಲ್ಲೂ ಸಾಲಾಗಿ ನಿಂತ ಗೊಂಬೆಗಳು ಮುದ ನೀಡುತ್ತವೆ.


ಫಲಪುಷ್ಪ: ‘ಹೂವು ಚೆಲುವೆಲ್ಲಾ ನ್ನಂದೆಂದಿತು…’ ಎಂಬಂತೆ ವಿರಾಸತ್ ಆವರಣವೇ ಹೂವಿನಿಂದ ಮಧುವಣಗಿತ್ತಿಯಂತೆ ಸಿಂಗರಿಸಿದೆ. ಚೆಂಡು ಹೂ, ಸದಾಪುಷ, ಸೇವಂತಿಗೆ, ಜೀನ್ಯ, ಗೌರಿ, ಡಾಲಿ, ಲಿಲ್ಲಿ, ಕೆಪುಳ, ಸಿಲ್ವರ್ ಡಸ್ಟ್ ಲವೆಂಡಾರ್, ಅನೆಸೊಪ್ಪು, ಅಂತೋರಿಯಮ್, ಮಲ್ಲಿಗೆ, ಸಲ್ವಿಯ ಸ್ಪ್ಲೆಂಡನ್ಸ್, ಸೆಲೋಶಿಯ, ಚೈನೀಸ್ ಫ್ರಿಂಜ್, ವೀಪಿಂಗ್ ಫಿಗ್, ವಿಶ್ಬೋನ್ ಸೇರಿದಂತೆ ಸುಮಾರು ಮೂರೂವರೆ ಲಕ್ಷಕ್ಕೂ ಅಽಕ ಪುಷ್ಪಗಳಿಂದ ಆವರಣವೇ ಅಲಂಕೃತಗೊಂಡಿದೆ. ಈ ಪೈಕಿ ಒಂದೇ ಹೂವಿನ ಹಲವು ತಳಿಗಳೂ ಇವೆ. ಇನ್ನು ವಿವಿಧ ವರ್ಣಗಳ ಕ್ರೋಟನ್ ಗಿಡ, ಬೋನ್ಸಾಯ್ ಗಿಡಗಳು, ಕಾಲಿಯಸ್ ಗಿಡಗಳಿವೆ. ಇವು ಹಳದಿ, ಕೇಸರಿ, ಬಿಳಿ, ನೇರಳೆ, ಗುಲಾಬಿ, ಕೆಂಪು ಮತ್ತಿತರ ಬಣ್ಣಗಳಿಂದ ಕೂಡಿದ್ದು, ‘ವಿರಾಸತ್’ ವರ್ಣಮಯಗೊಳಿಸಿವೆ. ಕಣ್ಣಿಗೆ ಬಣ್ಣದ ಹಬ್ಬ.


ಈ ಪೈಕಿ ಎರಡು ಲಕ್ಷಕ್ಕೂ ಅಽಕ ಸಸಿಗಳನ್ನು ಡಾ.ಎಂ. ಮೋಹನ ಆಳ್ವರ ಮಾರ್ಗದರ್ಶನದಲ್ಲಿ ಆವರಣದಲ್ಲಿಯೇ ಬೆಳೆಸಿದರೆ, ಸುಮಾರು ೨೦ಕ್ಕೂ ಹೆಚ್ಚು ದೇಶಗಳ ವೈವಿಧ್ಯಮಯ ತಳಿಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. ಇಡೀ ಆವರಣದಾದ್ಯಂತ ೫ ಲಕ್ಷದಷ್ಟು ಸಸ್ಯಗಳು ಕಂಗೊಳಿಸುತ್ತವೆ. ಇನ್ನು ಪುಷ್ಪಗಳಿಂದ ರಚಿಸಿದ ಆನೆ, ಕುದುರೆ, ಜಿರಾ-, ನವಿಲು ಇತ್ಯಾದಿ ಕಲಾಕೃತಿಗಳಿವೆ.


ಕೇವಲ ಪುಷ್ಪ ಮಾತ್ರವಲ್ಲ, ಆವರಣದಲ್ಲೇ ಬೆಳೆಸಿದ ತರಕಾರಿಗಳಾದ ಬೆಂಡೆ ಕಾಯಿ, ಸೋರೆಕಾಯಿ, ಟೊಮೆಟೊ, ಬದನೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಹಾಗಲಕಾಯಿ, ಔಷಧಿಯ ಸಸ್ಯಗಳಾದ ಅಮ್ರ, ನಂದಿ, ಬಕುಲಾ, ಶಲ್ಮಾಲಿ, ಜಂಬೂ, ತಿಲಕ, ತಾರೇಕಾಯಿ, ಸರಳ, ಪ್ರಿಯಂಗು, ಕದಂಬ, ತೆಂದುಕ, ಅಶ್ವತ್ಥ, ಶಿರೀಶ, ಸಪ್ತ ಪರ್ಣಿ, ದೇವದಾರು, ಸಂಪಿಗೆ, ಅಶೋಕ, ಕಪಿತ, ಶಾಲವೃಕ್ಷ, ನಾಗಾಕೇಸರ, ಪಾಲಶ ಗಿಡ ಸೇರಿದಂತೆ ನೂರಾರು ಸಸ್ಯ ಸಂಕುಲವಿದೆ.


ಈ ಬಾರಿಯ ಆಳ್ವಾಸ್ ವಿರಾಸತ್‌ನಲಿ ಇಷ್ಟು ಮಾತ್ರವಲ್ಲ, ಅನ್ವೇಷಣಾತ್ಮಕ ಕೃಷಿಕ ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ ಸ್ಮರಣಾರ್ಥ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿಸಿರಿ) ಆವರಣದಲ್ಲಿ ನಡೆಯುವ 7 ಮೇಳಗಳ 750ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ‘ಪ್ರದರ್ಶನ ಮತ್ತು ಮಾರಾಟ ಮೇಳವು’ ವಿಶೇಷ ಆಕರ್ಷಣೆಯಾಗಿದೆ.


ಕೃಷಿ ಮೇಳ:
ದೇಶದ ಬೆನ್ನೆಲುಬಾಗಿರುವ ರೈತರು ಹಾಗೂ ಕೃಷಿ ಸಂಸ್ಕೃತಿಯನ್ನು ಸದಾ ಪ್ರೋತ್ಸಾಹಿಸುತ್ತಾ ಬಂದಿರುವ ಆಳ್ವಾಸ್, ವಿಶೇಷವಾಗಿ ‘ಕೃಷಿ ಮೇಳ’ವನ್ನು ಆಯೋಜಿಸಿದೆ.
ಕೃಷಿಯಲ್ಲಿ ಬೀಜದಿಂದ ಮಾರುಕಟ್ಟೆ ವರೆಗಿನ ಎಲ್ಲ ಘಟ್ಟಗಳ ಸಮಗ್ರ ಚಿತ್ರಣವನ್ನು ಕೃಷಿ ಮೇಳ ನೀಡಲಿದೆ. ಇದು ಕೇವಲ ಪ್ರದರ್ಶನವಲ್ಲ, ಮಾರಾಟ ಮಳಿಗೆಗಳು, ಅನುಭವ ಪ್ರಾತ್ಯಕ್ಷಿಕೆಗಳೂ ಇರಲಿವೆ. ಈ ಮೇಳವು ಕೃಷಿಕರಿಗೆ ಮೌಲ್ಯವರ್ಧನೆಗೆ ಪೂರಕವಾದರೆ, ಕೃಷಿ ಕುಟುಂಬದಿಂದ ಬಂದು ವೃತ್ತಿಗಾಗಿ ನಗರ ಸೇರಿದ ಜನರಿಗೆ ತಮ್ಮ ಬದುಕಿನ ಮೂಲಕ್ಕೆ ಕೊಂಡೊಯ್ಯಲಿದೆ. ಪುಟಾಣಿಗಳನ್ನು ಕೃಷಿಯೆಡೆಗೆ ಸೆಳೆಯಲಿದೆ.


ಈ ಬಾರಿ ಕೃಷಿ ಮೇಳದಲ್ಲಿ ಹಣ್ಣು- ತರಕಾರಿ, ಬೀಜಗಳು, ನರ್ಸರಿಗಳು, ಸಾವಯವ ಹಾಗೂ ರಾಸಾಯನಿಕ ಗೊಬ್ಬರಗಳು, ನೀರು- ನೆಲಗಳಲ್ಲಿ ಬೆಳೆಯುವ ವಿವಿಧ ಸಸ್ಯ ಪ್ರಭೇದಗಳು, ಕೃಷಿ ಉಪಕರಣ- ಯಂತ್ರಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಇರಲಿವೆ. ವಿವಿಧ ಕೃಷಿ ಸಸ್ಯ ಪ್ರಭೇದಗಳ ಬೀಜ, ಅವುಗಳನ್ನು ಬೆಳೆಸಲು ಬೇಕಾದ ಯಂತ್ರ- ತಾಂತ್ರಿಕ ಸಲಕರಣೆಗಳು, ಕೃಷಿ ಉತ್ಪನ್ನಗಳು ಈ ಬಾರಿಯ ವಿಶೇಷ ಆಕರ್ಷಣೆ.


ಆಹಾರ ಮೇಳ:
ಆಹಾರ ಮೇಳದಲ್ಲಿ ಸುಮಾರು 150ಕ್ಕೂ ಅಧಿಕ ಮಳಿಗೆಗಳಲ್ಲಿ ಪಾರಂಪರಿಕದಿಂದ ಹಿಡಿದು ಫಾಸ್ಟ್-ಫುಡ್ ತನಕದ ಸಸ್ಯಾಹಾರ ಹಾಗೂ ಮಾಂಸಾಹಾರ ಇತ್ಯಾದಿಗಳ ವೈವಿಧ್ಯ ಇವೆ. ಆಹಾರದ ಪ್ರದರ್ಶನ ಮತ್ತು ಮಾರಾಟವಿದ್ದು, ಕಣ್ಣು- ನಾಲಗೆಗೆ ಮಾತ್ರವಲ್ಲ, ಹೊಟ್ಟೆಯನ್ನೂ ತುಂಬಿಸಿಕೊಳ್ಳಬಹುದು.


ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ: ಪಾರಂಪರಿಕ ಸೌಂದರ್ಯವನ್ನು ಪಂಚೇಂದ್ರೀಯಗಳ ಮೂಲಕ ಅನುಭವಿಸುವುದೂ ಜ್ಞಾನಾರ್ಜನೆ. ಇಂತಹ ಕರಕುಶಲ ಮತ್ತು ಪ್ರಾಚ್ಯವಸ್ತುಗಳ ಮೇಳವು ವಿರಾಸತ್‌ನ ಸೊಬಗು. ದೇಶದ ಈಶಾನ್ಯ, ಉತ್ತರ, ಪೂರ್ವ ಸೇರಿದಂತೆ ಅಷ್ಟದಿಕ್ಕುಗಳಲ್ಲಿನ ರಾಜ್ಯಗಳ ಸುಮಾರು ೧೦೦ಕ್ಕೂ ಹೆಚ್ಚು ಮಳಿಗೆಗಳಲ್ಲಿ ಗುಡಿಕೈಗಾರಿಕೆ, ಕರಕುಶಲ, ಪ್ರಾಚ್ಯವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಇರಲಿವೆ.


ಚಿತ್ರಕಲಾ ಮೇಳ: ವಿರಾಸತ್‌ನ ಮತ್ತೊಂದು ದೃಶ್ಯಸೊಬಗು ಚಿತ್ರಕಲಾ ಮೇಳ. ಸುಮಾರು 200ಕ್ಕೂ ಹೆಚ್ಚು ದೇಶ ವಿದೇಶದ ಕಲಾಕಾರರ ೫೦೦ಕ್ಕೂ ಅಽಕ ಚಿತ್ರಕಲಾಕೃತಿಗಳು ಪ್ರದರ್ಶನಕ್ಕಿವೆ. ವಿವಿಧ ಕಲಾಪ್ರಕಾರಗಳ ಕೃತಿಗಳೂ ಮನ ಸೆಳೆಯಲಿವೆ.


ಛಾಯಾಚಿತ್ರಗಳ ಪ್ರದರ್ಶನ: ವಿರಾಸತ್ ಅಂಗವಾಗಿ ವನ್ಯಜೀವಿ ಛಾಯಾಚಿತ್ರದ ಸ್ಪರ್ಧೆಯು ಈಗಾಗಲೇ ನಡೆದಿದ್ದು, ಪ್ರದರ್ಶನಕ್ಕೆ ಬಂದ -ಟೊಗಳು ಸೇರಿದಂತೆ ಸುಮಾರು ೩ ಸಾವಿರಕ್ಕೂ ಅಧಿಕ ಛಾಯಚಿತ್ರಗಳ ಪ್ರದರ್ಶನವಿದೆ.


ಸ್ಕೌಟ್-ಗೈಡ್ಸ್ ಸಾಹಸಮಯ ಚಟುವಟಿಕೆ ಕೇಂದ್ರ: ಸುಮಾರು ಎರಡು ಎಕರೆ ವಿಶಾಲ ಪ್ರದೇಶದಲ್ಲಿ ಈ ಕೇಂದ್ರವು ರೂಪುಗೊಂಡಿದ್ದು, ಮಕ್ಕಳಲ್ಲಿ ಸಾಹಸಮಯ ಪ್ರವೃತ್ತಿ, ಧೈರ್ಯ ಹಾಗೂ ಸ್ಪಂದನೆಯನ್ನು ತುಂಬುವಲ್ಲಿ ಸಹಕಾರಿ. ಇದು ಮಕ್ಕಳ ಆಕರ್ಷಣೆಯ ಆಟೋಟ ತಾಣವೂ ಹೌದು.
‘ಧರ್ಮ, ಜಾತಿ, ಲಿಂಗ, ಪ್ರದೇಶ, ಆರ್ಥಿಕ, ವಯೋ ಭೇದಗಳನ್ನೆಲ್ಲ ಮರೆತು ನಾವೆಲ್ಲರೂ ಒಂದೇ ಎಂಬ ವಿವಿಧತೆಯಲ್ಲಿ ಏಕತೆಯ ಸಂದೇಶ ಸಾರುವುದು ಈ ವಿರಾಸತ್ ಉದ್ದೇಶ. ಪ್ರತಿನಿತ್ಯ ಒಂದು ಲಕ್ಷಕ್ಕೂ ಹೆಚ್ಚಿನ ಜನ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ನೂರಾರು ಸದುದ್ದೇಶದ ಸಂದೇಶಗಳು ರವಾನೆಯಾಗಬೇಕು ಎಂಬುದು ನಮ್ಮ ಆಶಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ತಿಳಿಸಿದ್ದಾರೆ.
‘ಆಳ್ವಾಸ್ ವಿರಾಸತ್‌ಗೆ ಪ್ರವೇಶ ಸಂಪೂರ್ಣ ಉಚಿತವಾಗಿದ್ದು, ಕಾರ್ಯಕ್ರಮಗಳು ಕ್ಲಪ್ತ ಸಮಯಕ್ಕೆ ಆರಂಭಗೊಳ್ಳಲಿವೆ. ಸುಮಾರು 40 ಸಾವಿರಕ್ಕೂ ಹೆಚ್ಚು ಆಸನದ ವ್ಯವಸ್ಥೆ ಮಾಡಲಾಗಿದ್ದು, ಕಾರ್ಯಕ್ರಮ ಆರಂಭಗೊಳ್ಳುವ 15 ನಿಮಿಷ ಮೊದಲೇ ಆಸೀನರಾಗಬೇಕು. ವಾಹನ ಪಾರ್ಕಿಂಗ್‌ಗೆ ವಿಶಾಲ ವ್ಯವಸ್ಥೆ ಇರುತ್ತದೆ. ಕಣ್ಮನ ಸೆಳೆಯುವ ಸೊಬಗನ್ನು ಸವಿಯಬಹುದು’ ಎಂದಿದ್ದಾರೆ.
ಈ ಬಾರಿ ವಿರಾಸತ್ ಅನ್ನು ದೇಶಕ್ಕಾಗಿ ದೇಹತ್ಯಾಗಿ ಮಾಡಿದ ವೀರಯೋದ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅವರಿಗೆ ಅರ್ಪಣೆ ಮಾಡಲಾಗಿದೆ.


ಡಿ.14ರಂದು ಸಂಜೆ 5.45ಕ್ಕೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ವಿರಾಸತ್ ಉದ್ಘಾಟಿಸುವರು. ಧರ್ಮಸ್ಥಳದ ಧರ್ಮಾಽಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಸಂಜೆ 6.35ಕ್ಕೆ ಆಳ್ವಾಸ್ ವಿರಾಸತ್‌ನ ಭವ್ಯ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. 100ಕ್ಕಿಂತಲೂ ಅಽಕ ದೇಶೀಯ ಜಾನಪದ ಕಲಾ ತಂಡಗಳ ಕಲಾವಿದರಿಂದ ವೈವಿಧ್ಯಮಯ ಭವ್ಯ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ರಾತ್ರಿ 8:05ಕ್ಕೆ ವೇದಘೋಷಗಳು, ಭಜನೆಗಳು, ಪುಷ್ಪಪಲ್ಲಕ್ಕಿಗಳು, ಮಂಗಳವಾದ್ಯಗಳೊಂದಿಗೆ ಸಾಂಸ್ಕೃತಿಕ ರಥ ಸಂಚಲನ ಮತ್ತು ರಥಾರತಿ ನಡೆಯಲಿದೆ.


ಡಿ.15ರಂದು ಸಂಜೆ 6 ರಿಂದ 8ರ ವರೆಗೆ ಚಲನಚಿತ್ರ ಖ್ಯಾತ ಹಿನ್ನೆಲೆ ಗಾಯಕ ಬೆನ್ನಿ ದಯಾಲ್ ಅವರಿಂದ ‘ಗಾನ ವೈಭವ’ ಇರಲಿದೆ. ಡಿ. 16ರಂದು ಚಲನಚಿತ್ರ ಖ್ಯಾತ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್ ಅವರಿಂದ ‘ಭಾವ ಲಹರಿ’ ನಡೆಯಲಿದೆ. ಡಿ.17ರಂದು ಸಂಜೆ ಡಾ.ಮೈಸೂರು ಮಂಜುನಾಥ್, ಡಾ| ಪ್ರವೀಣ್ ಗೋಡ್ಖಿಂಡಿ ಹಾಗೂ ವಿಜಯ ಪ್ರಕಾಶ್ ಅವರಿಗೆ ಆಳ್ವಾಸ್ ವಿರಾಸತ್-2023 ಪ್ರಶಸ್ತಿ ಪ್ರದಾನ ಪ್ರದಾನ ಮಾಡಲಾಗುವುದು.
ಬಳಿಕ ಸಂಜೆ 6.30ಕ್ಕೆ ಡಾ. ಮೈಸೂರು ಮಂಜುನಾಥ್ ಮತ್ತು ಡಾ.ಪ್ರವೀಣ್ ಗೋಡ್ಖಿಂಡಿ ಮತ್ತು ವಿಜಯ ಪ್ರಕಾಶ್ ಅವರಿಂದ ‘ತಾಳ-ವಾದ್ಯ- ಸಂಗೀತ’ ನಡೆಯಲಿದೆ. ರಾತ್ರಿ 7.30ಕ್ಕೆ ಚಲನಚಿತ್ರ ಖ್ಯಾತ ಹಿನ್ನೆಲೆ ಗಾಯಕ ವಿಜಯಪ್ರಕಾಶ್ ಅವರಿಂದ ಸಂಗೀತ ರಸ ಸಂಜೆ ನಡೆಯಲಿದೆ. 9.30ಕ್ಕೆ ಆಳ್ವಾಸ್ ಸಾಂಸ್ಕೃತಿಕ ವೈಭವ ಇರಲಿದೆ.

LEAVE A REPLY

Please enter your comment!
Please enter your name here