ನಗರಸಭೆ ಉಪಚುನಾವಣೆ: ಪುತ್ತಿಲ ಪರಿವಾರದ ಅಭ್ಯರ್ಥಿಗಳ ನಾಮಪತ್ರ ಹಿಂತೆಗೆತ ವಿಚಾರದಲ್ಲಿ ಮೂಡದ ಸಹಮತ?-ಪುತ್ತಿಲ ಪರಿವಾರ-ಬಿಜೆಪಿ ಮಾತುಕತೆಗೆ ಮತ್ತೆ ವಿಘ್ನ

0

ಪುತ್ತೂರು:ಬಿಜೆಪಿ ಮತ್ತು ಪುತ್ತಿಲ ಪರಿವಾರ ಇನ್ನೇನು ವಿಲೀನವಾಗುತ್ತದೆ ಎನ್ನುವ ಹಂತದಲ್ಲಿ ಮಾತುಕತೆ ಕೊನೇ ಕ್ಷಣದಲ್ಲಿ ಮುರಿದು ಬಿದ್ದ ವಿಚಾರ ಬೆಳಕಿಗೆ ಬಂದಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಅವಕಾಶ ಸಿಗದೇ ಹಿಂದುತ್ವದ ಸಿದ್ಧಾಂತದಡಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ವಿರೋಚಿತ ಸೋಲುಂಡ ಬಳಿಕದ ಬೆಳವಣಿಗೆಯಲ್ಲಿ ಪುತ್ತಿಲ ಪರಿವಾರ ಸ್ಥಾಪನೆಯಾಗಿ ಬಿಜೆಪಿ ಮತ್ತು ಪುತ್ತಿಲ ಪರಿವಾರದ ನಡುವಿನ ಅಂತರ ದೂರವಾಗುತ್ತಾ ಹೋಗಿ ಇದೀಗ, ಎಲ್ಲವೂ ಸರಿಯಾಗಿ ಇನ್ನೇನು ಪುತ್ತಿಲ ಪರಿವಾರ ಬಿಜೆಪಿಯೊಂದಿಗೆ ವಿಲೀನವಾಗುತ್ತದೆ ಎನ್ನುವ ಹಂತದಲ್ಲಿ ಮಾತುಕತೆ ಮುರಿದು ಬಿದ್ದಿದೆ.


ಪುತ್ತಿಲರಿಗೆ ಮಂಡಲ ಬಿಜೆಪಿ ಅಧ್ಯಕ್ಷತೆಗೆ ಒಪ್ಪಿಗೆ:
ಅರುಣ್ ಕುಮಾರ್ ಪುತ್ತಿಲ ಅವರು ಪಕ್ಷಕ್ಕಾಗಿ ಹಲವು ವರ್ಷಗಳಿಂದ ಕೆಲಸ ಮಾಡಿದ್ದಾರೆ.ಆದರೆ ಅವರಿಗೆ ಯಾವುದೇ ಅವಕಾಶ ನೀಡಲಾಗಿಲ್ಲ.ಈ ನಿಟ್ಟಿನಲ್ಲಿ ಅವರಿಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನ ನೀಡಬೇಕು ಎನ್ನುವುದು ಪುತ್ತಿಲ ಪರಿವಾರದವರ ಪ್ರಮುಖ ಬೇಡಿಕೆಯಾಗಿತ್ತು.ಆದರೆ, ಏಕಾಏಕಿ ಜಿಲ್ಲಾಧ್ಯಕ್ಷ ಸ್ಥಾನ ನೀಡಲು ಸಾಧ್ಯವಿಲ್ಲ.ಮಂಡಲ ಬಿಜೆಪಿ ಅಧ್ಯಕ್ಷ ಸ್ಥಾನ ನೀಡಬಹುದು ಎಂದು ಪಕ್ಷದ ಪ್ರಮುಖರೂ ಮೌಖಿಕವಾಗಿ ಒಪ್ಪಿಗೆ ಸೂಚಿಸಿದ್ದರು.ಈ ಕುರಿತು ಈಗಾಗಲೇ ಮೂರ‍್ನಾಲ್ಕು ಸಲ ಮಾತುಕತೆಗಳೂ ನಡೆದಿದ್ದವು. ಅರುಣ್ ಕುಮಾರ ಪುತ್ತಿಲರಿಗೆ ಜಿಲ್ಲಾ ಧ್ಯಕ್ಷ ಹುದ್ದೆ ಬದಲು ಮಂಡಲ ಬಿಜೆಪಿ ಅಧ್ಯಕ್ಷತೆ ನೀಡುವ ವಿಚಾರಕ್ಕೆ ಪುತ್ತಿಲ ಪರಿವಾರದ ಕೆಲವರ ಸಹಮತ ಇರಲಿಲ್ಲ.ಆದರೂ, ಆರಂಭಿಕ ಹಂತದಲ್ಲಿ ಮಂಡಲಾಧ್ಯಕ್ಷತೆ ಬಳಿಕ ಮುಂದೆ ಉನ್ನತ ಹುದ್ದೆ ದೊರೆಯುವ ನಿರೀಕ್ಷೆಯೊಂದಿಗೆ ಇದಕ್ಕೆ ಒಪ್ಪಿಗೆ ವ್ಯಕ್ತವಾಗಿತ್ತು ಎನ್ನಲಾಗುತ್ತಿದೆ.


ನಗರಸಭೆ ಉಪಚುನಾವಣೆ ನಾಮಪತ್ರ ಹಿಂತೆಗೆದುಕೊಳ್ಳಿ:
ಈ ಹಿಂದಿನ ಮಾತುಕತೆಯ ಮುಂದುವರಿದ ಭಾಗವಾಗಿ ದ.17ರಂದು ದ.ಕ.ಸಂಸದ, ರಾಜ್ಯ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಇನ್ನೊಂದು ಸುತ್ತಿನ ಮಾತುಕತೆ ನಡೆಸಲಾಯಿತು.ಬಿಜೆಪಿ ಗ್ರಾಮಾಂತರ ಮಂಡಲಾಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು,ನಗರಸಭಾ ನಿಕಟಪೂರ್ವ ಅಧ್ಯಕ್ಷ ಜೀವಂಧರ್ ಜೈನ್, ಮಾಜಿ ಮಂಡಲಾಧ್ಯಕ್ಷರಾದ ಎಸ್.ಅಪ್ಪಯ್ಯ ಮಣಿಯಾಣಿ ಗೋಪಾಲಕೃಷ್ಣ ಹೇರಳೆ,ಪುತ್ತಿಲ ಪರಿವಾರದಿಂದ ಅರುಣ್ ಕುಮಾರ್ ಪುತ್ತಿಲ, ಭಾಸ್ಕರ ಆಚಾರ್ಯ ಹಿಂದಾರು, ಇತರ ಪ್ರಮುಖರು ಅಲ್ಲದೆ ಎರಡೂ ಕಡೆಯ ಮಧ್ಯಸ್ಥಿಕೆದಾರರಾಗಿ ಡಾ.ಸುರೇಶ್ ಪುತ್ತೂರಾಯ ಮಾತುಕತೆಯಲ್ಲಿದ್ದರು.

ದ.27ರಂದು ನಡೆಯಲಿರುವ ಪುತ್ತೂರು ನಗರಸಭೆಯ ಎರಡು ವಾರ್ಡ್‌ಗಳ ಉಪಚುನಾವಣೆಯಲ್ಲಿ ಪುತ್ತಿಲ ಪರಿವಾರದಿಂದ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳು ನಾಮಪತ್ರ ಹಿಂತೆಗೆದುಕೊಳ್ಳುವ ಶರತ್ತಿನೊಂದಿಗೆ ಮಾತುಕತೆ ಮುಂದುವರಿಯಿತು.ಅರುಣ್ ಕುಮಾರ್ ಪುತ್ತಿಲ ಅವರನ್ನು ಮಂಡಲ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆ ಮಾಡಿ ಕೂಡಲೇ ಘೋಷಣೆ ಮಾಡಬೇಕು ಮತ್ತು ಮಂಡಲ ಸಮಿತಿಯಲ್ಲಿ ಪರಿವಾರದ ಹೆಚ್ಚಿನವರಿಗೆ ಅವಕಾಶ ನೀಡಬೇಕು ಎನ್ನುವುದು ಪುತ್ತಿಲ ಪರಿವಾರದ ಪ್ರಮುಖ ಬೇಡಿಕೆಯಾಗಿತ್ತು.ಇದಕ್ಕೆ ಒಂದು ಹಂತದಲ್ಲಿ ಬಿಜೆಪಿ ಪ್ರಮುಖರೂ ಪೂರಕವಾಗಿ ಸ್ಪಂದಿಸಿದ್ದರು.ನಗರಸಭೆ ಉಪಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿರುವ ಪುತ್ತಿಲ ಪರಿವಾರದ ಅಭ್ಯರ್ಥಿಗಳ ನಾಮಪತ್ರವನ್ನು ಹಿಂತೆಗೆದುಕೊಳ್ಳುವುದಾದರೆ ಅರುಣ್ ಕುಮಾರ್ ಪುತ್ತಿಲ ಅವರನ್ನು ಮಂಡಲ ಬಿಜೆಪಿ ಹಂಗಾಮಿ ಅಧ್ಯಕ್ಷರಾಗಿ ನೇಮಕ ಮಾಡುವುದು. ಮತ್ತು ದ.17ರಂದು ರಾತ್ರಿಯೇ ಡಾ.ಸುರೇಶ್ ಪುತ್ತೂರಾಯರ ಮನೆಯಲ್ಲಿ ಸಭೆ ಸೇರಿ ನಳಿನ್ ಕುಮಾರ್ ಕಟೀಲ್ ಅವರು ಇದನ್ನು ಘೋಷಣೆ ಮಾಡುವುದು ಎಂದೂ ಮಾತುಕತೆಯಲ್ಲಿ ತೀರ್ಮಾನವಾಗಿತ್ತು.ಆದರೆ,ನಗರಸಭಾ ಉಪಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿರುವ ಪುತ್ತಿಲ ಪರಿವಾರದ ಅಭ್ಯರ್ಥಿಗಳ ನಾಮಪತ್ರ ಹಿಂತೆಗೆದುಕೊಳ್ಳುವ ವಿಚಾರದಲ್ಲಿ ಸಹಮತ ಮೂಡದೇ ಇದ್ದ ಹಿನ್ನೆಲೆಯಲ್ಲಿ ಕೊನೇ ಕ್ಷಣದಲ್ಲಿ ಮಾತುಕತೆ ಮುರಿದು ಬಿದ್ದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here